ಬುಧವಾರ, ಜೂನ್ 16, 2021
27 °C

ನನ್ನೂರು ಬಯಲುಸೀಮೆ ಘಮದ ಸುತ್ತ...

ಸಿ.ಕೆ.ಮಹೇಂದ್ರ Updated:

ಅಕ್ಷರ ಗಾತ್ರ : | |

ತುಮಕೂರು ಶಬ್ದವೇ ಒಂದು ಥ್ರಿಲ್. ಸಮುದ್ರ ಮಟ್ಟಕ್ಕಿಂತ ಅತ್ಯಂತ ಎತ್ತರದಲ್ಲಿರುವ ದಕ್ಷಿಣ ಭಾರತದ `ಬಯಲುಸೀಮೆ~ ಎಂಬ ಹೆಗ್ಗಳಿಕೆ ಜೊತೆಗೆ `ಕಲ್ಪತರು~ ನಾಡೆಂಬ ಕಿರೀಟವೂ ಸೇರಿದೆ. ಜಿಲ್ಲೆಯನ್ನು ಹಿಡಿಯಾಗಿ ಹೇಳಲು ಅಸಾಧ್ಯ. ವೈವಿಧ್ಯಮಯ ಏಡೆಂಟಿಗಳಿರುವ ಇದನ್ನು ಶ್ರಮ ಜೀವಿಗಳ, ತಳ ಸಮುದಾಯಗಳ ನಾಡಾಗಿಯೂ ಗುರುತಿಸಲಾಗಿದೆ.ಗಂಗರು, ಚೋಳರು, ಹೊಯ್ಸಳರು, ವಿಜಯನಗರ, ಹೈದರಾಲಿ, ಟಿಪ್ಪು, ಮೈಸೂರು ಅರಸರ ಆಳ್ವಿಕೆ ಕಂಡಿರುವ ತುಮಕೂರು ತನ್ನದೇ ವಿಶಿಷ್ಟ ಛಾಪು ಹೊಂದು ನಿಂತಿದೆ. 2400ಕ್ಕೂ ಅಧಿಕ ಹಳ್ಳಿಗಳ ಜಿಲ್ಲೆಯಲ್ಲಿ 3 ಸಾವಿರಕ್ಕೂ ಹೆಚ್ಚು ಕೆರೆಗಳಿವೆ. ಅಂದರೆ ಇದೊಂದು ಕೆರೆಗಳ ನಾಡು!.ರಾಜ್ಯದಲ್ಲಿ ಅತಿ ಹೆಚ್ಚು ಕೆರೆ ಇರುವ ಜಿಲ್ಲೆ ನಮ್ಮದು!ರಾಜ್ಯದ ಬೇರೆಲ್ಲೂ ಕಾಣದ ಶೈವ ಪ್ರಕಾರದ ಕರಪಾಲ ಮೇಳ ನಮ್ಮ ಹೆಗ್ಗಳಿಕೆ. ಬಯಲಾಟ ಮೇಳ, ಸೋಮನ ಕುಣಿತ ನಮ್ಮ ವೈಶಿಷ್ಟ. ಶಿರಾ, ಮಧುಗಿರಿಯಲ್ಲಿರುವ ಕಾಡುಗೊಲ್ಲ ಬುಡಕಟ್ಟು ಜನಾಂಗದ ನಮ್ಮೂರು ಇದು. ಕಾಡುಗೊಲ್ಲ ಸಮುದಾಯದ ಬಗ್ಗೆ ಮೂರು ಸಂಶೋಧನಾ ಗ್ರಂಥಗಳಿಗೆ ಡಾಕ್ಟರೇಟ್ ಪದವಿ ಸಂದಿರುವುದು ಈ ಸಮುದಾಯಕ್ಕಿರುವ ವೈಶಿಷ್ಟತನ ಸಾರುತ್ತದೆ.ಕೇವಲ ಕಲ್ಪತರು ನಾಡಲ್ಲ. ರಾಗಿ, ಜೋಳ, ಬತ್ತ, ನೆಲಗಡಲೆ, ಹೂವು ಬೆಳೆಯುವ ನಾಡು ಹೌದು. ಸಾಂಪ್ರದಾಯಿಕ ಕೃಷಿ ವಿಧಾನಗಳಿಗೆ ಹೆಸರುವಾಸಿಯಾಗಿದ್ದ ಜಿಲ್ಲೆ.  ನೂರಾರು ವರ್ಷಗಳ ಹಿಂದೆಯೇ ನೀರಿನ ಪಾರಂಪರಿಕ ಸಂಗ್ರಹ `ತಲಪರಿಕೆ~ಯ ಕೊಡುಗೆ ಕೊಟ್ಟ ನಮ್ಮೂರು ಇದು.

 

ಮಧುಗಿರಿ ತಾಲ್ಲೂಕಿನ ಕೆಲ ಊರುಗಳಲ್ಲಿ  ತಲಪರಿಕೆ ಈಗಲೂ ಜೀವಂತ. ಸ್ಕಾಟ್‌ಲ್ಯಾಂಡ್‌ನ ಫ್ರಾನ್ಸಿಸ್ ಬುಕಾನನ್ ವರ್ಣಿಸಿರುವಂತೆ 200 ವರ್ಷಗಳ ಹಿಂದೆಯೇ ಮಧುಗಿರಿ ಉತ್ಕೃಷ್ಟ ಗೋಧಿ ಬೆಳೆಯುವ ನಾಡಾಗಿತ್ತು. ಮಧುಗಿರಿಯಲ್ಲಿ ಎತ್ತ ನೋಡಿದರತ್ತ ಗೋಧಿ ಬಯಲೇ ಕಾಣುತ್ತಿತ್ತು ಎಂದು ಬರೆಯುತ್ತಾನೆ ಬುಕಾನನ್.ಕೋಲಾರ, ಚಿಕ್ಕಬಳ್ಳಾಪುರ ಮೂಲಕ ಮಧುಗಿರಿ ಪ್ರವೇಶಿಸಿದ ಬುಕಾನನ್, ಶಿರಾ, ತುಮಕೂರು, ಗುಬ್ಬಿ, ನಿಟ್ಟೂರು, ಮಾಯಸಂದ್ರ ಮೂಲಕ ಶ್ರೀರಂಗಪಟ್ಟಣಕ್ಕೆ 200 ವರ್ಷಗಳ ಹಿಂದೆ ಪ್ರವಾಸ ತೆರಳಿದ್ದನು. ಪ್ರವಾಸದ ಸಂದರ್ಭ ಕಂಡ ತುಮಕೂರನ್ನು ಹಿಡಿಹಿಡಿಯಾಗಿ ವರ್ಣಿಸಿದ್ದಾನೆ. ತುಮಕೂರು ಎಂದರೆ ವಿಸ್ಮಯದ ಊರು ಎನ್ನುತ್ತಾನೆ.

 

ವೀಳ್ಯದೆಲೆ, ಅಡಿಕೆ ತೋಟಗಳ ಸಮೃದ್ಧಿಯನ್ನು ಮಲೆನಾಡಿನಂತೆ ವರ್ಣಿಸುತ್ತಾನೆ. ಪಶ್ಚಿಮಘಟ್ಟದಲ್ಲಿ ಕಾಣಬಹುದಾದಂಥ ನಿತ್ಯ ಹರಿದ್ವರ್ಣ ಕಾಡುಗಳಿಗೆ ಸಮನಾದ ಕಾಡು ನಾಮದ ಚಿಲುಮೆ, ದೇವರಾಯನದುರ್ಗದಲ್ಲಿ ಇತ್ತು ಎನ್ನುತ್ತಾನೆ.ಶಿಲಾಯುಗ ಪೂರ್ವದ ಇತಿಹಾಸದ ದಾಖಲೆ ಹೆಮ್ಮೆ ಜಿಲ್ಲೆಯ ಕಿಬ್ಬನಹಳ್ಳಿ ಕ್ರಾಸ್‌ಗಿದೆ. ಏಷ್ಯಾ ದಲ್ಲೇ ಅತ್ಯುತ್ತಮ ಗುಣಮಟ್ಟದ ಬಜೆ ಬೆಳೆಯುತ್ತಿದ್ದ ಬಿಮ್ಮು ಕೊರಟಗೆರೆ ತಾಲ್ಲೂಕಿನ ಅಗ್ರಹಾರ, ತರಟೆಗಿದೆ. ಜೈನರು, ಬೌದ್ಧರ ನಾಡಾಗಿತ್ತೆಂಬ ಕೀರ್ತಿ ನಿಟ್ಟೂರಿಗಿದೆ. ಅತ್ಯುತ್ತಮ ಗುಣಮಟ್ಟದ ಕಬ್ಬಿಣದ ಅದಿರು ನಿಕ್ಷೇಪ ಹೊತ್ತಿರುವ ಕೀರ್ತಿ ಅಮ್ಮಸಂದ್ರ, ಚಿಕ್ಕನಾಯಕನ ಹಳ್ಳಿಗಿದೆ. ಅರಳಗುಪ್ಪೆ, ಕೈದಾಳ ಗ್ರಾಮ ಹೊಯ್ಸಳ ಶಿಲ್ಪ ರಚನೆಯ ಉದಾಹರಣೆಯಾಗಿ ನಗುತ್ತಾ ನಿಂತಿವೆ.ಏಷ್ಯಾದ ಏಕೈಕ ಅತಿ ಎತ್ತದರ ಏಕಶಿಲಾ ಬೆಟ್ಟ ಹೊತ್ತಿರುವ ಮಧುಗಿರಿ; ನವಣೆ, ಆರ್ಕ, ಕೊರ‌್ಲು ಧಾನ್ಯಗಳನ್ನು ಉಳಿಸಿಕೊಂಡಿರುವ ಚಿಕ್ಕನಾಯಕನ ಹಳ್ಳಿ ಗೋಪಾಲಪುರ ಈ ಜಿಲ್ಲೆಯ ಹೆಮ್ಮೆ. ದೇವರಾಯನದುರ್ಗ, ಸಿದ್ಧರಬೆಟ್ಟ ಹೀಗೆ ಸಾಗುತ್ತದೆ ನಮ್ಮ ಹೆಮ್ಮೆಯ ಸಂಕೇತಗಳು. ಮಾಲಿ ಮುದ್ದಪ್ಪ, ಮುಕುಣಪ್ಪ, ಲಕ್ಕಪ್ಪ, ಬೈರಪಾಜಿ, ವೈ.ಕೆ.ರಾಮಯ್ಯ ಅವರಂತಹ ಮೌಲ್ವಿಕ ರಾಜಕಾರಣಿಗಳು ಇಲ್ಲಿದ್ದರು.

 

ಹಾಗಲವಾಡಿ ಚೆನ್ನಪ್ಪರಂಥ ಸಾಮಾಜಿಕ ಹೋರಾಟಗಾರರ ನಾಡು ಇದು. ಬಿ.ಮಲ್ಲಪ್ಪ ಅವರ `ಕಳೆದ ದಿನಗಳು~ ಹಾಗೂ ತೋವಿನಕೆರೆ ಸೀತಾರಾಮ ಜೋಯಿಸರ `ನೆನಪಿನ ಅಂಗಳ~ ಕೃತಿಗಳು ನಮ್ಮ ತುಮಕೂರಿನ ಹಿರಿಮೆ-ಗರಿಮೆಯನ್ನು ಎಳೆಎಳೆ ಯಾಗಿ ಬಿಚ್ಚಿಡುತ್ತವೆ.ಶಿರಾ, ಮಧುಗಿರಿ, ಕೊರಟಗೆರೆ, ಪಾವಗಡ ತಾಲ್ಲೂಕು ಬೆಟ್ಟಗುಡ್ಡಗಳ ನಾಡಾದರೆ, ಗುಬ್ಬಿ, ತುರುವೇರೆಕೆರೆ, ತಿಪಟೂರು ಅರೆ ಮಲೆನಾಡಿನ ಘಮ ಹೊತ್ತು ನಿಂತಿವೆ.ಜಿಲ್ಲೆ ತತ್ವಪದಕಾರರಿಗೆ ಹೆಸರುವಾಸಿ. ಗ್ರಾಮ ದೇವತೆಗಳ ನಾಡು. ಅದೇ ರೀತಿ ವೃಕ್ಷ ದೇವತೆಗಳ ನಾಡೂ ಹೌದು. ಆಲದಮಾರಮ್ಮ, ಹೊಂಗೆ ಮಾರಮ್ಮ, ಬಿದರಮ್ಮ, ಅತ್ತಿಮರದಮ್ಮ ಹೀಗಿವೆ ನಮ್ಮ ದೇವರು. ಚಿಕ್ಕನಾಯಕಹಳ್ಳಿ ತಾತಯ್ಯ ಸೌಹಾರ್ದತೆಗೆ ಹೆಸರುವಾಸಿ. ಶಿರಾದಲ್ಲಿರುವ ದರ್ಗಾದಲ್ಲಿ ಪೂಜೆ ಮಾಡುವವ ಗೊಲ್ಲ ಸಮುದಾಯದ ವ್ಯಕ್ತಿ. ಧಾರ್ಮಿಕ ಸೌಹಾರ್ದತೆ, ಸಹಿಷ್ಣುತೆಗೆ ಹೆಸರುವಾಸಿ ಈ ಊರು.ಜಿಲ್ಲೆಯ ಶ್ರಮಸಮುದಾಯಗಳ ಆಧ್ಯಾತ್ಮಿಕತೆಗೆ ದೊಡ್ಡ ಪರಂಪರೆಯನ್ನು ವಿಮರ್ಶಕ ಕೆ.ಜಿ.ನಾಗರಾಜಪ್ಪ ಬಿಡಿಸಿಟ್ಟಿದ್ದಾರೆ.ತುಮಕೂರಿನ ಎ.ಡಿ.ನಾಗೇಂದ್ರ ಅವರು ಏಷ್ಯಾ ಅಂತರರಾಷ್ಟ್ರೀಯ ಫುಟ್ಬಾಲ್ ಕ್ರೀಡಾ ತಂಡದ ನಾಯಕರಾಗಿದ್ದರು. ಸಾಹಿತ್ಯ ವಲಯದಲ್ಲಿ ತೀನಂಶ್ರೀ, ಬಿಎಂಶ್ರೀ, ಬೆಳ್ಳಾವಿ ನರಹರಿ ಶಾಸ್ತ್ರಿ ಅವರದು ಎದ್ದುಕಾಣುವ ಹೆಸರು. ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಇಲ್ಲಿನವರು.ನಾಕಟ ಕ್ಷೇತ್ರದಲ್ಲಿ ಗುಬ್ಬಿ ವೀರಣ್ಣ ಕೊಡುಗೆ ಅವಿಸ್ಮರಣೀಯ. ಬೆಳ್ಳಿ ತೆರೆಯಲ್ಲಿ ಬಾಲಕೃಷ್ಣ, ಮಂಜುಳಾ, ಜಗ್ಗೇಶ್, ಕೋಮುಲ್, ಅರ್ಜುನ್ ಸರ್ಜಾ ಹೆಸರು ಜನಜನಿತ. ಸಂಗೀತದಲ್ಲಿ ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರದ ಚಿ.ಉದಯಶಂಕರ್ ಹೆಸರು ದಾಖಲೆಗಳಲ್ಲಿ ಉಳಿದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.