ಸೋಮವಾರ, ಮೇ 17, 2021
23 °C

ನಕ್ಸಲರ ಗುಂಡೇಟು: ಸಾವು ಗೆಲ್ಲದ ಶುಕ್ಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡಗಾಂವ್(ಪಿಟಿಐ):  ಛತ್ತೀಸಗಡದಲ್ಲಿ ಕಳೆದ ತಿಂಗಳು ನಕ್ಸಲರು ನಡೆಸಿದ ಹಿಂಸಾಚಾರದಲ್ಲಿ ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರದ ಮಾಜಿ ಸಚಿವ ವಿದ್ಯಾ ಚರಣ್ ಶುಕ್ಲಾ (84) ಮಂಗಳವಾರ ಅಂಗಾಂಗ ವೈಫಲ್ಯದಿಂದ ಮೃತಪಟ್ಟರು. ಶುಕ್ಲಾ ಅವರಿಗೆ ಪತ್ನಿ ಹಾಗೂ ಮೂವರು ಪುತ್ರಿಯರು ಇದ್ದಾರೆ. ಶುಕ್ಲಾ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು ಎಂದು ಗುಡಗಾಂವ್‌ನ ಮೇದಾಂತ ಮೆಡಿಸಿಟಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಯತಿನ್ ಮೇಹ್ತಾ ಹೇಳಿದರು.ಮೇ 25ರಂದು ದಕ್ಷಿಣ ಬಸ್ತರ್‌ನಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶುಕ್ಲಾ ಅವರನ್ನು ರಾಯಪುರದಿಂದ ವಿಮಾನದ ಮೂಲಕ ಕರೆತಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಎದೆ, ಯಕೃತ್, ಹೊಟ್ಟೆ, ತೊಡೆಗೆ ಗುಂಡುಗಳು ತಾಗಿದ್ದರಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ವಾರದ ಹಿಂದೆ ಚಿಕಿತ್ಸೆಗೆ ಪೂರಕವಾಗಿ ಸ್ಪಂದಿಸುತ್ತಿದ್ದ ಅವರ ಆರೋಗ್ಯ ಆನಂತರ ಬಿಗಡಾಯಿಸಿತ್ತು. ಗುಡಗಾಂವ್‌ಗೆ ಕರೆ ತರುವುದಕ್ಕಿಂತ ಮುನ್ನ ಜಗದಾಲ್‌ಪುರ ಆಸ್ಪತ್ರೆಯಲ್ಲಿ  ಶರೀರದೊಳಗೆ ಹೊಕ್ಕಿದ್ದ ಗುಂಡುಗಳನ್ನು ತೆಗೆಯಲು ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತು. ಬಹು ಅಂಗಾಂಗ ವೈಫಲ್ಯ ಹಾಗೂ ವಯಸ್ಸಿನ ಕಾರಣದಿಂದ ಶುಕ್ಲಾ ಅವರಿಗೆ ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.ಒಂಬತ್ತು ಬಾರಿ ಲೋಕಸಭೆಗೆ: ಶುಕ್ಲಾ ಖ್ಯಾತ ವಕೀಲ ಹಾಗೂ ಸ್ವಾತಂತ್ರ್ಯ ಹೋರಾಟಗಾರ ರವಿಶಂಕರ್ ಶುಕ್ಲಾ ಅವರ ಪುತ್ರ. ರವಿಶಂಕರ್ ಮಧ್ಯಪ್ರದೇಶದ ಮೊದಲ ಮುಖ್ಯಮಂತ್ರಿ. ಇವರ ಸಹೋದರ ಶ್ಯಾಂ ಚರಣ್ ಶುಕ್ಲಾ ಸಹ ಮುಖ್ಯಮಂತ್ರಿಯಾಗಿದ್ದರು. 1951ರಲ್ಲಿ ನಾಗಪುರದ ಮೋರಿಸ್ ಕಾಲೇಜಿನಿಂದ ಪದವಿ ಪಡೆದ ಇವರು ಅದೇ ವರ್ಷ ಸರಳಾ ಅವರನ್ನು ವಿವಾಹವಾಗಿದ್ದರು.ಒಂಬತ್ತು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಶುಕ್ಲಾ 1975ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ ಅವಧಿಯಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾಗಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾಧ್ಯಮಗಳ ಮೇಲೆ ಹೇರಿದ್ದ ನಿಯಂತ್ರಣದಿಂದಾಗಿ, ಇಂದಿರಾ ಪುತ್ರ ಸಂಜಯ್ ಗಾಂಧಿ ಅವರ ಬಲಗೈ ಭಂಟನಂತೆ ವರ್ತಿಸಿದ್ದಕ್ಕಾಗಿ ಅಪಖ್ಯಾತಿಗೆ ಒಳಗಾಗಿದ್ದರು.ಆನಂತರ ಕಾಂಗ್ರೆಸ್‌ನಲ್ಲಿ ಮೂಲೆಗುಂಪಾಗಿದ್ದ ಅವರಿಗೆ ದಿ. ರಾಜೀವ್ ಗಾಂಧಿ ಅವರು ರಾಜಕೀಯ ಮರುಹುಟ್ಟು ನೀಡಿದ್ದರು. 80ರ ದಶಕದ ಅಂತ್ಯದಲ್ಲಿ ಕಾಂಗ್ರೆಸ್‌ನಲ್ಲಿ ರಾಜೀವ್ ಗಾಂಧಿ ವಿರುದ್ಧ ಬಂಡಾಯ ಕಾಣಿಸಿಕೊಂಡಾಗ ವಿ.ಪಿ. ಸಿಂಗ್ ಅವರೊಂದಿಗೆ ಗುರುತಿಸಿಕೊಂಡರು. ವಿ.ಪಿ. ಸಿಂಗ್ ಸರ್ಕಾರದಲ್ಲಿ, ಆನಂತರದ ಚಂದ್ರಶೇಖರ್ ಸಂಪುಟದಲ್ಲಿ ಸಚಿವರಾಗಿದ್ದರು.1991ರ ನಂತರ ಕಾಂಗ್ರೆಸ್‌ಗೆ ಮರಳಿದ್ದ ಅವರು ನರಸಿಂಹರಾವ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಸಂಸದೀಯ ವ್ಯವಹಾರ ಹಾಗೂ ಜಲಸಂಪನ್ಮೂಲ ಸಚಿವರಾಗಿದ್ದರು.  2003ರಲ್ಲಿ ಛತ್ತೀಸ್‌ಗಡದ ಮುಖ್ಯಮಂತ್ರಿ ಹುದ್ದೆ ನಿರಾಕರಿಸಿದ ನಂತರ ಮತ್ತೆ ಕಾಂಗ್ರೆಸ್ ತೊರೆದು ಎನ್‌ಸಿಪಿ ಸೇರಿದರು. 2004ರಲ್ಲಿ ಲೋಕಸಭಾ ಚುನಾವಣೆಗೆ ಕೆಲವೇ ದಿನವಿರುವಾಗ ಬಿಜೆಪಿಗೆ ಸೇರಿ ಸ್ಪರ್ಧಿಸಿದ್ದರು. ಆದರೆ ಅಜಿತ್ ಜೋಗಿ ವಿರುದ್ಧ ಸೋಲುಂಡರು. ಆನಂತರ ಮತ್ತೆ ತಮ್ಮ ತವರು ಪಕ್ಷಕ್ಕೆ ಮರಳಿದ್ದರು. ಆದ್ದರಿಂದಲೇ ಶುಕ್ಲಾ ಅವರನ್ನು ಅವಕಾಶವಾದಿ ಎಂದು ಟೀಕಿಸಲಾಗುತ್ತದೆ.ಮೂರು ದಿನ ಶೋಕಾಚರಣೆ: ಶುಕ್ಲಾ ಅವರ ಗೌರವಾರ್ಥ ಛತ್ತೀಸಗಡ ಸರ್ಕಾರ ಮೂರು ದಿನಗಳ ಶೋಕಾಚರಣೆ ಘೋಷಿಸಿದೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ಮನಮೋಹನ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಛತ್ತೀಸಗಡ ಮುಖ್ಯಮಂತ್ರಿ ರಮಣ್ ಸಿಂಗ್ ಶುಕ್ಲಾ ನಿಧನಕ್ಕೆ ಸಂತಾಪ  ವ್ಯಕ್ತಪಡಿಸಿದ್ದಾರೆ.ತುರ್ತುಪರಿಸ್ಥಿತಿಯ  ಅಪಖ್ಯಾತಿ

ನವದೆಹಲಿ(ಪಿಟಿಐ
): ತಮ್ಮ ರಾಜಕೀಯ ಜೀವನದಲ್ಲಿ ಹಲವು ಪಕ್ಷಗಳನ್ನು ಬದಲಿಸಿದರೂ ಶುಕ್ಲಾ ಕಾಂಗ್ರೆಸ್ ಮುಖಂಡರೆಂದೇ ಗುರುತಿಸಿಕೊಂಡಿದ್ದಾರೆ. ತುರ್ತುಪರಿಸ್ಥಿತಿ ಅವಧಿಯಲ್ಲಿ ಇವರು ಮಾಧ್ಯಮಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಯತ್ನಿಸಿದ್ದು ಹಾಗೂ ಪತ್ರಕರ್ತರು ಮತ್ತು ಸಂಪಾದಕರನ್ನು ಜೈಲಿಗಟ್ಟಿದ್ದು ಇವರಿಗೆ ಅಪಖ್ಯಾತಿ ತಂದುಕೊಟ್ಟಿತ್ತು.ಇಂದಿರಾ ಕಿರಿಯ ಪುತ್ರ ಸಂಜಯ್ ಗಾಂಧಿ ಅವರಿಗೆ ಆಪ್ತರಾಗಿದ್ದ ಶುಕ್ಲಾ, ಪತ್ರಿಕೆಗಳ ಮುದ್ರಣಕ್ಕೆ ವಿದ್ಯುತ್ ಕಡಿತ ಮಾಡುವುದು, ಪತ್ರಿಕಾ ವರದಿಗಳ ಮೇಲೆ ಕಣ್ಣಿಡಲು ಸಂಜಯ್ ಅವರಿಗೆ ನೆರವಾಗಿದ್ದರು. ಕಾಂಗ್ರೆಸ್ ರ‍್ಯಾಲಿಯಲ್ಲಿ ಹಾಡಲು ನಿರಾಕರಿಸಿದ್ದ ಗಾಯಕ ಕಿಶೋರ್ ಕುಮಾರ್ ಹಾಡುಗಳನ್ನು ಆಕಾಶವಾಣಿಯಲ್ಲಿ ಬಿತ್ತರಿಸದಂತೆ ನಿರ್ಬಂಧ ಹೇರಿದ್ದರು. ತುರ್ತುಪರಿಸ್ಥಿತಿ ಕುರಿತು ತನಿಖೆ ನಡೆಸಿದ್ದ ನ್ಯಾಯಮೂರ್ತಿ ಷಾ ಆಯೋಗ, ಬನ್ಸಿಲಾಲ್, ವಿ.ಸಿ.ಶುಕ್ಲಾ, ಸಂಜಯ್ ಗಾಂಧಿ ಮುಂತಾದವರು ಮಧ್ಯಯುಗದ ನಿರಂಕುಶಪ್ರಭುಗಳಂತೆ ವರ್ತಿಸುತ್ತಿದ್ದರು ಎಂದು ಟೀಕಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.