ಮಂಗಳವಾರ, ಮೇ 18, 2021
22 °C

ನಗರದೆಲ್ಲೆಡೆ ಆರೋಗ್ಯ ಜಾಗೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವ ಆರೋಗ್ಯ ದಿನಾಚರಣೆಯ ಪ್ರಯುಕ್ತ ಶನಿವಾರ ನಗರದ ವಿವಿಧೆಡೆ ಜನರಲ್ಲಿ ಆರೋಗ್ಯದ ಬಗೆಗಿನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. `ವಯಸ್ಸಾದವರ ಆರೋಗ್ಯ ಕಾಪಾಡಿ~ ಎಂಬ ಘೋಷವಾಕ್ಯದಡಿ ಆರೋಗ್ಯ ದಿನಾಚರಣೆ ಆಚರಿಸಲಾಯಿತು.ಉತ್ತಮ ಆಹಾರ, ನಿದ್ರೆ, ಹಾಗೂ ಚಟುವಟಿಕೆಯ ಜೀವನ ಒಳ್ಳೆಯ ಆರೋಗ್ಯ ನೀಡಬಲ್ಲದು ಎಂಬ ವಾಕ್ಯಗಳಿರುವ ಫಲಕಗಳು ಜಯನಗರ, ಎಂ.ಜಿ.ರಸ್ತೆ, ಮಲ್ಲೇಶ್ವರ, ಕೋರಮಂಗಲ ರಸ್ತೆಯ ವೃತ್ತಗಳಲ್ಲಿ ಕಂಡುಬಂದವು.ವೇಗದ ಜೀವನ ಶೈಲಿಗೆ ಹೊಂದಿಕೊಂಡಿರುವ ನಗರದ ಜನತೆಯಲ್ಲಿ ಹೆಚ್ಚುತ್ತಿರುವ ಮಧುಮೇಹ, ರಕ್ತದೊತ್ತಡ, ಮಂಡಿನೋವು, ಹೃದಯ ಸಂಬಂಧಿತ ಕಾಯಿಲೆಗಳ ಬಗ್ಗೆ ಅಪೊಲೋ, ಸಾಗರ್, ಜಯದೇವ ಆಸ್ಪತ್ರೆಗಳಲ್ಲಿ ಅರಿವು ಮೂಡಿಸುವ ಕಾರ್ಯ ನಡೆದವು. ಸಣ್ಣಪುಟ್ಟ ಕಾಯಿಲೆಯನ್ನು ನಿರ್ಲಕ್ಷ್ಯಿಸದೇ ನಿಯಮಿತ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಒಳಿತು ಎಂದು ವೈದ್ಯರು ರೋಗಿಗಳಿಗೆ ಸಲಹೆ ನೀಡಿದರು.ಸದಾಶಿವಗರದ ಪೂರ್ಣಪ್ರಜ್ಞ ಶಾಲೆಯ ಆವರಣದಲ್ಲಿ ಅಕ್ಷರ್ ಪವರ್ ಯೋಗ ಅಕಾಡೆಮಿ ಹಮ್ಮಿಕೊಂಡಿದ್ದ 108 ಬಾರಿ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ನೂರಕ್ಕಿಂತಲೂ ಹೆಚ್ಚು ಮಂದಿ ಭಾಗವಹಿಸಿದ್ದರು. ಸತತ ಯೋಗಾಭ್ಯಾಸದಿಂದ ಪರಿಪೂರ್ಣ ಆರೋಗ್ಯ ಹೊಂದುವುದರ ಬಗ್ಗೆ ಮಾಹಿತಿ ನೀಡಲಾಯಿತು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಯೋಗಾಥನ್ ಹಮ್ಮಿಕೊಂಡಿತ್ತು.ಉಸಿರಾಟ ಎಂಬುದು ಯೋಗದಲ್ಲಿ ಬಹು ಪ್ರಾಮುಖ್ಯತೆ ಪಡೆಯುವುದರಿಂದ ದೀರ್ಘ ಉಸಿರಾಟ ಮತ್ತು ಇತರೆ ಯೋಗಾಸನಗಳಿಗೆ ಪ್ರಾಮುಖ್ಯತೆ ನೀಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು. ಜೆಡಿಎಸ್‌ನ ವೆಂಕಟೇಶಮೂರ್ತಿ, ಶಾಲಾ ಮಕ್ಕಳು, ಅಕಾಡೆಮಿಯ ಕಲಿಯುತ್ತಿರುವ ಯೋಗ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಭಾರತೀಯ ವೈದ್ಯಕೀಯ ಸಂಘದಿಂದ ತಿಲಕ ನಗರದಲ್ಲಿರುವ ಸಾಗರ ಆಸ್ಪತ್ರೆಯಲ್ಲಿ ಆರೋಗ್ಯ ಉಳಿಸಿಕೊಳ್ಳುವುದರ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಹಿಂದೂಸ್ತಾನ್ ಯೂನಿಲಿವರ್ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ವೆಂಕಟೇಶ್ ರಾಘವನ್ ಅವರು ಶುದ್ಧವಾದ ಕುಡಿಯುವ ನೀರು ಆರೋಗ್ಯ ಕಾಪಾಡುವುದರ ಕುರಿತು ಮಾಹಿತಿ ನೀಡಿದರು.ಅಪೊಲೋ ಆಸ್ಪತ್ರೆಯ ಡಾ.ಮೈಥಿಲಿ ಶಂಕರ್, `ಆಧುನಿಕ ಜೀವನ ಶೈಲಿಯಿಂದ ಬೆನ್ನು ನೋವು ಮತ್ತು ಕಣ್ಣಿನ ಸಮಸ್ಯೆಗಳು ಹೆಚ್ಚುತ್ತಿವೆ. ಅಸ್ಥಿರಂಧ್ರತೆ ಸಮಸ್ಯೆ ದೊಡ್ಡ ಸವಾಲಾಗಿದ್ದು, ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಔದ್ಯೋಗಿಕ  ಮತ್ತು ಕುಟುಂಬ ನಿರ್ವಹಣೆಯಲ್ಲಿ ದುಡಿಯುವ ಮಹಿಳೆಯರು ಅಸ್ಥಿರಂಧ್ರತೆಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ~ ಎಂದರು.~ಈ ಬಾರಿಯ ಆರೋಗ್ಯ ದಿನಾಚರಣೆಯನ್ನು ವಯಸ್ಸಾದವರಿಗೆ ಮೀಸಲಿರಿಸಲಾಗಿದ್ದು, ಪ್ರಸ್ತುತ ದಿನಗಳಲ್ಲಿ 55ಕ್ಕಿಂತ ಮೇಲ್ಪಟ್ಟವರಲ್ಲಿ ಹೆಚ್ಚು ಮರೆವಿನ (ಅಲಜೈಮರ್) ಕಾಯಿಲೆ ಕಾಣಿಸಿಕೊಳ್ಳುತ್ತಿದೆ. 

 ಈ ಕಾಯಿಲೆಯಿಂದ ಬಳಲುವವರಿಗೆ ಪೋಷಕರ ಸಹಕಾರ ಅಗತ್ಯ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.