ಶುಕ್ರವಾರ, ಜೂನ್ 25, 2021
22 °C

ಧರಂ ಜತೆ ಬಿಜೆಪಿ ಒಳ ಒಪ್ಪಂದ: ನಾಗಮಾರಪಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನನ್ನ ಮಗ ಸೂರ್ಯಕಾಂತ್‌ಗೆ ಬೀದರ್‌ ಕ್ಷೇತ್ರದ ಟಿಕೆಟ್‌ ಕೊಡುವುದಾಗಿ ಹೇಳಿದ್ದ ಬಿಜೆಪಿ ಮುಖಂಡರು ಈಗ ಕೈಕೊಟ್ಟಿದ್ದಾರೆ. ಒಂದು ರೀತಿ ನೋಡುತ್ತಿದ್ದರೆ ಅವರೆಲ್ಲ ಕಾಂಗ್ರೆಸ್‌ ಅಭ್ಯರ್ಥಿ ಧರ್ಮಸಿಂಗ್‌ ಜತೆ ಮ್ಯಾಚ್ ಫಿಕ್ಸಿಂಗ್‌ ಮಾಡಿಕೊಂಡಂತಿದೆ...’

ಹೀಗೆ ನೇರ ಆರೋಪ ಮಾಡಿದ್ದು ಬಿಜೆಪಿಯ ಗುರುಪಾದಪ್ಪ ನಾಗಮಾರಪಲ್ಲಿ.‘ಟಿಕೆಟ್‌ ಸಿಗುವ ವಿಶ್ವಾಸ ಇನ್ನೂ ಇದೆ. ಎರಡು ದಿನ ಕಾಯುವಂತೆ ಯಡಿಯೂರಪ್ಪ ಹೇಳಿದ್ದಾರೆ. ಅದರ ಬಳಿಕವೂ ಟಿಕೆಟ್‌ ಸಿಗದಿದ್ದರೆ ಮುಂದಿನ ತೀರ್ಮಾನ ಕೈಗೊಳ್ಳಲು ನನ್ನ ಮಗನಿಗೆ ಸೂಚಿಸುತ್ತೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.‘ನಾನು ಮಾತ್ರ ಬಿಜೆಪಿ ಬಿಡುವುದಿಲ್ಲ. ಆದರೆ, ನನ್ನ ಮಗನನ್ನೂ ಬಿಜೆಪಿಯಲ್ಲೇ ಇರು ಎಂದು ಹೇಳುವುದಕ್ಕೆ ನನಗೆ ಸಾಧ್ಯ ಇಲ್ಲ. ಬೀದರ್‌ನಲ್ಲಿ ಜನ ದಂಗೆ ಎದ್ದಿದ್ದು, ಆತ್ಮಹತ್ಯೆ ಯತ್ನ ಕೂಡ ನಡೆದಿದೆ. ಪರಿಸ್ಥಿತಿಯ ಗಂಭೀರತೆ ಅರಿತು ತಕ್ಷಣ ಟಿಕೆಟ್‌ ನೀಡಬೇಕು’ ಎಂದು ಅವರು ಆಗ್ರಹಿಸಿದರು.‘ಬಿಜೆಪಿ ಸೇರುವ ಸಂದರ್ಭದಲ್ಲಿ ಯಡಿಯೂರಪ್ಪ ಅವರು ನನ್ನ ಮಗನಿಗೆ ಟಿಕೆಟ್‌ ಕೊಡಿಸುವ ಭರವಸೆ ನೀಡಿದ್ದರು. ನನ್ನ ಮನೆಯಲ್ಲಿ ನಡೆದ ಮಾತುಕತೆ ಸಂದರ್ಭದಲ್ಲಿ ಯಡಿಯೂರಪ್ಪ ದೇವರ ಮೇಲೆ ಪ್ರಮಾಣ ಮಾಡಿದ್ದರು.  ಮೂವರು ಮಾತ್ರ ಬಿಜೆಪಿಗೆ ಹೋದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುತ್ತದೆ. ಹೀಗಾಗಿ ನೀವೂ ಬನ್ನಿ ಎಂದು ನನ್ನ ಬಳಿ ದುಂಬಾಲು ಬಿದ್ದಿದ್ದರು. ಮಗನಿಗೆ ಟಿಕೆಟ್‌ ಕೊಡಿಸುವುದಾಗಿ ಹೇಳಿದ್ದರು’’ ಎಂದು ಅವರು ವಿವರಿಸಿದರು.‘ಯಡಿಯೂರಪ್ಪ  ತಮಗೆ ಟಿಕೆಟ್‌ ತೆಗೆದುಕೊಂಡಿ­ದ್ದಲ್ಲದೆ, ಶೋಭಾ ಕರಂದ್ಲಾಜೆ (ಉಡುಪಿ), ಶಿವಕುಮಾರ ಉದಾಸಿ (ಹಾವೇರಿ), ಅಮಾನತಾಗಿದ್ದ ಜಿ.ಎಸ್‌.ಬಸವರಾಜು (ತುಮಕೂರು) ಅವರಿಗೆ ಟಿಕೆಟ್ ಕೊಡಿಸಿದರು. ನನಗೆ ಮಾತ್ರ ಕೊಟ್ಟ ಮಾತಿ­ನಂತೆ ನಡೆದುಕೊಳ್ಳಲಿಲ್ಲ’ ಎಂದು ಆಕ್ಷೇಪಿಸಿದರು.‘ವಿರೋಧ ಪಕ್ಷದ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಜಗದೀಶ ಶೆಟ್ಟರ್‌ ಕೂಡ ಒಮ್ಮೆ ದೂರವಾಣಿ ಮೂಲಕ ಮಾತನಾಡಿ, ‘ಬಿಜೆಪಿ ಸೇರಬೇಕು’ ಎಂದು ಮನವಿ ಮಾಡಿದ್ದರು. ಈಗ ಅವರು ಕೂಡ ಎಲ್ಲವನ್ನೂ ಮರೆತಿದ್ದಾರೆ. ಯಾರಿಂದ ವಿರೋಧಪಕ್ಷದ ಸ್ಥಾನ ಸಿಕ್ಕಿತು ಎನ್ನುವುದು ಅವರಿಗೆ ಮರೆತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.