ನಗರ ದರ್ಶನಕ್ಕೆ ಒಂದೇ ಟಿಕೆಟ್

ಬೆಂಗಳೂರು: ಒಂದೇ ಟಿಕೆಟ್ನಲ್ಲಿ ನಗರದ ಪಾರಂಪರಿಕ ಮತ್ತು ವಾಣಿಜ್ಯ ಸ್ಥಳಗಳಿಗೆ ಪ್ರಯಾಣಿಕರನ್ನು ಮತ್ತು ಪ್ರವಾಸಿಗರನ್ನು ಕೊಂಡೊಯ್ಯುವ ಬೆಂಗಳೂರು ರೌಂಡ್ಸ್ – ಹಾಪ್ ಆನ್, ಹಾಪ್ ಆಫ್’ ಸರಣಿ ಹವಾನಿಯಂತ್ರಿತ ವೋಲ್ವೊ ಬಸ್ ಸೇವೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಶುಕ್ರವಾರ ಚಾಲನೆ ನೀಡಿದೆ.
ಪ್ರತಿ ದಿನ ಬೆಳಿಗ್ಗೆ ೮.೩೦ಕ್ಕೆ ನಗರದ ವಿವಿಧ ಬಸ್ ನಿಲ್ದಾಣದಿಂದ ಹೊರಡುವ ೭ ಹವಾನಿಯಂತ್ರಿತ ವೋಲ್ವೊ ಬಸ್ಗಳು ರಾತ್ರಿ ೧೦ ಗಂಟೆಯವರೆಗೂ ೩೦ ರಿಂದ ೪೫ ನಿಮಿಷಗಳಿಗೆ ಒಂದರಂತೆ ನಿಗದಿತ ಮಾರ್ಗಗಳಲ್ಲಿ ಸಂಚರಿಸಲಿವೆ. ಒಂದು ದಿನದ ಬೆಂಗಳೂರು ರೌಂಡ್ಸ್ ಟಿಕೆಟ್ ಖರೀದಿಸಿದವರು ನಿಗದಿತ ಸ್ಥಳಗಳನ್ನು ವೀಕ್ಷಿಸಿ ಬೇರೊಂದು ಬೆಂಗಳೂರು ರೌಂಡ್ಸ್ ಬಸ್ನಲ್ಲಿ ನಗರ ದರ್ಶನ ಮುಂದುವರೆಸಬಹುದು.
ಈ ಟಿಕೆಟ್ ಖರೀದಿಸಿರುವವರು ವಾಯು ವಜ್ರ ಬಸ್ಗಳನ್ನು ಹೊರತುಪಡಿಸಿ ಬಿಎಂಟಿಸಿಯ ಎಲ್ಲಾ ಬಸ್ಗಳಲ್ಲೂ ಸಂಚರಿಸಬಹುದು. ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವ ಸೌಲಭ್ಯವನ್ನೂ ಈ ಸೇವೆ ಒಳಗೊಂಡಿದ್ದು, ಮುಂದಿನ ನಾಲ್ಕು ದಿನಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ಸೇವೆ ಆರಂಭವಾಗಲಿದೆ.
ನಗರದರ್ಶನ ಬಸ್ ಸೇವೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ಪ್ರವಾಸಿಗರಿಗೆ ವಿಶ್ವದರ್ಜೆಯ ಸೇವೆ ಒದಗಿಸುವುದು ನಮ್ಮ ಉದ್ದೇಶ. ಸಾರ್ವಜನಿಕರ ಮತ್ತು ಪ್ರವಾಸಿಗರ ಪ್ರತಿಕ್ರಿಯೆ ಉತ್ತಮವಾಗಿದ್ದಲ್ಲಿ ನಗರದರ್ಶನ ಬಸ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಇಲ್ಲದಿದ್ದರೆ ನಗರದರ್ಶನ ಟ್ರಿಪ್ಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತೇವೆ’ ಎಂದರು.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೇಜ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಎನ್. ಶ್ರೀನಿವಾಸಾಚಾರಿ, ಶಾಸಕ ಆರ್.ವಿ. ದೇವರಾಜ್, ಬಿಬಿಎಂಪಿ ಉಪ ಮೇಯರ್ ಕೆ.ಇಂದಿರಾ ಉಪಸ್ಥಿತರಿದ್ದರು.
ಟಿಕೆಟ್ ಎಲ್ಲೆಡೆ ದೊರೆಯಲಿ
ಈಗ ಬೆಂಗಳೂರು ರೌಂಡ್ಸ್ ಬಸ್ಗಳಲ್ಲಿ ಮಾತ್ರ ಟಿಕೆಟ್ ಲಭ್ಯವಿದೆ. ಈ ಒಂದೇ ಟಿಕೆಟ್ನಲ್ಲಿ ಎಲ್ಲಾ ಬಸ್ಗಳಲ್ಲಿ ಸಂಚರಿಸಬಹುದಾದರೂ, ಪ್ರತ್ಯೇಕ ಟಿಕೆಟ್ ಖರೀದಿಸಿ ನಗರದ ಬೇರೆ ಬೇರೆ ಭಾಗಗಳಿಂದ ನಿಗದಿತ ಬಸ್ ನಿಲ್ದಾಣಗಳಿಗೆ ಬಂದು ಬೆಂಗಳೂರು ರೌಂಡ್ಸ್ ಟಿಕೆಟ್ ಪಡೆಯಬೇಕು. ಹೀಗೆ ಹೆಚ್ಚುವರಿ ಟಿಕೆಟ್ ಪಡೆಯುವುದನ್ನು ತಪ್ಪಿಸಲು ನಗರದ ಎಲ್ಲಾ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಟಿಕೆಟ್ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು.
–ಪುಟ್ಟಹೊನ್ನೇಗೌಡ ಎಚ್, ಕನ್ನಡ ಗ್ರಾಹಕರ ಕೂಟ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.