ಶನಿವಾರ, ಏಪ್ರಿಲ್ 17, 2021
22 °C

ನಕಲಿ ವೈದ್ಯರಿಗೆ ಇಂಜೆಕ್ಷನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಕಲಿ ವೈದ್ಯರ ಹಾವಳಿ ತಡೆಗೆ ಜಿಲ್ಲಾಮಟ್ಟದಲ್ಲಿ ಸಮಿತಿ ರಚಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಲು ನಿರ್ಧರಿಸಲಾಯಿತು.  ಮಂಗಳವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ಅಲ್ಲದೇ ಡೆಂಗೆ ಜ್ವರ ಪ್ರಕರಣಗಳೂ ವರದಿಯಾಗುತ್ತಿವೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಸದಸ್ಯ ಪಾಲನಾಯ್ಕ ಪ್ರಶ್ನಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಆರ್. ಸುಮಿತ್ರಾದೇವಿ ಪ್ರತಿಕ್ರಿಯಿಸಿ ಇದುವರೆಗೆ ಇಬ್ಬರಿಗೆ ತಮ್ಮ ಚಿಕಿತ್ಸಾ ಕೇಂದ್ರ ಮುಚ್ಚಲು ಸೂಚಿಸಲಾಗಿದೆ. ಒಬ್ಬರನ್ನು ಬಂಧಿಸಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾದಾಗ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆಗಳು ಪಲ್ಲಾಗಟ್ಟೆಯಲ್ಲಿ ನಡೆದಿದೆ ಎಂದು ವಿವರಿಸಿದರು.ಅದಕ್ಕೆ ಅಂಬಿಕಾ ರಾಜಪ್ಪ ಪ್ರತಿಕ್ರಿಯಿಸಿ ಅಂಥ ಕಡೆ ದಾಳಿ ನಡೆಸು ವಾಗ ಜನಪ್ರತಿನಿಧಿಗಳಿಗೇಕೆ ಮಾಹಿತಿ ನೀಡುವುದಿಲ್ಲ? ನಾವಾದರೂ ಅಂಥ ಗಲಾಟೆಯನ್ನು ತಡೆಗಟ್ಟಬಹುದಿತ್ತು ಎಂದು ಅಭಿಪ್ರಾಯಪಟ್ಟರು.ಸಿಇಒ ಎ.ಬಿ. ಹೇಮಚಂದ್ರ ಪ್ರತಿಕ್ರಿಯಿಸಿ ಜನರ ಜೀವದ ಜತೆ ಚೆಲ್ಲಾಟ ಆಡಬಾರದು. ಅದಕ್ಕೆ ಜಿಲ್ಲಾಮಟ್ಟದಲ್ಲಿ ಸಮಿತಿ ರಚಿಸಬೇಕು ಎಂದರು.ಕೊನೆಗೆ ನಕಲಿ ವೈದ್ಯರ ತಡೆಗೆ ಡಿಎಚ್‌ಒ, ತಾಲ್ಲೂಕು ಆರೋಗ್ಯಾಧಿಕಾರಿ, ಆಯುಷ್ ಅಧಿಕಾರಿಗಳು ಹಾಗೂ ದಂತ ವೈದ್ಯರನ್ನೊಳಗೊಂಡ ಸಮಿತಿ ರಚಿಸಲಾಯಿತು. ಅಂಥ ವೈದ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಅಧ್ಯಕ್ಷ ಚಿದಾನಂದ ಐಗೂರು ತಿಳಿಸಿದರು.ಶಾಲೆಗಾಗಿ ನಾವು ನೀವು: ಶಾಲೆಗಾಗಿ ನಾವು ನೀವು ಕಾರ್ಯಕ್ರಮದ ಅಡಿಯಲ್ಲಿ ಪ್ರಸ್ತುತ ವರ್ಷ ಜಿಲ್ಲೆಯ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ವಿಷಯವಾರು ಮೌಲ್ಯಮಾಪನ ತಂಡ ಭೇಟಿ ನೀಡಿ, ಅಲ್ಲಿನ ಎಲ್ಲ ಚಟುವಟಿಕೆಯನ್ನು ವೀಕ್ಷಿಸಿ ಮೌಲ್ಯಮಾಪನ ನಡೆಸಲಾಗುವುದು.ಅದಕ್ಕಾಗಿ ಸಂಕ್ಷಿಪ್ತ ಮೌಲ್ಯಮಾಪನ ನಮೂನೆಯ 16 ಪುಟಗಳ ಪುಸ್ತಕ ಸಿದ್ಧಪಡಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಎ. ರಾಜಶೇಖರ ಮಾಹಿತಿ ನೀಡಿದರು. ಪ್ರೌಢಶಾಲೆಗಳ ಮೌಲ್ಯಮಾಪನಕ್ಕೆ ಡಿಡಿಪಿಐ, ಡಯೆಟ್ ಪ್ರಾಂಶುಪಾಲ, ರಾಜ್ಯಮಟ್ಟದ ಜಿಲ್ಲಾ ನೋಡೆಲ್ ಅಧಿಕಾರಿಗಳು ಮತ್ತು ಶಿಕ್ಷಣಾಧಿಕಾರಿಯನ್ನೊಳಗೊಂಡ 7 ತಂಡಗಳನ್ನು ರಚಿಸಲಾಗುವುದು. ಪ್ರಾಥಮಿಕ ಶಾಲೆಗಳ ತಪಾಸಣೆಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಇಡೀ ದಿನ ಶಾಲೆಯ ಎಲ್ಲ ಚಟುವಟಿಕೆಗಳನ್ನು ವೀಕ್ಷಿಸಿ ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರೊಂದಿಗೆ ಸಭೆ ನಡೆಸಿ ಮಾಹಿತಿ ಪಡೆಯಲಿದೆ ಎಂದು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.