ಮಂಗಳವಾರ, ಮೇ 24, 2022
25 °C

ನಗರ ಯೋಜನೆ ಅವ್ಯವಸ್ಥೆ ನಿವಾರಣೆಗೆ ಅಗತ್ಯ ಕ್ರಮ: ಮೇಯರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಯ ನಗರ ಯೋಜನೆ ವಿಭಾಗದಲ್ಲಿನ ಅವ್ಯವಸ್ಥೆಗಳ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕಾನೂನು ಜಾರಿಗೊಳಿಸುವಲ್ಲಿ ವಿಫಲವಾದ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು.

-ಇದು ಮೇಯರ್ ಪಿ. ಶಾರದಮ್ಮ ಅವರ ಖಡಕ್ ನುಡಿ.`ಅಕ್ರಮ ನಿರ್ಮಾಣ- ಇಲ್ಲ ನಿಯಂತ್ರಣ~ ಸರಣಿ ಲೇಖನಮಾಲೆ ಹಿನ್ನೆಲೆಯಲ್ಲಿ `ಪ್ರಜಾವಾಣಿ~ಗೆ ಸಂದರ್ಶನ ನೀಡಿದ ಅವರು, `ಅಕ್ರಮ ಕಟ್ಟಡಗಳ ನಿರ್ಮಾಣ ಕುರಿತು ಸಾರ್ವಜನಿಕರು ನೀಡುವ ದೂರನ್ನಾಧರಿಸಿ ಕ್ರಮ ಜರುಗಿಸದ ಅಧಿಕಾರಿಗಳ ಬಗ್ಗೆ ಲಿಖಿತ ದೂರು ಬಂದಲ್ಲಿ ಖಂಡಿತಾ ಕ್ರಮ ಜರುಗಿಸಲಾಗುವುದು~ ಎಂದು ಭರವಸೆ ನೀಡಿದ್ದಾರೆ. ಸಂದರ್ಶನದ ವಿವರ ಇಲ್ಲಿದೆ.ಪ್ರಶ್ನೆ:  ಅಕ್ರಮ ಕಟ್ಟಡಗಳ ಬಗ್ಗೆ ಇದುವರೆಗೆ ನಿಮಗೆ ದೂರು ಬಂದಿಲ್ಲವೇ?

ಮೇ: ಕಟ್ಟಡ ನಿರ್ಮಾಣ ಉಪವಿಧಿಗಳನ್ನು ಉಲ್ಲಂಘಿಸಿ ಅನೇಕ ಕಟ್ಟಡಗಳು ನಗರದಲ್ಲಿ ತಲೆಯೆತ್ತಿರುವ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್‌ಗಳಿಗೆ ದೂರು ಬಂದಿರಬಹುದು. ಆದರೆ ನನಗೆ ಇದುವರೆಗೆ ಲಿಖಿತವಾಗಿ ಯಾವುದೇ ದೂರು ಬಂದಿಲ್ಲ. ದೂರು ಬಂದಲ್ಲಿ ಖಂಡಿತಾ ಪರಿಶೀಲಿಸುತ್ತೇನೆ.ಪ್ರಶ್ನೆ: ಪಾಲಿಕೆ ಎಂಜಿನಿಯರ್‌ಗಳ ಬಗ್ಗೆಯೇ ವ್ಯಾಪಕ ದೂರುಗಳಿವೆಯಲ್ಲಾ?

ಮೇ: ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುವ ಮಾಲೀಕರ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಿದರೆ ಎಂಜಿನಿಯರ್‌ಗಳು ದೂರು ಸ್ವೀಕರಿಸಲೇಬೇಕು. ಇಲ್ಲದಿದ್ದರೆ ಅಂತಹ ಹುದ್ದೆಗಳ ಅಗತ್ಯವೇನಿದೆ? ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಅಂತಹ ಅಧಿಕಾರಿಗಳ ಅವಶ್ಯಕತೆಯೂ ಪಾಲಿಕೆಗೆ ಇಲ್ಲ. ಪಾಲಿಕೆಗೆ ಕಳಂಕ ತರುವ ಅಧಿಕಾರಿಗಳ ಸೇವೆ ಬೇಕಿಲ್ಲ.ಪ್ರಶ್ನೆ:  ಎರವಲು ಸೇವೆ ಅಧಿಕಾರಿಗಳಿಂದಲೇ ಭ್ರಷ್ಟಾಚಾರ ಹೆಚ್ಚು ನಡೆಯುತ್ತಿದೆ ಎಂಬ ಸಾರ್ವತ್ರಿಕ ಆರೋಪದ ಬಗ್ಗೆ ಏನು ಹೇಳುತ್ತೀರಿ?

ಮೇ: ದಕ್ಷ ಅಧಿಕಾರಿಗಳ ಸೇವೆ ಪಾಲಿಕೆಗೆ ಅಗತ್ಯವಿದೆ. ಆದರೆ, ಭ್ರಷ್ಟ ಅಧಿಕಾರಿಗಳು ಬೇಕಾಗಿಲ್ಲ. ಇಂತಹ ಅಧಿಕಾರಿಗಳನ್ನು ಮಾತೃ ಇಲಾಖೆಗೆ ವಾಪಸು ಕಳಿಸಲು ಆಯುಕ್ತರು ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧ.ಪ್ರಶ್ನೆ:  ಕಟ್ಟಡ ನಿರ್ಮಾಣ ಉಪವಿಧಿಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವ ಮಾಲೀಕರ ಬಗ್ಗೆ ಪಾಲಿಕೆಯ ಮುಂದಿನ ಕಾರ್ಯ ಯೋಜನೆ ಏನು?

ಮೇ: ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ ದಂಡ ವಿಧಿಸಲು ಈಗಾಗಲೇ ಸಂಬಂಧಪಟ್ಟ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ. ಆ ಮೂಲಕ ತೆರಿಗೆ ಸೋರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತಿದೆ.ಪ್ರಶ್ನೆ:  ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದಂತಹ ಪ್ರದೇಶಗಳಲ್ಲಿ ಯದ್ವಾತದ್ವ ಅಕ್ರಮ ಕಟ್ಟಡಗಳು ತಲೆಯೆತ್ತುತ್ತಿವೆಯಲ್ಲಾ?

ಮೇ:
ಇದುವರೆಗೆ ಈ ಪ್ರದೇಶ ನಗರಸಭೆ, ಪುರಸಭೆಗಳ ವ್ಯಾಪ್ತಿಯಲ್ಲಿದ್ದವು. ಹೀಗಾಗಿ, ಬಿಬಿಎಂಪಿಯ ನಿಯಂತ್ರಣ ಇರಲಿಲ್ಲ. ಇನ್ನು ಮುಂದೆ ಗಮನಹರಿಸುತ್ತೇವೆ.ಪ್ರಶ್ನೆ:  ರೆವಿನ್ಯೂ ನಿವೇಶನಗಳಲ್ಲಿ ಮನೆ ಕಟ್ಟಿದವರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ?

ಮೇ: ಇಂತಹ ಕಟ್ಟಡಗಳನ್ನು ಸಕ್ರಮಗೊಳಿಸಲು ಸರ್ಕಾರದ ಅಕ್ರಮ-ಸಕ್ರಮ ಯೋಜನೆ ಜಾರಿಗೆ ಕಾಯುತ್ತಿದ್ದೇವೆ. ಸರ್ಕಾರದ ತೀರ್ಮಾನವೇ ಅಂತಿಮ. ಮಾನವೀಯತೆ ದೃಷ್ಟಿಯಿಂದ ಯಾವುದೇ ಅಕ್ರಮ ಕಟ್ಟಡಗಳನ್ನು ಒಡೆಯಲು ಪಾಲಿಕೆ ಮುಂದಾಗುವುದಿಲ್ಲ.ಪ್ರಶ್ನೆ:  ಅಕ್ರಮ- ಸಕ್ರಮ ಯೋಜನೆ ಶೀಘ್ರ ಜಾರಿಗೆ ಸರ್ಕಾರದ ಮೇಲೆ ಒತ್ತಡ ತರಲು ಪಾಲಿಕೆ ಪ್ರಯತ್ನಿಸಲಿದೆಯೇ?

ಮೇ: ಈ ಬಗ್ಗೆ ಸರ್ಕಾರದ ಮಟ್ಟದಲ್ಲಿಯೂ ಚರ್ಚೆ ನಡೆದಿದೆ. ಈಗಾಗಲೇ ನಗರ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆಯಲಾಗಿದೆ. ರಾಜ್ಯಪಾಲರ ಬಳಿ ಕಡತ ಇದೆ. ಈ ಸಂಬಂಧ ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ಪಾಲಿಕೆ ಬದ್ಧ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.