ಶನಿವಾರ, ಜೂಲೈ 11, 2020
29 °C

ಧಾರವಾಡದಲ್ಲೂ ಗ್ರಾಮಾಭಿವೃದ್ಧಿ ತರಬೇತಿ ಕೇಂದ್ರ: ಸಚಿವ ಶೆಟ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಮೈಸೂರಿನಲ್ಲಿರುವ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಮಾದರಿಯಲ್ಲಿ ಧಾರವಾಡದಲ್ಲೊಂದು ಕೇಂದ್ರ ಆರಂಭಿಸಲಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ತಿಳಿಸಿದರು. ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಧಾರವಾಡ ಜಿಲ್ಲೆಯ ತಾ.ಪಂ. ಹಾಗೂ ಜಿ.ಪಂ. ಚುನಾವಣೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳನ್ನು ಅಭಿನಂದಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.‘ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿ ಉತ್ತರ ಕರ್ನಾಟಕದ ಎಲ್ಲರಿಗೂ ಮೈಸೂರಿಗೆ ಹೋಗಿ ತರಬೇತಿ ಪಡೆಯಲು ಆಗುವುದಿಲ್ಲ. ಇದಕ್ಕಾಗಿ ಉತ್ತರ ಕರ್ನಾಟಕದ ಜನರಿಗೆ ಅನುಕೂಲವಾಗಲು ಧಾರವಾಡದಲ್ಲಿ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದರು. ‘ಬಿಜೆಪಿ ನಗರಗಳಿಗಷ್ಟೇ ಸೀಮಿತವೆಂಬ ಆರೋಪವಿತ್ತು. ಆದರೆ ಈ ಚುನಾವಣೆಯಿಂದ ಗ್ರಾಮೀಣ ಮಟ್ಟದಲ್ಲೂ ಬೇರು ಬಿಟ್ಟಿದೆ ಎಂಬುದು ಸಾಬೀತಾಗಿದೆ. ಅನೇಕ ಕಡೆ ಖಾತೆ ತೆರೆಯದ ಸ್ಥಳದಲ್ಲೂ ಬಿಜೆಪಿ ಗೆದ್ದಿದೆ. ರಾಜ್ಯದ ರಾಜಕೀಯದಲ್ಲಿ ಇದು ಮಹತ್ತರ ಬದಲಾವಣೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.‘ವಿರೋಧ ಪಕ್ಷಗಳು ನಿತ್ಯ ಟೀಕೆ ಮಾಡುವುದರ ಜೊತೆಗೆ ಸರ್ಕಾರ ಇನ್ನೇನು ಬೀಳಲಿದೆ ಎಂದು ಅಬ್ಬರಿಸಿದವು. ಆದರೆ ವಿರೋಧ ಪಕ್ಷಗಳ ಕನಸು ನನಸಾಗಲಿಲ್ಲ. ಈ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡಿದ್ದಾರೆ’ ಎಂದರು. ‘ಕಳೆದ ಬಾರಿಯ ಚುನಾವಣೆಯಲ್ಲಿ 22 ಜಿ.ಪಂ. ಸ್ಥಾನಗಳಲ್ಲಿ ಕೇವಲ ಮೂರು ಸ್ಥಾನಗಳನ್ನು ಮಾತ್ರ ಬಿಜೆಪಿ ಗೆದ್ದಿತ್ತು. ಆದರೆ ಈ ಬಾರಿ 15 ಸ್ಥಾನಗಳನ್ನು ಗೆದ್ದಿದೆ. ಜೊತೆಗೆ 75 ತಾ.ಪಂ. ಸ್ಥಾನಗಳಲ್ಲಿ 43 ಗೆದ್ದಿದೆ. ಕಳೆದ ಬಾರಿ ಕೇವಲ 17 ಸ್ಥಾನಗಳನ್ನು ಗೆದ್ದಿತ್ತು. ಹೀಗೆಯೇ ರಾಜ್ಯದಲ್ಲಿಯೂ ಗಮನಾರ್ಹ ಸಾಧನೆಗೈದಿದೆ. ಇನ್ನು ಮುಂದೆ ಅಭಿವೃದ್ಧಿಗೆ ಒತ್ತು ಕೊಡಬೇಕು’ ಎಂದು ಅವರು ಸಲಹೆ ನೀಡಿದರು.ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ‘ವಿರೋಧ ಪಕ್ಷಗಳ ಟೀಕೆಗಳನ್ನು ಮತದಾರರು ತಿರಸ್ಕರಿಸಿದ್ದಾರೆ ಜೊತೆಗೆ ಅಭಿವೃದ್ಧಿ ಕೆಲಸಗಳ ಪರಿಣಾಮ ಒಳ್ಳೆಯ ಫಲಿತಾಂಶ ಸಿಕ್ಕಿದೆ. ಇದಕ್ಕಾಗಿ ಸರಿಯಾದ ಆಡಳಿತ ಕೊಡಬೇಕು ಇಲ್ಲದಿದ್ದರೆ ಕೆಳಗಿಳಿಸುತ್ತಾರೆ ಎಂಬುದನ್ನು ಮರೆಯಬಾರದು’ ಎಂದು ಎಚ್ಚರಿಸಿದರು.ಶಾಸಕರಾದ ಚಂದ್ರಕಾಂತ ಬೆಲ್ಲದ, ಮೋಹನ ಲಿಂಬಿಕಾಯಿ, ಎಸ್.ಐ. ಚಿಕ್ಕನಗೌಡ್ರ, ವೀರಭದ್ರಪ್ಪ ಹಾಲಹರವಿ, ಮುಖಂಡರಾದ ಸಿ.ಎಂ. ಲಿಂಬಣ್ಣವರ, ಅಶೋಕ ಕಾಟವೆ, ರಾಜಾ ದೇಸಾಯಿ, ಲಿಂಗರಾಜ ಪಾಟೀಲ, ರಂಗಾ ಬದ್ದಿ ಹಾಗೂ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಮೊದಲಾದವರು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.