ಭಾನುವಾರ, ಜೂನ್ 20, 2021
28 °C

ದ್ರಾವಿಡ್ ಮನದಲ್ಲಿ ವಿದಾಯ ಯೋಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅನುಭವಿಗಳು ವಿದಾಯ ಹೇಳುವ ಮೂಲಕ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎನ್ನುವ ಅಭಿಪ್ರಾಯಗಳು ಬಲಗೊಂಡಿರವ ಸಂದರ್ಭದಲ್ಲಿಯೇ ರಾಹುಲ್ ದ್ರಾವಿಡ್ ನಿವೃತ್ತಿಯ ಯೋಚನೆ ಮಾಡಿದ್ದಾರೆ.ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಎನ್. ಶ್ರೀನಿವಾಸನ್ ಕೂಡ ಹಾಜರಾಗಲಿರುವ ಶುಕ್ರವಾರದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕದ ಹೆಮ್ಮೆಯ ಬ್ಯಾಟ್ಸ್‌ಮನ್ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನವನ್ನು ಕೊನೆಗೊಳಿಸುವ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.ರಾಹುಲ್ ಸುದ್ದಿಗಾರರನ್ನು ಉದ್ದೇಶಿಸಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾತನಾಡಲಿದ್ದಾರೆ ಎನ್ನುವ ಸಂದೇಶವನ್ನು ಬಿಸಿಸಿಐ ನೀಡಿದೆ. ಪತ್ರಿಕಾಗೋಷ್ಠಿಯ ಉದ್ದೇಶವನ್ನು ಮಾತ್ರ ಅದು ತಿಳಿಸಿಲ್ಲ. ಆದರೆ ಇದು ನಿವೃತ್ತಿಯ ವಿಷಯವನ್ನು ಪ್ರಕಟಿಸುವ ಕಾರಣಕ್ಕಾಗಿಯೇ ಎನ್ನುವ ನಿರೀಕ್ಷೆಯಂತೂ ಬಲವಾಗಿದೆ.39 ವರ್ಷ ವಯಸ್ಸಿನ ಅನುಭವಿ ಆಟಗಾರ ಆಸ್ಟ್ರೇಲಿಯಾ ಪ್ರವಾಸ ಕಾಲದಲ್ಲಿ ಆಡಿದ ಎಂಟು ಇನಿಂಗ್ಸ್‌ಗಳಲ್ಲಿ 24.25ರ ಸರಾಸರಿಯಲ್ಲಿ ಗಳಿಸಿದ್ದು ಒಟ್ಟಾರೆ 194 ರನ್ ಮಾತ್ರ. ಆದ್ದರಿಂದಲೇ ರಾಹುಲ್ ಮೇಲೆ ಒತ್ತಡ ಹೆಚ್ಚಿದೆ. ಈ ಹಂತದಲ್ಲಿ ಬದಿಗೆ ಸರಿದು ಹೊಸಬರಿಗೆ ಅವಕಾಶ ಮಾಡಿಕೊಡುವಂಥ ಪರಿಸ್ಥಿತಿಯೂ ನಿರ್ಮಾಣವಾಗಿದೆ. ರಾಹುಲ್ ಮಾತ್ರವಲ್ಲ ಸಚಿನ್ ತೆಂಡೂಲ್ಕರ್ ಹಾಗೂ ವಿ.ವಿ.ಎಸ್.ಲಕ್ಷ್ಮಣ್ ಕೂಡ ಇಂಥದೇ ಇಕ್ಕಟ್ಟಿನಲ್ಲಿದ್ದಾರೆ.ಆಸ್ಟ್ರೇಲಿಯಾ ವಿರುದ್ಧ ಅನೇಕ ಬಾರಿ ಯಶಸ್ವಿ ಬ್ಯಾಟ್ಸ್‌ಮನ್‌ಗಳು ಎನಿಸಿಕೊಂಡಿದ್ದ ದ್ರಾವಿಡ್ ಹಾಗೂ ಲಕ್ಷ್ಮಣ್ ಇತ್ತೀಚೆಗೆ ಸಾಕಷ್ಟು ಟೀಕೆ ಎದುರಿಸಿದ್ದಾರೆ. ಸಚಿನ್ ಇನ್ನಷ್ಟು ಕಾಲ ಮುಂದುವರಿಯಲಿ ಎಂದು ಯೋಚಿಸುವವರು ರಾಹುಲ್ ಮತ್ತು ವಿ.ವಿ.ಎಸ್ ಬಗ್ಗೆ ಅಷ್ಟೊಂದು ಉದಾರವಾಗಿ ಮಾತನಾಡುವುದಿಲ್ಲ.ಹಿಂದೆ ತೋರಿದ್ದ ಪ್ರದರ್ಶನದಿಂದ ಮಾಜಿ ನಾಯಕ ದ್ರಾವಿಡ್ ಮೆಚ್ಚುಗೆ ಗಳಿಸಿದ್ದರೂ ಈಗ ಅದೇ ರೀತಿಯಲ್ಲಿ ಅವರನ್ನು ಕ್ರಿಕೆಟ್ ಪ್ರೇಮಿಗಳು ಒಪ್ಪಿಕೊಳ್ಳುತ್ತಿಲ್ಲ. ರನ್ ಗಳಿಸುವಲ್ಲಿ ತಡಬಡಾಯಿಸಿದ್ದೇ ಇದಕ್ಕೆ ಕಾರಣ.

 ತೆಂಡೂಲ್ಕರ್ ಅವರಂತೆ ದ್ರಾವಿಡ್ ಪ್ರಕಾಶಮಾನವಾಗಿ ಹೊಳೆಯದಿದ್ದರೂ ಚಂದಿರನಂತೆ ತಣ್ಣಗಿದ್ದೂ ಹಿತವೆನಿಸುವ ಬೆಳದಿಂಗಳಾಗಿ ದೀರ್ಘ ಕಾಲದಿಂದ ದೇಶದ ಕ್ರಿಕೆಟ್‌ಗೆ ಹೊಳಪು ನೀಡಿದ್ದಾರೆ.ನಿಧಾನವಾಗಿಯಾದರೂ ಅವರದ್ದು ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಹದಿಮೂರು ಸಹಸ್ರ (13288) ರನ್‌ಗಳ ಸಾಧನೆ. ಅವರು ಎಷ್ಟು ರನ್ ಗಳಿಸಿದರು ಎನ್ನುವ ಅಂಕಿ-ಅಂಶಕ್ಕಿಂತ ಆಡಿದ ಬೆಲೆಯುಳ್ಳ ಆಟಗಳೇ ಹೆಚ್ಚು ಗಮನ ಸೆಳೆಯುತ್ತವೆ. ತಂಡವನ್ನು ಸಂಕಷ್ಟದಿಂದ ಪಾರು ಮಾಡುವಂಥ ಇನಿಂಗ್ಸ್ ಅನ್ನು ಅನೇಕ ಬಾರಿ ಕಟ್ಟಿದ್ದು ಕೂಡ ವಿಶೇಷ. ಏಕದಿನ ಕ್ರಿಕೆಟ್‌ನಲ್ಲಿ ಅವರ ಬ್ಯಾಟ್‌ನಿಂದ 10889 ರನ್‌ಗಳು ಹರಿದು ಬಂದಿವೆ ಎನ್ನುವುದನ್ನೂ ಮರೆಯುವಂತಿಲ್ಲ.ಹೀಗೆ ವಿಶಿಷ್ಟವಾದ ರೀತಿಯಲ್ಲಿ ದ್ರಾವಿಡ್ ಕ್ರಿಕೆಟ್ ಕ್ಷೇತ್ರದಲ್ಲಿ ಬೆಳೆದ `ಗೋಡೆ~ ಖ್ಯಾತಿಯ ಕ್ರಿಕೆಟಿಗ ಕರಾರುವಕ್ಕಾಗಿ ಬ್ಯಾಟ್ ಬೀಸುತ್ತಾ ಸವಾಲುಗಳ ಮಾರ್ಗದಲ್ಲಿಯೇ ಅಸಾಧ್ಯವನ್ನು ಸಾಧಿಸಿ ತೋರಿಸಿದ್ದಾರೆ. ತಮ್ಮ ಆಟದ ಬಗ್ಗೆ ಮೆಚ್ಚುಗೆಯ ಮಾತು ಕೇಳಿದಾಗ ಹಿಗ್ಗದ ಹಾಗೂ ಟೀಕೆಗಳಿಗೆ ಕುಗ್ಗದ ಸ್ಥಿತಪ್ರಜ್ಞ ರಾಹುಲ್ ಬ್ಯಾಟಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದು ವಿರಳ. ಹದಿನಾರು ವರ್ಷಗಳಲ್ಲಿ ಅವರು ಆಡುತ್ತಿರುವ ರೀತಿಯಲ್ಲಿ ವ್ಯತ್ಯಾಸ ಕಾಣಿಸಿದ್ದು ಅಪರೂಪ.ಅಷ್ಟೊಂದು ವಿಶ್ವಾಸದೊಂದಿಗೆ ತಾವು ಆರಂಭದಲ್ಲಿ ಕಲಿತ ಬ್ಯಾಟಿಂಗ್ ಶಾಸ್ತ್ರಕ್ಕೆ ಗಟ್ಟಿಯಾಗಿ ಅಂಟಿಕೊಂಡಿರುವ ಅವರು ಆಸ್ಟ್ರೇಲಿಯಾ ಪ್ರವಾಸ ಕಾಲದಲ್ಲಿ ಈ ಬಾರಿ ಗಮನ ಸೆಳೆಯುವಂಥ ಆಟವಾಡಲಿಲ್ಲ. ವಯಸ್ಸಿನ ಭಾರಕ್ಕೆ ಅವರ ಆಟದ ಶಕ್ತಿಯೂ ಕುಗ್ಗಿದೆ ಎನ್ನುವ ಅನುಮಾನ ಮೂಡಿದ್ದು ಕೂಡ ಆಸೀಸ್ ನೆಲದಲ್ಲಿ ಆಡಿದ ಟೆಸ್ಟ್ ಸರಣಿ ಸಂದರ್ಭದಲ್ಲಿ.ಅನೇಕ ಹಿರಿಯ ಕ್ರಿಕೆಟಿಗರು ದ್ರಾವಿಡ್ ಸೇರಿದಂತೆ ಮೂವರು ಹಿರಿಯ ಆಟಗಾರರು ವಿದಾಯ ಹೇಳಲು ಇದು ಸೂಕ್ತ ಕಾಲವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಅಭಿಪ್ರಾಯಕ್ಕೆ ರಾಹುಲ್ ಬಹುಬೇಗ ಬೆಲೆ ಕೊಟ್ಟು ನಿವೃತ್ತಿಯ ಕಡೆಗೆ ಮುಖ ಮಾಡಿದ್ದಾರೆ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.