ಸೋಮವಾರ, ಮೇ 17, 2021
30 °C

ನಕಲಿ ದಾಖಲೆ ಸೃಷ್ಟಿಯ ಆರೋಪ: 30ರಂದು ಆದೇಶ:ಬಿಎಸ್‌ವೈ, ನಿರಾಣಿ ವಿರುದ್ಧ ದೂರು ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ ನಿರಾಣಿ ಅವರ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಗುರುವಾರ ಮತ್ತೊಂದು ಖಾಸಗಿ ದೂರು ದಾಖಲಾಗಿದೆ.

ಕಂಪನಿಯೊಂದರ ನಕಲಿ ದಾಖಲೆ ಸೃಷ್ಟಿಸಿ ಸುಮಾರು 26 ಎಕರೆ ಜಮೀನನ್ನು ಕಬಳಿಸಿದ ಆರೋಪ ಇದಾಗಿದೆ. ಇವರ ವಿರುದ್ಧ `ಪಾಷಾ ಸ್ಪೇಸ್ ಇಂಟರ್‌ನ್ಯಾಷನಲ್~ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎ.ಆಲಂ ಪಾಷಾ ಅವರು ದೂರು ದಾಖಲಿಸಿದ್ದಾರೆ.ಈ ದೂರನ್ನು ವಿಚಾರಣೆಗೆ ಅಂಗೀಕರಿಸುವ ಸಂಬಂಧ ಏ.30ರಂದು ನ್ಯಾಯಾಧೀಶ ಎನ್.ಕೆ.ಸುಧೀಂದ್ರರಾವ್ ಆದೇಶ ಹೊರಡಿಸಲಿದ್ದಾರೆ.ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹಿಂದಿನ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್, ಕರ್ನಾಟಕ ಉದ್ಯೋಗ ಮಿತ್ರದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಮತ್ತು ಉಪನಿರ್ದೇಶಕ ಗಂಗಾಧರಯ್ಯ ಅವರನ್ನು ಸಹ ಆರೋಪಿಗಳನ್ನಾಗಿ ಮಾಡಲಾಗಿದೆ.ಆರೋಪವೇನು? ದೂರಿನಲ್ಲಿ ಮಾಡಿರುವ ಆರೋಪ ಎಂದರೆ- `ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಮನೆಗಳನ್ನು ನಿರ್ಮಿಸುವ ಸಂಬಂಧದ 600 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಸರ್ಕಾರ ನಮ್ಮ ಕಂಪನಿಗೆ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 2010ರ ಜುಲೈನಲ್ಲಿ 26 ಎಕರೆ ಜಮೀನು ಮಂಜೂರು ಮಾಡುವಂತೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಸರ್ಕಾರ ನಿರ್ದೇಶಿಸಿತ್ತು. ತಮಗೆ ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ ಮನೆ ನಿರ್ಮಾಣಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.`ಆದರೆ 2011ರ ಮಾರ್ಚ್ 11ರಂದು ನಮಗೆ ನೀಡಿದ ಅನುಮತಿ ಆದೇಶವನ್ನು ರದ್ದು ಮಾಡಲಾಗಿದೆ ಎಂದು ನೋಟಿಸ್ ಬಂತು. ನಂತರ ವಿಚಾರಿಸಿದಾಗ ಮಂಜೂರಾತಿ ಸಮಿತಿಯ ನೇತೃತ್ವ ವಹಿಸಿದ್ದ ಯಡಿಯೂರಪ್ಪ, ನಿರಾಣಿ, ಬಳಿಗಾರ್ ಸೇರಿದಂತೆ ಇತರರು ನಕಲಿ ದಾಖಲೆ ಸೃಷ್ಟಿಸಿ ನಮಗೆ ವಂಚನೆ ಮಾಡಿರುವುದು ತಿಳಿದಿದೆ. ಈ ಜಾಗವನ್ನು ಬೇರೆ ಕಂಪನಿಗೆ ನೀಡುವ ಹಿನ್ನೆಲೆಯಲ್ಲಿ, ನಮಗೆ ಈ ಜಮೀನಿನಲ್ಲಿ ಆಸಕ್ತಿ ಇಲ್ಲ ಎಂಬಂತೆ ಅವರೆಲ್ಲ ಸೇರಿ ನಕಲಿ ಪತ್ರ ತಯಾರಿಸಿದ್ದಾರೆ.`ನಮ್ಮ ಕಂಪನಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ, ನಕಲಿ ಮೊಹರನ್ನು ತಯಾರು ಮಾಡಿ ಈ ಪತ್ರ ಬರೆಯಲಾಗಿದೆ. ಈ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲು ಮಾಡಿದರೂ ಪ್ರಯೋಜನ ಆಗಲಿಲ್ಲ~ ಎಂದು ಪಾಷಾ ದೂರಿದ್ದಾರೆ.`ಇಷ್ಟೇ ಅಲ್ಲದೇ, ನಿರಾಣಿ, ಯಡಿಯೂರಪ್ಪ ಹಾಗೂ ಬಳಿಗಾರ್ ಅವರು ದೇವನಹಳ್ಳಿ ಬಳಿ ಇರುವ ಸುಮಾರು 4,500 ಎಕರೆ ಜಮೀನನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು, ಭೂಮಾಲೀಕರಲ್ಲದವರಿಗೆ ಪರಿಹಾರ ನೀಡಿದ್ದಾರೆ~ ಎಂದೂ ಅರ್ಜಿಯಲ್ಲಿ ಆರೋಪಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.