ಸೋಮವಾರ, ಮಾರ್ಚ್ 8, 2021
24 °C
ವಿಮರ್ಶೆ

ನರಸಿಂಹರಾವ್ ಮರುಶೋಧದ ಪ್ರಯತ್ನ

ಬಿ.ಎಸ್. ಸೂರ್ಯಪ್ರಕಾಶ್ Updated:

ಅಕ್ಷರ ಗಾತ್ರ : | |

ನರಸಿಂಹರಾವ್ ಮರುಶೋಧದ ಪ್ರಯತ್ನ

ಹಾಫ್ ಲಯನ್

ಲೇ:
ವಿನಯ್ ಸೀತಾಪತಿ

ಪ್ರ: ಪೆಂಗ್ವಿನ್ ಬುಕ್ಸ್‌ ಲಿಮಿಟೆಡ್ಭಾ

ರತೀಯರಲ್ಲಿ ಇತಿಹಾಸ ಪ್ರಜ್ಞೆ ಇತ್ತೋ ಇಲ್ಲವೋ ಎನ್ನುವುದರ ಬಗ್ಗೆ ವಿದ್ವಾಂಸರಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಕೆಲವು ನೂರು ವರ್ಷಗಳ ಹಿಂದಿನವರೆಗೂ ನಾವು ಈಗ ಅರ್ಥೈಸುವಂತೆ ಇತಿಹಾಸವನ್ನು ದಾಖಲೆ ಮಾಡುವ, ಅಭ್ಯಸಿಸುವ ಪರಿಪಾಠ ಇರಲಿಲ್ಲವೆಂದೇ ಹೇಳಬೇಕು.ಪಾಶ್ಚಾತ್ಯ ಸಂಪರ್ಕದಿಂದ ಬೆಳೆದ ಹಲವು ಜ್ಞಾನಶಾಖೆಗಳಲ್ಲಿ ಇತಿಹಾಸದ ಅಧ್ಯಯನವೂ ಒಂದು. ಆದರೂ ಸಹ ಜೀವನಚರಿತ್ರೆಗಳು, ಅದರಲ್ಲೂ ರಾಜಕೀಯ ನಾಯಕರ ಜೀವನಚರಿತ್ರೆಗಳು, ಸಾಕಷ್ಟು ಪ್ರಮಾಣದಲ್ಲಿ ಹೊರಬಂದಿಲ್ಲ.ಡಿ.ವಿ. ಗುಂಡಪ್ಪನವರಿಗೆ ಖ್ಯಾತಿ ದೊರಕಿಸಿ ಕೊಟ್ಟ ದಿವಾನ್ ರಂಗಾಚಾರ್ಲು ಅವರ ಜೀವನಚರಿತ್ರೆಯನ್ನು ಕಳೆದ ಶತಮಾನದ ಮೊದಲ ದಶಕದಲ್ಲಿ ಬರೆದಾಗಲೂ ಮೂಲ ಆಕರಗಳ ಸಂಗ್ರಹಕ್ಕೆ ಪಟ್ಟ ಪ್ರಯಾಸ, ಸಮಕಾಲೀನರ ಅಸಡ್ಡೆಯ ಬಗ್ಗೆ ಡಿವಿಜಿ ಬೇಸರ ಪಟ್ಟುಕೊಂಡಿದ್ದರು. ಲಭ್ಯವಿರುವ ಜೀವನಚರಿತ್ರೆಗಳಲ್ಲೂ ಆರಾಧನಾಭಾವವೇ ಹೆಚ್ಚು; ವ್ಯಕ್ತಿಯನ್ನು ನೈಜವಾಗಿ ಕಂಡು ಕುಂದು–ಕೊರತೆಗಳ ಸಹಿತ ಚಿತ್ರಿಸಿರುವುದು ವಿರಳ.ಇಲ್ಲಿ ನಾವು ಎದುರಿಸಲೇಬೇಕಾದ ಪ್ರಶ್ನೆ: ರಾಜಕೀಯದ ನಿತ್ಯರಂಪಾಟದ ಸುದ್ದಿಗದ್ದಲಗಳು ಸ್ತಬ್ಧವಾಗಿ ಕಾಲಾಂತರದಲ್ಲಿ ಹಿನ್ನೋಟದಿಂದ ಸಿಗುವ ಸ್ಪಷ್ಟತೆಯಿಂದ ಆಗುವ ಪ್ರಯೋಜನವಾದರೂ ಏನು? ಇದಕ್ಕೆ ಉತ್ತರ: ರಾಜಕೀಯ. ಇತಿಹಾಸವು (ಯಾವುದೇ ಕಾಲದ್ದಾಗಲಿ) ರಾಜಕೀಯಕ್ಕೆ ಬಳಕೆಯಾದಾಗ ನಾವು–ಇನ್ನಷ್ಟು ಎಚ್ಚರದಿಂದ ಇರಬೇಕಾಗುತ್ತದೆ. ನೀಡಲಾಗುತ್ತಿರುವ ಸಾಕ್ಷ್ಯ–ಪ್ರಮಾಣಗಳನ್ನು ಸಂದರ್ಭದ ಔಚಿತ್ಯದಲ್ಲಿ ಪರಿಶೀಲಿಸಬೇಕಾಗುತ್ತದೆ. ಇತ್ತೀಚೆಗೆ ಪ್ರಕಟವಾಗಿರುವ ಮಾಜಿ ಪ್ರಧಾನಮಂತ್ರಿಗಳಾದ ಪಿ. ವಿ. ನರಸಿಂಹರಾಯರ ಜೀವನಚರಿತ್ರೆ ‘ಹಾಫ್ ಲಯನ್’ (ಲೇ: ವಿನಯ್ ಸೀತಾಪತಿ) ಕೃತಿಯನ್ನು ಈ ಹಿನ್ನಲೆಯಲ್ಲಿ ನೋಡಬೇಕಾಗಿದೆ.‘ಹಾಫ್ ಲಯನ್’ ಕೃತಿ ಪ್ರಕಟಗೊಂಡಿರುವ ಈ ಸಂದರ್ಭ ಇನ್ನೂ ಎರಡು ಕಾರಣಗಳಿಂದ ಮಹತ್ತ್ವದ್ದಾಗಿದೆ. ಈ ಕಾರಣಗಳೆಂದರೆ: ಉದಾರೀಕರಣವನ್ನು ಕಾರ್ಯರೂಪಕ್ಕೆ ತರಲು ರಾಜಕೀಯವಾಗಿ ‘ದುರ್ಬಲ’ರಾಗಿದ್ದ ಪಿ.ವಿ.ಎನ್. ಅವರಿಗೆ ಹೇಗೆ ಸಾಧ್ಯವಾಯಿತು ಹಾಗೂ ಉದಾರೀಕರಣದ ನಿಜವಾದ ರೂವಾರಿ ಯಾರು ಎನ್ನುವ ಪ್ರಶ್ನೆಗಳಿಗೆ ಉತ್ತರಗಳ ಹುಡುಕಾಟ.ಆರ್ಥಿಕ ಉದಾರೀಕರಣ ಪ್ರಾರಂಭವಾಗಿ 25 ವರ್ಷಗಳು ಕಳೆದಿವೆ. ಆದರೆ, ಆರಂಭದ ದಿನಗಳಷ್ಟು ತೀವ್ರತೆಯಿಂದ ಉದಾರೀಕರಣವನ್ನು ಜಾರಿಗೊಳಿಸುವುದು ಮತ್ತೆಂದೂ ಮತ್ತ್ಯಾರಿಗೂ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿಯೇ, ಪ್ರಧಾನಿ ಮೋದಿಯವರು ‘Big Bang reforms’ ಎನ್ನುವುದು ಇಲ್ಲ ಎಂದು ವಿದೇಶಿ ದಿನಪತ್ರಿಕೆಯೊಂದಕ್ಕೆ  ನೀಡಿದ ಸಂದರ್ಶನದ ಹೇಳಿಕೆಯನ್ನು ಗಮನಿಸಬೇಕು.

ಹೀಗಿರುವಾಗ ಅಷ್ಟು ದೊಡ್ಡ ಪ್ರಮಾಣದ ಉದಾರೀಕರಣವನ್ನು ಕಾರ್ಯರೂಪಕ್ಕೆ ತರಲು ರಾಜಕೀಯವಾಗಿ ‘ದುರ್ಬಲ’ರಾಗಿದ್ದ ಪಿ.ವಿ.ಎನ್. ಅವರಿಗೆ ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆ ಎದುರಾಗುತ್ತದೆ.ಇದರ ಜೊತೆಗೇ ಉಂಟಾಗುವ ಮತ್ತೊಂದು ಪ್ರಶ್ನೆ – ಉದಾರೀಕರಣದ ನಿಜವಾದ ರೂವಾರಿ ಯಾರು ಎನ್ನುವುದು. ಈ ರೂವಾರಿ ಅಂದಿನ ಹಣಕಾಸು ಸಚಿವರಾಗಿದ್ದ ಮನಮೋಹನಸಿಂಗ್ ಅವರೇ ಅಥವಾ ಅವರನ್ನು ಸಚಿವರನ್ನಾಗಿ ಆಯ್ಕೆ ಮಾಡಿದ ಪ್ರಧಾನಿ ಪಿ.ವಿ.ಎನ್. ಅವರೇ? ಅಥವಾ ಅದಕ್ಕೂ ಹಿಂದೆ ಪ್ರಧಾನಮಂತ್ರಿಯಾಗಿದ್ದ ರಾಜೀವ್ ಗಾಂಧಿ ಅವರೇ? ಈ ವಿಷಯವಾಗಿ ರಾಜಕೀಯ ಕಥನಗಳು ಬೆಳೆದುಕೊಂಡು ಬಂದಿರುವ ಹಾದಿ ಸರ್ವವಿದಿತವಾಗಿದೆ.‘ಹಾಫ್‌ ಲಯನ್‌’ನ ಲೇಖಕರಾದ ವಿನಯ್‌ ಸೀತಾಪತಿ ಮುಂಬೈ ಮೂಲದವರು; ಕಾನೂನು ವ್ಯಾಸಂಗ ಮಾಡಿ, ಕೆಲವು ಕಾಲ ಪತ್ರಕರ್ತರಾಗಿ ಕೆಲಸ ಮಾಡಿದವರು. ಈಗವರು ಪ್ರಿನ್ಸ್‌ಟನ್‌ನಲ್ಲಿ ರಾಜಕೀಯದ ವಿಷಯದಲ್ಲಿ ಪಿಎಚ್.ಡಿ. ಮಾಡುತ್ತಿದ್ದಾರೆ.

ಪ್ರಾಯಶಃ ಈ ಅಂತರಶಾಸ್ತ್ರೀಯ ದೃಷ್ಟಿಕೋನದಿಂದಾಗಿಯೇ (inter-discplinary approach) ರಾಜಕೀಯ ಪಂಥಗಳ  ಎಲ್ಲೆಯನ್ನು ಮೀರಿದ, ವಸ್ತುನಿಷ್ಠ ಕೃತಿಯನ್ನು ರಚಿಸಲು ಅವರಿಗೆ ಸಾಧ್ಯವಾಗಿರುವುದು. ಅವರ ಆಳವಾದ ಸಂಶೋಧನೆಗೆ ಕೃತಿಯಲ್ಲಿರುವ 1086 ಟಿಪ್ಪಣಿಗಳು–ದಾಖಲೆ, ಕಾಗದ–ಪತ್ರ, ಸಂದರ್ಶನಗಳ ಆಧಾರಗಳು ಸಾಕ್ಷಿಯಂತಿವೆ. ಈ ವಿಷಯದಲ್ಲಿ ಪಿ.ವಿ.ಎನ್. ಅವರ ವಿಸ್ತಾರವಾದ ಕಾಗದ ಪಾತ್ರಗಳ ಸಂಗ್ರಹವಿರುವುದೂ ಮತ್ತು ಅದು ಕೃತಿಕಾರರಿಗೆ ಲಭ್ಯವಾದುದು ಭಾರತದ ಇತಿಹಾಸದ ಸುಕೃತವೇ ಸರಿ.ಇಂದಿನ ತೆಲಂಗಾಣದಲ್ಲಿ ವ್ಯವಸಾಯದಲ್ಲಿ ತೊಡಗಿಕೊಂಡಿದ್ದ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ, ಕಾನೂನು ವ್ಯಾಸಂಗ ಮಾಡುವಾಗಲೇ  ಸ್ವಾತಂತ್ರ್ಯ ಮತ್ತು ನಿಜಾಮರ ಆಡಳಿತದ ವಿರುದ್ಧದ ಚಳವಳಿಗಳಲ್ಲಿ ಪಾಲ್ಗೊಂಡ ನರಸಿಂಹರಾವ್ ರಾಜಕೀಯ ಕ್ಷೇತ್ರವನ್ನು ಸೇರಿದರು.ಅಚ್ಚರಿಯ ಸಂಗತಿಯೆಂದರೆ, ಮುಂದೆ ಉದಾರೀಕರಣ ರೂವಾರಿಗಳಾದ ಇವರು, ಆರಂಭದ ದಶಕಗಳಲ್ಲಿ ಸೋಷಿಯಲಿಸಂ–ಕಮ್ಯುನಿಸಂ ವಿಚಾರಗಳ ಕಡೆಗೆ ವಾಲಿದ್ದುದು. ಇವರ ಭೂ ಸುಧಾರಣೆ ಬಗೆಗಿನ ನಿಲುವು ಮತ್ತು 1971–73ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾಗಿದ್ದಾಗ ತೆಗೆದುಕೊಂಡ ನಿರ್ಧಾರಗಳು ಇದಕ್ಕೆ ಸಾಕ್ಷಿ. ಅವರ

ದಕ್ಷತೆ ಮತ್ತು ಬೌದ್ಧಿಕ ಸಾಮರ್ಥ್ಯಕ್ಕಿಂತ ಮುಂದೆ ಅವರು ರಾಜಕೀಯವಾಗಿ ಮೇಲ್ದರ್ಜೆ ಪಡೆದದ್ದು ಅವರು ಪಕ್ಷಕ್ಕೆ ಮತ್ತು ಅದರ ನಾಯಕರಿಗೆ ತೋರಿದ ನಿಷ್ಠೆಯೇ ಕಾರಣ.ಪ್ರಸಕ್ತ ಕೃತಿಯಲ್ಲಿ ನರಸಿಂಹರಾವ್ ಅವರ ವ್ಯಕ್ತಿತ್ವದ ಹಲವು ಅಪರಿಚಿತ ಆಯಾಮಗಳು ಸುಂದರವಾಗಿ ಚಿತ್ರಿತವಾಗಿದೆ. ಅವರ ಬಹುಭಾಷಾ ಪಾಂಡಿತ್ಯವಂತೂ ಎಲ್ಲರಿಗೂ ತಿಳಿದ ವಿಷಯ. ಇಳಿವಯಸ್ಸಿನಲ್ಲೂ ಅವರು ಹೊಸ ಭಾಷೆಗಳನ್ನು ಸುಲಭವಾಗಿ ಕಲಿಯಬಲ್ಲವರಾಗಿದ್ದರು. ಅಚ್ಚರಿಯ ಸಂಗತಿ ಎಂದರೆ ಈ ಭಾಷೆಗಳ ಪಟ್ಟಿಯಲ್ಲಿ COBOL ಮತ್ತು UNIXಗಳೂ ಇವೆ.ಎಂಬತ್ತರ ದಶಕದಲ್ಲೇ ಸಿಂಗಪುರದಿಂದ ಲ್ಯಾಪ್‌ಟಾಪ್‌ ತರಿಸಿದ್ದ ಅವರು ಸಲೀಸಾಗಿ ತಾವೇ ಉಪಯೋಗಿಸುತ್ತಿದ್ದರು. ಏಕಾಂತದಲ್ಲವರು ಹಿಂದೂಸ್ತಾನಿ ಸಂಗೀತ ಕೇಳುತ್ತಿದ್ದರು. ಅವರಿಗೆ ಇಷ್ಟವಾದ ಮಧ್ಯಕಾಲೀನ ತೆಲುಗುಕೃತಿ ‘ರಾಘವ ಪಾಂಡವೀಯಂ’ – ಕೃತಿಯುದ್ದಕ್ಕೂ ಶ್ಲೇಷೆಯನ್ನು ಉಪಯೋಗಿಸಿ ರಾಮಾಯಣ ಮಹಾಭಾರತ – ಎರಡನ್ನೂ ಅರ್ಥೈಸಬಹುದಾದದ್ದು.‘ಹಾಫ್ ಲಯನ್’ ಕೃತಿಯು ಅಭ್ಯಾಸಾರ್ಹವಾಗಿರುವುದು ನಾಲ್ಕು ಅಂಶಗಳಿಂದ:

1. ಆರ್ಥಿಕ ಉದಾರೀಕರಣಕ್ಕೆ ನಿಜವಾದ ಕಾರಣಕರ್ತರು ಪಿ.ವಿ.ಎನ್. ಅವರಲ್ಲ. ಅಂದಿನ ಸಂಕಷ್ಟದ ಪರಿಸ್ಥಿಯೇ ಹಾಗಿತ್ತು. ಹಾಗೇನಾದರೂ ಓರ್ವ ವ್ಯಕ್ತಿಯನ್ನು ನಿರ್ದೇಶಿಸಿ ಹೇಳಬೇಕಾದರೆ ಆ ನಿಟ್ಟಿನಲ್ಲಿ ಅರ್ಥಶಾಸ್ತ್ರಜ್ಞರಾದ ಮನಮೋಹನ್ ಸಿಂಗ್ ಅವರನ್ನು ಗುರ್ತಿಸಬೇಲು – ಹೀಗೆ ಕೆಲವು ವಾದಗಳು ಹಲವು ವರ್ಷಗಳಿಂದ ಬೆಳೆದುಕೊಂಡು ಬಂದಿವೆ.ಸಾಕ್ಷ್ಯಾಧಾರಸಹಿತವಾಗಿ ವಿನಯ್ ಅವರು ನಿರೂಪಿಸಿರುವುದು ಇಷ್ಟು: ಈ ವಾದಗಳನ್ನು ರಾಜಕೀಯ ಕಾರಣಗಳಿಂದಾಗಿ ಪಿ.ವಿ.ಎನ್. ಅವರೇ ಬೆಳೆಯಬಿಟ್ಟರು. ಉದಾರನೀತಿಯ ರೂಪುರೇಷೆ ಹಿಂದಿನ ಸರ್ಕಾರಗಳಲ್ಲಿಯೂ ಚರ್ಚಿತವಾಗಿದ್ದುವು. ಆದರೆ ನಿರ್ಧಾರವನ್ನು ತೆಗೆದುಕೊಳ್ಳಲು ರಾಜಕೀಯವಾಗಿ ಹಿಂದೇಟು ಹಾಕುತ್ತಿದ್ದರು. ಸಂಖ್ಯಾಬಲ ಇಲ್ಲದಿದ್ದರೂ ಸಂಕಲ್ಪಶಕ್ತಿ ಹಾಗೂ ರಾಜಕೀಯ ತಂತ್ರದಿಂದ ಪಿ.ವಿ.ಎನ್. ಇದನ್ನು ಸಾಧಿಸಿದರು. ಮನಮೋಹನ್ ಸಿಂಗ್‌ ಅವರಲ್ಲದೆ ಬೇರೆ ಯಾರು ಹಣಕಾಸು ಸಚಿವರಾಗಿದ್ದರೂ ಆಗ ಉದಾರನೀತಿ ಜಾರಿಗೆ ಬರುತ್ತಿತ್ತು.2. ನರಸಿಂಹರಾವ್ ಅವರ ರಾಜಕೀಯ ಜೀವನದಲ್ಲಿ ಎರಡು ಪ್ರಮುಖ ಕೋಮುಗಲಭೆಗಳನ್ನು ಅವರ ಚಾರಿತ್ರ್ಯಕ್ಕೆ ಅಂಟಿದ  ಕಳಂಕದಂತೆ ಗುರ್ತಿಸಲಾಗುತ್ತದೆ. ಅವುಗಳಲ್ಲೊಂದು, 1984ರಲ್ಲಿ ಇಂದಿರಾಗಾಂಧಿಯ ಹತ್ಯೆಯ ನಂತರ ನಡೆದ ಸಿಖ್ಖರ ಸಾಮೂಹಿಕ ಹತ್ಯೆ. ಮತ್ತೊಂದು, 1992ರಲ್ಲಿ ನಡೆದ ಬಾಬ್ರಿ ಮಸೀದಿಯ ಧ್ವಂಸ ಮತ್ತು ತತ್ಕಾರಣ ನಡೆದ ಹಿಂದೂ–ಮುಸ್ಲಿಂ ಗಲಭೆ.ಕೃತಿಕಾರರು ಸಿಖ್ಖರ ಹತ್ಯಾಕಾಂಡದಲ್ಲಿ ಪಿ.ವಿ.ಎನ್. ಅವರು ಗೃಹಸಚಿವರಾಗಿ ಕಾಂಗ್ರೆಸ್ ಪಕ್ಷದವರನ್ನು ಹತೋಟಿಯಲ್ಲಿ ತರದಿದ್ದಕ್ಕೆ ಅವರನ್ನೇ ದೂಷಿಸುತ್ತಾರೆ. ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ಕಚೇರಿಯ ಆದೇಶದ ಮೇರೆಯಂತೆ ಪಿ.ವಿ.ಎನ್. ನಿಷ್ಕ್ರಿಯರಾಗಿರಬೇಕಿರಲಿಲ್ಲ. ಬಾಬ್ರಿ ಪ್ರಕರಣದಲ್ಲಿ ಕೆಲವು ಸಾಂವಿಧಾನಿಕ ಬಿಕ್ಕಟ್ಟುಗಳಿಂದ ಅವರ ಕೈ ಕಟ್ಟಲಾಗಿತ್ತು. ಅವರು ಕೆಲವು ವಿರೋಧ ಪಕ್ಷದ ನಾಯಕರ ಮಾತುಗಳನ್ನು ಕೇಳಬಾರದಿತ್ತೆಂದು ಕೃತಿಕಾರರ ಅಭಿಪ್ರಾಯ.3. ಕಾಂಗ್ರೆಸ್ ಪಕ್ಷದ ಒಬ್ಬ ನಿಷ್ಠ ಕಾರ್ಯಕರ್ತನೆಂದು ನರಸಿಂಹರಾವ್ ತಮ್ಮ ಜೀವನವನ್ನು ಸವೆಸಿದರು. ಪಕ್ಷ ಮತ್ತು ಸರ್ಕಾರವನ್ನು ಉಳಿಸಿಕೊಳ್ಳಲು ಅವರು ಯಾವುದೇ ತಂತ್ರವನ್ನು ಹೂಡಲು ಹಿಂಜರಿಯುತ್ತಿರಲಿಲ್ಲ. ಆದರೆ ಅವರು ತಮ್ಮ ರಾಜಕಾರಣದಿಂದ ವೈಯಕ್ತಿಕವಾಗಿ ಲಾಭಪಡೆದುಕೊಂಡವರಲ್ಲ. ತಮ್ಮ ಕುಟುಂಬದವರನ್ನು ರಾಜಕೀಯದಿಂದ ದೂರ ಇರಿಸಿದ್ದರು.ಹೀಗೆಂದ ಮಾತ್ರಕ್ಕೆ ಅವರು ಮಡಿವಂತಿಕೆಯ ಜೀವನವನ್ನೂ ನಡೆಸಿದವರಲ್ಲ. ಆಂಧ್ರದ ಮತ್ತೊಬ್ಬ ರಾಜಕಾರಣಿಯ ಜೊತೆಗೆ ಇದ್ದ ಅವರ ವಿವಾಹೇತರ ಸಂಬಂಧವನ್ನೂ ಕೃತಿಕಾರರು ದಾಖಲಿಸಿದ್ದಾರೆ.4. ಭಾರತ ಅಣುಬಾಂಬ್ ತಯಾರಿಕೆಯ ಸಾಮರ್ಥ್ಯವನ್ನು ಭಾರತ ಗಳಿಸುವುದರಲ್ಲಿ ನರಸಿಂಹರಾವ್ ಅವರು ತಾವು ಕೇಂದ್ರ ಸಚಿವರಾದಾಗಿಂದಲೂ ನೀಡಿದ ಪ್ರೋತ್ಸಾಹ ಹಾಗೂ ವಹಿಸಿದ ನೇತೃತ್ವವನ್ನು ಪ್ರಪ್ರಥಮ ಬಾರಿಗೆ ಈ ಕೃತಿ ದಾಖಲಿಸಿದೆ. ಆ ಮೂಲಕ ಅಣುಬಾಂಬ್‌ ಶಕ್ತಿಯನ್ನು ಭಾರತಕ್ಕೆ ತಂದುಕೊಟ್ಟ ಕೀರ್ತಿ ನರಸಿಂಹರಾವ್‌ ಅವರಿಗೆ ಸಲ್ಲುವಂತೆ ಪುಸ್ತಕ ಒತ್ತಾಯಿಸುತ್ತದೆ.ಈ ಕೃತಿಯನ್ನು ಓದಿದ ನಂತರ ವಿಷಾದಭಾವವೊಂದು ಮನಸ್ಸನ್ನು ಆವರಿಸುತ್ತದೆ. ಸ್ವಾತಂತ್ರ್ಯಾನಂತರದಲ್ಲಿ ಕೈಗೊಂಡ ಅತ್ಯಂತ ಯಶಸ್ವಿ ಸುಧಾರಣೆಯ ರೂವಾರಿಯು ಅಧಿಕಾರದಿಂದ ಇಳಿದ ಮೇಲೆ, ಅಳಿದ ಮೇಲೆ ಕಾಂಗ್ರೆಸ್ ಪಕ್ಷ ನಡೆದುಕೊಂಡ ರೀತಿ ಉಂಟುಮಾಡುವ ವಿಷಾದವದು.ಮುಂದಿನ ಹಂತದ ಸುಧಾರಣೆಗಳನ್ನು ಕೈಗೆತ್ತಿಕೊಳ್ಳಬಲ್ಲ ನಾಯಕನಿಗಾಗಿ ನಮ್ಮ ದೇಶ ಇನ್ನೂ ಎಷ್ಟು ವರ್ಷ ಕಾಯಬೇಕು ಎನ್ನುವ ವಿಷಾದವನ್ನೂ ಪ್ರಸಕ್ತ ಕೃತಿ ಉಂಟುಮಾಡುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.