ಮಂಗಳವಾರ, ಜೂನ್ 22, 2021
28 °C

ಧೂಮಲೀಲೆ, ಮದ್ಯಜ್ವಾಲೆಯ ನಡುವೆ ನರಳುವ ಕ್ರಿಮಿ

ಮೌನೇಶ್ ಎಲ್. ಬಡಿಗೇರ್ Updated:

ಅಕ್ಷರ ಗಾತ್ರ : | |

ಹೀಗೆ ಮನುಷ್ಯನ ಬದುಕು ಮತ್ತು ಸಂಬಂಧಗಳ ಗೊಜಗೊಂಡಗಳನ್ನೇ ತೀವ್ರವಾದ ಅಸಡ್ಡೆ, ಅನುಮಾನ, ಅಸಹ್ಯ, ಹೇವರಿಕೆ, ನಿರ್ಲಜ್ಜತನದಿಂದ ನೋಡುವ ನಾಟಕಕೃತಿಯನ್ನು ಅದೇ ತೀವ್ರತೆಯಲ್ಲಿ ರಂಗಕೃತಿಯನ್ನಾಗಿ ಮಾಡುವ ಪ್ರಯತ್ನ ಮಾಡಲಾಗಿದೆ. ಆದರೆ ಎಲ್ಲಾ ನಾಟಕಕೃತಿಗಳೂ ರಂಗದ ಮೇಲೆ ಬರುವ ಪ್ರಕ್ರಿಯೆಯಲ್ಲಿ ತನ್ನಲ್ಲಿನ ಕೆಲವನ್ನು ಕಳೆದುಕೊಳ್ಳುತ್ತವೆ, ಮತ್ತೆ ತನ್ನಲ್ಲಿಲ್ಲದ ಕೆಲವನ್ನ ಗಳಿಸಿಕೊಳ್ಳುತ್ತವೆ.

ಕನ್ನಡದಲ್ಲಿ ಹೊಸನಾಟಕಗಳು ಬರುತ್ತಿಲ್ಲ ಎಂಬ ಹಳೆಹಳಹಳಿಕೆಗಳ ನಡುವೆ ಮೊನ್ನೆ ಅಂದರೆ ಮಾರ್ಚ್ 21ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಹೈವೇ ಥಿಯೇಟರ್ಸ್‌, ವೆಂಕಟಾಲದವರ `ಕ್ರಿಮಿ~ ಎಂಬ ನಾಟಕ ಪ್ರದರ್ಶಿತವಾಯಿತು. ವಿ.ಎಂ. ಮಂಜುನಾಥ ರಚಿಸಿ ನಿರ್ದೇಶಿಸಿದ ಮೊದಲ ನಾಟಕ ಅದಾಗಿತ್ತು.

ಸ್ವತಃ ಕವಿ, ಕಥೆಗಾರನಾದ ಮಂಜುನಾಥ ರಂಗಭೂಮಿಯಲ್ಲಿ ತರಬೇತಿ ಪಡೆದು ಅಭ್ಯಾಸ ಮಾಡುತ್ತಿರುವವರು. ಚಿತ್ರ ಕಲಾವಿದರೂ ಆಗಿರುವ ಅವರು ನಾಟಕದ ಭಿತ್ತಿಪತ್ರದಿಂದ ಹಿಡಿದು ರಂಗಸಜ್ಜಿಕೆಯ ವಿನ್ಯಾಸದವರೆಗೆ ಅದರ ಛಾಪನ್ನು ಮೂಡಿಸಿದ್ದಾರೆ.ಮಾಡೆಲಿಂಗ್ ಕ್ಷೇತ್ರದ ಎಲ್ಲ ಅಘೋಷಿತ ಒಪ್ಪಂದಗಳಿಗೂ ಒಡ್ಡಿಕೊಂಡು ದುಡಿಯುತ್ತಿರುವ ಎಲಿಝಬೇತ್, ಇಂಥ ಹುಡುಗಿಯರನ್ನೇ ತನ್ನ ತೃಷೆಗೆ ಬಳಸಿಕೊಳ್ಳುವ ಫೋಟೋಗ್ರಾಫರ್ ಜಾವೇದ್, ಇವರ ಬಹಿರಂಗ ಸಂಬಂಧವನ್ನು ನೋಡುತ್ತ ತಾದಾತ್ಮ್ಯದಿಂದ ಅಥವಾ ಅಸಡ್ಡೆಯಿಂದ, ಅನಿವಾರ್ಯದಿಂದ ಸದಾ ಕುಡಿಯುತ್ತ ಗಾಂಜಾ ಸೇದುತ್ತ ಕುಳಿತಿರುವ ಎಲಿಝಬೇತಳ ಗಂಡ ಪೀಟರ್, ತನ್ನ ಸ್ನೇಹಿತನ ಹೆಂಡತಿಯನ್ನೇ ಮೋಹಿಸಲು ಹಪಹಪಿಸುವ ಜಾನ್, ಓಡಿಹೋದ ಗಂಡನ ಬದಲು ಮತ್ತೊಬ್ಬನ ಜೊತೆಗೆ ಬಾಳುಕಟ್ಟಿಕೊಂಡ ಎಲಿಝಬೇತಳ ತಾಯಿ ರೂಬಿ, ಇವು ಕ್ರಿಮಿ ನಾಟಕದ ಪಾತ್ರಗಳು.

 

ಕಡೆಗೆ ತಾಯಿಯ ಸಿರಿವಂತ ಮಿಂಡನ ಜೊತೆಗೆ ಮಗಳು ಎಲಿಝಬೇತ್ ಮತ್ತು ಮಗಳ ದರವೇಸಿ ಗಂಡನ ಜೊತೆಗೆ ತಾಯಿ ರೂಬಿ ನೆಲೆನಿಲ್ಲಲು ತೀರ್ಮಾನಿಸುವ ವಿಚಿತ್ರವಾದ ಮತ್ತು ವಿಕ್ಷಿಪ್ತವಾದ ತಿರುವಿನಲ್ಲಿ ನಾಟಕ ಅಂತ್ಯವಾಗುತ್ತದೆ.ಹೀಗೆ ಮನುಷ್ಯನ ಬದುಕು ಮತ್ತು ಸಂಬಂಧಗಳ ಗೊಜಗೊಂಡಗಳನ್ನೇ ತೀವ್ರವಾದ ಅಸಡ್ಡೆ, ಅನುಮಾನ, ಅಸಹ್ಯ, ಹೇವರಿಕೆ, ನಿರ್ಲಜ್ಜತನದಿಂದ ನೋಡುವ ನಾಟಕಕೃತಿಯನ್ನು ಅದೇ ತೀವ್ರತೆಯಲ್ಲಿ ರಂಗಕೃತಿಯನ್ನಾಗಿ ಮಾಡುವ ಪ್ರಯತ್ನ ಮಾಡಲಾಗಿದೆ.ಆದರೆ ಎಲ್ಲಾ ನಾಟಕಕೃತಿಗಳೂ ರಂಗದ ಮೇಲೆ ಬರುವ ಪ್ರಕ್ರಿಯೆಯಲ್ಲಿ ತನ್ನಲ್ಲಿನ ಕೆಲವನ್ನು ಕಳೆದುಕೊಳ್ಳುತ್ತವೆ, ಮತ್ತೆ ತನ್ನಲ್ಲಿಲ್ಲದ ಕೆಲವನ್ನ ಗಳಿಸಿಕೊಳ್ಳುತ್ತವೆ. ಈ ಗಳಿಕೆ ಮತ್ತು ಕಳಿಕೆಗಳ ಏರುಪೇರುಗಳ ಆಧಾರದ ಮೇಲೆ ಆಯಾ ಪ್ರಯೋಗದ ಯಶಸ್ಸು ಮತ್ತು ಅಪಯಶಸ್ಸು ನಿರ್ಣಯವಾಗುತ್ತದೆ ಎನ್ನಬಹುದು.ಹಾಗೆಯೇ ಪ್ರಸ್ತುತ ನಾಟಕಕೃತಿಯಲ್ಲಿನ ಪಾತ್ರಗಳ ಮಾನಸಿಕ ತೊಳಲಾಟ ಮತ್ತು ಪಾತ್ರದ ಇಡೀ ಬದುಕನ್ನ ಅಂತರ್ಗತ ಮಾಡಿಕೊಳ್ಳದ ಅಭಿನಯಕ್ರಮ ಈ ನಾಟಕದ ಕಳಿಕೆಯಾದರೆ, ಸಂಗೀತ, ಬೆಳಕು, ರಂಗಸಜ್ಜಿಕೆಗಳೇ ಮೊದಲಾದ ತಾಂತ್ರಿಕ ವಿಷಯಗಳು ಗಳಿಕೆ ಎನ್ನಬಹುದು (ಹಾಗೆಂದು ಇದ್ಯಾವುದರಲ್ಲೂ ಓರೆಕೋರೆಗಳು ಇಲ್ಲದೇ ಇಲ್ಲ).

 

ಪೀಟರ್‌ನ ಪಾತ್ರ, ಎಲಿಝಬೆತಳ ಪಾತ್ರಗಳು ಸಾಧ್ಯವಾದಷ್ಟು ನಾಟಕದ ನಾಡಿಮಿಡಿತವನ್ನು ಹಿಡಿಯಲು ಯತ್ನಿಸಿದರೂ ಉಳಿದ ಪಾತ್ರಗಳ ವಿಫಲತೆಯಲ್ಲಿ ಒಟ್ಟಾರೆ ನಾಟಕದ ಅಭಿನಯ ಕ್ಷೀಣಿಸುತ್ತದೆ. ನಾಟಕದ ಪ್ರತಿಯೊಂದು ಮಾತನ್ನೂ ಅರ್ಥಮಾಡಿಸಬೇಕು ಎಂದು ಹೊರಡುವ ಪ್ರಯೋಗದ ಲಯವಿನ್ಯಾಸವು ನೋಡುಗನ ತಾಳ್ಮೆಗೆಡಿಸುತ್ತದೆ.ನಾಟಕದ ಒಟ್ಟೂ ಮನೋಸ್ಥಿತಿಯ ಪ್ರತೀಕದಂತಿದ್ದ ಮದ್ಯ ಮತ್ತು ಧೂಮದ ಎಗ್ಗಿಲ್ಲದ ಬಳಕೆಯಿಂದ ಅದರೆಡೆಗೆ ಇದ್ದ ಕೌತುಕವೇ ಮಾಯವಾಗಿ ನೋಡುಗನಲ್ಲಿ ರೇಜಿಗೆ ಹುಟ್ಟಿಸಿಬಿಡುತ್ತವೆ. ಇತ್ತೀಚೆಗಷ್ಟೆ ಮಂಡಿಸಲಾದ ಬಜೆಟ್‌ನ ಏರಿದ ದರಗಳ ಪಟ್ಟಿಯಲ್ಲಿ ಇವೆರಡೂ ಮುಂಚೂಣಿಯಲ್ಲಿವೆ. ಹಾಗಿದ್ದೂ ಇದ್ಯಾವುದನ್ನೂ ಲೆಕ್ಕಿಸದೆ ಪುಂಖಾನುಪುಂಖವಾಗಿ ಧೂಮಲೀಲೆಗಳು ರಂಗಸ್ಥಳದಿಂದ ಪ್ರೇಕ್ಷಾಂಗಣಕ್ಕೆ ತೇಲಿ ಬರುತ್ತಿದ್ದದ್ದು ವಿಶೇಷವೇ ಸರಿ!ನಾಟಕ ಕಲೆ ಚಿಕಿತ್ಸಾತ್ಮಕವಾಗಿ ಕೆಲಸ ಮಾಡುತ್ತದೆ ಎಂಬುದು ಹಳೆಯ ಮತ್ತು ಸತ್ಯದ ಮಾತು. ಆದರೆ ಪ್ರಸ್ತುತ ನಾಟಕ ಸಮಸ್ಯೆಯ ಗೋಜಲುಗಳನ್ನು ಬಿಡಿಸಿಡಲು ಮತ್ತು ಸಾಧ್ಯವಾದಷ್ಟು ಆಕರ್ಷಕವಾಗಿ ಬಿತ್ತರಿಸಲು ಪ್ರಯತ್ನಿಸುತ್ತದೆಯೇ ಹೊರತು ಅದನ್ನ ಚಿಕಿತ್ಸಾತ್ಮಕವಾಗಿ ಕಾಣುವ ಕುರುಹು ಎಲ್ಲೂ ಕಾಣುವುದಿಲ್ಲ.ಹಾಗೆಂದು ನಾಟಕ ಒಂದು ಪರಿಹಾರವನ್ನು ಸೂಚಿಸಬೇಕು ಎಂದು ಹೇಳುತ್ತಿಲ್ಲ. ಚಿಕಿತ್ಸೆಯೇ ಬೇರೆ, ಪರಿಹಾರವೇ ಬೇರೆ. ಕವಿಯೊಬ್ಬನ, ನಾಟಕಕಾರನೊಬ್ಬನ ವೈಯಕ್ತಿಕ ಅನುಭವಗಳು ಒಂದು ಕೃತಿಯಾಗಿ ಬಂದಾಗ ಅದು ಅವನ ವೈಯಕ್ತಿಕತೆಯನ್ನು ಮೀರಿದ ಒಂದು ಸಾಮಾಜಿಕತೆಯ ದರ್ಶನವನ್ನು ಮಾಡಿಸಿದಾಗ ಮಾತ್ರ ಅದು ಅನನ್ಯವಾದ ಕೃತಿಯಾಗಿ ಉಳಿಯುತ್ತದೆ.

 

ಲಂಕೇಶರ `ಟಿ. ಪ್ರಸನ್ನನ ಗೃಹಸ್ಥಾಶ್ರಮ~ ಮೊದಲಾದ ನಾಟಕಗಳು ನಮ್ಮ ಈ ಹೊತ್ತಿನ ಸಂಬಂಧಗಳ ತಲ್ಲಣಗಳ ಗೊಜಗೊಂಡವನ್ನು ಬಿಡಿಸಿಡುತ್ತಲೇ ಒಂದು ಸಾಮಾಜಿಕ ದರ್ಶನವನ್ನೂ ಕೊಡುತ್ತಿದ್ದವು. `ಕ್ರಿಮಿ~ ಮಂಜುನಾಥರ ಮೊದಲನೆ ನಾಟಕವಾದ್ದರಿಂದ ಮುಂದಿನ ನಾಟಕಗಳಲ್ಲಿ ಇದೆಲ್ಲವನ್ನೂ ನಿರೀಕ್ಷಿಸಬಹುದು.ಕ್ರಿಮಿ ಎಂದರೆ ಹುಳು, ಕೀಟ, ನಿರಂತರವಾಗಿ ಕೊರೆಯುವ ಒಂದು ಕ್ಷುದ್ರ ಜಂತು. ಆದರೆ ಮನುಷ್ಯನೆಂಬ ಕ್ರಿಮಿ ಕೊರೆಯುವುದು- ಸಂಬಂಧ, ವ್ಯಾಮೋಹ, ಪ್ರೀತಿ, ಅಸೂಯೆ, ಬದುಕು ಎಂಬ ತರಹೇವಾರೀ ವಸ್ತುಗಳನ್ನು.ಯಾವ ವಸ್ತುವನ್ನು ಯಾರು ಕೊರೆಯುತ್ತಾರೆ, ಯಾವುದಕ್ಕಾಗಿ ಯಾರು ನರಳುತ್ತಾರೆ ಎಂಬುದರ ಮೇಲೆ ಅವನು ಎಂಥ ಕ್ರಿಮಿ, ಯಾವುದರ ಕ್ರಿಮಿ ಎಂದು ನಿರ್ಧರಿತವಾಗುತ್ತದೆ. ಇವೆಲ್ಲದರಲ್ಲೇ ಕೊರೆಯುವ, ನರಳುವ ಕ್ರಿಮಿಗಳು ಪಾತ್ರಗಳೋ ಅಥವಾ ಪ್ರೇಕ್ಷಕರೋ ಎಂಬುದು ನಾಟಕದ ಆಶಯವೂ ಹೌದು, ಪ್ರೇಕ್ಷಕರ ಅನುಭವವೂ ಹೌದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.