ಗುರುವಾರ , ಏಪ್ರಿಲ್ 22, 2021
30 °C

ನಗರೀಕರಣ-ಮೂಲಸೌಕರ್ಯ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಳ್ಳಿಗಳಿಂದ ನಗರಗಳಿಗೆ ವಲಸೆ ಹೆಚ್ಚುತ್ತಲೇ ಇದೆ. ನಗರಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸುವತ್ತ ಗಮನ ಹರಿಸಬೇಕಿದೆ ಎಂದು ಕೇಂದ್ರ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸುಧೀರ್ ಕೃಷ್ಣ ಹೇಳಿದರು.ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಎಫ್‌ಐಸಿಸಿಐ-ಫಿಕ್ಕಿ) ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ `ದಕ್ಷಿಣ ಭಾರತ ರಿಯಲ್ ಎಸ್ಟೇಟ್ ಸಮಾವೇಶ-2012~ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, `ನಗರೀಕರಣದ ಸವಾಲು ಮತ್ತು ರಿಯಲ್ ಎಸ್ಟೇಟ್ ಉದ್ಯಮ ವಹಿಸಬೇಕಾದ ಪಾತ್ರ~ ಕುರಿತು ಮಾತನಾಡಿದರು.ಕಳೆದ ದಶಕದಲ್ಲಿ ದೇಶದ ಜನವಸತಿ ಪ್ರದೇಶಗಳಲ್ಲಾಗಿರುವ ಬೆಳವಣಿಗೆಗಳತ್ತ ಗಮನ ಸೆಳೆದ ಅವರು, 2001ರಲ್ಲಿ ದೇಶದಲ್ಲಿ 593 ಜಿಲ್ಲೆಗಳಿದ್ದವು.      2011ರ ವೇಳೆಗೆ 640ಕ್ಕೆ ಹೆಚ್ಚಿದವು. 5161 ಇದ್ದ ಪಟ್ಟಣಗಳ ಸಂಖ್ಯೆ 7935ಕ್ಕೇರಿತು. ಹತ್ತು ವರ್ಷಗಳಲ್ಲಿ 47 ನಗರಗಳು ಸೃಷ್ಟಿಯಾದರೆ, ಪಟ್ಟಣಗಳ ಪ್ರಮಾಣ ಮಾತ್ರ ಊಹೆಗೂ ನಿಲುಕದ ವೇಗದಲ್ಲಿ (2774 ಹೊಸ ಪಟ್ಟಣಗಳು) ಹೆಚ್ಚಳವಾಯಿತು ಎಂದು ಅಂಕಿ-ಅಂಶ ನೀಡಿದರು.ನಗರ ಕೇಂದ್ರಿತ ಜನಸಂಖ್ಯೆಯೂ ದುಪ್ಪಟ್ಟು ವೇಗದಲ್ಲಿ ಹೆಚ್ಚುತ್ತಿದೆ. ಜತೆಗೆ ಮನೆಗಳ ಬೇಡಿಕೆಯೂ ಹೆಚ್ಚುತ್ತಿದೆ. ಇದಕ್ಕೆ ತಕ್ಕಂತೆ ನಗರ ಸಾರಿಗೆ ವ್ಯವಸ್ಥೆ, ವೃದ್ಧಾಶ್ರಮಗಳು, ಉದ್ಯೋಗಿ ಮಹಿಳೆಯರ ವಸತಿಗೃಹಗಳು ಸೇರಿದಂತೆ ವಿವಿಧ ಮೂಲ ಸೌಕರ್ಯಗಳನ್ನೂ ಹೆಚ್ಚಿಸಬೇಕಿದೆ. ಜತೆಗೆ ಈ ವ್ಯವಸ್ಥೆಗಳ ಬಗ್ಗೆ ಮೂರರಿಂದ ಐದು ವರ್ಷಕ್ಕೊಮ್ಮೆ ಪರಾಮರ್ಶೆಯನ್ನೂ ನಡೆಸಬೇಕಿದೆ ಎಂದರು.ಇದೇ ವೇಳೆ ನಗರ ಪ್ರದೇಶದಿಂದ ದೇಶದ ಆರ್ಥಿಕ ಪ್ರಗತಿ(ಜಿಡಿಪಿ)ಗೆ ಶೇ 60ರಷ್ಟು ಕೊಡುಗೆಯೂ ಬರುತ್ತಿದೆ ಎಂದರು.ಮಹಾ ನಗರಗಳನ್ನಷ್ಟೇ ಅಲ್ಲ, ಮಧ್ಯಮ ಗಾತ್ರದ ಮತ್ತು ಸಣ್ಣ ನಗರಗಳತ್ತಲೂ ರಿಯಲ್ ಎಸ್ಟೇಟ್ ಉದ್ಯಮ ಗಮನ ಹರಿಸಬೇಕಿದೆ. ದುರ್ಬಲ ವರ್ಗದವರ ವಸತಿ ಬೇಡಿಕೆಗಳನ್ನೂ ಪೂರೈಸಬೇಕಿದೆ ಎಂದು ಗಮನ ಸೆಳೆದರು. ಗುಜರಾತ್‌ನ ಅಹಮದಾಬಾದ್‌ನಲ್ಲಿ  ವರ್ತುಲ ರಸ್ತೆಯೊಂದನ್ನು ಸರ್ಕಾರದ ಅನುದಾನವಿಲ್ಲದೇ ಸ್ಥಳೀಯ  ಲಭ್ಯ ಸಂಪನ್ಮೂಲಗಳಿಂದಲೇ ಅಭಿವೃದ್ಧಿಪಡಿಸಲಾಗಿದೆ. ಇತರೆಡೆಯೂ ಇಂಥ ಪ್ರಯತ್ನ ಆಗಬೇಕಿದೆ ಎಂದು ಉತ್ತೇಜಿಸಿದರು.ಹೊಸಕೋಟೆ ಯುಐಡಿಎಸ್‌ಎಸ್‌ಟಿ: ಉಪ ನಗರಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ(ಯುಐಡಿಎಸ್‌ಎಸ್‌ಟಿ)ಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಕರ್ನಾಟಕದ ಹೊಸಕೋಟೆಯೂ ಇದಕ್ಕೆ ಆಯ್ಕೆಯಾಗಿದೆ ಎಂದರು.ಎನ್‌ಸಿಸಿ ಅರ್ಬನ್ ಇನ್ಫ್ರಾಸ್ಟ್ರಕ್ಚರ್‌ನ ನಿರ್ದೇಶಕ ಜೆ.ಸಿ.ಆರ್.ರಾಜು,    ನಿರ್ಮಾಣ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆ ಇಂದಿನ ಅಗತ್ಯ. ಇಲ್ಲವಾದರೆ ಕಾಮಗಾಗಿ ವಿಳಂಬ, ದುಪ್ಪಟ್ಟು ವೆಚ್ಚ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.ದೇಶದ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಮುಂಬೈ, ನವದೆಹಲಿ ಮುಂಚೂಣಿಯಲ್ಲಿವೆ. ದಕ್ಷಿಣ ಭಾರತವೂ ಪ್ರಗತಿಗತಿಯಲ್ಲಿದೆ. ವಾಣಿಜ್ಯ ಕೇಂದ್ರ ಮತ್ತು ಕಚೇರಿಗಳ ಸ್ಥಳಾವಕಾಶ ಮಾರುಕಟ್ಟೆಯಲ್ಲಿ ಬೆಂಗಳೂರಿನ ಪಾಲು ಶೇ 34ರಷ್ಟಿದೆ. ಜಾಗತಿಕ ಆರ್ಥಿಕ ಹಿಂಜರಿತ ಸಂದರ್ಭದಲ್ಲಿಯೂ ಬೆಂಗಳೂರಿನಲ್ಲಿ `ಆಫೀಸ್ ಸ್ಪೇಸ್~ ಮಾರುಕಟ್ಟೆ ಉತ್ತಮವಾಗಿಯೇ ಇದ್ದಿತು ಎಂದು ಮಂತ್ರಿ ಡೆವಲಪರ್ಸ್ ಅಧ್ಯಕ್ಷ ಸುಶೀಲ್ ಮಂತ್ರಿ ವಿವರಿಸಿದರು.ಜೈನ್ ಹೌಸಿಂಗ್ ಅಂಡ್ ಕನ್‌ಸ್ಟ್ರಕ್ಷನ್ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಮೆಹ್ತಾ, ದೇಶದ ವಸತಿ ನಿರ್ಮಾಣ ಉದ್ಯಮದಲ್ಲಿ ಬೆಂಗಳೂರು, ಚೆನ್ನೈ, ಹೈದರಾಬಾದ್ ಕೊಡುಗೆ ಶೇ 40ರಷ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಕೊಚ್ಚಿ, ಮೈಸೂರು, ಕೊಯಮತ್ತೂರಿನಲ್ಲಿಯೂ ಉದ್ಯಮ ಪ್ರಗತಿ ಕಾಣುತ್ತಿದೆ. 2011ರ 4ನೇ ತ್ರೈಮಾಸಿಕದಲ್ಲಿ     ಬೆಂಗಳೂರು ರಿಯಲ್ ಎಸ್ಟೇಟ್ ಶೇ 4.5 ಮತ್ತು ಹೈದರಾಬಾದ್ ಶೇ 3.6ರಷ್ಟು ಪ್ರಗತಿ ದಾಖಲಿಸಿವೆ ಎಂದು ವಿವರ ನೀಡಿದರು.ದಕ್ಷಿಣ ಭಾರತದ ರಿಯಲ್ ಎಸ್ಟೇಟ್ ಉದ್ಯಮಕ್ಕೆ 2012 ಭರವಸೆಯ ವರ್ಷವಾಗಿದ್ದು, ನಿರ್ಮಾಣಗೊಂಡಿರುವ ವಸತಿ ಸಮುಚ್ಛಯಗಳಲ್ಲಿ ಶೇ 12ರಷ್ಟು ಮಾತ್ರ ಖಾಲಿ ಉಳಿಯಬಹುದು ಎಂದು ಮೆಹ್ತಾ ವಿಶ್ವಾಸ ವ್ಯಕ್ತಪಡಿಸಿದರು.ನಂತರ ಚರ್ಚಾಗೋಷ್ಠಿಯಲ್ಲಿ  ಇತ್ತೀಚಿನ ವರ್ಷಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಸಾಲ ಕ್ಷೇತ್ರದ ಬದಲು ಷೇರುಪೇಟೆ ಮೂಲಕ ಬಂಡವಾಳ ಸಂಗ್ರಹಿಸಲು ಮುಂದಾಗಿರುವುದು ಚರ್ಚೆಯಾಯಿತು. ಸಾಲ ಒಂದು ಮಿತಿಯಲ್ಲಿರುತ್ತದೆ, ಬೇಗ ಮರುಪಾವತಿಸಬೇಕಾದ ಒತ್ತಡವಿರುತ್ತದೆ. ಹಾಗಾಗಿ ಷೇರುಪೇಟೆಯೇ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಯಿತು.ಮಹಾರಾಷ್ಟ್ರದ ಉದ್ಯಮಿಯೊಬ್ಬರು, `ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಾಲ ಕೊಡುವ ವಿಚಾರದಲ್ಲಿ ಬ್ಯಾಂಕ್‌ಗಳು ನಕಾರಾತ್ಮಕವಾಗಿವೆಯೇಕೆ?~ ಎಂಬ ಪ್ರಶ್ನೆ ಮುಂದಿಟ್ಟರು. ಸಾಲ ವಾಪಸಾತಿ ವಿಳಂಬವಾಗುವ ಆತಂಕದಲ್ಲಿ ಬ್ಯಾಂಕ್‌ಗಳು ಹೀಗೆ ವರ್ತಿಸುತ್ತಿರಬಹುದು ಎಂಬ  ಉತ್ತರವೂ ಹೊರಬಿದ್ದಿತು. ನಂತರ ಪ್ರತಿಕ್ರಿಯಿಸಿದ ಸುಶೀಲ್ ಮಂತ್ರಿ, `ದಕ್ಷಿಣ ಭಾರತದಲ್ಲಿ ಈ ಸಮಸ್ಯೆ ಇಲ್ಲ. ಐಸಿಐಸಿಐ, ಎಚ್‌ಡಿಎಫ್‌ಸಿ ಬ್ಯಾಂಕ್ ರಿಯಲ್ ಎಸ್ಟೇಟ್‌ಗೆ ನೀಡಿದ ಸಾಲ ಬಹುತೇಕ ವಸೂಲಾಗಿವೆ. ಇಲ್ಲಿ ವಸೂಲಾಗದ ಸಾಲ (ಬ್ಯಾಡ್ ಡೆಬ್ಟ್) ಎಂಬುದೇ ಇಲ್ಲ. ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮ ಆರೋಗ್ಯ ಪೂರ್ಣವಾಗಿದೆ ಎಂದು ವಿವರಿಸಿದರು.

ಬೆಂಗಳೂರಿನ ಮಟ್ಟಿಗಂತೂ ಐಟಿ-ಬಿಟಿ ಬಿಟ್ಟರೆ ಬ್ಯಾಂಕ್‌ಗಳಿಗೆ ಸಾಲ ನೀಡಲು ಇರುವ ದೊಡ್ಡ ಕ್ಷೇತ್ರವೆಂದರೆ ರಿಯಲ್ ಎಸ್ಟೇಟ್ ಉದ್ಯಮವಷ್ಟೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.