ಸೋಮವಾರ, ಆಗಸ್ಟ್ 2, 2021
21 °C

ನಂಜನಗೂಡು ರಸಬಾಳೆ ಸಸಿ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಂಜನಗೂಡು ರಸಬಾಳೆ’ ಪ್ರಿಯರಿಗೆ ಮತ್ತೆ ಆ ವಿಶಿಷ್ಟ ಘಮದೊಂದಿಗೆ ಹಣ್ಣು ಸವಿಯುವ ಅವಕಾಶ ಒದಗಿ ಬರಲಿದ್ದು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗವು ‘ಸಸ್ಯ ಅಂಗಾಂಶ ಕೃಷಿ ಪ್ರಯೋಗಾಲಯ’ (ಟಿಶ್ಯೂ ಕಲ್ಚರ್ ಲ್ಯಾಬ್) ಅಭಿವೃದ್ಧಿಪಡಿಸಿದ ಸುಮಾರು 50 ಸಾವಿರ ಸಸಿಗಳನ್ನು ಆಗಸ್ಟ್ ತಿಂಗಳ ವೇಳೆಗೆ ಪೂರೈಕೆ ಮಾಡಲಿದೆ.ಇಡೀ ವಿಶ್ವದಲ್ಲೇ ವ್ಯಾಪಕ ಬೇಡಿಕೆಯಿರುವ ಈ ತಳಿಗೆ ಕಳೆದ ಕೆಲ ವರ್ಷಗಳಿಂದ ‘ಫ್ಯೂಜೇರಿಯಂ ವಿಲ್ಟ್’ ಎಂಬ ರೋಗ ತಗುಲಿದ್ದರಿಂದ ನಂಜನಗೂಡು ತಾಲ್ಲೂಕಿನ ಆಸುಪಾಸು ಹಳ್ಳಿಗಳಲ್ಲಿ ಸಾವಿರಾರು ಎಕರೆಯಲ್ಲಿ ಬೆಳೆಯುತ್ತಿದ್ದ ಬೆಳೆ, ನೂರು ಎಕರೆಗೆ ತಗ್ಗಿದೆ. ನಂಜನಗೂಡು ರಸಬಾಳೆಯ ಬದಲು ಇದಕ್ಕಿಂತ ಹೆಚ್ಚು ರೋಗನಿರೋಧಕ ಗುಣವನ್ನು ಹೊಂದಿದ ‘ಏಲಕ್ಕಿ ಬಾಳೆ’ಯು ಆ ಜಮೀನುಗಳನ್ನು ಆಕ್ರಮಿಸಿಕೊಂಡಿದೆ.ರಸಬಾಳೆಗೆ ಮತ್ತೊಮ್ಮೆ ಕಾಯಕಲ್ಪ ನೀಡಲು ಮುಂದಾದುದು ಬೆಂಗಳೂರು ಕೃಷಿ ವಿವಿಯ ತೋಟಗಾರಿಕೆ ವಿಭಾಗದ ‘ಸಸ್ಯ ಅಂಗಾಂಶ ಕೃಷಿ ಪದ್ಧತಿ’ಯ ಪ್ರಯೋಗಾಲಯ. ವಿಭಾಗದ ಪ್ರಾಧ್ಯಾಪಕ ಡಾ.ಬಿ.ಎನ್.ಸತ್ಯನಾರಾಯಣ ಅವರ ಆಸಕ್ತಿಯ ಫಲವಾಗಿ 2007ರಲ್ಲಿ ಕೇಂದ್ರ ಸರ್ಕಾರದ 1 ಕೋಟಿ ರೂಪಾಯಿ ಧನಸಹಾಯದೊಂದಿಗೆ ಈ ಪ್ರಯೋಗಾಲಯ ಆರಂಭವಾಯಿತು. ಪ್ರಯೋಗಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅವರು, ಅವನತಿಯ ಅಂಚಿನಲ್ಲಿರುವ ವಿಶ್ವ ಪ್ರಸಿದ್ಧ ನಂಜನಗೂಡು ರಸಬಾಳೆಯನ್ನು ಅಂಗಾಂಶ ಕೃಷಿ ಪದ್ಧತಿ ಮೂಲಕ ಅಭಿವೃದ್ಧಿಪಡಿಸಿದ್ದಾರೆ.ಬೆಳವಣಿಗೆ ವಿಧಾನ ಹೇಗೆ? ಎಂಎಸ್ ಮಾಧ್ಯಮದಲ್ಲಿ ಬೆಳೆಯಲಾಗುತ್ತಿರುವ ಈ ಸಸಿಗಳಿಗೆ ಅಗತ್ಯವಿರುವ ಆಹಾರವನ್ನು (ಉದಾ-ನೈಟ್ರೋಜನ್, ಫಾಸ್ಪರಸ್, ಪೊಟ್ಯಾಶಿಯಂ, ಆಕ್ಸಿನ್ಸ್) ತುಂಬಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಾಟಲಿಗಳಲ್ಲಿ ಇಡುತ್ತಾರೆ. ಬಾಳೆ ಗಿಡದ ಕಾಂಡದಿಂದ ಪಡೆಯಲಾದ ಒಂದು ಚಿಕ್ಕ ಭಾಗವನ್ನು ಇದರಲ್ಲಿಟ್ಟು ಕೆಲವು ದಿನಗಳ ನಂತರ ಹೊರತೆಗೆದು ಇನ್ನೊಂದು ಬಾಟಲಿಯಲ್ಲಿ ಹಾಕುತ್ತಾರೆ. ಇದೀಗ ಸಸಿಗಳು ಬೆಳೆಯುತ್ತಿದ್ದು, ಆಗಸ್ಟ್ ವೇಳೆಗೆ 50 ಸಾವಿರ ಸಸಿಗಳು ತಯಾರಾಗಲಿವೆ. ರೈತರು ಮತ್ತೆ ಈ ಬಾಳೆಯನ್ನು ಬೆಳೆದು ಆ ಪ್ರಸಿದ್ಧಿ ಮತ್ತೆ ಮರುಕಳಿಸಲಿ ಎಂಬುದು ನಮ್ಮ ಆಸೆ ಎಂದು ಸತ್ಯನಾರಾಯಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.‘ನಂಜನಗೂಡು ತಾಲ್ಲೂಕಿನ ರೈತರಿಗೆ ಮಾತ್ರ ಈ ಸಸಿಗಳನ್ನು ವಿತರಿಸಲಿದ್ದು, ಬೇರೆ ಭಾಗದಲ್ಲಿ ಬೆಳೆದರೆ ಅದು ತನ್ನ ಗುಣವನ್ನು ಕಳೆದುಕೊಳ್ಳುವುದರಿಂದ ಬೇರೆ ರೈತರಿಗೆ ನೀಡುವುದಿಲ್ಲ. ಸಸಿಯನ್ನು ತಲಾ ರೂ 20ಕ್ಕೆ ವಿತರಿಸಲಿದ್ದೇವೆ. ರಾಜ್ಯ ಸರ್ಕಾರ ಸಬ್ಸಿಡಿ ಕೊಟ್ಟರೆ ಇನ್ನೂ ಕಡಿಮೆ ದರದಲ್ಲಿ ವಿತರಿಸಲು ಸಿದ್ಧ’ ಎಂದು ಹೇಳಿದರು.

‘ನಮ್ಮ ಪ್ರಯೋಗಾಲಯ ವಿವಿ ಮಟ್ಟದಲ್ಲಿ ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡದಾಗಿದೆ. ಒಂದು ಬಾಳೆಯ ಕಾಂಡವನ್ನು ಪಡೆದು ಅದರಿಂದ ಲಕ್ಷ ಸಸಿಗಳನ್ನು ಇದರಲ್ಲಿ ಅಭಿವೃದ್ಧಿಪಡಿಸಬಹುದು. ಆದರೆ ಸಂಖ್ಯೆ ಹೆಚ್ಚಿದಂತೆಲ್ಲ ಬಾಳೆಯ ಗಿಡದ ಗುಣಮಟ್ಟ ಕುಸಿದು ರೈತರಿಗೆ ನಷ್ಟವಾಗುವುದನ್ನು ತಪ್ಪಿಸಲು 800 ಸಸಿಗಳನ್ನು ಮಾತ್ರ ತಯಾರಿಸುತ್ತೇವೆ’ ಎಂದು ಸ್ಪಷ್ಟನೆಯನ್ನೂ ನೀಡಿದರು.ಕೇಂದ್ರ ಸರ್ಕಾರದ ‘ಇನ್‌ಸ್ಪೈರ್’ (ವಿಜ್ಞಾನ ಕ್ಷೇತ್ರದಲ್ಲಿ ನೂತನ ಸಂಶೋಧನೆಗಳನ್ನು ಕೈಗೊಳ್ಳುವವರಿಗೆ ನೀಡಲಾಗುವ ಧನಸಹಾಯ) ಶಿಷ್ಯವೇತನ ಪಡೆದು, ನಂಜನಗೂಡು ರಸಬಾಳೆಯ ಕುರಿತೇ ಪಿಎಚ್.ಡಿ ಸಂಶೋಧನೆಯನ್ನು ಕೈಗೊಂಡಿರುವ ಪುಣೆ ಮೂಲದ ವಿದ್ಯಾರ್ಥಿ ಅಜಿತ್ ವಾಮನ್ ಮಾತನಾಡಿ, ‘ನಿರಂತರವಾಗಿ ನಂಜನಗೂಡು ತಾಲ್ಲೂಕಿನಲ್ಲಿ ರಸಬಾಳೆ ಬೆಳೆದಿದ್ದರಿಂದ ಸಾಂಕ್ರಾಮಿಕ ರೋಗ ಹರಡಿ ಬೆಳೆ ನಾಶವಾಗುತ್ತಿದೆ. ಪ್ರತಿ ಎರಡು ವರ್ಷಕ್ಕಾದರೂ ಬೇರೆ ಬೆಳೆಯನ್ನು ಬೆಳೆದರೆ ಮಾತ್ರ ರೋಗಾಣುಗಳು ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ. ಚಾಮರಾಜನಗರದಲ್ಲಿಯೂ ಈ ಬೆಳೆಯನ್ನು ಪ್ರಾಯೋಗಿಕವಾಗಿ ಬೆಳೆಯುತ್ತಿದ್ದೇವೆ’ ಎಂದರು.

ರಸಬಾಳೆಗೆ ಸಿಕ್ಕಿದೆ ಜಿಐ ಪ್ರಮಾಣಪತ್ರ

‘ಮೂಸಾ ಸ್ಪೇಸಿಸ್ ಎಎಬಿ’ ಎಂಬ ವರ್ಗಕ್ಕೆ ಸೇರಿದ ನಂಜನಗೂಡು ರಸಬಾಳೆಯ ಅಧಿಕೃತ ಉಲ್ಲೇಖ 1960ರ ಮೈಸೂರು ಗೆಜೆಟಿಯರ್‌ನಲ್ಲಿ ದಾಖಲಾಗಿದೆ. ಈ ಭಾಗದ ದೇವರಸನಹಳ್ಳಿ ಮತ್ತು ಹಗ್ಗೆನವಾಳು ಎಂಬ ಗ್ರಾಮದಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಿದ್ದರು.2005ರಲ್ಲಿ ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆ, ಈ ಬೆಳೆಗೆ ‘ಜಿಯಾಗ್ರಾಫಿಕಲ್ ಇಂಡಿಕೇಶನ್’ (ಜಿಐ) ಪ್ರಮಾಣಪತ್ರ ನೀಡಬೇಕು ಎಂದು ಭಾರತ ಸರ್ಕಾರವನ್ನು ಕೋರಿತು. ಈ ತಳಿಯ ಮಹತ್ವವನ್ನು ಗಮನಿಸಿ ಕೇಂದ್ರ ಸರ್ಕಾರ ಇದಕ್ಕೆ ಅನುಮೋದನೆ ನೀಡಿತು.ನಂಜನಗೂಡು ರೈತರು ರಸಬಾಳೆಯನ್ನು ವಾಣಿಜ್ಯ ಉದ್ದೇಶಕ್ಕೆ ಬೆಳೆಯುವುದಕ್ಕೆ ಇದು ಸಹಕಾರ ನೀಡಲಿದ್ದು, ವಿದೇಶಗಳಿಗೂ ರಫ್ತು ಮಾಡಬಹುದಾಗಿದೆ. ಬೇರೆ ಪ್ರದೇಶದಲ್ಲಿ ಬೆಳೆದ ಇದೇ ತಳಿಯ ಬಾಳೆಯನ್ನು ‘ನಂಜನಗೂಡು ರಸಬಾಳೆ’ ಎಂದು ಹೇಳುವಂತಿಲ್ಲ. ಆ ರೀತಿ ಭರವಸೆ ಹುಟ್ಟಿಸಿ ಮಾರಾಟ ಮಾಡಿದರೆ ಅದು ಜಿಐ ನಿಯಮದ ಪ್ರಕಾರ ಶಿಕ್ಷಾರ್ಹ ಅಪರಾಧ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.