ಸೋಮವಾರ, ಏಪ್ರಿಲ್ 12, 2021
23 °C

ನಗರಕ್ಕೆ ನೀರಿನ ಕೊರತೆಯ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ನಗರಸಭೆ ಹಾಗೂ ಜಿಲ್ಲಾಧಿಕಾರಿಗಳ ನಡುವಿನ ಗುದ್ದಾಟ ಜಿಲ್ಲಾ ಕೇಂದ್ರವಾದ ಹಾವೇರಿಯಲ್ಲಿ ಕುಡಿಯುವ ನೀರಿನ ಹಾಹಾ ಕಾರಕ್ಕೆ ದಾರಿ ಮಾಡಿಕೊಡುವ ಸಾಧ್ಯತೆಗಳು ದಟ್ಟವಾಗಿವೆ. ತಾಲ್ಲೂಕಿನ ಗುತ್ತಲ ಬಳಿಯ ತುಂಗಭದ್ರಾ ನದಿಯ ನೀರನ್ನು ಜನವರಿಯಲ್ಲಿಯೇ ತಡೆ ಹಿಡಿದು ನಗರದ ಜನತೆಗೆ ಬೇಸಿಗೆಯಲ್ಲಿ ಯಾವುದೇ ತೊಂದರೆ ಆಗದಂತೆ ಹಿಂದಿನಿಂದಲೂ ನೋಡಿಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಜಿಲ್ಲಾಡಳಿತ ಮರಳಿನ ಚೀಲದ ತಡೆಗೋಡೆ ನಿರ್ಮಿಸಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಈವರೆಗೆ ನದಿಯ ನೀರು ತಡೆಯಲು ತಡೆಗೋಡೆ ನಿರ್ಮಿಸಿಲ್ಲ. ಹೀಗಾಗಿ ನದಿಯ ನೀರು ಉಳಿದಿಲ್ಲ.ಈಗ ಹರಿಯುತ್ತಿರುವ ನೀರು ತಡೆದರೂ ಒಂದು ವಾರದ ಮಟ್ಟಿಗೆ ಮಾತ್ರ ನಗರ ನೀರು ಪೂರೈಸಲು ಸಾಧ್ಯವಾಗುತ್ತದೆ. ನಂತರದ ದಿನಗಳಲ್ಲಿ ನಗರದ ಜನತೆಗೆ ಯಾವ ರೀತಿಯಲ್ಲಿ ನೀರು ನೀಡಬೇಕು. ಜನರನ್ನು ಯಾವ ರೀತಿಯಲ್ಲಿ ಸಮಾದಾನ ಮಾಡಬೇಕು ಎನ್ನುವುದೇ ನಗರಸಭೆಗೆ ದೊಡ್ಡ ಸವಾಲಾಗಿದೆ. ಹಣ ನೀಡಿ: ನದಿಗೆ ಉಸುಕಿನ ಚೀಲಗಳ ಬಾಂದಾರ ನಿರ್ಮಿಸಲು ಕನಿಷ್ಠ ಹತ್ತು ಲಕ್ಷ ರೂ. ಖರ್ಚಾಗುತ್ತದೆ. ಪ್ರತಿವರ್ಷ ಅದಕ್ಕಾಗಿ 10 ಲಕ್ಷ ವ್ಯಯಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದಕ್ಕಾಗಿ ನಗರಸಭೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ನಗರಸಭೆ ಬಳಿ ಹಣವಿಲ್ಲ. ನಗರದ ಜನರ ನೀರಿನ ಸಮಸ್ಯೆ ಇರುವುದರಿಂದ ಅದಕ್ಕೆ ಬೇಕಾದ ಹಣ ನೀಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದರು.ಆದರೆ, ತಾಂತ್ರಿಕ ಕಾರಣದಿಂದ ನಗರಸಭೆಗೆ ಹಣ ನೀಡಲು ಆಗುವುದಿಲ್ಲ ಎಂದು ಜಿಲ್ಲಾ ಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಜಿಲ್ಲಾಡಳಿತದಿಂದ ಹಣ ಬರುವುದಿಲ್ಲ ಎಂದು ಗೊತ್ತಾದ ಮೇಲಾದರೂ ನಗರಸಭೆ ಪರ್ಯಾಯ ಹಣದ ವ್ಯವಸ್ಥೆ ಮಾಡಿಕೊಂಡು ನದಿಗೆ ಬಾಂದಾರ ನಿರ್ಮಿಸಿ ನೀರು ನಿಲ್ಲಿಸಬೇಕಿತ್ತು. ಆದರೆ, ಹಾಗೆ ಮಾಡದ ಕಾರಣ ನದಿಯಲ್ಲಿನ ನೀರು ಈಗಾಗಲೇ ಹರಿದು ಹೋಗಿದೆ. ಕೇವಲ ಒಂದೇ ಭಾಗದಲ್ಲಿ ನೀರು ಹರಿಯುತ್ತಲಿದೆ. ಈಗ ನೀರು ನಿಲ್ಲಿಸಿದರೂ ಒಂದು ವಾರದ ಮಟ್ಟಿಗೆ ನಗರದ ಜನತೆಗೆ ಸರಬರಾಜು ಮಾಡಲು ಸಾಧ್ಯ ಎಂದು ಸ್ವತಃ ನಗರಸಭೆಯೇ ಹೇಳುತ್ತಿದೆ.ಆದರೆ ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ ನದಿಯಲ್ಲಿನ ನೀರು ಹರಿದು ಹೋದ ನಂತರ ಇದೀಗ ಅಂದರೆ, ಮಂಗಳವಾರದಿಂದ ಉಸುಕಿನ ಬಾಂದಾರ ನಿರ್ಮಾಣ ಕಾರ್ಯ ಆರಂಭ ಮಾಡಲಾಗಿದೆ. ಇದರಿಂದ ಎಷ್ಟರಮಟ್ಟಿಗೆ ನೀರು ನಿಲ್ಲಲು ಸಾಧ್ಯ. ನಾಗರಿಕರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಯಾವ ರೀತಿ ನಗರಸಭೆ ನಿರ್ವಹಿಸುತ್ತಾರೆ ಎಂಬ ಪ್ರಶ್ನೆಗಳು ನಾಗರಿಕರಲ್ಲಿ ಮೂಡಿದೆ.  ಪ್ರತಿವರ್ಷವೂ ಇದಕ್ಕಾಗಿ ಪ್ರಕೃತಿ ವಿಕೋಪದ ನಿಧಿಯಲ್ಲಿ ಜಿಲ್ಲಾಡಳಿತ ಹಣ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಜಿಲಾಧ್ಲಿಕಾರಿಗಳು ಇದಕ್ಕಾಗಿ ಪ್ರಕೃತಿ ವಿಕೋಪವೇನು ಸಂಭವಿಸಿಲ್ಲ. ಹೀಗಾಗಿ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷರು, ಸದಸ್ಯರು ಎಲರ್ಲೂ ಜಿಲ್ಲಾಧಿಕಾರಿಗಳ ಕ್ರಮದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಗರಸಭೆ ಅಧ್ಯಕ್ಷ ಜಗದೀಶ ಮಲಗೋಡ ಪತ್ರಿಕಾ ಹೇಳಿಕೆ ನೀಡಿ, ಕಳೆದ ಎರಡ್ಮೂರು ತಿಂಗಳಿಂದಲೇ ಬಾಂದಾರ ನಿರ್ಮಿಸಲು ಹಣವನ್ನು ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳಿಗೆ ವಿನಂತಿಸಲಾಗಿತ್ತು. ಆದರೆ ಈವರೆಗೂ ಬಿಡುಗಡೆ ಮಾಡಿಲ್ಲ. ಈ ಕುರಿತಂತೆ ಶಾಸಕರು, ಜಿಲ್ಲಾ ಮಂತ್ರಿಗಳು, ವಿಧಾನ ಪರಿಷತ್ ಸದಸ್ಯರು ಕೂಡಾ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಮೊದಲು ಹಣ ಬಿಡುಗಡೆ ಮಾಡುವುದಾಗಿ ಹೇಳಿದ ಈಗ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ ಈ ಕುರಿತು ಪ್ರತಿಕ್ರಿಯಿಸಿ ಪ್ರಸಕ್ತ ವರ್ಷ ಯಾವುದೇ ಪ್ರಕೃತಿ ವಿಕೋಪ ಸಂಭವಿಸಿಲ್ಲ. ಅದು ಅಲ್ಲದೇ ನದಿಯಲ್ಲಿ ನೀರು ಖಾಲಿಯಾಗುವುದು ಪ್ರಕೃತಿ ವಿಕೋಪವಲ್ಲ. ಇದಕ್ಕೆ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ನಗರಸಭೆಯೇ ಸಂಪನ್ಮೂಲ ಕ್ರೋಡಿಕರಣ ಮಾಡಿಕೊಳ್ಳಬೇಕು. ಇದನ್ನು ನಗರಸಭೆಗೆ ಮನವರಿಕೆ ಮಾಡಿಕೊಡಲಾಗಿದೆ. ನನ್ನ ವಿರುದ್ಧ ಮಾತನಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ತಮ್ಮ ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.