ಭಾನುವಾರ, ಜೂನ್ 13, 2021
20 °C

ನಗರದಲ್ಲಿ ಪ್ರಗತಿಪರ ಮಠಾಧೀಶರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |
ಬೆಂಗಳೂರು: ರಾಜ್ಯದ ನಾನಾ ಭಾಗದಲ್ಲಿರುವ ಜಾತಿ ಪದ್ದತಿ, ಮಡೆಸ್ನಾನ, ಪಂಕ್ತಿಭೇದ, ದೇವದಾಸಿ ಪದ್ದತಿ ಸೇರಿದಂತೆ ವಿವಿಧ ಮೂಢನಂಬಿಕೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ವಿವಿಧ ಮಠಗಳ ಪ್ರಗತಿಪರ ಮಠಾಧೀಶರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನಾ ಸಭೆ ನಡೆಸಿದರು. ಸಭೆಯ ನೇತೃತ್ವ ವಹಿಸಿದ್ದ ನಿಡುಮಾಮಿಡಿಯ ಮಾನವಧರ್ಮ ಪೀಠದ ವೀರಭದ್ರಚನ್ನಮಲ್ಲ ಸ್ವಾಮೀಜಿ, `ರಾಜ್ಯದಲ್ಲಿರುವ ಮೂಢನಂಬಿಕೆ ಮತ್ತು ಅನಿಷ್ಟ ಪದ್ದತಿಗಳ ನಿರ್ಮೂಲನೆಗಾಗಿ ಸರ್ಕಾರ ಶಾಶ್ವತ ಆಯೋಗವನ್ನು ರಚನೆ ಮಾಡಬೇಕು. ಆ ಮೂಲಕ ಮೂಢನಂಬಿಕೆಗಳಿಗೆ ಕಾನೂನಿನ ಕಡಿವಾಣ ಹಾಕುವ ಅಗತ್ಯವಿದೆ~ ಎಂದು ಒತ್ತಾಯಿಸಿದರು.`ಮೂಢನಂಬಿಕೆಗಳ ಕುರಿತು ವಿದ್ಯಾರ್ಥಿ ವಲಯದಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕಿದ್ದು, 1ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಮೂಢನಂಬಿಕೆಗಳನ್ನು ಕಿತ್ತೊಗೆಯುವ ಕುರಿತ ಪರಿಹಾರ ಕ್ರಮವನ್ನು ಪಠ್ಯಕ್ರಮದಲ್ಲಿ ಅಳವಡಿಸಲು ಚಿಂತನೆ ನಡೆಸಬೇಕು~ ಎಂದು ಸಲಹೆ ನೀಡಿದರು.`ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವೇ ಪರಮಶ್ರೇಷ್ಠ. ಸಂವಿಧಾನದ ಆಶಯಗಳ ಮುಂದೆ ಪುರಾತನ ಮತ್ತು ಅರ್ಥಹೀನ ಆಚರಣೆಗಳು ಮೌಲ್ಯ ಕಳೆದುಕೊಳ್ಳುತ್ತವೆ. ಆದರೆ, ಪ್ರಸ್ತುತ ದಿನಗಳಲ್ಲಿ ಅಮಾನವೀಯ ಆಚರಣೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಸವಾರಿ ಮಾಡುತ್ತಿರುವುದು ಖೇದನೀಯ. ಇದನ್ನು ಸಮರ್ಥಿಸಲು ಹುಟ್ಟಿಕೊಂಡಿರುವ ವರ್ಗದ ಬಗ್ಗೆಯೂ ಎಚ್ಚರ ವಹಿಸಬೇಕು~ ಎಂದು ಕರೆ ನೀಡಿದರು.ತೋಂಟದಾರ್ಯ ಮಹಾಸಂಸ್ಥಾನದ ಸಿದ್ದಲಿಂಗ ಸ್ವಾಮೀಜಿ, `ಮಡೆಸ್ನಾನ ನಿಷೇಧಗೊಳ್ಳಬೇಕು ಎನ್ನುತ್ತಲೇ ಮಡೆಸ್ನಾನವೆಂಬುದು ಅನಾದಿ ಕಾಲದಿಂದಲೂ ಬಂದ ಆಚರಣೆ, ಎಂಜಲೆಲೆ ಮೇಲೆ ಉರುಳುವವರು ಉರುಳಲಿ ಎಂಬ ದ್ವಂದ್ವ ಹೇಳಿಕೆ ನೀಡುತ್ತಿರುವ ಸ್ವಾಮೀಜಿಯ ಬಗ್ಗೆ ಎಲ್ಲರೂ ಎಚ್ಚರ ವಹಿಸುವ ಅಗತ್ಯವಿದೆ~ ಎಂದ ಅವರು `ಬುದ್ದಿವಂತರು ಮತ್ತು ವಿದ್ಯಾವಂತರೂ ಎನಿಸಿಕೊಂಡಿರುವ ಜಿಲ್ಲೆಗಳಲ್ಲಿಯೇ ಮೂಢನಂಬಿಕೆಗಳು ಹೆಚ್ಚು ಪ್ರಚಲಿತದಲ್ಲಿರುವುದರಿಂದ ಶಿಕ್ಷಣ ವ್ಯವಸ್ಥೆಯ ಬಗ್ಗೆಯೇ ಅನುಮಾನ ಹುಟ್ಟುತ್ತದೆ~ ಎಂದು ಸಂಶಯ ವ್ಯಕ್ತಪಡಿಸಿದರು.`ಭಾರತೀಯರು ಇಂಗ್ಲೆಂಡಿನ ರಾಣಿ ವಿಕ್ಟೋರಿಯಾಳನ್ನು ದುರ್ಗಾವತಾರವೆಂದೇ ನಂಬಿದ್ದರು. ಎಲ್ಲ ಕಾಲದಲ್ಲೂ ಮೂಢನಂಬಿಕೆಗಳು ಬೇರೂರಿದ್ದವು. ಆದರೆ ಕಿತ್ತೊಗೆಯಲು ಪ್ರಜ್ಞಾವಂತರೆಲ್ಲರೂ ಒಂದಾಗಬೇಕು. ಮಠಾಧೀಶರ ಪ್ರತಿಭಟನೆಗೆ ಮಣಿಯದಿದ್ದರೇ ಸದ್ಯದಲ್ಲೇ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ~ ಎಂದು ಎಚ್ಚರಿಕೆ ನೀಡಿದರು.ತರಳಬಾಳು ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, `ಜಾತಿ, ಮತ, ಧರ್ಮಗಳನ್ನು ಲೆಕ್ಕಿಸದೇ ಮೂಢನಂಬಿಕೆಗಳ ವಿರುದ್ದ ಬಂಡಾಯವೇಳುವುದನ್ನು ಕಲಿಯಬೇಕಿದೆ. ರಾಜ್ಯ ಸರ್ಕಾರ ಜನ ನೆಮ್ಮದಿಗಾಗಿ ಹೋಮ ಹವನ ಮಾಡುತ್ತಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ~ ಎಂದು ಹೇಳಿದರು.

ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ, ಹಿರೇಮಠದ ಬಸವಲಿಂಗ ಪಟ್ಟದೇವರು, ಸಿದ್ದರಾಮ ಮಹಾಸ್ವಾಮೀಜಿ  ಉಪಸ್ಥಿತರಿದ್ದರು.

 

ಮುಖ್ಯಮಂತ್ರಿ ಭೇಟಿ
ಮಡೆಸ್ನಾನ ಮತ್ತು ಪಂಕ್ತಿಭೇದ ಸೇರಿದಂತೆ ವಿವಿಧ ಮೂಢನಂಬಿಕೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಮಠಾಧೀಶರು ನಡೆಸುತ್ತಿದ್ದ ಪ್ರತಿಭಟನಾ ಸಭೆಗೆ ಮೊದಲು ಸಚಿವ ಸುರೇಶ್‌ಕುಮಾರ್ ಭೇಟಿ ನೀಡಿದರು. ಆದರೆ ಮಠಾಧೀಶರು ಖುದ್ದು ಮುಖ್ಯಮಂತ್ರಿ ಬರಬೇಕೆಂದು ಪಟ್ಟು ಹಿಡಿದಿದ್ದರಿಂದ, ಅದಕ್ಕೆ ಮಣಿದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಸ್ಥಳಕ್ಕೆ ಭೇಟಿ ನೀಡಿದರು.

ತೋಂಟದಾರ್ಯ ಮತ್ತು ನಿಡುಮಾಮಿಡಿ ಸ್ವಾಮೀಜಿಗಳ ಬೇಡಿಕೆಗೆ ಸ್ಪಂದಿಸಿದ ಅವರು,  `ಮಡೆಸ್ನಾನ ಪರವಾಗಿರುವ ಸ್ವಾಮೀಜಿಗಳ ಜತೆಯೂ ಚರ್ಚಿಸಿ, ಮುಂದಿನ 2 ತಿಂಗಳೊಳಗೆ ಮಡೆಸ್ನಾನ ಮತ್ತು ಪಂಕ್ತಿಭೇದ ನಿಷೇಧಕ್ಕೆ ಸಂಬಂಧಪಟ್ಟಂತೆ ಕ್ರಮ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.