ಮಂಗಳವಾರ, ಮೇ 18, 2021
24 °C

ನರಗುಂದ: ನೀರಿಲ್ಲದೇ ರೋಗಿಗಳ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಗುಂದ: ದವಾಖಾನ್ಯಾಗ ಒಂದು ಹನಿ ನೀರಿಲ್ಲದ, ಶೌಚಕ್ಕ ಸಹಿತ ಹೋಗಿಲ್ಲ, ಇದು ದವಾಖಾನೆಯೋ ಮತ್ತೇನೋ ಎಂಬ ಬನಹಟ್ಟಿಯ ಶಂಕ್ರಪ್ಪ ಕುಲಕರ್ಣಿ ಮಾತ ಕೇಳಿದರೆ ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ನೀರಿಲ್ಲದೇ ರೋಗಿಗಳು ನರಕಯಾತನೆ ಪಡುವಂತಹ ದು:ಸ್ಥಿತಿ ನಿರ್ಮಾಣವಾಗಿದೆ.   ನೀರಿಗಾಗಿ ಸಂಬಂಧಿಕರ ಮನೆಗೆ ಹಾಗೂ ಹೋಟೆಲ್‌ಗಳಿಗೆ ಹೋಗಿ  ತರಬೇಕಾಗಿದೆ. ನೀರಿಲ್ಲದೇ ಬಾಣಂತಿಯರ ಸ್ಥಿತಿಯಂತು ಹೇಳತೀರದಾಗಿದೆ. ತಾಲ್ಲೂಕು ಆಸ್ಪತ್ರೆ  ಕೇವಲ ಹೆಸರಿಗೆ ಇದ್ದಂತಾಗಿದೆ. ಸರಿಯಾದ ವ್ಯವಸ್ಥೆಯೂ ಇರದೇ ಸಾರ್ವಜನಿಕರು ಶಪಿಸುವಂತಾಗಿದೆ.  ಎಲ್ಲೆಡೆ ಗಲೀಜು ಕಾಣುತ್ತಿದೆ. ಸಲೈನ್ ಪೈಪುಗಳು ಎಲ್ಲೆಂದರಲ್ಲಿ ಬಿದ್ದಿವೆ.ರೋಗಿಗಳಿಗೂ ನೀರಿಲ್ಲ, ನಾವೂ ಸಹಿತ ತಂದ ಬಿಸ್ಲೆರಿ ನೀರಾಗ ಕೈ ತೊಳಕೊಂಡು ಅದರಾಗ ಸ್ವಲ್ಪ ಉಳಿಸಿ ಕುಡಿಬೇಕಾಗೇತಿ, ಇಂಜಕ್ಷನ್ ಮಾಡಲು ಸಹಿತ ನೀರಿಲ್ಲ  ಎಂದು ಸ್ವತಃ ಆಸ್ಪತ್ರೆಯ ಸಿಬ್ಬಂದಿಯೇ ತಮ್ಮ  ಅಸಹಾಯಕತೆ  ತೋಡಿಕೊಂಡಿದ್ದು ಆಸ್ಪತ್ರೆಯಲ್ಲಿ ಎಳ್ಳಷ್ಟು ನೀರಿಲ್ಲದಿರುವುದಕ್ಕೆ ಕೈಗನ್ನಡಿಯಾಗಿತ್ತು.ಬಾಣಂತಿಯರಿಗೆ  ಬಿಸಿ ನೀರು ಹಾಗೂ ಇನ್ನಿತರ ವ್ಯವಸ್ಥೆ ಮಾಡಲೆಂದು ತಲಾ 75 ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ ಆದರೆ ಅವರಿಗೆ ಇಲ್ಲಿಯವರೆಗೆ ಬಿಸಿ ನೀರಲ್ಲ ತಣ್ಣೀರು ಸಹಿತ ಸಿಕ್ಕಿಲ್ಲ ಎಂದು ಬಾಣಂತಿಯರು ಸಂಬಂಧಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ನೀರಿಲ್ಲದ ಕಾರಣ ಬಾಣಂತಿಯರು ಹೆರಿಗೆಯಾದ ತಕ್ಷಣ ಆಸ್ಪತ್ರೆ ಯಿಂದ ಬಿಡುಗಡೆಗೊಂಡು  ಮನೆಗೆ ತೆರಳಿದ್ದು ಶುಕ್ರವಾರ ಕಂಡು ಬಂತು.  ನೀರಿಲ್ಲದೇ ಶೌಚಾಲ ಯಗಳು, ಮೂತ್ರಾಲಯಗಳು ಗಲೀಜಾಗಿದ್ದು ಒಳಗೆ ಹೋಗದ ದುಃಸ್ಥಿತಿ  ನಿರ್ಮಾಣವಾಗಿದ್ದು ದುರ್ವಾಸನೆ ಇಡಿ ಆಸ್ಪತ್ರೆಯನ್ನೇ ಆವರಿಸಿದೆ.ಇದಕ್ಕೆ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಗಳ ನಿರ್ಲಕ್ಷವೇ ಪ್ರಮುಖ  ಎಂದು ರೋಗಿಗಳು ಆರೋಪಿಸಿದರು. ಇದರ ಬಗ್ಗೆ ಕರ್ತವ್ಯದಲ್ಲಿದ್ದ ವೈದ್ಯಾಧಿಕಾರಿಗಳನ್ನು ಕೇಳಿದರೆ ಇದರ ಬಗ್ಗೆ ಆಡಳಿತ ನಿರ್ವಹಣೆ ಮಾಡುವ ವೈದ್ಯಾಧಿ ಕಾರಿ ಗಳಿಗೆ ಗೊತ್ತು ಎಂದು ಹಾರಿಕೆ ಉತ್ತರ ನೀಡಿ ದರು. ನೀರು ಬಿಡುವ ಸಿಬ್ಬಂದಿ ಕೇಳಿದರೆ ಪುರಸಭೆ ಯವರು ಸರಿಯಾಗಿ ನೀರು ಬೀಡುತ್ತಿಲ್ಲ ಎಂದು ಜಾರಿಕೊಂಡರು.ಒಟ್ಟಾರೆ ತಾಲ್ಲೂಕು ಆಸ್ಪತ್ರೆಯಲ್ಲಿ ನೀರಿಲ್ಲದೇ ರೋಗಿಗಳು ಪರದಾಡುವಂತಹ ಸ್ಥಿತಿ  ನಿರ್ಮಾಣ ವಾಗಿದೆ. ಆದ್ದರಿಂದ ಬೇಗನೇ  ಆಸ್ಪತ್ರೆಗೆ ಸರಿಯಾದ ನೀರು ಪೂರೈಕೆಯಾಗಬೇಕಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.