ನಟಿಸಲು ಸಿದ್ಧ; ಮುಂಗಡ ಹಣ ತಕ್ಷಣ ಬೇಕು: ಅಂಬಿ ಷರತ್ತು!

ಮಂಗಳವಾರ, ಜೂಲೈ 16, 2019
25 °C

ನಟಿಸಲು ಸಿದ್ಧ; ಮುಂಗಡ ಹಣ ತಕ್ಷಣ ಬೇಕು: ಅಂಬಿ ಷರತ್ತು!

Published:
Updated:

ಬೆಂಗಳೂರು: `ಸಿನಿಮಾದಲ್ಲಿ ಅಧಿಕಾರಿಗಳ ವಿರುದ್ಧ ಗರ್ಜಿಸಿ ಬಡವರ ನೆರವಿಗೆ ಧಾವಿಸುವಂತೆಯೇ ನಿಜ ಜೀವನದಲ್ಲೂ ವಸತಿ ಸಚಿವ ಅಂಬರೀಷ್ ಅವರು ಅಸಹಾಯಕರ ಪಾಲಿಗೆ ನಾಯಕನಾಗಿ ಬರಬೇಕು' ಎನ್ನುವ ಸದಸ್ಯರ ಕೋರಿಕೆ ವಿಧಾನ ಪರಿಷತ್‌ನಲ್ಲಿ ಶುಕ್ರವಾರ ರಂಜನೀಯ ಪ್ರಸಂಗಕ್ಕೆ ಅನುವು ಮಾಡಿಕೊಟ್ಟಿತು.`ಗುಡಿಸಲುರಹಿತ ರಾಜ್ಯ ಮಾಡುವ ಕನಸು ಕಾಣುತ್ತಿರುವ ಅಂಬರೀಷ್, ಹೆಚ್ಚಿನ ಮನೆಗಳನ್ನು ನಿರ್ಮಿಸುವ ಮೂಲಕ ಆಧುನಿಕ ಕರ್ಣನ ಬಿರುದಿಗೆ ತಕ್ಕಂತೆ ನಡೆದುಕೊಳ್ಳಬೇಕು' ಎಂದು ಬಿಜೆಪಿಯ ಭಾನುಪ್ರಕಾಶ್ ಚರ್ಚೆಗೆ ನಾಂದಿ ಹಾಡಿದರು. `ನನಗೆ ಸಂಭಾಷಣೆ ಹೇಳಿ ಗೊತ್ತಿದೆಯೇ ಹೊರತು ಉತ್ತರ ಕೊಟ್ಟು ಗೊತ್ತಿಲ್ಲ. ಹೊರಗಿನಿಂದ ಇದನ್ನೆಲ್ಲ ನೋಡಲು ಚೆಂದ. ಒಳಗೆ ಬಂದು ಎದುರಿಗೆ ಕುಳಿತವರನ್ನು ನೋಡುತ್ತಾ ಉತ್ತರ ಕೊಡುವಾಗ ಹೆದರಿಕೆ ಆಗುತ್ತದೆ' ಎಂದು ಸಚಿವರು ಚಟಾಕಿ ಹಾರಿಸಿದರು. `ಬಡವರಿಗೆ ಮನೆ ಕಟ್ಟೋಣ, ಯಾರಿಗೂ ಚಿಂತೆ ಬೇಡ' ಎಂದೂ ಹೇಳಿದರು.ಅಷ್ಟರಲ್ಲಿ ಎದ್ದುನಿಂತ ಜೆಡಿಎಸ್‌ನ ಸಂದೇಶ ನಾಗರಾಜ್, `ನಾನು ನಿರ್ಮಿಸಿದ ಸಿನಿಮಾವೊಂದರಲ್ಲಿ ಅಂಬರೀಷ್ ನಾಯಕನಾಗಿದ್ದರು. ಗುಡಿಸಲು ವಾಸಿಗಳನ್ನು ಅಧಿಕಾರಿಗಳು ಒಕ್ಕಲೆಬ್ಬಿಸಲು ಬಂದಾಗ ಮಧ್ಯ ಪ್ರವೇಶಿಸಿದ ನಾಯಕ ಏಕಾಂಗಿಯಾಗಿ ಹೋರಾಟ ನಡೆಸಿ, ಬಡವರ ಸೂರನ್ನು ಉಳಿಸಿಕೊಟ್ಟರು. ಸಚಿವರಾಗಿಯೂ ಅವರು ಅದೇ ರೀತಿ ನಡೆದುಕೊಳ್ಳಬೇಕು' ಎಂದು ತಿಳಿಸಿದರು.`ಬಡವರಿಗೆ ಮನೆ ಕಟ್ಟಿಕೊಡುವ ಕುರಿತು ಯಾರಿಗೂ ಸಂಶಯ ಬೇಡ. ಸಂದೇಶ ನಾಗರಾಜ್ ಚಿತ್ರ ನಿರ್ಮಾಪಕರು. ಇನ್ನೊಂದು ಸಿನಿಮಾ ಮಾಡುವುದಾದರೆ ಅಭಿನಯಿಸಲು ನಾವು ತಯಾರು. ನಾಯಕನಾದ ನಾನು, ನಾಯಕಿಯಾದ ತಾರಾ ಮತ್ತು ಹಾಸ್ಯ ಪಾತ್ರಧಾರಿ ಉಮಾಶ್ರೀ ಎಲ್ಲರೂ ಇಲ್ಲಿಯೇ ಇದ್ದೇವೆ. ಆದರೆ ಮುಂಗಡ ಹಣ ಈಗಲೇ ಸಂದಾಯ ಮಾಡಬೇಕು' ಎಂದು ಅಂಬರೀಷ್ ಹೇಳಿದಾಗ ತಾರಾ, ಉಮಾಶ್ರೀ ಸೇರಿದಂತೆ ಇಡೀ ಸದನ ನಗೆಗಡಲಲ್ಲಿ ಮುಳುಗಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry