ಭಾನುವಾರ, ಮೇ 31, 2020
27 °C

ನಗರ ಸಾರಿಗೆ: ಸ್ತ್ರೀ ಸಾರಥ್ಯ

ಮನೋಜ್ ಗುದ್ದಿ Updated:

ಅಕ್ಷರ ಗಾತ್ರ : | |

ನಗರ ಸಾರಿಗೆ: ಸ್ತ್ರೀ ಸಾರಥ್ಯ

ಬಿಸಿಲಿನಿಂದ ಕೆಂಬಣ್ಣಕ್ಕೆ ತಿರುಗಿದ ಮುಖ, ಬತ್ತದ ಉತ್ಸಾಹ, ಗುಜರಿಗೆ ಹಾಕಲು ಯೋಗ್ಯವಾದ, ಸರ್ವಸ್ವವನ್ನೂ ಕಳೆದುಕೊಂಡ ಮಿನಿ ಬಸ್, ಬದಲಾಗದ ಗೇರ್ ಅನ್ನು ಗಡಿಬಿಡಿಯ ಟ್ರಾಫಿಕ್ ಮಧ್ಯೆಯೂ ಛಲದಿಂದ ಬದಲಿಸುವ ಚಾಕಚಕ್ಯತೆ, ಇಂಡಿಕೇಟರ್ ಇಲ್ಲದ್ದರಿಂದ ಬಲಗೈಯನ್ನೇ ಇಂಡಿಕೇಟರ್ ಆಗಿ ಪರಿವರ್ತಿಸಿದ ಅನಿವಾರ್ಯತೆ, ಪ್ರಯಾಣಿಕರೊಂದಿಗೆ ಅದೇ ಮುಗುಳ್ನಗೆಯ ವರ್ತನೆ... ಇವಿಷ್ಟು ಸೇರಿದರೆ ಅದು ನಮ್ಮ ಕಥಾನಾಯಕಿ ಪ್ರೇಮಾ ನಡಬಟ್ಟಿ.ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮೂರನೇ ಡಿಪೊದಲ್ಲಿ ಕಳೆದ ಎರಡು ತಿಂಗಳಲ್ಲಿ ಡ್ರೈವರ್ ಕಂ ಕಂಡಕ್ಟರ್ (ಇದು ಸಂಸ್ಥೆ ಕೆಲವು ವರ್ಷಗಳ ಹಿಂದೆ ಜಾರಿಗೆ ತಂದ ಪದ್ಧತಿ. ಒಬ್ಬರೇ ಚಾಲಕ ಮತ್ತು ನಿರ್ವಾಹಕರ ಕೆಲಸ ಮಾಡಬೇಕು. ಸಂಬಳ ಮಾತ್ರ ಒಬ್ಬರದೇ!) ಆಗಿ ಕೆಲಸ ಮಾಡುತ್ತಿದ್ದಾರೆ. ಇಡೀ ಬಿ.ಎಂ.ಟಿ.ಸಿ.ಯಲ್ಲಿ ಬಸ್ ಚಾಲನೆ ಮಾಡುತ್ತಿರುವ ಏಕೈಕ ಮಹಿಳಾ ಡ್ರೈವರ್ ಈ ಪ್ರೇಮಾ.ಊರು ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಭೈರನಹಟ್ಟಿ. ಪತಿ ಕೆಲ ಕಾಲದ ಹಿಂದೆ ತೀರಿಕೊಂಡರು. ಏಳು ವರ್ಷದ ಮಗ ರಾಕೇಶ್ ತವರಿನಲ್ಲಿಯೇ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾನೆ. ಪ್ರೇಮಾ ಅವರು ಓದಿದ್ದು ಬಿ.ಎ.ವರೆಗೆ. ಆರು ವರ್ಷಗಳ ಹಿಂದೆ ಡ್ರೈವಿಂಗ್ ಲೈಸೆನ್ಸ್ ಪಡೆದ ನಂತರ ಆಯ್ದುಕೊಂಡದ್ದು ಕೆ.ಎಸ್.ಆರ್.ಟಿ.ಸಿ.ಯ ಚಾಲಕ ಕಂ ನಿರ್ವಾಹಕ ಉದ್ಯೋಗ. ಬೆಂಗಳೂರಿನ ಡಿಪೊವೊಂದರಲ್ಲಿ ಕೆಲ ಕಾಲ ಕೆಲಸ ಮಾಡಿದ ನಂತರ ಆ ಹುದ್ದೆಗೆ ರಾಜೀನಾಮೆ ನೀಡಿ ಕಳೆದ ನವೆಂಬರ್ 25ರಂದು ಬಿ.ಎಂ.ಟಿ.ಸಿ ಸೇರಿದರು.ಡಿಪೊ ಸಂಖ್ಯೆ ಮೂರರಲ್ಲಿ ಕೆಲಸ ಆರಂಭಿಸಿದ ಅವರು ಮೊದಲಿನಿಂದಲೂ ಡ್ರೈವಿಂಗ್‌ನಲ್ಲಿ ಆಸಕ್ತಿ ತೋರಿಸಿದರು. ಇದನ್ನು ಪ್ರೋತ್ಸಾಹಿಸಿದ ಹಿರಿಯ ಅಧಿಕಾರಿಗಳು ಸೂಕ್ತ ತರಬೇತಿ ನೀಡಿ, ಮಾನಸಿಕ ಸ್ಥೈರ್ಯವನ್ನೂ ನೀಡಿದರು. ಅಲ್ಲಿಂದ ಚಾಲನ ವೃತ್ತಿ ಆರಂಭಿಸಿದ ಇವರು ಬೆಂಗಳೂರಿನಂಥ ‘ವಾಹನನಿಬಿಡ’ ನಗರದಲ್ಲಿ ದಕ್ಷತೆಯಿಂದ ವಾಹನ ಚಾಲನೆ ಮಾಡುತ್ತಿದ್ದಾರೆ. ಪ್ರಸ್ತುತ ಕಾವೇರಿ ಭವನದ ಸಿಟಿ ಸಿವಿಲ್ ಕೋರ್ಟ್‌ನಿಂದ ಸಿದ್ದಯ್ಯ ರಸ್ತೆಯ ನ್ಯಾಯದೇಗುಲದವರೆಗೆ  (ಕೌಟುಂಬಿಕ ನ್ಯಾಯಾಲಯ)ದಿನಕ್ಕೆ ಇಪ್ಪತ್ತು ಟ್ರಿಪ್ ಮಾಡುತ್ತಾರೆ. ಬೆಳಿಗ್ಗೆ 9.30ಕ್ಕೆ ಆರಂಭವಾಗುವ ಕಾಯಕ ಮುಗಿಯುವುದು ರಾತ್ರಿ 8ಕ್ಕೆ.

ಸ್ವಂತ ದುಡಿದು ಬದುಕುವ ಛಲ

ಪತಿ ಇರುವವರೆಗೆ ಪ್ರೇಮಾ ಕೂಡ  ಸ್ಥಿತಿವಂತರೇ ಆಗಿದ್ದರು.  ಕಾರಣಾಂತರಗಳಿಂದ ಪತಿ ತೀರಿ ಹೋದಾಗ ಇದ್ದ ಆಸ್ತಿಯೂ ಕೈಬಿಟ್ಟು ಹೋಯಿತು. ನಂತರ ತವರಿಗೆ ವಾಪಸಾಗಿ ಸ್ವಂತ ದುಡಿಮೆಯಿಂದ, ಸ್ವಾಭಿಮಾನಿಯಾಗಿ ಬದುಕಬೇಕೆಂದು ನಿರ್ಧರಿಸಿದ ಪ್ರೇಮಾ, ತಮ್ಮ ಬದುಕು ಕಂಡುಕೊಂಡಿದ್ದು ಮಾತ್ರ ಮೆಟ್ರೊಪಾಲಿಟನ್ ನಗರಿ ಬೆಂಗಳೂರಿನಲ್ಲಿ. ಈಗ ಟ್ರೈನಿಯಾಗಿ ಬಿ.ಎಂ.ಟಿ.ಸಿ.ಯಲ್ಲಿ ಕೆಲಸ ಮಾಡುತ್ತಿರುವುದರಿಂದ ವೇತನವೂ ಕೂಡ ಹೇಳಿಕೊಳ್ಳುವಂಥದ್ದಲ್ಲ. ನಗರದ ಪಿ.ಜಿ.ಯೊಂದರಲ್ಲಿ ವಾಸವಿರುವ ಇವರು ರಜೆಯನ್ನೂ ಪಡೆಯದೇ ಕೆಲಸ ಮಾಡುತ್ತಾರೆ. ಕಾರಣ ಇಷ್ಟೇ. ಪ್ರತಿದಿನ ದುಡಿದರೆ ಸಿಗುವ 60 ರೂಪಾಯಿ ಪ್ರೋತ್ಸಾಹ ಧನ ಹಾಗೂ ಊರಿಗೆ ಹೋದರೆ ಒಟ್ಟಿಗೆ ಉಳಿಕೆ ರಜೆಗಳನ್ನು ಹಾಕಬಹುದು ಎಂಬ ಉದ್ದೇಶದಿಂದ.‘ದಿನಾಲೂ ಬಸ್ ಓಡ್ಸೂದರಿಂದ ಗೇರ್ ಹಾಕಿ ಹಾಕಿ ಕೈಯೆಲ್ಲ ನೋವು ಆಗ್ತದ್ರಿ. ಆದರೂ ಏನೂ ಮಾಡಾನಿಲ್ಲ. ಬರೂ ಮೂರೂವರಿ ಸಾವಿರದಾಗ, ಮೂರು ಸಾವಿರ ಪಿ.ಜಿ.ಗೆ ಹೋಗ್ತದ. ಅದಕ್ಕ.. ದಿನಾ ಡ್ಯೂಟಿ ಮಾಡೂದ್ರಿಂದ ಸಿಗೂ ರೊಕ್ಕದಾಗ ಮೇಲ್ಖರ್ಚ್ ಹೋಗ್ತೈತಂತ ಮಾಡ್ತೀನಿ. ನನ್ನ ಮಗಾ ರಾಕೇಶ ನಾಳೆ ದೊಡ್ಡವನಾಗಿಂದ ಮಿಲಿಟರಿ ಸೇರಬೇಕಂತ ಮಾಡ್ಯಾನ. ಒಮ್ಮೊಮ್ಮಿ ಸಿನಿಮಾ ಹೀರೋನು ಅಕ್ಕೀನಿ ಅಂತಾನ್ನೋಡ್ರೀ... ಅದನ್ನ ಅಂವಗ.. ಬಿಟ್ಟೀನಿ’ ಎಂಬಂತಹ ಈ ಯುವತಿಯ ಬೆಳಗಾವಿಯ ಶೈಲಿಯ ಭಾಷೆಯಲ್ಲಿ ಆಕೆ ಕಂಡ ಕನಸುಗಳು ರೂಪ ಪಡೆಯುತ್ತವೆ.  ಕೆಲ ವರ್ಷಗಳಿಂದ ನಗರದಲ್ಲಿದ್ದರೂ ಸಹ ಅವರ ಮೇಲೆ ಇಲ್ಲಿಯ ಭಾಷೆಯ ಪ್ರಭಾವ ಕಿಂಚಿತ್ತೂ ಆಗಿಲ್ಲ ಎಂಬುದೂ ಸೋಜಿಗವೇ.

ಅಧಿಕಾರಿಗಳ ಪ್ರೋತ್ಸಾಹವೂ ಕಾರಣ...

ಪ್ರೇಮಾ ಅವರ ಈ ಯಶಸ್ಸಿಗೆ ಸಾಕಷ್ಟು ಪ್ರೋತ್ಸಾಹ ನೀಡಿದವರು ಬಿಎಂಟಿಸಿಯ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳು. ಈ ಕುರಿತು  ಪ್ರಜಾವಾಣಿಯ ‘ಭೂಮಿಕಾ’ದೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡ ಡಿಪೊ ವ್ಯವಸ್ಥಾಪಕ ಎಂ.ವೆಂಕಟೇಶ್, ‘ಅವರು ಆಸೆಪಟ್ಟಂತೆಯೇ ಡ್ರೈವಿಂಗ್ ಡ್ಯೂಟಿ ಕೊಡುತ್ತಿದ್ದೇವೆ. ಅಗತ್ಯ ಪ್ರೋತ್ಸಾಹವನ್ನು ನಾವು ನೀಡುತ್ತೇವೆ. ಅವರು ಬಸ್ ಓಡಿಸಲು ಸಮರ್ಥರಿದ್ದಾರೆ. ನಮ್ಮ ಡಿಪೊದಲ್ಲಿ ಇಂಥವರು ಇರುವುದು ನಮಗೂ ಹೆಮ್ಮೆ’ ಎಂದು ಶ್ಲಾಘಿಸಿದರು.ಚಾಲನಾ ತರಬೇತಿ ನೀಡಿದ ಅಧಿಕಾರಿಗಳಾದ ಮರಿಯಪ್ಪ ಹಾಗೂ ಜಯರಾಮು, ‘ಬಹಳ ಬೇಗನೇ ಚಾಲನೆ ಕಲಿತುಕೊಂಡ ಪ್ರೇಮಾ ಎಲೆಕ್ಟ್ರಾನಿಕ್ ಸಿಟಿ-ಬ್ರಿಗೇಡ್ ರೋಡ್ ಮಧ್ಯೆ ಓಡುವ ‘ಬಿಗ್ 10’ ವಾಹನವನ್ನೂ ಹಿಂಜರಿಕೆಯಿಲ್ಲದೇ ಚಾಲನೆ ಮಾಡಿದ್ದಾರೆ’ ಎನ್ನುತ್ತಾರೆ.ಪವರ್ ಸ್ಟಿಯರಿಂಗ್ ಇಲ್ಲದ ಬಸ್‌ಗಳನ್ನು ಓಡಿಸುತ್ತಿರುವ ಅವರ ಕೆಲಸ ಅತ್ಯಂತ ಶ್ರಮದ್ದು. ಆದರೂ ಯಶಸ್ವಿಯಾಗಿದ್ದಾರೆ. ಅವರ ಪ್ರಯತ್ನ, ನಮ್ಮ ಪ್ರೋತ್ಸಾಹ ಅಷ್ಟೇ’ ಎಂದರು.ಪ್ರಯಾಣಿಕರ ನೆಚ್ಚಿನ ಗೆಳತಿ...

ದಿನನಿತ್ಯ ನೂರಾರು ಮಂದಿ ವಕೀಲರು ಸಿಟಿ ಸಿವಿಲ್ ಕೋರ್ಟ್-ನ್ಯಾಯದೇಗುಲಕ್ಕೆ ಇವರ ಬಸ್‌ನಲ್ಲಿ ಪ್ರಯಾಣ ಮಾಡುತ್ತಾರೆ.

ಅವರ ಮನೆ ಮಗಳೇನೋ ಎನ್ನುವಷ್ಟು ಅವರೊಂದಿಗೆ ಬೆರೆತಿದ್ದಾರೆ. ತಮ್ಮ ಕರ್ತವ್ಯದ ಮಧ್ಯೆಯೂ ಅವರ ಕಷ್ಟ ಸುಖಗಳನ್ನು ವಿಚಾರಿಸುವ ಪ್ರೇಮಾ ಕಾಳಜಿ ವಕೀಲರಿಗೆ ಇಷ್ಟವಾಗಿದೆ. ಸರಿಯಾದ ಸಮಯಕ್ಕೆ ತಲುಪಿಸುವ ಹಾಗೂ ಸುರಕ್ಷಿತವಾಗಿ ಕರೆದೊಯ್ಯುವ ಇವರ ಕರ್ತವ್ಯಪರತೆ ಅವರಿಗೆ ಇಷ್ಟವಾದ ಸಂಗತಿಗಳಲ್ಲೊಂದು. ನಿಯಮಿತವಾಗಿ ಈ ಮಿನಿಬಸ್‌ನಲ್ಲಿ ಪ್ರಯಾಣಿಸುತ್ತಿರುವ ವಕೀಲೆ ಶಕುಂತಲಾ ರಾಚೋಟಿಮಠ ಒಂದೇ ಮಾತಿನಲ್ಲಿ ತಮ್ಮ ಅಭಿಪ್ರಾಯ ತಿಳಿಸಿದರು.‘ಈ ಯುವತಿ ಪುರುಷ ಚಾಲಕರಿಗಿಂತ ಎಷ್ಟೋ ಪಾಲು ಉತ್ತಮ’.  ‘ನಾವು ದಿನಾಲೂ ನಮ್ಮ ಕೇಸ್‌ಗಳಿಗಾಗಿ ಅಲ್ಲಿಂದಿಲ್ಲಿಗೆ ಪ್ರಯಾಣಿಸುತ್ತೇವೆ. ಸದಾ ಕಕ್ಕುಲಾತಿಯಿಂದ ಪ್ರಯಾಣಿಕರೊಂದಿಗೆ ವ್ಯವಹರಿಸುವ ಇವರು ನಮಗೆ ಆಪ್ತರಾಗಿದ್ದಾರೆ’ ಎಂದು ಇನ್ನೊಬ್ಬ ವಕೀಲೆ ಗೀತಾ ನುಡಿದರು.‘ಇಲ್ಲಿ ಸಾಕಷ್ಟು ರಿಸ್ಕ್ ಇರೂದ್ರಿಂದ ಸಾರಥಿ ಗಾಡಿಗೆ ಕರ್ಯಾಕ್ಹತ್ತಾರ. ಅಲ್ಯಾದ್ರ ಸ್ವಲ್ಪ ಆರಾಮ ಇರಬಹುದು. ಆದರ ಇಲ್ಲಿ ಸಿಗುವಂಗ ಇನ್ಸೆಂಟಿವ್ ಸಿಗೂದಿಲ್ಲ. ಅದಕ್ಕ ಕಷ್ಟ ಆದ್ರೂ ಸಹಿಸಿಕೊಂಡು ಓಡಿಸ್ತೀನ್ರಿ. ಗಾಡಿ ನಡೆಸೂ ಮುಂದ ಸಣ್ಣ ಸಣ್ಣ ಹುಡುಗ್ರು ಓಡಿ ಬಂದು, ‘ಆಂಟಿ ನೀವು ಗಾಡಿ ಓಡಿಸ್ತೀರಿ?’ ಅಂತ ಹಿರಿ ಹಿರಿ ಹಿಗ್ಗಿ ಥ್ಯಾಂಕ್ಸ್ ಕೊಡ್ತಾರ. ಅದಕ್ಕಿಂತ ಖುಷಿ ಇನ್ನೇನ ಬೇಕು ಹೇಳ್ರೀ’ ಎಂದು ಮರು ಪ್ರಶ್ನಿಸುತ್ತಾರೆ.‘ಪವರ್ ಸ್ಟಿಯರಿಂಗ್ ಬಸ್ ಕೊಟ್ರ ಇನ್ನೂ ಅನುಕೂಲ ಆಗ್ತದ. ವೋಲ್ವೊ ಬಸ್ಸನ್ನೂ ಓಡಿಸಬೇಕಂತ ಆಸೆ ಅಯ್ತಿ. ನೋಡಬೇಕ್ರಿ ಮುಂದ’ ಎಂದು ತಮ್ಮ ಆಸೆಯನ್ನು ಹಂಚಿ ಕೊಳ್ಳುತ್ತಾರೆ ಗೋಕಾಕ ಕರದಂಟಿನಂತೆಯೇ ಸಿಹಿ ಯಾದ ಮಾತುಗಳಾನ್ನುಡುವ ಪ್ರೇಮಾ ನಡಬಟ್ಟಿ.ದಾರಿಯುದ್ದಕ್ಕೂ ಹಲವು ಕಣ್ಣುಗಳು ಇವರ ಚಾಲನಾ ಕೌಶಲವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದವು. ಅದರಲ್ಲಿ ಮೆಚ್ಚುಗೆಯ ಕಣ್ಣುಗಳ ಸಂಖ್ಯೆಯೇ ಅಧಿಕ ಎಂಬುದು ಉಲ್ಲೇಖನೀಯ. ಅಂದಹಾಗೆ ಬರುವ ಮಾರ್ಚ್ 8ಕ್ಕೆ ಅಂತರರಾಷ್ಟ್ರೀಯ ಮಹಿಳಾ ದಿನಕ್ಕೆ 100 ವರ್ಷದ ಸಂಭ್ರಮ. ಸಮಾಜದ ಉನ್ನತಿಗೆ ತಮ್ಮ ಜೀವನ ತೇಯುವ, ತಾವಿದ್ದಲ್ಲಿ ಸಂತಸದ ವಾತಾವರಣ ತರುವ ಇಂಥ ಮಹಿಳೆಯರ ಸಂಖ್ಯೆ ಇನ್ನಷ್ಟು ಹೆಚ್ಚಲಿ...

ಡ್ರೈವರ್ ನಾಗರತ್ನ ಈಗ ಕಂಡಕ್ಟರ್

ಈ ಹಿಂದೆ ಬಿ.ಎಂ.ಟಿ.ಸಿ.ಯಲ್ಲಿ ನಾಗರತ್ನ ಎಂಬುವವರು ಬಸ್ ಚಾಲನೆ ಮಾಡುವ ಮೂಲಕ ಗಮನಸೆಳೆದಿದ್ದರು. ಮೆಜೆಸ್ಟಿಕ್‌ನಿಂದ ಜೆ.ಪಿ.ನಗರ ಮಾರ್ಗದಲ್ಲಿ ಬಸ್ ಓಡಿಸುತ್ತಿದ್ದರು.ಆದರೆ ಮೂರು ತಿಂಗಳ ಹಿಂದೆ ಚಾಲಕ ಹುದ್ದೆಗೆ ರಾಜೀನಾಮೆ ನೀಡಿ ಈಗ ನಿರ್ವಾಹಕಿಯಾಗಿ ಡಿಪೊ ನಂ 7ರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.‘ಇಷ್ಟಪಟ್ಟರೆ ಬೆಂಬಲ’

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಸರ್ಕಾರ ನಿಗದಿಪಡಿಸಿದ ಮೀಸಲಾತಿಯಂತೆ ಶೇ 33ರಷ್ಟು ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಮಹಿಳೆಯರು ಡ್ರೈವರ್ ಆಗಿ ಕೆಲಸ ಮಾಡಲು ಸಂಸ್ಥೆಯ ಮಟ್ಟದಲ್ಲಿ ವಿಶೇಷ ಉತ್ತೇಜನ ಎಂಬುದಿಲ್ಲವಾದರೂ, ಅವರು ಇಷ್ಟಪಟ್ಟು ಮಾಡಿದರೆ ನಾವು ಬೆಂಬಲಿಸುತ್ತೇವೆ. ಆದರೆ ಅವರ ಸಂಖ್ಯೆ ಶೇ 1ಕ್ಕಿಂತಲೂ ಕಡಿಮೆ.

- ಸೈಯದ್ ಜಮೀರ್ ಪಾಷ, ವ್ಯವಸ್ಥಾಪಕ ನಿರ್ದೇಶಕರು ಬಿಎಂಟಿಸಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.