ಶನಿವಾರ, ಫೆಬ್ರವರಿ 27, 2021
20 °C
ಎಫ್‌ಕೆಸಿಸಿಐನಲ್ಲಿ ಸಭೆಯಲ್ಲಿ ಮೆಟ್ರೊ ವಿಳಂಬಕ್ಕೆ ಕಾರಣಗಳ ಪಟ್ಟಿ

ನಮ್ಮ ಕಷ್ಟ ನಮಗೇ ಗೊತ್ತು: ಖರೋಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ಕಷ್ಟ ನಮಗೇ ಗೊತ್ತು: ಖರೋಲ

ಬೆಂಗಳೂರು: ‘ಮೆಟ್ರೊ ಯೋಜನೆ ಪೂರ್ಣಗೊಳ್ಳುವುದು ತಡವಾಗುತ್ತಿದೆ. ಡೆಡ್‌ಲೈನ್‌ಗಳು ಮತ್ತೆ ಮತ್ತೆ ಮಿಸ್‌ ಆಗ್ತಾ ಇವೆ ಎಂದು ನೀವು ದೂರುತ್ತೀರಿ. ನಮ್ಮ ಕಷ್ಟ ನಮಗೇ ಗೊತ್ತು. ಮೆಟ್ರೊ ಯೋಜನೆ ಎಂಬುದು ಸುಲಭದ ಕೆಲಸ ಅಲ್ಲ; ಬಹಳ ಕಷ್ಟದ ಕೆಲಸವಿದು’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ ಹೇಳಿದರು.ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಲ್ಲಿ (ಎಫ್‌ಕೆಸಿಸಿಐ) ‘ಮೆಟ್ರೊದ ಮೊದಲನೇ ಹಂತ ಮತ್ತು ಎರಡನೇ ಹಂತದ ಸ್ಥಿತಿಗತಿ’ ಕುರಿತು ಮಾತನಾಡಿದ ಅವರು ಯೋಜನೆಯ ವಿಳಂಬಕ್ಕೆ ಕಾರಣವಾದ ಅಂಶಗಳ ಪಟ್ಟಿಯನ್ನೇ ಉದ್ಯಮಿಗಳ ಮುಂದೆ ಇಟ್ಟರು.‘ಯೋಜನೆಯ ತಯಾರಿ ಹಂತದಲ್ಲೇ ಸಮಸ್ಯೆಗಳು ಪ್ರಾರಂಭವಾಗಿವೆ. ಮೊದ ಮೊದಲು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ದೀರ್ಘಾವಧಿ ಸಾಲ ಎತ್ತುವುದೇ ಕಷ್ಟವಾಗಿತ್ತು. ಈಗ ಹಣಕಾಸು ಸಮಸ್ಯೆ ಇಲ್ಲ. ಆದರೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅನೇಕ ಅಡೆತಡೆಗಳನ್ನು ಎದುರಿಸಿ ಮುಂದೆ ಸಾಗುತ್ತಿದ್ದೇವೆ.‘ನಾನು ಎಂಜಿನಿಯರಿಂಗ್‌ ಪದವೀಧರ. ಮೆಟ್ರೊ ಕಾಮಗಾರಿಗಳು ಒಂದಲ್ಲ ಐದಾರು ಬಗೆಯ ಎಂಜಿನಿಯರಿಂಗ್‌ ಕೌಶಲವನ್ನು ಬೇಡುತ್ತವೆ. ಸಿವಿಲ್‌, ಮೆಕ್ಯಾನಿಕಲ್‌, ಕಮ್ಯುನಿಕೇಷನ್‌, ಸಿಗ್ನಲಿಂಗ್‌, ಎಲೆಕ್ಟ್ರಿಕಲ್‌ ಮೊದಲಾದ ತಂತ್ರಜ್ಞರು ಒಟ್ಟಾಗಿ ಮಾಡುವ ಕೆಲಸವಿದು.‘ಚಿಕ್ಕಪೇಟೆ ಪ್ರದೇಶದಲ್ಲಿ ಸುರಂಗ ನಿರ್ಮಿಸುವುದು ಬಹುದೊಡ್ಡ ಸವಾಲು. ಎಲ್ಲೋ ದೂರದ ಕಾಡಲ್ಲಿ ನಾವು ಕಾಮಗಾರಿ ನಡೆಸುತ್ತಿಲ್ಲ. ನಗರದ ಮಧ್ಯ ಭಾಗದಲ್ಲಿ ಸ್ಪೋಟ ನಡೆಸುವುದಾಗಲಿ, ದೊಡ್ಡ ಯಂತ್ರೋಪಕರಣಗಳನ್ನು ಬಳಸುವುದಾಗಲಿ ಸುಲಭದ ಕೆಲಸವಲ್ಲ.

‘ಚಿಕ್ಕಪೇಟೆಯಲ್ಲಿ ನೆಲದ ಮೇಲ್ಭಾಗದಲ್ಲಿ ಹಳೆಯ ಕಟ್ಟಡಗಳು. ನೆಲದಾಳದಲ್ಲಿ ಛಿದ್ರಗೊಂಡ ಗಟ್ಟಿ ಕಲ್ಲುಗಳು. ಅದರ ಮೇಲೆ ಸಡಿಲ ಮಣ್ಣಿನ ಸಂರಚನೆ. ಸುರಂಗ ಕೊರೆಯುವ ಯಂತ್ರದ (ಟಿಬಿಎಂ) ಕಟರ್‌ ಹೆಡ್‌ (ಕೊರೆಯುವ ಮುಂಭಾಗ) ತಿರುಗಿದಂತೆ ಅದರೊಂದಿಗೆ ಕಲ್ಲುಗಳೂ ತಿರುಗುತ್ತವೆ. ಕಟರ್‌ ಹೆಡ್‌ ಮುಕ್ಕಾದರೆ ಅದನ್ನು ಬದಲಾಯಿಸುವುದು ಮತ್ತೂ ಕಷ್ಟದ ಕೆಲಸ.‘ಟಿಬಿಎಂನ ಮುಂಬದಿಯಲ್ಲಿ ಒಂದೂವರೆ ಅಡಿಯಷ್ಟು ಮಾತ್ರ ಜಾಗ ಇರುತ್ತದೆ. ಅಲ್ಲಿ ಕಲ್ಲು ಮಣ್ಣು ಸುರಿಯುತ್ತಿರುತ್ತದೆ. ಅಂತರ್ಜಲ ನುಗ್ಗಿ ಬರುತ್ತಿರುತ್ತದೆ. ಅದನ್ನು ತಡೆಯಲು ಗಾಳಿಯಿಂದ ಒತ್ತಡದ ವಾತಾವರಣವನ್ನು ನಿರ್ಮಿಸಬೇಕು. ಹಾಗೆ ಮಾಡಿದರೂ ಅಲ್ಲಿಗೆ ಹೋಗಿ ಕಾರ್ಮಿಕರು ಕಟರ್‌ ಹೆಡ್‌ ಬದಲಾಯಿಸುವುದು ದೊಡ್ಡ ಸಾಹಸವೇ ಸರಿ. ಎಷ್ಟೋ ಸಲ ಯಂತ್ರದ ಮುಂಭಾಗದ ಸಡಿಲ ಮಣ್ಣಿನ ಸಂರಚನೆಯನ್ನು ಕಾಂಕ್ರೀಟ್‌ನಿಂದ ಭದ್ರಗೊಳಿಸಿ, ನಂತರ ಸುರಂಗ ಕೊರೆಯುತ್ತಿದ್ದೇವೆ.‘ಮೆಜೆಸ್ಟಿಕ್‌ಗೆ ಬಂದು ನೋಡಿ. ಅಲ್ಲಿ 10 ಮಂದಿ ದೊಡ್ಡ ಗುತ್ತಿಗೆದಾರರು ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. 1500 ಕಾರ್ಮಿಕರು ಅಲ್ಲಿ ಕಳೆದ 2ವರ್ಷಗಳಿಂದ ಹಗಲಿರುಳು ದುಡಿಯುತ್ತಿದ್ದಾರೆ. ಅದರ ಫಲವಾಗಿ ಶೇ 97ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮಕ್ಕಳು ಪರೀಕ್ಷೆಯಲ್ಲಿ ಅಷ್ಟು ಅಂಕ ತೆಗೆದುಕೊಂಡರೆ ದೊಡ್ಡ ಯಶಸ್ಸು ಎನ್ನುತ್ತೇವೆ. ನಮ್ಮನ್ನು ಜಸ್ಟ್‌ ಪಾಸ್‌ ಎನ್ನುವವರೂ ಇಲ್ಲ’ ಎಂದು ಮಾರ್ಮಿಕವಾಗಿ ನುಡಿದರು.‘ಮೆಜೆಸ್ಟಿಕ್‌ನಲ್ಲಿ 80 ಅಡಿಗಳಷ್ಟು ನೆಲದಾಳದಿಂದ ಸಿವಿಲ್‌ ಕಾಮಗಾರಿಗಳನ್ನು ಮಾಡುತ್ತಾ ಬಂದಿದ್ದೇವೆ. ನೆಲದೊಳಗೆ ಏಳು ಅಂತಸ್ತುಗಳಿಗೆ ಸರಿಸಮನಾದ ನಿರ್ಮಾಣ ಚಟುವಟಿಕೆ ಮುಗಿಸಿದ್ದೇವೆ. ಅಲ್ಲಿ ಪಾತಾಳದಿಂದ ಮೇಲಕ್ಕೆ ಬಂದಂತಾಗಿದೆ’ ಎಂದು ಅವರು ಹೇಳಿದಾಗ ಸಭೆಯಲ್ಲಿ ನಗೆಯ ಅಲೆ ಎದ್ದಿತು.‘ಮೆಟ್ರೊ ಎಂಬುದು ಪದೇ ಪದೇ ನಿರ್ಮಿಸುವ ಕಾಮಗಾರಿಯಲ್ಲ. ಒಂದೇ ಸಲ ಮಾಡುವ ಕೆಲಸವಿದು. ಎಲ್ಲರಿಗೂ ಹೊಸದು. ನಾನೇನೂ ನೆವಗಳನ್ನು ಹೇಳುತ್ತಿಲ್ಲ’ ಎಂದು ಅವರು ನುಡಿದರು.ದಿನಕ್ಕೆ ₹ 1 ಕೋಟಿಗೂ ಹೆಚ್ಚು ಬಡ್ಡಿ: ‘ಸದ್ಯ 27 ಕಿ.ಮೀ. ಉದ್ದದ 3 ಪ್ರತ್ಯೇಕ ಮಾರ್ಗಗಳಲ್ಲಿ ಮೆಟ್ರೊ ರೈಲುಗಳು ಓಡಾಟ ನಡೆಸಿವೆ. ಪ್ರತಿದಿನ ಸರಾಸರಿ 50 ಸಾವಿರ ಮಂದಿ ಪ್ರಯಾಣಿಸುತ್ತಿದ್ದಾರೆ. ಒಬ್ಬ ಪ್ರಯಾಣಿಕನಿಂದ ₹ 20 ಆದಾಯ ಬರುತ್ತಿದೆ ಎಂದುಕೊಂಡರೂ ಪ್ರತಿದಿನ ₹ 10 ಲಕ್ಷ ಸಂಗ್ರಹವಾಗುತ್ತಿದೆ. ಇದು ನಮ್ಮ ವಿದ್ಯುತ್‌ ಶುಲ್ಕ ಪಾವತಿಸಲು ಸಾಕಾಗುತ್ತಿದೆ’ ಎಂದು  ಹೇಳಿದರು.‘ಎಲ್ಲ ಮಾರ್ಗಗಳಲ್ಲಿ ರೈಲು ಸಂಚಾರ ಶುರುವಾದ ಮೇಲೆ ನಿತ್ಯ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ಪ್ರಯಾಣಿಸುವ ಸಾಧ್ಯತೆ ಇದೆ. ಮೊದಲ ಹಂತದ ಯೋಜನೆಗೆ ನಾವು ಮಾಡಿರುವ ಸಾಲ ₹ 6,500 ಕೋಟಿ. ನಿತ್ಯ ₹1 ಕೋಟಿಗೂ ಹೆಚ್ಚು ಬಡ್ಡಿ ಕಟ್ಟಬೇಕಾಗಿದೆ’ ಎಂದ ತಿಳಿಸಿದರು.ಮೇನಲ್ಲಿ ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್‌ಗೆ ಸಂಪರ್ಕ

ಮಿನ್ಕ್ಸ್‌ ಚೌಕದಿಂದ ನಗರ ರೈಲು ನಿಲ್ದಾಣದವರೆಗಿನ ಸುರಂಗ ಮಾರ್ಗದಲ್ಲಿ ಮಾರ್ಚ್ ಅಂತ್ಯದೊಳಗೆ ಹಾಗೂ ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್‌ಗೆ ಮೇ ತಿಂಗಳ ಒಳಗೆ ಮೆಟ್ರೊ ರೈಲಿನ ವಾಣಿಜ್ಯ ಸಂಚಾರ ಪ್ರಾರಂಭವಾಗಲಿದೆ ಎಂದು ಪ್ರದೀಪ್‌ ಸಿಂಗ್‌ ಖರೋಲ ತಿಳಿಸಿದರು.

‘ಮೊದಲ ಹಂತದ ಎಲ್ಲ ಮಾರ್ಗಗಳಲ್ಲಿ ಜೂನ್‌ ಅಂತ್ಯದೊಳಗೆ ರೈಲುಗಳು ಓಡಾಡಲಿವೆ. ಎರಡನೇ ಹಂತದ ಕಾಮಗಾರಿಗಳು ಪ್ರಾರಂಭವಾಗಿವೆ. 2018ರ ಒಳಗೆ ಕೆಂಗೇರಿವರೆಗೆ ರೈಲು ಓಡಾಡಲಿದೆ. ಕನಕಪುರ ರಸ್ತೆಯಲ್ಲಿ ಪುಟ್ಟೇನಹಳ್ಳಿ– ಅಂಜನಾಪುರ, ತುಮಕೂರು ರಸ್ತೆಯಲ್ಲಿ ನಾಗಸಂದ್ರ– ಬಿಐಇಸಿ, ಪೂರ್ವಭಾಗದಲ್ಲಿ ಬೈಯಪ್ಪನಹಳ್ಳಿ– ವೈಟ್‌ಫೀಲ್ಡ್‌ ನಡುವಿನ ವಿಸ್ತರಣಾ ಮಾರ್ಗಗಳು ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿಯೇ ಪೂರ್ಣಗೊಳ್ಳಲಿವೆ’ ಎಂದು ಹೇಳಿದರು.‘ಎರಡನೇ ಹಂತದಲ್ಲಿ ಗೊಟ್ಟಿಗೆರೆ– ನಾಗವಾರ ಮಾರ್ಗದಲ್ಲಿ ಡೇರಿ ವೃತ್ತದಿಂದ ನಾಗವಾರವರೆಗೆ 12 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣಗೊಳ್ಳಲಿದೆ. ಅದಕ್ಕಾಗಿ ಹೆಚ್ಚು ಟಿಬಿಎಂಗಳನ್ನು ಬಳಸಿ, ಆದಷ್ಟು ಬೇಗ ಕಾಮಗಾರಿ ಮುಗಿಸಲು ಯೋಚಿಸುತ್ತಿದ್ದೇವೆ’ ಎಂದರು.1.2 ಕಿ.ಮೀ ಉದ್ದದ ಸುರಂಗ ಬಾಕಿ: ‘ಮೊದಲ ಹಂತದಲ್ಲಿ ಒಟ್ಟು 42 ಕಿ.ಮೀ. ಉದ್ದದ ಮೆಟ್ರೊ ಮಾರ್ಗ ನಿರ್ಮಾಣಗೊಳ್ಳುತ್ತಿದೆ. ಅದರಲ್ಲಿ ಸುರಂಗದ ಉದ್ದ 9 ಕಿ.ಮೀ. ಜೋಡಿ ಮಾರ್ಗದ ಲೆಕ್ಕದಲ್ಲಿ ಸುರಂಗದ ಒಟ್ಟು ಉದ್ದ 18 ಕಿ.ಮೀ.  1.2 ಕಿ.ಮೀ. ಉದ್ದದಷ್ಟು ಸುರಂಗ ನಿರ್ಮಾಣ ಕಾರ್ಯವಷ್ಟೇ ಬಾಕಿ ಉಳಿದಿದೆ’ ಎಂದರು.‘ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್‌ವರೆಗೆ ಒಂದು ಸುರಂಗ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಇನ್ನೊಂದು ಸುರಂಗವು ಮಾರ್ಚ್‌ ಮಧ್ಯಭಾಗದ ಹೊತ್ತಿಗೆ ಸಿದ್ಧವಾಗಲಿದೆ. ಚಿಕ್ಕಪೇಟೆ– ಮೆಜೆಸ್ಟಿಕ್‌ ನಡುವಿನ ಸುರಂಗ ನಿರ್ಮಿಸುತ್ತಿರುವ ಕಾವೇರಿ ಯಂತ್ರವು ಮೆಜೆಸ್ಟಿಕ್‌ಗೆ 150 ಮೀಟರುಗಳಷ್ಟು ಹತ್ತಿರದಲ್ಲಿದೆ. 20 ಮೀಟರುಗಳಷ್ಟು ಸುರಂಗ ನಿರ್ಮಿಸಿರುವ ಕೃಷ್ಣಾ, ಇನ್ನೂ 700 ಮೀಟರುಗಳಷ್ಟು ಸುರಂಗವನ್ನು ನಿರ್ಮಿಸಬೇಕಿದೆ’ ಎಂದು ಅವರು ವಿವರಿಸಿದರು.

 

ಖರೋಲ ಹೇಳಿದ ಹೊಸ ಅಂಶಗಳು

* ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ‘ರೈಟ್ಸ್‌’ ಸಂಸ್ಥೆಯು ಸಾಧ್ಯಾಸಾಧ್ಯತೆ ವರದಿಯನ್ನು ಸಲ್ಲಿಸಿದೆ. ಐದಾರು ಸಲಹೆಗಳನ್ನು ಮುಂದಿಟ್ಟಿದೆ. ಅಧ್ಯಯನದ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು.

* ಮೆಟ್ರೊ ನಿಲ್ದಾಣಗಳಲ್ಲಿ ದೈನಂದಿನ ಪದಾರ್ಥಗಳು, ಸೇವೆಗಳ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗುವುದು. ಸಿನಿಮಾ ವೀಕ್ಷಣೆಗೆ ಮಲ್ಟಿಪ್ಲೆಕ್ಸ್‌ಗಳೂ ನಿರ್ಮಾಣಗೊಳ್ಳಲಿವೆ.* ಎಲ್ಲ ಮಾರ್ಗಗಳಲ್ಲಿ ಮೆಟ್ರೊ ಸಂಚಾರ ಆರಂಭವಾದ ಮೇಲೆ ಬಿಎಂಟಿಸಿ, ತನ್ನ ಬಸ್ಸುಗಳ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಲಿದೆ. ಮೆಟ್ರೊಗೆ ಪೂರಕವಾಗಿ ಬಸ್ಸುಗಳ ಸಂಚಾರ ವ್ಯವಸ್ಥೆಯನ್ನು ಏರ್ಪಡಿಸಲಿದೆ.* ಮೆಟ್ರೊಗೆ ಪೂರಕವಾಗಿ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಗಳು ಲಭ್ಯವಾಗುವ ದಿನ ದೂರವಿಲ್ಲ.‘ಹೇಗೋ ಏನೋ ರೈಲು ಓಡಿಸಲಾಗದು’

‘ಮೆಜೆಸ್ಟಿಕ್‌ನಲ್ಲಿ ಪೂರ್ವ– ಪಶ್ಚಿಮ ಕಾರಿಡಾರ್‌ನ ನಿಲ್ದಾಣ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಅಲ್ಲೀಗ ಹವಾ ನಿಯಂತ್ರಣ ವ್ಯವಸ್ಥೆ, ಫಾಲ್ಸ್‌ ಸೀಲಿಂಗ್‌ ಅಳವಡಿಸುವ ಕಾರ್ಯ ನಡೆದಿದೆ. ಮೇಲ್ಭಾಗದಲ್ಲಿ ವರ್ತುಲಾಕಾರದ ಕಟ್ಟಡ ನಿರ್ಮಾಣ ಮುಗಿದಿದ್ದು, ಸುತ್ತಲೂ ಗಾಜು ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ’ ಎಂದು ಖರೋಲ ತಿಳಿಸಿದರು.

‘16 ಮೀಟರುಗಳಷ್ಟು ತಳಭಾಗದಲ್ಲಿರುವ ಅಲ್ಲಿನ ಪ್ಲಾಟ್‌ಫಾರಂ ಅನ್ನು ಒಮ್ಮೆಲೆ ಹತ್ತು ಸಾವಿರ ಜನರು ಬಳಸಬಹುದು. ಅದರ ಕೆಳಗೆ 9 ಮೀಟರುಗಳಷ್ಟು ಕೆಳಭಾಗದಲ್ಲಿರುವ ಉತ್ತರ– ದಕ್ಷಿಣ ಕಾರಿಡಾರ್‌ ಪ್ಲಾಟ್‌ಫಾರಂ ಕೂಡ ಅಷ್ಟೇ ಸಾಮರ್ಥ್ಯದ್ದು. ಇದೊಂದೇ ನಿಲ್ದಾಣದ ನಿರ್ಮಾಣಕ್ಕೆ ಒಂದು ಲಕ್ಷ ಘನ ಮೀಟರುಗಳಷ್ಟು ಪ್ರಮಾಣದ ಕಾಂಕ್ರೀಟ್‌ ಬಳಸಿದ್ದೇವೆ’ ಎಂದು ಖರೋಲ ಹೇಳಿದರು.‘ಮೆಜೆಸ್ಟಿಕ್‌ ಇಂಟರ್‌ಚೇಂಜ್‌ ನಿಲ್ದಾಣದಲ್ಲಿ ಸದ್ಯಕ್ಕೆ 20 ಎಸ್ಕಲೇಟರ್‌ಗಳನ್ನು ಹಾಕುತ್ತಿದ್ದೇವೆ. ಮುಂದೆ ಇನ್ನೂ 17 ಎಸ್ಕಲೇಟರ್‌ಗಳನ್ನು ಹಾಕಲಾಗುವುದು. ಮುಂದಿನ ಐವತ್ತು ವರ್ಷಗಳ ಕಾಲ ತಾಳಿಕೊಳ್ಳುವ ಹಾಗೆ ನಿಲ್ದಾಣವನ್ನು ನಿರ್ಮಿಸುತ್ತಿದ್ದೇವೆ. ಏನೋ ಮಾಡಿ ರೈಲು

ಓಡಿಸಿಬಿಡಲಾಗದು’ ಎಂದರು. ‘ಏಪ್ರಿಲ್‌– ಮೇ ಹೊತ್ತಿಗೆ ಈ ನಿಲ್ದಾಣದ ನಿರ್ಮಾಣ ಕಾರ್ಯ ಸಂಪೂರ್ಣಗೊಳ್ಳಲಿದೆ’ ಎಂದು  ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.