ಶನಿವಾರ, ಮೇ 15, 2021
24 °C
ಪಂಚರಂಗಿ

`ನನ್ನೊಳಗಿನ ನಟನ ನಾಶ ಮಾಡಿದ ಕುಡಿತ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ನನ್ನೊಳಗಿನ ನಟನ ನಾಶ ಮಾಡಿದ ಕುಡಿತ'

`ಕುಡಿತ ಎಂಬ ಚಟಕ್ಕೆ ಬಲಿಯಾದ ಕ್ಷಣವೇ ನಾನು ನನ್ನೊಳಗಿನ ನಟನನ್ನು ಕಳೆದುಕೊಂಡೆ. ಅದರಿಂದ ವೃತ್ತಿ ಜೀವನದಲ್ಲಿ ಮತ್ತಷ್ಟು ಎತ್ತರಕ್ಕೆ ಏರಲು ಸಾಧ್ಯವಾಗಲೇ ಇಲ್ಲ' ಎಂದು, ಒಂದು ಕಾಲದ ಆ್ಯಕ್ಷನ್ ಕಿಂಗ್ ಧರ್ಮೇಂದ್ರ ಬೇಸರದಿಂದ ನುಡಿದಿದ್ದಾರೆ. 77ರ ಇಳಿ ವಯಸ್ಸಿನಲ್ಲೂ ಅದೇ ಹುಮ್ಮಸ್ಸಿನಲ್ಲಿರುವ ಧರ್ಮೇಂದ್ರ ತಮ್ಮ ಮಕ್ಕಳೊಂದಿಗೆ ಮತ್ತೊಮ್ಮೆ ಬಣ್ಣ ಹಚ್ಚಿದ್ದು `ಈಗ ನನಗೆ ಸಿನಿಮಾ ನಿರ್ಮಾಣ ಕುರಿತು ಅರ್ಥವಾಗುತ್ತಿದೆ ಹಾಗೂ ಅದನ್ನು ಗಂಭೀರವಾಗಿ ಪರಿಗಣಿಸಿದ್ದೇನೆ' ಎಂದಿದ್ದಾರೆ.`ಈಗ ನಾನು ಕುಡಿತವನ್ನು ಬಿಟ್ಟಿದ್ದೇನೆ. ನಟನಾಗಿ ಎತ್ತರಕ್ಕೆ ಏರಬೇಕಾದ ಕಾಲದಲ್ಲಿ ಕುಡಿತದ ಚಟದಿಂದ ಜೀವನ ಹಾಳು ಮಾಡಿಕೊಂಡೆ. ಮಾನವೀಯತೆಯಲ್ಲಿ ಅಪಾರ ನಂಬಿಕೆ ಇಟ್ಟಿರುವ ನನಗೆ ಸಿನಿಮಾ ನಿರ್ಮಾಣದ ಹಿಂದಿನ ವ್ಯವಹಾರವೂ ಈಗ ಸಿದ್ಧಿಸಿದೆ. ನಾನು ಹಾಗೂ ನನ್ನ ಇಬ್ಬರು ಮಕ್ಕಳು ಸೇರಿ `ಯಮ್ಲಾ ಪಗ್ಲಾ ದಿವಾನಾ 2' ಚಿತ್ರಕ್ಕಾಗಿ ಸಾಕಷ್ಟು ಕಷ್ಟಪಟ್ಟಿದ್ದೇವೆ. ಇದರ ಪ್ರಚಾರಕ್ಕೆ ಯಾವ ತೊಡಕೂ ಆಗದಂತೆ ಎಚ್ಚರವಹಿಸಿದ್ದೇವೆ' ಎಂದು ಧರ್ಮೇಂದ್ರ ಹೇಳಿದ್ದಾರೆ. ಮಿತಿಮೀರಿದ ಕುಡಿತದ ಚಟದಿಂದ ಆರೋಗ್ಯ ಹದಗೆಟ್ಟಿದ್ದರಿಂದ ಧರ್ಮೇಂದ್ರ 2011ರಲ್ಲಿ ಮದ್ಯ ಸೇವನೆ ತ್ಯಜಿಸಿದರು.ತಮ್ಮ ಈ ನೂತನ ಚಿತ್ರದ ಕುರಿತು ಮಾತನಾಡಿರುವ ಧರ್ಮೇಂದ್ರ, `ಸನ್ನಿ ನಿರ್ವಹಿಸಿದ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ನನಗಿತ್ತು. ಏಕೆಂದರೆ ಸನ್ನಿ ಎದುರು ಸುಂದರ ನಟಿಯೊಬ್ಬಳು ನಟಿಸಿದ್ದಾಳೆ. ಆಕೆಯೊಂದಿಗೆ ರೊಮ್ಯಾನ್ಸ್ ದೃಶ್ಯಗಳಲ್ಲಿ ಪಾಲ್ಗೊಳ್ಳಬೇಕೆಂಬ ಬಯಕೆ ಮನಸ್ಸಿನಲ್ಲಿ ಮೂಡಿತ್ತು' ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಸನ್ನಿ ದೇವಲ್‌ಗಾಗಿ ಸಾಕಷ್ಟು ಹುಡುಗಿಯರ ಆಡಿಷನ್ ನಡೆದಿತ್ತು.ಅಂತಿಮವಾಗಿ ಕ್ರಿಸ್ಟಿನಾ ಅಖೀವಾ ಆಯ್ಕೆಯಾದರು. ಆಕೆಯ ಸೌಂದರ್ಯಕ್ಕೆ ಮಾರು ಹೋಗಿರುವ ಧರ್ಮೇಂದ್ರ ಅವರಿಗೆ ತಮ್ಮ ಮಗ ಸನ್ನಿ ಮೇಲೆಯೇ ಹೊಟ್ಟೆಕಿಚ್ಚು ಆಗುತ್ತಿದೆಯಂತೆ. `ಯಮ್ಲಾ ಪಗ್ಲಾ...' ಸರಣಿ ಸಿನಿಮಾಗಳಲ್ಲಿ ಎರಡನೇ ಅವತರಣಿಕೆ ಬಿಡುಗಡೆಗೂ ಮುನ್ನವೇ ಧರ್ಮೇಂದ್ರ ಚಿತ್ರದ ಮೂರನೇ ಅವತರಣಿಕೆಯ ಸಾಧ್ಯತೆ ಕುರಿತು ಚಿಂತನೆ ನಡೆಸಿದ್ದಾರೆ. ಎರಡನೇ ಆವೃತ್ತಿಯ ಯಶಸ್ಸನ್ನು ಆಧರಿಸಿ ಮೂರನೇ ಭಾಗದ ಕುರಿತು ಯೋಜನೆ ರೂಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.