ಶನಿವಾರ, ಏಪ್ರಿಲ್ 17, 2021
31 °C

ನಡೆಯಲ್ಲಿ ಸ್ಪಷ್ಟತೆಯ ಕೊರತೆ: ಒಬಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಭಾರತ-ಪಾಕ್ ನಡುವಿನ ಸಂಬಂಧವನ್ನು ಗಮನಿಸಿದರೆ ಪಾಕಿಸ್ತಾನದ ನಡೆ ಅಂದುಕೊಂಡಷ್ಟು ಸರಳ ಮತ್ತು ಸ್ಪಷ್ಟವಾಗಿಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅಭಿಪ್ರಾಯಪಟ್ಟಿದ್ದಾರೆ.

ಅವರು ಅಮೆರಿಕದ ಕಾಂಗ್ರೆಸ್‌ಗೆ (ಸಂಸತ್) ಸಲ್ಲಿಸಿರುವ ಸಾಂಪ್ರದಾಯಿಕ ವರದಿಯಲ್ಲಿ ಈ ಕುರಿತು ಪ್ರಸ್ತಾಪಿಸಿದ್ದಾರೆ. ಇದರಲ್ಲಿ ಅವರು ಪಾಕಿಸ್ತಾನದ ಕುರಿತೇ ವಿಶೇಷವಾಗಿ 38 ಪುಟಗಳ ಸುದೀರ್ಘ ವರ್ಗೀಕೃತ ವಿವರಗಳನ್ನು ದಾಖಲಿಸಿದ್ದಾರೆ.

‘ಪ್ರಸ್ತುತ ಪಾಕ್‌ನಲ್ಲಿ ಆಂತರಿಕವಾಗಿ ಸಾಕಷ್ಟು ಬಂಡಾಯದ ಹೊಗೆ ಕಾಣುತ್ತಿದೆ. ಆದ್ದರಿಂದ ಆ ದೇಶ ಭಯೋತ್ಪಾದನೆ ವಿರುದ್ಧ ಸಮಗ್ರವಾಗಿ ಎಷ್ಟೇ ಹೋರಾಟ ನಡೆಸುತ್ತೇನೆ ಎಂದು ಹೇಳಿದರೂ ಅದಕ್ಕೆ ಪೂರಕ ವಾತಾವರಣವಿಲ್ಲ’ ಎಂದಿದ್ದಾರೆ.

‘ಆಂತರಿಕ ಬಂಡಾಯದ ಕಾರಣ ಪಾಕ್‌ಗೆ ಭಾರತದ ಬಗ್ಗೆ ಸ್ಪಷ್ಟ ನಿಲುವು ತಳೆಯಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಬಂಡಾಯದ ಚಟುವಟಿಕೆಗಳಿಗೆ ಬೆಂಬಲವಾಗಿ ನಿಂತಿರುವ ಗುಂಪುಗಳ ವಿರುದ್ಧ ಹೋರಾಡಬೇಕಾದ ಭದ್ರತಾ ಪಡೆಗಳು ಕೂಡಾ ಪಾರದರ್ಶಕವಾಗಿಲ್ಲ. ಅವೂ ಸಹ ಒಂದು ರೀತಿಯಲ್ಲಿ ಕೆಸರಿನಲ್ಲಿ ಸಿಲುಕಿಕೊಂಡ ಹಾಗೆ ವರ್ತಿಸುತ್ತಿವೆ’ ಎಂದು ಅವರು ಹೇಳಿದ್ದಾರೆ.

‘ಪಾಕಿಸ್ತಾನದ ಖೈಬರ್, ಪಖ್ತೂನ್‌ವಾಹ್ ಮತ್ತು ಕೆಲವು ಬುಡಕಟ್ಟು ಪ್ರದೇಶದಲ್ಲಿ ಕಳೆದ ವರ್ಷ ಉಂಟಾದ ಪ್ರವಾಹ ಮತ್ತು ಆ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯನ್ನು ಗಮನಿಸಿದರೆ ಪಾಕ್‌ನಲ್ಲಿರುವ ಬಂಡಾಯದ ಗಾಳಿ ಸ್ಪಷ್ಟವಾಗುತ್ತದೆ’ ಎಂದು ಬರಾಕ್ ಒಬಾಮ ಅವರು     ಹೇಳಿದ್ದಾರೆ.

‘ನೆರೆ ಹಾವಳಿ ಪೀಡಿತ ಪ್ರದೇಶಗಳಲ್ಲಿ ಉಗ್ರರ ಚಟುವಟಿಕೆಗಳು ಸಾಕಷ್ಟು ಪ್ರಮಾಣದಲ್ಲಿ ಇತ್ತು. ಇದನ್ನು ಹತ್ತಿಕ್ಕಲು ಪಾಕ್ ಸರ್ಕಾರ ಕ್ರಮ ಕೈಗೊಂಡಿತ್ತಾದರೂ ಭದ್ರತಾ ಪಡೆಗಳ ಕೊರತೆ ಮತ್ತು ಆಡಳಿತ ವೈಫಲ್ಯಗಳು ಎದ್ದು ಕಾಣುತ್ತಿದ್ದವು. ಇದರಿಂದ ಉಗ್ರರು ಈ ಪ್ರಾಂತ್ಯಗಳಲ್ಲಿ ತಮ್ಮ ನೆಲೆಗಳನ್ನು ಸಾಕಷ್ಟು ಭದ್ರ ಮಾಡಿಕೊಂಡರು’ ಎಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.