ಭಾನುವಾರ, ಮಾರ್ಚ್ 7, 2021
18 °C
ಬದಲಿ ಕೀ ತಯಾರಕರ ರಾಜಾರೋಷದ ಕೆಲಸ

ನಕಲಿ ಕೀ ತಯಾರಿಕೆಗೆ ಇಲ್ಲಿ ಬೇಕಿಲ್ಲ ದಾಖಲೆ!

ಪ್ರಜಾವಾಣಿ ವಾರ್ತೆ/ ಎಲ್‌.ಮಂಜುನಾಥ Updated:

ಅಕ್ಷರ ಗಾತ್ರ : | |

ನಕಲಿ ಕೀ ತಯಾರಿಕೆಗೆ ಇಲ್ಲಿ ಬೇಕಿಲ್ಲ ದಾಖಲೆ!

ದಾವಣಗೆರೆ: ಪ್ರಕರಣ 1: ಪೋಷಕರು ಮನೆಯಲ್ಲಿ ಇಲ್ಲದ ಸಂದರ್ಭ ನಕಲಿ ಕೀ ಬಳಸಿ ಮನೆಯ ಬೀಗ ತೆಗೆದು ಅಲ್ಮೇರದಲ್ಲಿದ್ದ ನಗದು, ಚಿನ್ನಾಭರಣ ಗಳನ್ನು ದೋಚಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಬಳಿ ಇದ್ದ ನಕಲಿ

ಕೀಗಳ ದೊಡ್ಡ ಗೊಂಚಲನ್ನೇ ವಶಪಡಿಸಿಕೊಂಡಿದ್ದಾರೆ.

***

ಪ್ರಕರಣ 2: ನಕಲಿ ಕೀ ಬಳಸಿ ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಬೈಕ್‌ಗಳ ನಕಲಿ ಕೀಗಳನ್ನು ವಶಪಡಿಸಿಕೊಂಡಿದ್ದಾರೆ.ಇಂತಹ ಹಲವು ಪ್ರಕರಣಗಳು ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವುದು ಹೊಸದೇನಲ್ಲ. ಇಷ್ಟೊಂದು ಪ್ರಕರಣಗಳು ವರದಿ ಯಾಗಿದ್ದರೂ ನಗರದ ಕೆಲವೆಡೆ ಅತ್ಯಾಧುನಿಕ ಯಂತ್ರಗಳ ಸಹಾಯದಿಂದ ನಕಲಿ ಕೀ ತಯಾರು ಮಾಡಿಕೊಡುವ ಅಂಗಡಿಗಳು ರಾಜಾರೋಷವಾಗಿ ಕಾರ್ಯಾಚರಿಸುತ್ತಿವೆ.ಇಂತಹ ಅಂಗಡಿಗಳಲ್ಲಿ ಮನೆಗಳ ಕೀಲಿಕೈ, ಸ್ಕೂಟರ್‌, ಬೈಕ್‌, ಅಂಗಡಿ ಮತ್ತು ಕಚೇರಿ ಕೀಗಳನ್ನು ಕೇವಲ ₨ 40ರಿಂದ ₨ 60ಕ್ಕೆ ನಕಲಿಯಾಗಿ ತಯಾರು ಮಾಡಿಕೊಡಲಾಗುತ್ತದೆ. ನಗರದ ಪಿ.ಬಿ.ರಸ್ತೆ, ಮೋತಿ ಚಿತ್ರಮಂದಿರ, ಅಶೋಕ ರಸ್ತೆ ಸೇರಿದಂತೆ ವಿವಿಧೆಡೆ ಇಂತಹ ಅಂಗಡಿಗಳಿವೆ. ಇಲ್ಲಿ ನಕಲಿ ಕೀ ಮಾಡಿಕೊಡಿ ಎಂದು ಯಾರಾದರೂ ಕೀ ಕೊಟ್ಟಲ್ಲಿ, ಕೇವಲ 10ರಿಂದ 15 ನಿಮಿಷಗಳಲ್ಲೇ ಅಸಲಿ ಕೀ ರೀತಿಯಲ್ಲಿ ತದ್ರೂಪದ ಕೀ ತಯಾರಾಗಿ ನಿಮ್ಮ ಕೈ ಸೇರುತ್ತದೆ. ಆದರೆ, ನಕಲಿ ಕೀ ಮಾಡಿಸಿಕೊಳ್ಳಲು ಬರುವ ವ್ಯಕ್ತಿ ಸಂಬಂಧಪಟ್ಟ ಕೀಲಿಕೈ  ಮೂಲ ವಾರಸುದಾರನೋ ಅಥವಾ ಅಪರಾಧಿ ಹಿನ್ನೆಲೆಯವನೋ ಎಂದು ಪ್ರಶ್ನಿಸುವ ಗೋಜಿಗೆ ಕೀ ತಯಾರಿಸಿಕೊಡುವ ಅಂಗಡಿ ಮಾಲೀಕರು ಹೋಗುವುದಿಲ್ಲ. ಅವರಿಗೆ ವ್ಯಾಪಾರವಾದರೆ ಸಾಕು ಎನ್ನುವ ವ್ಯಾವಹಾರಿಕ ಮನೋಭಾವ!ನಕಲಿ ಕೀ ಬಳಸಿ ಬೈಕ್‌ ಕಳವು ಮಾಡಿದ ಅಥವಾ ನಕಲಿ ಕೀ ಬಳಸಿ ಮನೆ ಬೀಗ ತೆಗೆದು ನಗದು, ಚಿನ್ನಾಭರಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿದ ಹತ್ತಾರು ಪ್ರಕರಣಗಳು ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿವೆ. ಹೀಗಿದ್ದರೂ, ನಗರದಲ್ಲಿ ಅಸಲಿ ರೀತಿಯಲ್ಲಿಯೇ ನಕಲಿ ಕೀ ಮಾಡಿಕೊಡುವ ಅಂಗಡಿಗಳು ಹೆಚ್ಚುತ್ತಿವೆ.ನಕಲಿ ಕೀಗಾಗಿ ದೊಡ್ಡ ದಂಡು 

ನಗರದ ಪಿ.ಬಿ.ರಸ್ತೆಯ ಅಂಗಡಿಯೊಂದರಲ್ಲಿ ನಕಲಿ ಕೀ ಮಾಡಿಸಿಕೊಳ್ಳಲು ಜನರ ದೊಡ್ಡ ದಂಡೇ ಇರುತ್ತದೆ. ಇಲ್ಲಿ ಆಧುನಿಕ ಯಂತ್ರದ ಸಹಾಯದಿಂದ ಕೆಲವೇ ನಿಮಿಷದಲ್ಲಿ ವಿವಿಧ ಬಗೆಯ ನಕಲಿ ಕೀಗಳನ್ನು ಮಾಡಿಕೊಡಲಾಗುತ್ತದೆ. ಅಂಗಡಿ ಮಾಲೀಕರು ಕೀ ಮಾಡಿಸಿಕೊಳ್ಳಲು ಬರುವ ವ್ಯಕ್ತಿಗಳಿಂದ ಯಾವುದೇ ಮಾಹಿತಿ ಪಡೆಯುವುದಿಲ್ಲ.‘ಹಲವು ವರ್ಷಗಳಿಂದ ನಕಲಿ ಕೀ ತಯಾರು ಮಾಡಿಕೊಡುತ್ತಿದ್ದೇವೆ. ಆದರೆ, ಇದುವರೆಗೂ ಅಪರಾಧ ಪ್ರಕರಣಗಳು ನಡೆದಿಲ್ಲ. ನಂಬಿಕೆ, ವಿಶ್ವಾಸದಿಂದ ನಾವು ಬದಲಿ ಕೀ ಮಾಡಿಕೊಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕೀ ಮಾಡಿಸಿಕೊಳ್ಳಲು ಬರುವ ವ್ಯಕ್ತಿಗಳಿಂದ ದಾಖಲೆ ಹಾಗೂ ಮಾಹಿತಿ ಕೇಳುತ್ತೇವೆ’ ಎನ್ನುತ್ತಾರೆ ಪಿ.ಬಿ.ರಸ್ತೆಯಲ್ಲಿರುವ ನಕಲಿ ಕೀ ಮಾಡಿಕೊಡುವ ಅಂಗಡಿ ಮಾಲೀಕರೊಬ್ಬರು.‘ನೀವು ಯಾರು ಎಂದು ಪ್ರಶ್ನಿಸದೇ ಇಲ್ಲಿ ನಕಲಿ ಕೀ ಮಾಡಿಕೊಡುತ್ತಾರೆ. ಇಂತಹ ಅಂಗಡಿಗಳಿಂದ ಜನರಿಗೆ ಅನುಕೂಲವೂ ಇದೆ. ಆದರೆ, ನಕಲಿ ಕೀಗಳಿಂದ ಅಪರಾಧ ಪ್ರಕರಣಗಳು ನಡೆಯುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ನಕಲಿ ಕೀಗಾಗಿ ಬರುವ ವ್ಯಕ್ತಿಗಳು ಅಸಲಿಗಳಾಗಿರುತ್ತಾರೆ ಎಂದು ತಿಳಿಯುವುದು ಸಹ ತಪ್ಪು. ಸಂಬಂಧಪಟ್ಟ ವ್ಯಕ್ತಿಗಳಿಂದ ಕನಿಷ್ಠ ಗುರುತಿನ ಚೀಟಿ ಪಡೆದರೆ ಒಳಿತು’ ಎಂದು ದ್ವಿಚಕ್ರ ವಾಹನದ ನಕಲಿ ಕೀ ಮಾಡಿಸಿಕೊಳ್ಳಲು ಹರಪನಹಳ್ಳಿಯಿಂದ ಬಂದಿದ್ದ ಹನುಮಂತಪ್ಪ ಅಭಿಪ್ರಾಯ ಮಂಡಿಸಿದರು.ದಾಖಲೆ ಸಂಗ್ರಹ ಅಗತ್ಯ

ನಕಲಿ ಕೀ ತಯಾರಕರು ನಕಲಿ ಕೀ ಮಾಡಿಸಿಕೊಳ್ಳಲು ಬರುವ ವ್ಯಕ್ತಿಗಳಿಂದ ಸೂಕ್ತ ದಾಖಲೆಗಳನ್ನು ಕೇಳಿ, ಪರಿಶೀಲಿಸುವುದು. ಗುರುತಿನ ಚೀಟಿ ಅಥವಾ ಮನೆ ವಿಳಾಸ, ಮೊಬೈಲ್‌ ಸಂಖ್ಯೆ ಮತ್ತಿತರ ದಾಖಲೆಗಳ ಸಂಗ್ರಹ ಮಾಡಿಟ್ಟುಕೊಳ್ಳುವುದು ಉತ್ತಮ.  ಇದರಿಂದ ಸಂಭವನೀಯ ಅಪರಾಧಗಳನ್ನು ಸ್ವಲ್ಪಮಟ್ಟಿಗಾದರೂ ತಡೆಗಟ್ಟಬಹುದು ಅಥವಾ ನಡೆದ ಕಳವು ಪ್ರಕರಣಗಳನ್ನು ತನಿಖಾ ಅಧಿಕಾರಿಗಳು ಪತ್ತೆಹಚ್ಚಲು ಸಹಕಾರಿಯಾಗುತ್ತದೆ. ಇಲ್ಲಿಯೂ ನಿರ್ಲಕ್ಷ್ಯ ಮಾಡಿದ್ದಲ್ಲಿ, ಅಪರಾಧ ಪ್ರಕರಣಗಳು ನಡೆದಾಗ ಸಂಬಂಧಪಟ್ಟ ಅಂಗಡಿ ಮಾಲೀಕರಿಗೆ ಗೊತ್ತಾಗುತ್ತದೆ.

ಸಾರ್ವಜನಿಕರು ಬೇರೆಯವರಿಗೆ ಮನೆಯ ಅಥವಾ ವಾಹನಗಳ ಕೀ ಕೊಡುವಾಗ ಎಚ್ಚರ ವಹಿಸುವುದು ಉತ್ತಮ. ಒಂದು ವೇಳೆ ಮನೆಯ ಕೀ ಕಳೆದುಹೋದಲ್ಲಿ ಸಂಬಂಧಪಟ್ಟ ಮೂಲ ಕೀಯನ್ನೇ ಬದಲಾಯಿಸಿ, ಹೊಸ ಕೀಯನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು.

–ರವಿನಾರಾಯಣ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.