ಮಂಗಳವಾರ, ಜನವರಿ 28, 2020
17 °C

ದ್ರಾಕ್ಷಿ ಬೆಳೆಗಾರರ ಬಡ್ಡಿ ಮನ್ನಾ ಶೀಘ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ‘ರಾಜ್ಯದ ದ್ರಾಕ್ಷಿ ಬೆಳೆಗಾರರ ರೂ.698 ಕೋಟಿ ಸಾಲದ ಬಡ್ಡಿ ಮನ್ನಾ ಮಾಡಿ, ಸಾಲ ಮರು ಹೊಂದಾಣಿಕೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವರು ಭರವಸೆ ನೀಡಿದ್ದು, ಇದು ಶೀಘ್ರವೇ ಕಾರ್ಯಗತಗೊಳ್ಳಲಿದೆ. ಒಂದೊಮ್ಮೆ ಕೇಂದ್ರದ ನೆರವು ಬರುವುದು ವಿಳಂಬವಾದರೆ ರಾಜ್ಯ ಸರ್ಕಾರ ದ್ರಾಕ್ಷಿ ಬೆಳೆಗಾರರ ನೆರವಿಗೆ ಬರಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಮಂಗಳವಾರ ಇಲ್ಲಿ ಜನತಾ ದರ್ಶನ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎದುರಾದ ಪ್ರಶ್ನೆಗಳಿಗೆ ಅವರು ಈ ಮಾಹಿತಿ ನೀಡಿದರು.

‘ವೈಜ್ಞಾನಿಕ ತಳಹದಿಯಲ್ಲಿ ರಾಜ್ಯದಲ್ಲಿ ಹೊಸ ತಾಲ್ಲೂಕುಗಳನ್ನು ಹಂತ ಹಂತವಾಗಿ ಘೋಷಿಸ ಲಾಗುವುದು. ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ ಎರಡನೇ ಕಂತಿನ ಹಣ ರೂ.300 ಕೋಟಿಯನ್ನು ಮಾರ್ಚ್‌ ವೇಳೆಗೆ ಬಿಡುಗಡೆ ಮಾಡಲಾಗುವುದು. ವಿಜಾಪುರ ವಿಮಾನ ನಿಲ್ದಾಣ ಸ್ಥಾಪನೆಗೆ ರೂ.50 ಕೋಟಿ ಅನುದಾನ ನೀಡಲಾಗುವುದು. ವಸ್ತುಸ್ಥಿತಿ ಆಧರಿಸಿ ವಿಜಾಪುರ ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.‘ದ್ರಾಕ್ಷಿ ಬೆಳೆಗಾರರ ಎಲ್ಲ ಸಾಲ ಮನ್ನಾ ಮಾಡುವಂತೆ ಕೇಂದ್ರ ಹಣಕಾಸು ಸಚಿವರಿಗೆ ಕೋರಿಕೆ ಸಲ್ಲಿಸಿದ್ದೇನೆ. ಸಾಲ ಮನ್ನಾ ಮಾಡಲು ಆಗುವುದಿಲ್ಲ. ಬಡ್ಡಿಯನ್ನಷ್ಟೇ ಮನ್ನಾ ಮಾಡಿ, ಸಾಲದ ಮೊತ್ತವನ್ನು ಮರು ಹೊಂದಾಣಿಕೆ ಮಾಡುವುದಾಗಿ ಅವರು ತಿಳಿಸಿದ್ದಾರೆ. ಶೀಘ್ರವೇ ಈ ಕುರಿತು ಸಭೆ ನಡೆಯಲಿದೆ’ ಎಂದು ಹೇಳಿದರು.‘ಹೊಸ ತಾಲ್ಲೂಕುಗಳ ರಚನೆಗೆ ನಾಲ್ಕು ಸಮಿತಿಗಳು ನೀಡಿರುವ ವರದಿ ಪರಿಶೀಲಿಸಿ ವೈಜ್ಞಾನಿಕ ತಳಹದಿಯ ಮೇಲೆ ಅವಶ್ಯಕತೆ ಇರುವಷ್ಟು ತಾಲ್ಲೂಕುಗಳನ್ನು ರಚಿಸಬೇಕು ಎಂಬ ಉದ್ದೇಶ ನಮ್ಮದು. ಮುಂದಿನ ಬಜೆಟ್‌ನಿಂದ ಹಂತ ಹಂತವಾಗಿ ಹೊಸ ತಾಲ್ಲೂಕುಗಳನ್ನು ಘೋಷಿಸಲಾ­ಗುವುದು’ ಎಂದರು.‘ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ರೂ.2 ಕೋಟಿಗೆ ಹೆಚ್ಚಿಸಲಾಗಿದೆ. ಈಗಾಗಲೆ ತಲಾ ಒಂದು ಕೋಟಿ ಬಿಡುಗಡೆ ಮಾಡಲಾಗಿದ್ದು, ಇನ್ನುಳಿದ ತಲಾ ಒಂದು ಕೋಟಿಯನ್ನು ಮಾರ್ಚ್‌ ವೇಳೆಗೆ ಬಿಡುಗಡೆ ಮಾಡಲಾಗುವುದು. ಇದಕ್ಕೆ ಬೇಕಿರುವ ರೂ.300 ಕೋಟಿಗೆ ಪೂರಕ ಬಜೆಟ್‌ನಲ್ಲಿ ಅನುಮೋದನೆ ಪಡೆಯಲಾಗಿದೆ’ ಎಂದರು.ಸೂಕ್ತ ಬೆಲೆ

ಕೃಷ್ಣಾ ಮೇಲ್ದಂಡೆ ಯೋಜನೆಗೆ ಸ್ವಾಧೀನ ಪಡಿಸಿಕೊಳ್ಳುವ ಜಮೀನಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾನೂನಿನ ಅನ್ವಯವೇ ಪರಿಹಾರ ಮತ್ತು ಸಂತ್ರಸ್ತರಿಗೆ ಸೌಲಭ್ಯ ನೀಡಲಾಗುವುದು. ಇದೇ 12ರಂದು ನಡೆಯಲಿರುವ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಭೂಮಿಯ ಬೆಲೆ ನಿಗದಿ ಪಡಿಸಲಾಗುವುದು ಎಂದರು.ಪಟ್ಟಣ ಪ್ರದೇಶದಲ್ಲಿ ಕೈಗೊಂಡಿರುವ ಒಳಚರಂಡಿ ಮತ್ತು ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳು ವಿಳಂಬವಾಗುತ್ತಿವೆ ಎಂಬ ಶಾಸಕರ ದೂರಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸುವ ಭರವಸೆ ನೀಡಿದರು.

ಸಚಿವರಾದ ಸಚಿವ ಎಂ.ಬಿ. ಪಾಟೀಲ, ಎಸ್‌.ಆರ್‌. ಪಾಟೀಲ ಹಾಗೂ ಜಿಲ್ಲೆಯ ಶಾಸಕರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)