ಶುಕ್ರವಾರ, ಮೇ 20, 2022
21 °C
ನಾಲ್ಕು ವರ್ಷದ ಯೋಜನೆ; ಅಧಿಕಾರಿಗಳ ನಿರ್ಲಕ್ಷ್ಯ, ಸುಗಮ ಸಂಚಾರಕ್ಕೆ ಅಡ್ಡಿ

ನನೆಗುದಿಗೆ ಬಿದ್ದ ಬೈಪಾಸ್ ರಸ್ತೆ ನಿರ್ಮಾಣ ಕಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿಯೇ ಹೊಸದುರ್ಗ ಪಟ್ಟಣ ವೇಗವಾಗಿ ಬೆಳೆಯುತ್ತಿದೆ. ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾಹನ ದಟ್ಟಣೆ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗ ಲೆಂದು ಪಟ್ಟಣದ ಹೊರ ವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಆದರೆ, ಇಂದಿಗೂ ಅನುಷ್ಠಾನಗೊಂಡಿಲ್ಲ.4 ವರ್ಷಗಳ ಹಿಂದೆಯೇ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಂಭವಿಸುತ್ತಿರುವ ಹೆಚ್ಚಿನ ಅಪಘಾತಗಳನ್ನು ತಪ್ಪಿಸಬೇಕೆಂಬ ಉದ್ದೇಶದಿಂದ, ಹೊಳಲ್ಕೆರೆ ರಸ್ತೆಯ ಯಲ್ಲಕಪ್ಪನಹಟ್ಟಿಯಿಂದ ಹಿರಿಯೂರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವಂತೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸೂಕ್ತ ಸ್ಥಳದ ಸಮಿಕ್ಷಾ ಕಾರ್ಯ ನಡೆಸಿ, ಆ ಸಂದರ್ಭದಲ್ಲಿಯೇ ಜೆಸಿಬಿಯಿಂದ ಕಾಮಗಾರಿ ಆರಂಭಿಸಿದ್ದು, ಸಾರ್ವಜನಿಕರಲ್ಲಿ ಹರ್ಷವನ್ನುಂಟು ಮಾಡಿತ್ತು.ಆದರೆ, ಆರಂಭವಾದ ಕಾಮಗಾರಿ ಅನೇಕ ಕಾರಣಗಳಿಗಾಗಿ ಸ್ವಲ್ಪ ದಿನದಲ್ಲಿಯೇ ಸ್ಥಗಿತವಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ 4 ವರ್ಷ ಕಳೆದರೂ ಪೂರ್ಣಗೊಳ್ಳದೇ ಇರುವುದು ಸಾರ್ವಜನಿಕರಿಗೆ ನಿರಾಸೆಯಾಗಿದೆ. ಪಟ್ಟಣದ ಮುಖ್ಯ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿ ರುವುದು ಚಾಲಕರಿಗೆ ಆತಂಕ ತಂದಿದೆ.ಈ ಬೈಪಾಸ್ ರಸ್ತೆ ನಿರ್ಮಾಣದಿಂದ ಹೊಳಲ್ಕೆರೆ ಮಾರ್ಗದಿಂದ ಹಿರಿಯೂರು, ಹುಳಿಯಾರು, ಬೆಂಗಳೂರಿನ ಕಡೆಗೆ ಹೋಗುವ  ಹಾಗೂ ಹುಳಿಯಾರು, ತಿಪಟೂರು, ಚಿಕ್ಕನಾಯಕನಹಳ್ಳಿಯಿಂದ ಹೊಸದುರ್ಗ ಮಾರ್ಗವಾಗಿ ದಾವಣಗೆರೆ ಮತ್ತು ಚಿತ್ರದುರ್ಗ ಕಡೆಗೆ ಹೋಗುವ ವಾಹನಗಳು ಪಟ್ಟಣದ ಒಳಗಡೆ ಪ್ರವೇಶವಾಗದಂತೆ ಸಂಚರಿಸಲು ಹಾಗೆಯೇ ಪಟ್ಟಣದ ಕೃಷಿ ಮಾರುಕಟ್ಟೆಗೆ ಆಗಮಿಸುವ ವಾಹನಗಳ ಸಂಚಾರಕ್ಕೆ ಸಹಕಾರಿಯಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.ಹಾಗಾಗಿ ಈ ಬಗ್ಗೆ ಅತೀ ಶೀಘ್ರವಾಗಿ ಸಂಬಂಧಪಟ್ಟ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ, ಬೈ ಪಾಸ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಂತಾಗಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.