ಬುಧವಾರ, ಏಪ್ರಿಲ್ 14, 2021
24 °C

ಧಾನ್ಯ ಸಂಗ್ರಹಣೆ:ಗೋದಾಮು ನಿರ್ಮಾಣಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೇಂದ್ರ ಸರ್ಕಾರವು ಆಹಾರ ಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿಡುವ ಉದ್ದೇಶದಿಂದ ಕರ್ನಾಟಕದಲ್ಲಿ ಹೆಚ್ಚುವರಿಯಾಗಿ 6.36 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯ ಸಂಗ್ರಹಿಸಿಡಲು ಸೂಕ್ತ ಗೋದಾಮುಗಳನ್ನು ನಿರ್ಮಿಸುವಂತೆ ಸೂಚಿಸಿದೆ’ ಎಂದು ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಿ.ಬಸವರಾಜು ಹೇಳಿದರು.ನಗರದ ಜಯನಗರದಲ್ಲಿರುವ ಭಾರತ ಆಹಾರ ನಿಗಮದ (ಎಫ್‌ಸಿಐ)  ಪ್ರಾದೇಶಿಕ ಕಚೇರಿಯಲ್ಲಿ ಶನಿವಾರ ನಡೆದ‘ಪ್ರೈವೇಟ್ ಎಂಟರ್‌ಪ್ರಿನರ್‌ಶಿಪ್ ಗ್ಯಾರಂಟಿ (ಪಿಇಜಿ) 2008’ರ ಗೋದಾಮು ನಿರ್ಮಾಣ ಯೋಜನೆಯ ಸಂಬಂಧ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಅವರು ಮಾತನಾಡಿದರು.‘ರಾಜ್ಯದಲ್ಲಿ ಹೆಚ್ಚುವರಿಯಾಗಿ 6.36 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಸಂಗ್ರಹಿಸಿಡಲು ಗೋದಾಮುಗಳನ್ನು ನಿರ್ಮಿಸಬೇಕಿದೆ. ಅದರಂತೆ ಕೇಂದ್ರ ಉಗ್ರಾಣ ನಿಗಮವು 55,000 ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯದ ಗೋದಾಮುಗಳನ್ನು ನಿರ್ಮಿಸಲಿದೆ. ರಾಜ್ಯ ಸರ್ಕಾರವು 1.88 ಲಕ್ಷ ಮೆಟ್ರಿಕ್ ಟನ್ ಧಾನ್ಯ ಸಂಗ್ರಹಿಸುವ ಗೋದಾಮುಗಳನ್ನು ನಿರ್ಮಾಣ ಮಾಡಲಿದೆ’ ಎಂದರು.‘ಹಾಗೆಯೇ ಸರ್ಕಾರಿ- ಖಾಸಗಿ ಸಹಭಾಗಿತ್ವದಲ್ಲಿ 3.92 ಲಕ್ಷ ಟನ್ ಧಾನ್ಯ ಸಂಗ್ರಹಣಾ ಸಾಮರ್ಥ್ಯದ ಉಗ್ರಾಣಗಳನ್ನು ನಿರ್ಮಾಣ ಮಾಡಬೇಕಿದೆ.ಖಾಸಗಿ ಉಗ್ರಾಣಗಳನ್ನು ಕನಿಷ್ಠ 10 ವರ್ಷಗಳ ಕಾಲ ಬಳಸಿಕೊಳ್ಳುವ ಖಾತ್ರಿ ನೀಡಲಾಗುವುದು.ಇದರಿಂದ ಖಾಸಗಿ ಗೋದಾಮುಗಳ ಮಾಲೀಕರಿಗೂ ಅನುಕೂಲವಾಗಲಿದೆ’ ಎಂದು ಹೇಳಿದರು.‘ರಾಜ್ಯದಲ್ಲಿನ ಗೋದಾಮುಗಳಲ್ಲಿ ಸದ್ಯ ಸುಮಾರು 17 ಲಕ್ಷ ಟನ್ ಆಹಾರ ಧಾನ್ಯ ಸಂಗ್ರಹಿಸಿಡಬಹುದಾಗಿದೆ. ಇದರಲ್ಲಿ ಸುಮಾರು 11 ಲಕ್ಷ ಟನ್ ಸಾಮರ್ಥ್ಯದ ಗೋದಾಮುಗಳು ರಾಜ್ಯ ಸರ್ಕಾರಕ್ಕೆ ಸೇರಿವೆ. ಕೇಂದ್ರ ಸರ್ಕಾರವು ದೇಶದಾದ್ಯಂತ ಗೋದಾಮುಗಳ ನಿರ್ಮಾಣಕ್ಕೆ ರೂ. 2,000 ಕೋಟಿ ಬಜೆಟ್‌ನಲ್ಲಿ ಮೀಸಲಿಟ್ಟಿದೆ. ಹಾಗೆಯೇ ರಾಜ್ಯ ಸರ್ಕಾರ ಕೂಡ ರೂ.100 ಕೋಟಿ ಹಣ ಕಾಯ್ದಿರಿಸಿದೆ’ ಎಂದರು.‘ಪಂಜಾಬ್, ಹರಿಯಾಣ, ಆಂಧ್ರಪ್ರದೇಶ ಸೇರಿದಂತೆ ಇತರೆ ರಾಜ್ಯಗಳ ಆಹಾರ ಧಾನ್ಯಗಳನ್ನು ರಾಜ್ಯದಲ್ಲಿ ಸಂಗ್ರಹಿಸಲಾಗುವುದು. ಖಾಸಗಿ ಗೋದಮುಗಳನ್ನು 10 ವರ್ಷ ಕಾಲ ಬಳಸುವ ಖಾತ್ರಿ ನೀಡುವುದರಿಂದ ಹೂಡಿಕೆದಾರರು ಗೋದಾಮುಗಳನ್ನು ನಿರ್ಮಿಸಲು ಉತ್ತಮ ಅವಕಾಶವಿದೆ’ ಎಂದು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.