ಹಿಮಾಚಲ ಪ್ರದೇಶದ ಧರ್ಮಶಾಲಾ ಪ್ರಕೃತಿ ಸೌಂದರ್ಯದ ಜೊತೆಗೆ ಅಧ್ಯಾತ್ಮದ ಚೆಲುವಿಗೂ ಪ್ರಸಿದ್ಧವಾದುದು. ಬೌದ್ಧ ಧರ್ಮದ ನೆಲೆಯಾದ ಈ ಪರಿಸರಕ್ಕೆ ಅಂತರಂಗದ ದಣಿವು ಮರೆಸಿ, ಉಲ್ಲಾಸ ಹೆಚ್ಚಿಸುವ ಪ್ರಾಕೃತಿಕ ಚಿಕಿತ್ಸೆಯ ಶಕ್ತಿ ಇರುವಂತಿದೆ.

ಹಿಮಾಚಲ ಪ್ರದೇಶದ ಕುರಿತ ಬಣ್ಣನೆಗಳು ಒಂದೆರಡಲ್ಲ. ‘ಹಿಮಾಲಯದ ತಳದ ಸ್ವರ್ಗ’, ‘ಪಹಾಡೋಂಕಿ ರಾಣಿ’, ‘ದೇವಭೂಮಿ’ ಎನ್ನುವ ವಿಶೇಷಣಗಳು ಈ ರಾಜ್ಯಕ್ಕಿವೆ. ಇವೆಲ್ಲವೂ ಕವಿಯ ಬಣ್ಣನೆಗಳಲ್ಲ, ಸತ್ಯದ ಕುರುಹುಗಳು ಎನ್ನುವುದನ್ನು ತಿಳಿಯಲು ಹಿಮಾಚಲ ಪ್ರದೇಶದ ಧರ್ಮಶಾಲಾ ಪರಿಸರಕ್ಕೆ ಬರಬೇಕು. ಹಿಮಾವೃತ ದೌಲಾಧರ್ ಪರ್ವತ ಶ್ರೇಣಿಯ ಈಶಾನ್ಯದಲ್ಲಿ, ಕಾಂಗ್ರಾಘಾಟಿಯಲ್ಲಿರುವ ಧರ್ಮಶಾಲಾ ವರ್ಣರಂಜಿತ ಚಿತ್ರದಂತೆ ಮನಸ್ಸು ಸೂರೆಗೊಳ್ಳುತ್ತದೆ.

ಸೂಚಿಪರ್ಣ ಅರಣ್ಯದ ದಟ್ಟವಾದ ದೇವದಾರು, ಪೈನ್, ಓಕ್, ಸಿಡಾರ್ ಮರಗಳು ಹೇರಳವಾಗಿರುವ, ಸಮುದ್ರ ಮಟ್ಟಕ್ಕೆ 1457 ಮೀ. ಎತ್ತರದಲ್ಲಿರುವ ಈ ಗಿರಿಧಾಮವು ಕಲೆ, ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವನ್ನೂ ಹೊಂದಿರುವ ಸ್ಥಳ. ಪ್ರಾಕೃತಿಕವಾಗಿ ಇದನ್ನು ಮೇಲಿನ ಮತ್ತು ಕೆಳಗಿನ ಧರ್ಮಶಾಲಾ ಎಂದು ವಿಭಾಗಿಸಲಾಗಿದೆ. ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಗೂರ್ಖಾ ಸೇನಾ ತುಕಡಿ ಇಲ್ಲಿ ನೆಲೆಗೊಂಡಿತ್ತು. ಆಗ ಇಲ್ಲಿ ಇದ್ದ ಧರ್ಮಶಾಲೆಯಿಂದಾಗಿ ಈ ಸ್ಥಳಕ್ಕೆ ಅದೇ ಹೆಸರು ಬಂದಿದೆ.

ಬ್ರಿಟಿಷರಿಗೆ ಧರ್ಮಶಾಲಾ ಪ್ರದೇಶವನ್ನು ತಮ್ಮ ಬೇಸಿಗೆಯ ರಾಜಧಾನಿಯನ್ನಾಗಿ ಮಾಡಿಕೊಳ್ಳಬೇಕೆಂಬ ಹಂಬಲವಿತ್ತು. ಆದರೆ 1905ರ ಭೂಕಂಪವು ಇಲ್ಲಿನ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಾಗ, ಅವರ ದೃಷ್ಟಿ ಶಿಮ್ಲಾದೆಡೆ ಹರಿಯಿತು. ಕಾಂಗ್ರಾ ಜಿಲ್ಲಾ ಕೇಂದ್ರವಾದ ಇದು, ಪ್ರಸ್ತುತ ಹಿಮಾಚಲಪ್ರದೇಶ ರಾಜ್ಯದ ಚಳಿಗಾಲದ ರಾಜಧಾನಿಯಾಗಿದೆ. ಇಲ್ಲಿ ಹರಿವ ಭಾಗ್ಸೂ ನದಿ ಪರ್ವತ ಪಂಕ್ತಿಯ ಬಂಡೆಗಳೆಡೆಯಲ್ಲಿ ಎತ್ತರದಿಂದ ಧುಮುಕಿ ಉಂಟುಮಾಡುವ ಜಲಪಾತ ನೋಡಲು ಒಂದು ಕಿಲೋಮೀಟರ್ನ ಆಹ್ಲಾದಕರ ಚಾರಣ ಮಾಡಬೇಕು. ಹತ್ತಿ ಹೋಗಲು ಕಲ್ಲಿನ ಮೆಟ್ಟಿಲುಗಳೂ ಇವೆ. ಅಲ್ಲಲ್ಲಿ ಬೆಟ್ಟದ ಮಗ್ಗುಲಲ್ಲಿ ಕಲ್ಲು ಕಟ್ಟಣೆಯ ತಡೆಗೋಡೆಗಳಿವೆ.

‘ಕುಡಾ ಕುಡಾದಾನ್ ಮೇಂ ಹಿ ಡಾಲೇಂ’ ಎಂಬ ಕಸದ ಬುಟ್ಟಿಗಳ ಕೋರಿಕೆಯನ್ನು ಪ್ರವಾಸಿಗಳು ಮನ್ನಿಸುತ್ತಿದ್ದುದನ್ನು ನೋಡುವಾಗ ಮನಸ್ಸು ಮುದಗೊಳ್ಳುತ್ತದೆ. ದಾರಿಯುದ್ದಕ್ಕೂ ಟೀ, ಕಾಫಿ, ಬಿಸಿಬಿಸಿ ಹಬೆಯಾಡುವ ಜನಪ್ರಿಯ ತಿಂಡಿ ಮೋಮೋ ಸಿಗುವ ಪುಟ್ಟ ಹೋಟೆಲ್ಗಳಿವೆ. ಜಲಪಾತಕ್ಕೆ ಸಾಗುವ ಮಾರ್ಗದ ಬುಡದಲ್ಲಿ ಭಾಗ್ಸೂನಾಥ್ ಮಂದಿರ್ ಎನ್ನಲಾಗುವ ಒಂದು ಶಿವಮಂದಿರವಿದೆ. ತಗ್ಗಿನಲ್ಲಿ ಬಗ್ಗಿ ಹೋಗಿ ಗುಹೆಯ ಒಳಗಡೆ ಇರುವ ಶಿವಲಿಂಗ ದರ್ಶನ ಪಡೆದು ಹೊರಬರಬೇಕು. ಮಂದಿರದ ಪಕ್ಕದಲ್ಲಿ ಒಂದು ಸಾರ್ವಜನಿಕ ಈಜುಕೊಳ ಇದೆ.

ಟಿಬೆಟ್ನ ಬೌದ್ಧಧರ್ಮದ ಗುರು ದಲೈಲಾಮಾ ನೆಲೆಸಿರುವ ಮೇಲಿನ ಧರ್ಮಶಾಲಾದ ಭಾಗವನ್ನು ‘ಮೆಕ್ಲಾಡ್ಗಂಜ್’ ಎನ್ನಲಾಗುತ್ತದೆ. 1949ರಲ್ಲಿ ಚೀನಾ ಟಿಬೆಟಿನ ಮೇಲೆ ದಾಳಿ ಮಾಡಿದಾಗಿನಿಂದ ಪ್ರತಿಭಟನೆ, ಹೋರಾಟ, ಯುದ್ಧ, ದಬ್ಬಾಳಿಕೆಗಳಿಂದ ನಲುಗಿದ ಟಿಬೆಟನ್ನರು ನಿರಾಶ್ರಿತರಾಗಿ ಭಾರತಕ್ಕೆ ಓಡಿಬಂದರು. 1960ರಲ್ಲಿ ದಲೈ ಲಾಮಾ ಅವರು ಧರ್ಮಶಾಲಾದಲ್ಲಿ ನೆಲೆಸಿದರು. ಅಂದಿನಿಂದ ಇದು ಭಾರತದಲ್ಲಿನ ಟಿಬೆಟನ್ನರ ಸರ್ಕಾರದ ಕೇಂದ್ರವಾಗಿದ್ದು, ‘ಲಿಟ್ಲ್ ಲಾಸಾ’ ಎನಿಸಿಕೊಂಡಿದೆ.

ಧರ್ಮಶಾಲಾದಲ್ಲಿನ ನಾಂಗ್ಯಾಲ್ ಮೊನಾಸ್ಟೆರಿ ಟಿಬೆಟನ್ನರ, ಲಾಮಾಗಳ ಪ್ರಸಿದ್ಧ ಧಾರ್ಮಿಕ ಕೇಂದ್ರ. ಈ ಬೌದ್ಧಧರ್ಮ ಕೇಂದ್ರದಲ್ಲಿ ಟಿಬೆಟಿನ ಇತಿಹಾಸ, ಸಂಸ್ಕೃತಿ, ರಾಜಕೀಯಕ್ಕೆ ಸಂಬಂಧಿಸಿದ ಸಮಸ್ತ ಸಂಪನ್ಮೂಲವೂ ನೆಲೆಗೊಂಡಿದೆ. ಚೀನಾ ಆಕ್ರಮಣ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಟಿಬೆಟ್ ಹುತಾತ್ಮರ ಕುರಿತ ‘ಟಿಬೆಟ್ ಮ್ಯೂಸಿಯಂ’ ಇಲ್ಲಿದೆ. ಎಂಬತ್ತು ಸಾವಿರಕ್ಕೂ ಅಧಿಕ ಟಿಬೆಟನ್ ಹಸ್ತಪ್ರತಿಗಳಿರುವ ಗ್ರಂಥಾಲಯ ಇದೆ.

ದಲೈಲಾಮಾರ ಮೂರು ಪ್ರಮುಖ ಜೀವನದ ಸೂತ್ರಗಳಾದ ಮಾನವೀಯ ಮೌಲ್ಯಗಳ ಉನ್ನತೀಕರಣ, ಅಂತರ್ಧರ್ಮೀಯ ಸಾಮರಸ್ಯ, ಟಿಬೆಟಿನ ಬೌದ್ಧ ಸಂಸ್ಕೃತಿಯ ಸಂರಕ್ಷಣೆಯನ್ನು ಸಾರುವ ಅವರ ಬೋಧನೆಯ ಧ್ವನಿಮುದ್ರಿಕೆಗಳು ಮತ್ತು ಪುಸ್ತಕಗಳ ಮಾರಾಟವೂ ಇಲ್ಲಿ ನಡೆಯುತ್ತದೆ. ಅವಲೋಕಿತೇಶ್ವರನ ಪ್ರತಿಮೆ, ಟಿಬೆಟ್ ಧರ್ಮ ರಾಜರುಗಳ ಕಲಾಕೃತಿ, ದಲೈಲಾಮಾರ ಫೋಟೋ ಇರುವಲ್ಲಿನ ದೊಡ್ಡ ಧರ್ಮಚಕ್ರ, ಆಕರ್ಷಕ ವರ್ಣಚಿತ್ರಗಳು– ಹೀಗೆ ಎಲ್ಲವೂ ವ್ಯವಸ್ಥಿತವಾಗಿ ನೆಲೆಗೊಂಡಿವೆ. ಅವಲೋಕಿತೇಶ್ವರನ ಮಂತ್ರಗಳನ್ನು ಕೆತ್ತಿದ ಪ್ರಾರ್ಥನಾ ಚಕ್ರಗಳಿವೆ. ಇವನ್ನು ಗಡಿಯಾರದ ಪರಿಕ್ರಮಣದಂತೆ ತಿರುಗಿಸಿದಾಗ, ಈ ಚಕ್ರದ ಒಂದು ಸುತ್ತು ಸಾವಿರಾರು ಮಂತ್ರಗಳ ಪಠಣಕ್ಕೆ ಸಮ ಎಂಬುದು ಇಲ್ಲಿನವರ ಭಕ್ತಿಯ ನಂಬುಗೆ.

ಕಾಲಚಕ್ರ, ವಿಶ್ವಮಾತಾ, ಗ್ರೀನ್ತಾರಾ ದೇವತೆಗಳ ಮಂಟಪಗಳ ಎದುರು ಭಕ್ತರು ಅರ್ಪಿಸಿದ ಕಾಣಿಕೆಗಳಲ್ಲಿ ಸಾವಿರ ರೂಪಾಯಿ ನೋಟುಗಳಿಂದ ಹಿಡಿದು ಚಾಕೋಲೇಟ್ ಬಾಕ್ಸ್, ಸಿಹಿತಿಂಡಿಗಳ ಡಬ್ಬಿಗಳು, ಒಣಹಣ್ಣುಗಳು, ಮುಂತಾದವುಗಳು ಇದ್ದವು. ಅವುಗಳಲ್ಲಿ ನಮ್ಮ ಕನ್ನಡದ ಅಕ್ಷರಗಳಲ್ಲಿನ ‘ನಂದಿನಿ ಗುಡ್ಲೈಫ್’ ಹಾಲಿನ ಪೊಟ್ಟಣಗಳೂ ಇದ್ದವು. ಒಂದೆಡೆ ಐದಾರು ಮಂದಿ ಲಾಮಾಗಳು ಏಕಾಗ್ರತೆಯಿಂದ ನಡುಬಗ್ಗಿಸಿ ಬಣ್ಣಬಣ್ಣದ ರಂಗೋಲಿ ಪುಡಿ ಉದುರಿಸಿ ರಂಗೋಲಿಯೊಂದನ್ನು ರಚಿಸುತ್ತಿದ್ದರು. ಧರ್ಮಶಾಲಾದಿಂದ ಎರಡು ಕಿ.ಮೀ. ದೂರದಲ್ಲಿ 1852ರಲ್ಲಿ ನಿರ್ಮಿಸಲಾದ ಸೆಂಟ್ ಜಾನ್ ಚರ್ಚ್ ಹಿಮಾಲಯನ್ ಸಿಡಾರ್ ಮರಗಳೆಡೆಯಲ್ಲಿದೆ.

ಸಮೀಪದಲ್ಲಿ ಮರದ ಕೆತ್ತನೆಗಳ ಹಾಗೂ ಕರಕುಶಲ ವಸ್ತುಗಳ ಕೇಂದ್ರ ಇದೆ. ಇಲ್ಲಿಂದ ಮೂರು ಕಿ.ಮೀ. ದೂರದಲ್ಲಿ ಲಾಮಾಗಳು ಪವಿತ್ರ ಎಂದು ಭಾವಿಸುವ ವಿಶಾಲವಾದ ದಲ್ ಸರೋವರ ಇದೆ. ಇದರ ಸುತ್ತಲೂ ಎತ್ತರವಾದ ದೇವದಾರು ಮರಗಳು ಬೇಲಿಯಂತೆ ಆವೃತವಾಗಿವೆ. ನಾವು ಹೋದ ದಿನ ದಲೈಲಾಮಾರು ಇಲ್ಲಿಗೆ ಪೂಜೆ ಸಲ್ಲಿಸಲು ಬಂದಿದ್ದರಿಂದ, ಸಂಚಾರ ದಟ್ಟಣೆ ವಿಪರೀತವಾಗಿತ್ತು. ಸ್ಥಳವು ಟಿಬೆಟನ್ನರು, ಲಾಮಾಗಳಿಂದ ಕಿಕ್ಕಿರಿದಿತ್ತು. ನಾವು ಒಂದಿಬ್ಬರನ್ನು ಮಾತನಾಡಿಸಿದಾಗ ನಗುಮುಖದಿಂದ ಸೌಜನ್ಯದಿಂದ ಮಾತನಾಡಿ ಅಂದಿನ ದಿನದ ಮಹತ್ವ ತಿಳಿಸಿದರು.

ಧರ್ಮಶಾಲಾದ ಕ್ರಿಕೆಟ್ ಸ್ಟೇಡಿಯಂ ಪ್ರಸಿದ್ಧವಾದುದು. ಇಲ್ಲಿ ಅಂತರರಾಷ್ಷ್ಟ್ರೀಯ ಹಾಗೂ ಐಪಿಎಲ್ ಕ್ರಿಕೆಟ್ ಪಂದ್ಯಗಳು ನಡೆಯುತ್ತಿರುತ್ತವೆ. ಬೇಸಿಗೆಯಲ್ಲಿ ಪ್ರವಾಸಿಗಳು ಲಗ್ಗೆಯಿಡುವ ಧರ್ಮಶಾಲಾದಲ್ಲಿ ಉತ್ತಮ ವಸತಿ ಸೌಕರ್ಯಗಳ ಹೋಟೆಲ್ಗಳಿವೆ. ಇಲ್ಲಿಗೆ ಬರಲು ಪಠಾಣ್ಕೋಟ್ನಿಂದ 88 ಕಿ.ಮೀ. ಬಸ್ನಲ್ಲಿ ಪ್ರಯಾಣಿಸಿ ಅಥವಾ ರೈಲಿನಿಂದಲೂ ಧರ್ಮಶಾಲಾಕ್ಕೆ ಬರಬಹುದು. ದೆಹಲಿಯಿಂದ ಕಾಂಗ್ರಾ ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ಹದಿನೆಂಟು ಕಿ.ಮೀ. ಪ್ರಯಾಣಿಸಿ ಧರ್ಮಶಾಲಾ ತಲುಪಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.