ಭಾನುವಾರ, ಜನವರಿ 26, 2020
18 °C

ನರಭಕ್ಷಕ ಹುಲಿಯಿಂದ ರಕ್ಷಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಡೀಪುರ ಮತ್ತು ನಾಗರಹೊಳೆಯಲ್ಲಿ ನಾಲ್ಕೇ ದಿನಗಳ ಅಂತರದಲ್ಲಿ ಹುಲಿಗೆ ಮೂವರು ಬಲಿಯಾಗಿದ್ದಾರೆ. ಇದರಿಂದ, ಸುತ್ತಮುತ್ತಲ ಹಾಡಿಗಳ ಜನರು ಭಯ­ಭೀತರಾಗಿದ್ದಾರೆ. ಹೆಗ್ಗಡ­ದೇವನಕೋಟೆ ಬಳಿಯ ಸರಗೂರಿನ ನಡಹಾಡಿಯ ಬಸವರಾಜು ಕಳೆದ ಬುಧವಾರ ಹುಲಿ ಬಾಯಿಗೆ ಆಹಾರವಾಗಿದ್ದರು.

ಇದಾದ ಎರಡೇ ದಿನದಲ್ಲಿ ಸೀಗೆವಾಡಿ ಹಾಡಿಯ ಜೇನುಕುರುಬ ಸಮುದಾಯದ ಚೆಲುವ  ಆಹುತಿಯಾಗಿದ್ದಾರೆ. ದನ ಮೇಯಿಸಲು ಹೋಗಿದ್ದ ಚೆಲುವ ಅವರನ್ನು ಕಾಡಿನ ಅಂಚಿನ ಮರದ ನೆರಳಿನಲ್ಲಿ ಕುಳಿತಿದ್ದಾಗ ಹುಲಿ ಎಳೆದುಕೊಂಡು ಹೋಗಿದೆ. ಕಾಡಿನ ನಡುವಿನ ಹಾದಿಯಲ್ಲಿ ನಡೆದರೆ ನಡಹಾಡಿಗೂ ಸೀಗೆವಾಡಿ ಹಾಡಿಗೂ ಕೇವಲ ಐದು ಕಿ.ಮೀ. ದೂರ. ಹೀಗಾಗಿ ಈ ಎರಡೂ ಸಾವಿಗೆ ಒಂದೇ ಹುಲಿ ಕಾರಣ ಎಂದೇ ಶಂಕಿಸಲಾಗಿದೆ.

ಇದೇ ಕಾಡಿನ ಪಕ್ಕದ ನಾಗರಹೊಳೆಯ ಬಳ್ಳೆ -ಮತ್ತು ಮೂರ್ಕಲ್‌ ರೇಂಜ್‌ನಲ್ಲಿ ಗಸ್ತು ಸುತ್ತುತ್ತಿದ್ದ ಅರಣ್ಯ ಕಾವಲುಗಾರ ಸುರೇಶ್‌ ಸಹ ಹುಲಿಯ ಬಾಯಿಗೆ ತುತ್ತಾಗಿದ್ದಾರೆ. ಗಸ್ತು ತಿರುಗುವಾಗ ಬಹಿರ್ದೆಸೆಗೆಂದು ಪೊದೆಯಂಚಿಗೆ ಹೋದಾಗ ಹುಲಿ ಎಳೆದುಕೊಂಡು ಹೋಗಿ ತೊಡೆಯನ್ನೇ ತಿಂದಿದೆ. ಗಸ್ತಿಗೆ ಸಿಬ್ಬಂದಿ ಒಬ್ಬರೇ ಹೋಗುವುದಿಲ್ಲ. ಕನಿಷ್ಠ ಐದಾರು ಮಂದಿಯಾದರೂ  ತಂಡದಲ್ಲಿ ಇರುತ್ತಾರೆ.ಕಾಡುಗಳ್ಳರು, ಪ್ರಾಣಿಹಂತಕರಿಂದ ರಕ್ಷಣೆ ನೀಡಬೇಕಾದವರೇ ಹುಲಿ ಬಾಯಿಗೆ ಆಹುತಿಯಾದರೆ ಕಾಡಿನ ರಕ್ಷಣೆಗೆ ಪರೋಕ್ಷವಾಗಿ ಹಿನ್ನಡೆಯಾಗುತ್ತದೆ. ಒತ್ತಾಯಪೂರ್ವಕವಾಗಿ ಕೆಳ ಹಂತದ ಸಿಬ್ಬಂದಿಯನ್ನು ಗಸ್ತಿಗೆ ಕಳುಹಿಸಿದರೂ ಮನಪೂರ್ವಕವಾಗಿ ಕೆಲಸ ಮಾಡುವರೇ ಎನ್ನುವ ಪ್ರಶ್ನೆ ಏಳುತ್ತದೆ.ಕರ್ನಾಟಕದಲ್ಲಿ ಹುಲಿ ಯೋಜನೆ ಯಶಸ್ಸು ಗಳಿಸಿದೆ. ಬಂಡೀಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ನಾಗರಹೊಳೆಯಲ್ಲಿಯೂ ಹುಲಿಗಳ ಸಂಖ್ಯೆ ಉತ್ತಮವಾಗಿದೆ. ಈ ಎರಡೂ ಹುಲಿ ಅಭಯಾರಣ್ಯಗಳ ಸುತ್ತಲೂ ಜನವಸತಿ ಇದೆ. ನಾಗರಹೊಳೆಯ ಕಾಡಿನ ನಡುವೆಯೇ ಹಾಡಿಗಳಿವೆ. ಹಾಡಿಗಳ ಆದಿವಾಸಿಗಳಿಗೆ, ಅರಣ್ಯ ಸಿಬ್ಬಂದಿಗೆ ಕಾಡಿನ ನಡುವಿನ ಬದುಕು ಚಿರಪರಿಚಿತ.

ಪ್ರಾಣಿಗಳ ವಾಸನೆ, ಕಾಡುಕೋತಿಯ ಕೂಗಿನಿಂದಲೇ ಬೇಟೆ ಪ್ರಾಣಿಗಳ ಸುಳಿವನ್ನು ಪಡೆಯುತ್ತಾರೆ. ಆದರೂ ಈ ದುರ್ಘಟನೆಗಳು ನಡೆದಿವೆ. ಹುಲಿಗಳು ತನ್ನ ವ್ಯಾಪ್ತಿಯ ಜಾಗದಲ್ಲೇ ವಾಸಿಸುತ್ತವೆ. ವಯಸ್ಸಾದ ಹುಲಿಯನ್ನು ಮತ್ತೊಂದು ಯುವಹುಲಿ ಹೆದರಿಸಿಯೋ ಇಲ್ಲವೇ ಕಾದಾಡಿ ಜಾಗದ ಮೇಲೆ ಆಧಿಪತ್ಯ ಸ್ಥಾಪಿಸುತ್ತದೆ.

ಈ ಮುದಿ ಹುಲಿಗಳು ಕಾಡು ಪ್ರಾಣಿಗಳನ್ನು ಹಿಡಿಯುವ ಶಕ್ತಿಯನ್ನು ಕಳೆದುಕೊಂಡು ಕಾಡಿನಂಚಿನ ಸಾಕುದನಗಳನ್ನು ಹಿಡಿಯುತ್ತವೆ. ಆದರೆ ಈ ಪ್ರಕರಣಗಳನ್ನು ಗಮನಿಸಿದರೆ ಹುಲಿಗಳು ನರಮಾಂಸದ ರುಚಿ ಹತ್ತಿಸಿಕೊಂಡಿವೆ. ಇವು ಸುತ್ತಮುತ್ತಲ ಗ್ರಾಮಸ್ಥರಿಗೆ ಖಂಡಿತ ಅಪಾಯಕಾರಿ.

ಜನ ಸತ್ತರೆ ಸರ್ಕಾರದಿಂದ ಧನ ಪರಿಹಾರ  ಕೊಡುವುದೊಂದೇ ಸಮಸ್ಯೆಗೆ ಉತ್ತರವಲ್ಲ. ಇಂತಹ ನರಭಕ್ಷಕ ಮುದಿ ಹುಲಿಗಳನ್ನು ಹಿಡಿದು ಮೃಗಾಲಯಕ್ಕೆ ಕಳುಹಿಸಬೇಕು ಇಲ್ಲವೇ ಗುಂಡು ಹಾಕಿ ಕೊಲ್ಲಬೇಕು. ಇಲ್ಲವಾದರೆ ಮತ್ತೆ ಮತ್ತೆ ಇದೇ ರೀತಿಯ ಘಟನೆಗಳು ಮರುಕಳಿಸಿ ಜನ ರೊಚ್ಚಿಗೇಳಬಹುದು.

ಪ್ರತಿಕ್ರಿಯಿಸಿ (+)