ಭಾನುವಾರ, ಏಪ್ರಿಲ್ 11, 2021
32 °C

ನಂಜನಗೂಡು- ಮೈಸೂರು ಪ್ರಯಾಣಿಕರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂಜನಗೂಡು: ‘ದಕ್ಷಿಣಕಾಶಿ’ ಎನಿಸಿರುವ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣ ಪ್ರಸಿದ್ಧ ಯಾತ್ರಾಸ್ಥಳ ಹಾಗೂ ಕೈಗಾರಿಕಾ ಕೇಂದ್ರವೂ ಹೌದು. ದೇವಾಲಯಕ್ಕೆ ನಿತ್ಯ ಸಾವಿರಾರು ಪ್ರಯಾಣಿಕರು ಬಸ್‌ನಲ್ಲಿ ಇಲ್ಲಿಗೆ ಬಂದು ಹೋಗುತ್ತಾರೆ. ಅದೇ ರೀತಿ ಇಲ್ಲಿಂದ 23 ಕಿ.ಮೀ. ದೂರದ ಜಿಲ್ಲಾ ಕೇಂದ್ರವಾದ ಮೈಸೂರು ನಗರಕ್ಕೆ ವಿದ್ಯಾರ್ಥಿಗಳು, ಸರ್ಕಾರಿ-ಖಾಸಗಿ ನೌಕರರು, ವರ್ತಕರು, ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಬಸ್ ಸಂಚಾರ ಮಾಡುತ್ತಾರೆ.

 

ಆದರೆ ಜನದಟ್ಟಣೆ ಹೆಚ್ಚಾಗಿರುವ ಬೆಳಿಗ್ಗೆ 7.30ರಿಂದ 10ರ ನಡುವೆ ಇಲ್ಲಿಂದ ಮೈಸೂರಿಗೆ  ಸಮರ್ಪಕ ಬಸ್ ಸೇವೆ ಇಲ್ಲದೆ ಜನರು ನಿತ್ಯ ಪರದಾಡುವ ಸ್ಥಿತಿ ಇಲ್ಲಿ ದಶಕದಿಂದಲೂ ಇದೆ.ಜಿಲ್ಲಾ ಕೇಂದ್ರವಾದ ಮೈಸೂರಿಗೆ ಬೆಳಗಿನ ಸಮಯ ಹೆಚ್ಚು ಜನರು ನಾನಾ ಕೆಲಸ-ಕಾರ್ಯಗಳ ನಿಮಿತ್ತ ಸಂಚರಿಸುತ್ತಾರೆ. ಆದರೆ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಈ ಸಮಯದಲ್ಲಿ ಸಮರ್ಪಕ ರೀತಿ ಬಸ್ ಸೌಕರ್ಯ ಒದಗಿಸಿಲ್ಲ. ಬೆಳಿಗ್ಗೆ11 ಗಂಟೆಯಿಂದ ಸಂಜೆ ತನಕ ಸಾಕಷ್ಟು ಪ್ರಮಾಣದಲ್ಲಿ ಬಸ್ ಓಡಿಸಲಾಗುತ್ತಿದೆ. ವಿಚಿತ್ರವೆಂದರೆ ಈ ಅವಧಿಯಲ್ಲಿ ಏಕ ಕಾಲಕ್ಕೆ 2- 4 ಬಸ್‌ಗಳು ಒಮ್ಮೆಗೆ ಸಂಚರಿಸುತ್ತವೆ. ಎಷ್ಟೋ ಬಸ್‌ಗಳು ಭರ್ತಿಯಾಗದೆ 15-20 ಪ್ರಯಾಣಿಕರಿಗೇ ಸಂಚರಿಸುತ್ತವೆ. ‘ಆದರೆ ಬೆಳಗಿನ ಸಮಯದಲ್ಲಿ ಇಲ್ಲಿಂದ ಮೈಸೂರಿಗೆ, ಅದೇ ರೀತಿ ರಾತ್ರಿ 8ರಿಂದ 11 ಗಂಟೆ ನಡುವೆ ಮೈಸೂರಿಂದ ನಂಜನಗೂಡಿಗೆ ಬಸ್‌ಗಳ ಕೊರತೆಯಿಂದ ನಿತ್ಯ ಜನರು ಪರದಾಡುವಂತಾಗಿದೆ.’ನೇರ ಸಂಚಾರ ಇಲ್ಲ:
ನಂಜನಗೂಡು  ಬಸ್ ಡಿಪೋಗೆ ಸೇರಿದ ಬಸ್‌ಗಳನ್ನು ಇಲ್ಲಿಂದ ನೇರವಾಗಿ ಮೈಸೂರಿಗೆ ಓಡಿಸುತ್ತಿಲ್ಲ. ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ, ವಾಪಸ್ ಇಲ್ಲಿಗೆ ಬಂದು ಮೈಸೂರಿಗೆ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಆದರೆ ಮೈಸೂರು ನಗರ ಡಿಪೋಗೆ ಸೇರಿದ ಬಸ್‌ಗಳು  ಈ ಎರಡು ನಗರದ ನಡುವೆ  ಮಾತ್ರ ಸಂಚರಿಸುವ ಅವಕಾಶ ನೀಡಲಾಗಿದೆ. ಸ್ಥಳೀಯ ಡಿಪೋಗೆ ಒದಗಿಸಿರುವ 69 ಬಸ್‌ಗಳಲ್ಲಿ ಬಹುಪಾಲು ಬಸ್‌ಗಳು ಗುಜರಿ ಸೇರಬೇಕಾದ ಬಸ್‌ಗಳೇ ಆಗಿವೆ ಎಂದು ಹೆಸರು ಹೇಳಲು ಇಚ್ಚಿಸದ ಕೆಲವು ನೌಕರರು ಹೇಳುತ್ತಾರೆ.ವೊಲ್ವೋ ಕಾಟ: ಮೈಸೂರು - ನಂಜನಗೂಡು ನಡುವೆ ವೊಲ್ವೋ ಬಸ್‌ಗಳನ್ನು ಓಡಿಸಲಾಗುತ್ತಿದೆ. ಇದರ ಪ್ರಯಾಣ ದರ 25 ರೂಪಾಯಿ. ಸಾಮಾನ್ಯ ಬಸ್‌ನಲ್ಲಿ 16 ರೂಪಾಯಿ. ಆದರೆ ಸಾಮಾನ್ಯ ಬಸ್‌ಗಳನ್ನು ಕಡಿಮೆಗೊಳಿಸಿ ವೊಲ್ವೋ ಬಸ್‌ಗಳನ್ನು ಹೆಚ್ಚು ಓಡಿಸುವ ಹುನ್ನಾರವನ್ನು ಸಾರಿಗೆ ಸಂಸ್ಥೆ ಅಧಿಕಾರಿಗಳು ನಡೆಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹೀಗಾಗಿ ಬಡಜನರು, ಮಧ್ಯಮವರ್ಗದ ಜನರು ಸಾರಿಗೆ ಸಂಸ್ಥೆಗೆ ಹಿಡಿಶಾಪ ಹಾಕಿ ಕೊಂಡು ದುಬಾರಿ ದರ ಕೊಟ್ಟು ನಿಂತು ಪ್ರಯಾಣಿಸಬೇಕಾದ ಸ್ಥಿತಿ  ನಿರ್ಮಾಣವಾಗಿದೆ ಎಂದೂ ದೂರುತ್ತಾರೆ. ಇದರ ಜೊತೆಗೆ ಬಹಳಷ್ಟು ಬಸ್‌ಗಳು ನಿಲ್ದಾಣಕ್ಕೆ ಬಾರದೆ ಬೈ- ಪಾಸ್ ರಸ್ತೆಯಲ್ಲಿ ಚಾಮರಾಜನಗರ ಮತ್ತು ಗುಂಡ್ಲುಪೇಟೆ ಕಡೆಗೆ ಚಲಿಸುತ್ತವೆ. ನಂಜನಗೂಡು ಬಸ್‌ನಿಲ್ದಾಣ ಮತ್ತು ಡಿಪೋ ಆಡಳಿತ ಈಗ ಚಾಮರಾಜನಗರದ ನೂತನ ಸಾರಿಗೆ ವಿಭಾಗಕ್ಕೆ ಸೇರಿದೆ. ಅದರೂ ಸುಧಾರಣೆ ಆಗದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

                   

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.