ನಮ್ಮ ಮೆಟ್ರೊ: ನೆಲದಡಿ ಮಂದಗತಿ

7

ನಮ್ಮ ಮೆಟ್ರೊ: ನೆಲದಡಿ ಮಂದಗತಿ

Published:
Updated:
ನಮ್ಮ ಮೆಟ್ರೊ: ನೆಲದಡಿ ಮಂದಗತಿ

ಬೆಂಗಳೂರು: ಸರಿಯಾಗಿ ತಿಂಗಳ ಹಿಂದೆ (ಮೇ 20) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಚಾಲನೆ ಪಡೆದ `ನಮ್ಮ ಮೆಟ್ರೊ~ದ ಸುರಂಗ ಮಾರ್ಗ ನಿರ್ಮಾಣ ಕಾರ್ಯದಲ್ಲಿ ಎಷ್ಟು ಪ್ರಗತಿಯಾಗಿದೆ?ಮೆಜೆಸ್ಟಿಕ್ ಪ್ರದೇಶದಿಂದ ಮಿನ್ಸ್ಕ್ ಚೌಕದವರೆಗೆ ನಿರ್ಮಾಣ ಆಗಬೇಕಿರುವ ಒಟ್ಟು ಸುರಂಗದ ಉದ್ದ 7,874 ಅಡಿಗಳು (2.4 ಕಿ.ಮೀ). ಜೋಡಿ ಮಾರ್ಗಕ್ಕಾಗಿ ಸುಮಾರು 30 ಅಡಿಗಳ ಸಮಾನ ಅಂತರದಲ್ಲಿ ಎರಡು ಸುರಂಗಗಳನ್ನು ಕೊರೆಯಬೇಕಿದೆ. ಭಾನುವಾರ ಸಂಜೆವರೆಗೆ ಸಿದ್ಧವಾಗಿರುವ ಒಂದನೇ  ಸುರಂಗದ ಉದ್ದ ಸುಮಾರು 50 ಅಡಿಗಳು (15 ಮೀಟರ್) ಮಾತ್ರ.`ಈ ಕಾಮಗಾರಿ ಇಷ್ಟೊಂದು ನಿಧಾನಗತಿಯಲ್ಲಿ ಸಾಗಿದರೆ ಮೆಟ್ರೊ ರೈಲು ಓಡಾಡುವ ಸುರಂಗ ಪೂರ್ಣಗೊಳ್ಳಲು ಎಷ್ಟು ವರ್ಷಗಳು ಬೇಕಾಗುತ್ತದೆ~ ಎಂಬ ಪ್ರಶ್ನೆಗೆ ಬೆಂಗಳೂರು ಮೆಟ್ರೊ ರೈಲು ನಿಗಮದ ಅಧಿಕಾರಿಗಳು, `ಪ್ರಾರಂಭದಲ್ಲಿ ಹೀಗೆಯೇ. ಸ್ವಲ್ಪ ದಿನ ಕಳೆದರೆ ಸುರಂಗ ಕೊರೆಯುವ ಕಾಮಗಾರಿ ವೇಗ ಹೆಚ್ಚಲಿದೆ~ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.ಸುರಂಗ ಕೊರೆಯಲು ಆಮದು ಮಾಡಿಕೊಂಡಿರುವ `ಟನೆಲ್ ಬೋರಿಂಗ್ ಮೆಷಿನ್~ (ಟಿಬಿಎಂ) ಕಾರ್ಯಾರಂಭಕ್ಕೆ 30 ದಿನ ಹಿಂದೆ ಮುಖ್ಯಮಂತ್ರಿ ಚಾಲನೆ ನೀಡಿದರು. ಆದರೆ ಕೊರೆವ ಕಾರ್ಯ ನಿಜವಾಗಿ ಪ್ರಾರಂಭವಾಗಿದ್ದು ವಾರದ ಹಿಂದೆ.ಹೇಳಿ ಕೇಳಿ `ಟಿಬಿಎಂ~ ದೈತ್ಯ ಯಂತ್ರ. ಅದರ ತೂಕ 330 ಟನ್‌ಗಳು. ಜಪಾನ್‌ನಿಂದ ಸಮುದ್ರ ಮಾರ್ಗವಾಗಿ ಬಂದ ಈ ಯಂತ್ರದ ಬಿಡಿಭಾಗಗಳನ್ನು  ಚೆನ್ನೈನಿಂದ ನಗರಕ್ಕೆ 28 ಟ್ರಕ್‌ಗಳಲ್ಲಿ ಸಾಗಿಸಲಾಯಿತು. ಈ ಬಿಡಿಭಾಗಗಳನ್ನು ಜೋಡಿಸಲು ಕನಿಷ್ಠ ಒಂದು ತಿಂಗಳ ಸಮಯ ಬೇಕಾಗುತ್ತದೆ.ಧನ್ವಂತರಿ ರಸ್ತೆಯ ಶಾರದಾ ಹೋಟೆಲ್ ಮುಂಭಾಗ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೋ ಆವರಣದಲ್ಲಿ ನೆಲಮಟ್ಟದಿಂದ 40 ಅಡಿಗಳಿಗೂ ಹೆಚ್ಚಿನ  ಆಳದಲ್ಲಿ `ಟಿಬಿಎಂ~ ಅನ್ನು ಇರಿಸಲಾಗಿದೆ. ಮುಖ್ಯಮಂತ್ರಿಯವರು ಅದನ್ನು ವೀಕ್ಷಿಸುವುದಕ್ಕಾಗಿ ನಿರ್ಮಿಸಿದ್ದ ತಾತ್ಕಾಲಿಕ ಪ್ಲಾಟ್‌ಫಾರಂ ಮತ್ತಿತರ ವ್ಯವಸ್ಥೆಯನ್ನು ತೆಗೆದು ಹಾಕಲು ಹತ್ತು ದಿನಗಳು ಕಳೆದವು. ನಂತರದ ತಾಂತ್ರಿಕ ಏರ್ಪಾಡುಗಳಿಗೆ ಮತ್ತೆ ಹನ್ನೆರಡು ದಿನಗಳು ಕಳೆದವು.

ಜೂ. 12ರಿಂದ ಸತತವಾಗಿ `ಟಿಬಿಎಂ~ ಕೊರೆಯುವ ಕಾರ್ಯ ನಡೆಸುತ್ತಿದೆ. ಎಂಟು ದಿನಗಳಲ್ಲಿ ತಲಾ 1.5 ಮೀಟರ್ ಅಗಲದ ಹತ್ತು ದೈತ್ಯ ಕಾಂಕ್ರಿಟ್ ಬಳೆಗಳನ್ನು ಜೋಡಿಸಲಾಗಿದೆ.ದೈತ್ಯ ಯಂತ್ರವು ಒಂದು ದಿನಕ್ಕೆ ಕಲ್ಲಿನ ಪ್ರಮಾಣ ಹೆಚ್ಚಾಗಿರುವ ಕಡೆ 6 ಮೀಟರ್ ಹಾಗೂ ಮಣ್ಣು ಮಾತ್ರ ಇರುವೆಡೆ ಗರಿಷ್ಠ 15 ಮೀಟರ್‌ಗಳಷ್ಟು ಉದ್ದದ ಸುರಂಗವನ್ನು ಕೊರೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಮೆಜೆಸ್ಟಿಕ್‌ನಿಂದ ಮಿನ್ಸ್ಕ್‌ಚೌಕದವರೆಗಿನ ನೆಲದೊಳಗೆ ಶೇಕಡಾ 20ರಿಂದ 30ರಷ್ಟು ಕಲ್ಲು ಸಿಗುವುದರಿಂದ ಪ್ರತಿದಿನ ಸರಾಸರಿ 10 ಮೀಟರ್‌ಗಳಷ್ಟು ಸುರಂಗ ಕೊರೆಯಬಹುದೆಂದು ತಂತ್ರಜ್ಞರು ಅಂದಾಜಿಸಿದ್ದರು.ಆದರೆ 8 ದಿನಗಳಲ್ಲಿ ಕೊರೆಯಲು ಸಾಧ್ಯವಾಗಿದ್ದು ಕೇವಲ 15 ಮೀಟರ್ ಮಾತ್ರ. ಈ ವಿಳಂಬಕ್ಕೆ ಕಾರಣವೇನು?

ಸುರಂಗ ಕೊರೆಯುವ ಕಾರ್ಯ ತೀರಾ ಮಂದ ಗತಿಯಲ್ಲಿ ಸಾಗಿರುವುದಕ್ಕೆ ನಿಗಮದ ಎಂಜಿನಿಯರ್ ಒಬ್ಬರು ನೀಡುವ ವಿವರಣೆ ಇಲ್ಲಿದೆ;`ಅತ್ಯಾಧುನಿಕ, ಬಲು ಸೂಕ್ಷ್ಮ~

`ಸಂಪೂರ್ಣ ಸ್ವಯಂ ಚಾಲಿತ ವ್ಯವಸ್ಥೆಯನ್ನು ಹೊಂದಿರುವ `ಟಿಬಿಎಂ~ ಅತ್ಯಾಧುನಿಕ ಮಾತ್ರವಲ್ಲ; ಬಲು ಸೂಕ್ಷ್ಮ ಯಂತ್ರವಾಗಿದೆ. ನವ ನವೀನ ತಾಂತ್ರಿಕ ಅಂಶಗಳನ್ನು ಒಳಗೊಂಡಿರುವ ಈ ಯಂತ್ರವನ್ನು ಸಂಪೂರ್ಣ ಅರಿತ ತಂತ್ರಜ್ಞರು ಇಲ್ಲಿಲ್ಲ.ಕೊರೆಯಬೇಕಾದ ಕಡೆ ಸಿಗಬಹುದಾದ ಕಲ್ಲು ಮತ್ತು ಮಣ್ಣಿನ ಪ್ರಮಾಣಕ್ಕೆ ಅನುಸಾರವಾಗಿ ಯಂತ್ರದ ಕೊರೆಯುವ ವೇಗವನ್ನು ನಿಗದಿ ಮಾಡಲಾಗುತ್ತದೆ. ಯಂತ್ರವು ತನ್ನೊಳಗಿರುವ ಸೆನ್ಸಾರ್ ವ್ಯವಸ್ಥೆಯಿಂದ ಕಲ್ಲು ಮತ್ತು ಮಣ್ಣಿನ ಪ್ರಮಾಣವನ್ನು ಅಂದಾಜಿಸುತ್ತದೆ. ತನಗೆ ನಿಗದಿ ಮಾಡಿರುವ ಪ್ರಮಾಣಕ್ಕಿಂತ ಹೆಚ್ಚಿನ ಕಲ್ಲು ಸಿಕ್ಕರೆ ಯಂತ್ರವು ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿಬಿಡುತ್ತದೆ. ಮತ್ತೆ ಹೊಸದಾಗಿ ವೇಗ ನಿಗದಿ ಮಾಡಿ, ಯಂತ್ರದ ಕಾರ್ಯಾಚರಣೆಯನ್ನು ಪುನರಾರಂಭಿಸಬೇಕು.ಪ್ರಾರಂಭಿಕ ದಿನಗಳಾಗಿರುವುದರಿಂದ ನಾವಿನ್ನು ಕಲಿಯುವ ಹಂತದಲ್ಲಿದ್ದೇವೆ. ಯಂತ್ರದ ಸೂಕ್ಷ್ಮಗಳು ಅರ್ಥವಾಗುತ್ತಾ ಹೋದಂತೆ, ತಂತ್ರಜ್ಞರು ಪಳಗಿದಂತೆ ಸುರಂಗ ಕೊರೆಯುವ ಕಾರ್ಯ ಚುರುಕುಗೊಳ್ಳಲಿದೆ. ಗುರಿಯಂತೆ 2012ರ ಜೂನ್ ಅಂತ್ಯದ ವೇಳೆಗೆ ಪೂರ್ಣಗೊಳಿಸುವ ಭರವಸೆ ನಮಗಿದೆ~.

ಜುಲೈ ಅಂತ್ಯಕ್ಕೆ 2ನೇ ಟಿಬಿಎಂ

ಎರಡನೇ `ಟಿಬಿಎಂ~ನ ಬಿಡಿ ಭಾಗಗಳನ್ನು ಜೋಡಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಯಂತ್ರ ಜುಲೈ ಕೊನೆ ವಾರ ಕಾರ್ಯಾಚರಣೆ ಶುರು ಮಾಡಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಮೂಲಗಳು ತಿಳಿಸಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry