ಸೋಮವಾರ, ಜನವರಿ 20, 2020
18 °C

ದೊಡ್ಡಪ್ಪನ ಕಾಮಿಡಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಪ್ಪನ ಕಾಮಿಡಿ!

‘ಎಲ್ಲಾ ಕಾಮಿಡಿಗಳ ದೊಡ್ಡಪ್ಪ’! – ಇದು ನಿರ್ದೇಶಕ, ನಟ ಹೇಮಂತ್ ಹೆಗಡೆ ತಮ್ಮ ‘ನಿಂಬೆಹುಳಿ’ ಚಿತ್ರಕ್ಕೆ ನೀಡಿಕೊಂಡಿರುವ ಬಿರುದು. ದೊಡ್ಡಪ್ಪನ ಹಾಸ್ಯದ ಹಿರಿತನದ ಬಗ್ಗೆ ತಿಳಿಯಲು ಡಿಸೆಂಬರ್‌ 25ರವರೆಗೂ ಕಾಯಬೇಕು. ವಿಶ್ವದ 25 ಹಾಸ್ಯ ಚಿತ್ರಗಳ ಪೋಸ್ಟರ್‌ ವಿನ್ಯಾಸದ ಪಟ್ಟಿಯಲ್ಲಿ ತಮ್ಮ ಚಿತ್ರವೂ ಸ್ಥಾನ ಪಡೆದಿದೆ ಎಂಬ ಹೆಮ್ಮೆ ಹೇಮಂತ್ ಹೆಗಡೆ ಅವರದು.

ಡುಂಡಿರಾಜ್ ಬರೆದ ‘ರಾಮ ರಾಮ.. ಫಸ್ಟ್‌ ನೈಟ್‌ನಲ್ಲೂ ಟ್ರಾಫಿಕ್‌ ಜಾಮಾ...’ ಹಾಡಿನ ಯಶಸ್ಸು ಅವರಲ್ಲಿ ಮೂಡಿರುವ ಗೆಲುವಿನ ಭರವಸೆಯ ಮೊದಲ ಚಿಗುರು. ತಮಿಳಿನ ನಿರ್ದೇಶಕ ಮಾದೇಶ್‌ ಆಗಲೇ ಸಿನಿಮಾ ನೋಡಿ ತಮಿಳು ಮತ್ತು ತೆಲುಗು ಭಾಷೆಗಳಿಗೆ ರೀಮೇಕ್‌ ಮಾಡಲು ಹಕ್ಕುಗಳನ್ನು ಖರೀದಿಸಿದ್ದಾರೆ.

ಆದರೆ ಎಫ್‌ಎಂ ಚಾನೆಲ್‌ಗಳು ಮಾತ್ರ ತಮ್ಮ ಹಾಡನ್ನು ಪ್ರಸಾರ ಮಾಡಲು ಮುಂದಾಗುತ್ತಿಲ್ಲ ಎಂಬ ಸಿಹಿ–ಕಹಿಯನ್ನು ಹಂಚಿಕೊಂಡರು ಹೇಮಂತ್‌. ಚಿತ್ರ ಬಿಡುಗಡೆಗೂ ಹೇಮಂತ್‌ಗೆ ವಿಘ್ನಗಳು ಎದುರಾಗಿವೆ. ಯಾವ ಹಂಚಿಕೆದಾರರೂ ಚಿತ್ರ ಹಂಚಿಕೆ ಮಾಡಲು ಮುಂದೆ ಬಾರದ ಕಾರಣ ಸ್ವತಃ ಅವರೇ ಹಂಚಿಕೆಯ ಹೊಣೆಯನ್ನೂ ಹೆಗಲಿಗೇರಿಸಿಕೊಂಡಿದ್ದಾರೆ. 45 ದಿನಗಳ ಕಾಲ ಬೆಂಗಳೂರು, ಮೈಸೂರು, ಕಳಸ ಮತ್ತಿತರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದ್ದಾರೆ ಅವರು. ಚಿತ್ರ ಬಿಡುಗಡೆ ಕರ್ನಾಟಕಕ್ಕೆ ಸೀಮಿತವಲ್ಲ. ಬೇರೆ ದೇಶಗಳಲ್ಲೂ ಬಿಡುಗಡೆ ಮಾಡುತ್ತೇನೆ ಎಂದರು ಹೇಮಂತ್.ನಟಿ ಮಧುರಿಮಾ ಪತ್ರಿಕಾಗೋಷ್ಠಿಯ ಸಲುವಾಗಿಯೇ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದರು. ಚಿತ್ರದಲ್ಲಿ ಅವರು ಮಂತ್ರಿಯ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪೋಸ್ಟರ್‌ ವಿನ್ಯಾಸಕ ಮಣಿ, ಸಂಗೀತ ನಿರ್ದೇಶಕ ವೀರ್ ಸಮರ್ಥ್‌, ಸಂಕಲನಕಾರ ಸೌಂದರ್‌ರಾಜ್‌ ಹಾಜರಿದ್ದರು. ಪೋಸ್ಟರ್‌ನಲ್ಲಿ ನಾಯಕನ ಜೊತೆಗೆ ಕಾಣಿಸುತ್ತಿದ್ದ ಮತ್ತಿಬ್ಬರು ನಾಯಕಿಯರು ನಿವೇದಿತಾ ಮತ್ತು ಕೋಮಲ್‌ ಝಾ ಸುದ್ದಿಗೋಷ್ಠಿಗೆ ಗೈರುಹಾಜರಾಗಿದ್ದರು.

ಪ್ರತಿಕ್ರಿಯಿಸಿ (+)