ಶುಕ್ರವಾರ, ಮೇ 7, 2021
25 °C

ನನ್ನನ್ನೂ ಜೈಲಿಗೆ ಕಳುಹಿಸಿ- ಅಡ್ವಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವೋಟಿಗಾಗಿ ನೋಟು ಹಗರಣದಲ್ಲಿ ಭ್ರಷ್ಟಾಚಾರದ ವಿರುದ್ಧ `ದನಿ ಎತ್ತಿದ~ ಪಕ್ಷದ ಇಬ್ಬರು ಮಾಜಿ ಸಂಸದರನ್ನು ಜೈಲಿಗೆ ಕಳುಹಿಸಿರುವ ಬಗ್ಗೆ ಬಿಜೆಪಿ ಗುರುವಾರ ತೀವ್ರವಾಗಿ ವಿರೋಧಿಸಿದೆ. ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಮಾತನಾಡಿದ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಅವರಿಬ್ಬರು ದೋಷಿಗಳು ಎಂದಾದರೆ ತಮ್ಮನ್ನೂ ಜೈಲಿಗೆ ಕಳುಹಿಸಬೇಕು ಎಂದು ಹೇಳಿದರು.ಕಾಂಗ್ರೆಸ್ ಸದಸ್ಯರು ಪದೇ ಪದೇ ಅಡ್ಡಿ ಪಡಿಸುತ್ತಿದ್ದರೂ ಬಿಜೆಪಿ ಸಂಸದೀಯ ಪಕ್ಷದ ನಾಯಕ ಅಡ್ವಾಣಿ ತಮ್ಮ ಮಾತು ಮುಂದುವರಿಸಿ, 2008ರ ಜುಲೈ 22ರಂದು ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಪಕ್ಷದ ಫಗ್ಗಾನ್ ಸಿಂಗ್ ಕುಲಸ್ತೆ ಮತ್ತು ಮಹಾವೀರ್ ಭಗೊರ ಅವರು ನಡವಳಿಕೆ ಸರಿಯಾಗೇ ಇತ್ತು ಎಂದು ಬಲವಾಗಿ ಸಮರ್ಥಿಸಿಕೊಂಡರು.`ಸಾಂವಿಧಾನಿಕ ನಿಯಮಾವಳಿಯಂತೆಯೇ ನಡೆದುಕೊಳ್ಳಲಾಗಿದೆ. ಏನಾದರೂ ತಪ್ಪಾಗಿದ್ದರೆ ನಾನು ಅವರನ್ನು ತಡೆಯುತ್ತಿದ್ದೆ~ ಎಂದು ಎನ್‌ಡಿಎ ಕಾರ್ಯಾಧ್ಯಕ್ಷರೂ ಆಗಿರುವ ಅಡ್ವಾಣಿ ನುಡಿದರು. ಸಂಸತ್ತಿನ ಮುಂಗಾರು ಅಧಿವೇಶನದ ಕಡೆಯ ದಿನವಾದ ಗುರುವಾರ  ವಿಷಯವನ್ನು ಪ್ರಸ್ತಾಪಿಸಿದ ಅಡ್ವಾಣಿ, ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಸರ್ಕಾರ `ಮತಗಳನ್ನು ಖರೀದಿಸಲು ಯತ್ನಿಸಿತ್ತು~ ಎಂಬುದು ಸಾಬೀತಾಗಿದೆ ಎಂದರು.`ವಿಷಯವನ್ನು ಪ್ರಾಮಾಣಿಕವಾಗಿ ಸದನದ ಗಮನಕ್ಕೆ ಅವರು ತಂದಿದ್ದಾರೆ. ಅವರು ಹಣವನ್ನೂ ಪ್ರದರ್ಶಿಸಿದ್ದಾರೆ. ಆ ಸಮಯದಲ್ಲಿ ನಾನು ಪ್ರತಿಪಕ್ಷದ ನಾಯಕನಾಗಿದ್ದೆ ಮತ್ತು ವಾಸ್ತವಾಂಶ ನನಗೆ ಗೊತ್ತಿತ್ತು~ ಎಂದು ಹೇಳಿದರು.

` ಈ ಇಬ್ಬರು ಸದಸ್ಯರು ತಮಗೆ ನೀಡಿದ ಒಂದು ಕೋಟಿ ಹಣದ ಬಗ್ಗೆ ಸಂಸತ್ತಿನ ಗಮನಕ್ಕೆ ತರುವ ಮೂಲಕ ಪ್ರಜಾಪ್ರಭುತ್ವಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ~ ಎಂದೂ ಅವರು ಅಭಿಪ್ರಾಯ ಪಟ್ಟರು.`ಅಪ್ರಾಮಾಣಿಕತೆಯಿಂದ ಹಣ  ಪಡೆಯುವ~ ಮೂಲಕ ಸರ್ಕಾರಕ್ಕೆ ಮತ ಹಾಕಿದವರು ಇಲ್ಲಿ ಸಮಾಧಾನದಿಂದ ಕುಳಿತಿದ್ದಾರೆ. `ಆದರೆ ರಾಷ್ಟ್ರಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ನನ್ನ ಇಬ್ಬರು ಮಿತ್ರರು ಜೈಲಿನಲ್ಲಿದ್ದಾರೆ~ ಎಂದು ಅಡ್ವಾಣಿ ವಿಷಾದಿಸಿದರು.ಇದಕ್ಕೂ ಮೊದಲು ಸದನದಲ್ಲಿ ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ನೀಡದಿದ್ದರೆ ವಿಷಯವನ್ನು ಹೊರಗಡೆ ಪ್ರಸ್ತಾಪಿಸಬೇಕಾಗುತ್ತದೆ ಎಂದು ಅಡ್ವಾಣಿ ಬೆದರಿಕೆ ಹಾಕಿದಾಗ ಕಾಂಗ್ರೆಸ್ ಸದಸ್ಯರು ಅವರು ಮಾತನಾಡಲು ಅಡ್ಡಿ ಪಡಿಸಿದರು.ಗದ್ದಲ ಮುಂದುವರಿಯುತ್ತಿದ್ದಂತೆಯೇ ಸ್ಪೀಕರ್ ಮೀರಾಕುಮಾರ್ ಕಲಾಪವನ್ನು ಎರಡನೇ ಬಾರಿಗೆ ಮಧ್ಯಾಹ್ನ 12.55ರವರೆಗೆ ಮುಂದೂಡಿದರು.ಗದ್ದಲ, ಮುಂದೂಡಿಕೆ: ವೋಟಿಗಾಗಿ ನೋಟು ಹಗರಣ ಗುರುವಾರ ಸಂಸತ್ತಿನಲ್ಲಿ ಕೋಲಾಹಲ ಎಬ್ಬಿಸಿತು. ಇದರಿಂದಾಗಿ ಉಭಯ ಸದನಗಳ ಕಲಾಪವನ್ನು ಮುಂದೂಡಬೇಕಾಯಿತು.ಪ್ರಶ್ನೋತ್ತರ ಕಲಾಪವನ್ನು  ಮುಂದೂಡಿ ಹಗರಣದ ಕುರಿತಂತೆ ಚರ್ಚಿಸಲು ಅವಕಾಶ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿತು.

 

ಹಗರಣದಲ್ಲಿ ಇತ್ತೀಚೆಗೆ ಆಗಿರುವ ಬೆಳವಣಿಗೆಗಳನ್ನು ಚರ್ಚಿಸುವುದಕ್ಕಾಗಿ ಪ್ರಶ್ನೋತ್ತರ ಕಲಾಪವನ್ನು ಮುಂದೂಡುವಂತೆ ಬಿಜೆಪಿ ಸಂಸದೀಯ ಪಕ್ಷದ ಮುಖ್ಯಸ್ಥ ಎಲ್.ಕೆ ಅಡ್ವಾಣಿ ನೋಟಿಸ್ ನೀಡಿದ್ದರು. ಇದೇ ರೀತಿಯ ನೋಟಿಸ್ ಅನ್ನು ರಾಜ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ರವಿಶಂಕರ್ ಪ್ರಸಾದ್ ನೀಡಿದ್ದರು.ಗುರುವಾರ ಲೋಕಸಭಾ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಮೀರಾ ಕುಮಾರ್, ಸಾಕ್ಷರತಾ ದಿನ ಕುರಿತ ಹೇಳಿಕೆಯನ್ನು ಓದಿದ ನಂತರ ಪ್ರಶ್ನೋತ್ತರ ವೇಳೆಯ ಕಲಾಪವನ್ನು ಆರಂಭಿಸಿದರು.ಈ ಸಂದರ್ಭದಲ್ಲಿ ಅಡ್ವಾಣಿ ತಮಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಕೋರಿದರು. ಆದರೆ ಸ್ಪೀಕರ್ ಅದಕ್ಕೆ ಅವಕಾಶ ನೀಡದಿದ್ದಾಗ ಬಿಜೆಪಿ ಸದಸ್ಯರು ಮತ್ತು ಎನ್‌ಡಿಎ ಮೈತ್ರಿ ಪಕ್ಷ ಜೆಡಿಯುನ ಸದಸ್ಯರು ಪ್ರತಿಭಟಿಸಿದರು.ಇದೇ ವೇಳೆ ಸಚಿವರ ಪೀಠದ ಸದಸ್ಯರು ಪ್ರಶ್ನೋತ್ತರ ಕಲಾಪ ನಡೆಯಲೇ ಬೇಕು ಎಂದು ಒತ್ತಾಯಿಸಿದರು. ಸ್ಪೀಕರ್ ಮೀರಾ ಕುಮಾರ್ ಕೂಡ, `ಇಂದು ಅಧಿವೇಶನದ ಕೊನೆಯ ದಿನವಾದ್ದರಿಂದ ಪ್ರಶ್ನೋತ್ತರ ನಡೆಯಲೇ ಬೇಕು~ ಎಂದು ಹೇಳಿದರು. ಆದರೆ ಬಿಜೆಪಿ ಸದಸ್ಯರು ಇದಕ್ಕೆ ಒಪ್ಪದಿದ್ದಾಗ ಸ್ಪೀಕರ್ ಸದನವನ್ನು ಮಧ್ಯಾಹ್ನದವರೆಗೆ ಮುಂದೂಡಿದರು.ರಾಜ್ಯಸಭೆಯಲ್ಲೂ ಇದೇ ಪುನರಾವರ್ತನೆಯಾಯಿತು.ರಾಜ್ಯಸಭೆ ಕಲಾಪ ಆರಂಭಗೊಂಡ ತಕ್ಷಣ, ಪ್ರಶ್ನೋತ್ತರ ಕಲಾಪ ಮುಂದುದೂಡುವಂತೆ ತಾವು ನೋಟಿಸ್ ನೀಡಿರುವುದಾಗಿ ಬಿಜೆಪಿ ಸದಸ್ಯ ರವಿಶಂಕರ್ ಪ್ರಸಾದ್ ಹೇಳಿದರು. ಆದರೆ ಸಭಾಧ್ಯಕ್ಷ ಹಮೀದ್ ಅನ್ಸಾರಿ ಅದಕ್ಕೆ ಒಪ್ಪದೆ ಪ್ರಶ್ನೋತ್ತರ ಕಲಾಪವನ್ನು ಆರಂಭಿಸಿದರು.ಬಿಜೆಪಿ ಸದಸ್ಯರು ಇದನ್ನು ಪ್ರತಿಭಟಿಸಿ  ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದರು.  ಕಾಂಗ್ರೆಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಬಳಿ ತೆರಳಿ ಪ್ರಶ್ನೋತ್ತರ ಕಲಾಪ ನಡೆಸುವಂತೆ ಒತ್ತಾಯಿಸಿದರು. ಪರಿಸ್ಥಿತಿ ತಿಳಿಗೊಳ್ಳದೇ ಇದ್ದಾಗ ಅನ್ಸಾರಿ ಅವರು ಕಲಾಪವನ್ನು ಮಧ್ಯಾಹ್ನ 12.30ರ ವರೆಗೆ ಮುಂದೂಡಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.