ಶುಕ್ರವಾರ, ಮಾರ್ಚ್ 5, 2021
30 °C

ದ್ವಿತೀಯ ಪಿ.ಯು. ಪ್ರಶ್ನೆ ಪತ್ರಿಕೆ ಬಯಲು:ಆರೋಪಿಗಳು ಸಿಐಡಿ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದ್ವಿತೀಯ ಪಿ.ಯು. ಪ್ರಶ್ನೆ ಪತ್ರಿಕೆ ಬಯಲು:ಆರೋಪಿಗಳು ಸಿಐಡಿ ವಶಕ್ಕೆ

ತರೀಕೆರೆ: ದ್ವಿತೀಯ ಪಿ.ಯು. ಪ್ರಶ್ನೆಪತ್ರಿಕೆ ಬಯಲು ಪ್ರಕರಣದ ಎಂಟು ಆರೋಪಿಗಳನ್ನು ಇದೇ 9ರವರೆಗೆ ಸಿಐಡಿ ಪೊಲೀಸರ ವಶಕ್ಕೆ ಒಪ್ಪಿಸಿ ಇಲ್ಲಿನ ಜೆಎಂಎಫ್‌ಸಿ ಕೋರ್ಟ್ ಮಂಗಳವಾರ ಆದೇಶಿಸಿದೆ.ಟಿ.ರವಿಕುಮಾರ್, ಶಶಿಧರ್, ಅನಿಲ್ ರಾವತ್, ಜೆ.ಪ್ರಹ್ಲಾದ್, ಟಿ.ಸೊಣ್ಣಪ್ಪ, ಸಿ.ಪಿ.ರಮೇಶ್, ಎಚ್.ಎಸ್.ಸುನಿಲ್ ಕುಮಾರ್ ಮತ್ತು ಮುನಾವರ್ ಬಾಷಾ  ನ್ಯಾಯಾಲಯಕ್ಕೆ ಹಾಜರುಪಡಿಸಿದ ಆರೋಪಿಗಳು. ಈ ಎಲ್ಲಾ ಆರೋಪಿಗಳನ್ನು ಹತ್ತು ದಿನಗಳ ಕಾಲ ತಮ್ಮ ವಶಕ್ಕೆ ಒಪ್ಪಿಸುವಂತೆ ಸಿಐಡಿ ಪೋಲಿಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಪ್ರಮುಖ ಆರೋಪಿಗಳಾದ ಶಿಕ್ಷಕ ಸಿದ್ದರಾಮಪ್ಪ ಮತ್ತು ವಕೀಲ ಯೋಗೀಶ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು.ಪ್ರಕರಣ ತರೀಕೆರೆ ನ್ಯಾಯಾಲಯದ ವ್ಯಾಪ್ತಿಯಲ್ಲಿ ನಡೆದ ಕಾರಣ ಬೆಂಗಳೂರಿನಲ್ಲಿ ಬಂಧಿತರಾದ ಎಂಟು ಮಂದಿ ಆರೋಪಿಗಳನ್ನು ತರೀಕೆರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಷಯ ತಿಳಿದ ಜನರು ನೂರಾರು ಸಂಖ್ಯೆಯಲ್ಲಿ ನ್ಯಾಯಲಯದ ಆವರಣದಲ್ಲಿ ಜಮಾಯಿಸಿದರು.ಮಧ್ಯಾಹ್ನ 1 ಗಂಟೆಗೆ ಸಿಐಡಿ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ಸಂದರ್ಭದಲ್ಲಿ  ಆರೋಪಿಗಳು ದೃಶ್ಯ ಮಾಧ್ಯಮಗಳ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಮುಖವನ್ನು ಶರ್ಟ್ ಮತ್ತು ಕರವಸ್ತ್ರದಿಂದ ಮುಚ್ಚಿಕೊಂಡು ನ್ಯಾಯಾಲಯದ ಸಂರ್ಕೀಣ ಪ್ರವೇಶಿಸಿದರು. ಇದನ್ನು ಗಮನಿಸಿದ ಜನರು ಅವ್ಯಾಚ ಶಬ್ದಗಳಿಂದ  ಆರೋಪಿಗಳನ್ನು ನಿಂದಿಸಿದರು.`ಪ್ರಕರಣದ ವ್ಯಾಪ್ತಿ ಬಹಳ ವಿಶಾಲವಾಗಿದ್ದು, ಒಂದು ವಾರದಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯದಲ್ಲೇ ಪ್ರಕರಣದಲ್ಲಿ ಶಾಮೀಲಾಗಿರುವವ ರೆಲ್ಲರನ್ನು ಬಂಧಿಸಲಾಗುವುದು~ ಎಂದು ಸಿಐಡಿ ಡಿವೈಎಸ್‌ಪಿ ನರಸಿಂಹ ಐಯ್ಯಂಗಾರ್ `ಪ್ರಜಾವಾಣಿ~ಗೆ ತಿಳಿಸಿದರು. ಸಿಐಡಿ ಡಿವೈಎಸ್‌ಪಿ ಸಿದ್ದಪ್ಪ, ರಾಮಲಿಂಗಪ್ಪ, ಇನ್‌ಸ್ಪೆಕ್ಟರ್ ವೆಂಕಟೇಶ್ ಮತ್ತು ಹೆಗಡೆ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.