ಸೋಮವಾರ, ಮೇ 17, 2021
25 °C

ನವರಾತ್ರಿಯ ನವದುರ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಳೆಯಿಂದ 9 ದಿನ ನವರಾತ್ರಿ, 10ನೇ ದಿನ ವಿಜಯ ದಶಮಿ. ದೇವಿಯನ್ನು ನಾನಾ ರೂಪಗಳಲ್ಲಿ ಆರಾಧಿಸುವ ಉತ್ಸವ.ಬೆಂಗಳೂರು ಹಬ್ಬಕ್ಕೆ ಸಜ್ಜುಗೊಂಡಿದೆ. ದೇವಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ, ಸಂಗೀತೋತ್ಸವ, ಜತೆಗೆ ಮನೆಗಳಲ್ಲಿ ಗೊಂಬೆ ಕೂಡ್ರಿಸುವ ಸಡಗರ
.ನವರಾತ್ರಿ ಅಥವಾ ದಸರಾ ಹಬ್ಬಕ್ಕೆ ತನ್ನದೇ ಆದ ವಿಶಿಷ್ಟ ಪರಂಪರೆಯಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತದಾದ್ಯಂತ 9 ದಿನ ಆಚರಿಸುವ ನವರಾತ್ರಿಯಲ್ಲಿ ನವದುರ್ಗೆಯರ ಆರಾಧನೆಯೇ ಪ್ರಧಾನ.ಸೌಂದರ್ಯ ಲಹರೀ ಹಾಗೂ ದುರ್ಗಾ ಸಪ್ತಶತೀ ಪಾರಾಯಣ, ಹೋಮ-ಹವನ ಧಾರ್ಮಿಕ ಆಚರಣೆಯ ಜತೆಗೇ ಸಂಗೀತ, ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ದಸರಾ ವಿಶೇಷ.ದಕ್ಷಿಣದಲ್ಲಿ ವಿಜಯನಗರ ಸಾಮ್ರೋಜ್ಯದ ಆಡಳಿತವಿರುವವರೆಗೂ ಹಂಪಿಯ ಮಹಾನವಮಿ ದಿಬ್ಬದಲ್ಲಿ ನವರಾತ್ರಿ ಉತ್ಸವಗಳು ವಿಜಂಭಣೆಯಿಂದ ನೆರವೇರುತ್ತಿದ್ದವು. ವಿಜಯನಗರ ಸಾಮ್ರೋಜ್ಯದ ಪತನಾನಂತರ ಮೈಸೂರು ಒಡೆಯರು ದಸರಾ ಪರಂಪರೆಯನ್ನು ಮುಂದುವರಿಸಿಕೊಂಡು ಬಂದರು.ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದ ನಂತರ ಕರ್ನಾಟಕ ಸರ್ಕಾರವೇ ದಸರಾ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದೆ.ನಗರದ ದೇವಸ್ಥಾನಗಳಲ್ಲಿ, ಮನೆ ಮನಗಳಲ್ಲಿ ಇನ್ನು 10 ದಿನ ಹಬ್ಬವೋ ಹಬ್ಬ.ನಿತ್ಯವೂ ಒಂದೊಂದು ರೂಪದಲ್ಲಿ ದೇವಿಯ ಆರಾಧನೆ ನಡೆಯುತ್ತದೆ. ಸಂಗೀತ ನೃತ್ಯ ಉತ್ಸವಗಳು ಕಣ್ಮನಗಳಿಗೆ ಹಬ್ಬ ನೀಡಲಿವೆ. ಅಲಂಕಾರಿಕವಾಗಿ ಗೊಂಬೆಗಳನ್ನು ಪ್ರತಿಷ್ಠಾಪಿಸುವ ಸಂಪ್ರದಾಯ ಅನೇಕ ಮನೆಗಳಲ್ಲಿದೆ. ಒಟ್ಟಾರೆ ಇದು ಶಕ್ತಿ ಶಾರದೆಯ ಮೇಳ.  ಒಂಬತ್ತು ರೂಪ

ದುರ್ಗೆ ಅಥವಾ ಶಕ್ತಿ ಪೂಜೆಯೇ ಪ್ರಧಾನವಾಗಿರುವ ದಸರಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನವದುರ್ಗೆಯರಾದ ಶೈಲಪುತ್ರೀ, ಬ್ರಹ್ಮಚಾರಿಣೀ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ ಹಾಗೂ ಸಿದ್ಧಿದಾತ್ರಿ ದೇವಿಯರನ್ನು ಒಂಭತ್ತು ದಿನ ಆರಾಧಿಸಲಾಗುತ್ತದೆ.ಈ ಪರಂಪರೆಯನ್ನು ಶ್ರೀದೇವಿ ಕವಚದಲ್ಲಿ

ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮಚಾರಿಣೀ

ತತೀಯಂ ಚಂದ್ರಘಂಟೀತಿ ಕೂಷ್ಮಾಂಡೇತಿ ಚತುರ್ಥಕಮ್

ಪಂಚಮಂ ಸ್ಕಂದ ಮಾತೇತಿ ಷಷ್ಠಂ ಕಾತ್ಯಾಯನೀತಿ ಚ 

ಸಪ್ತಮಂ ಕಾಲರಾತ್ರಿಶ್ಚ ಮಹಾಗೌರೀತಿ ಚಾಷ್ಟಮಮ್

ನವಮಂ ಸಿದ್ಧಿದಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ

ಎಂದು ಉಲ್ಲೇಖಿಸಲಾಗಿದೆ.ದುರ್ಗೆ ಆರಾಧನೆ ಮಂತ್ರಶಾಸ್ತ್ರವಷ್ಟೇ ಅಲ್ಲ; ತಂತ್ರಶಾಸ್ತ್ರ ಹಾಗೂ ಯಂತ್ರ ಶಾಸ್ತ್ರವೂ ಆಗಿರುವುದು ವಿಶೇಷ. ಕೆಲವರು ದುರ್ಗಾ ಮಾತೆಯ ಮೂರ್ತಿಯನ್ನೂ, ಕೆಲವರು ಶ್ರೀಚಕ್ರವನ್ನೂ ಆರಾಧಿಸುವ ಪರಂಪರೆ ಅನೂಚಾನವಾಗಿದೆ. ಇದನ್ನು `ಶ್ರೀವಿದ್ಯಾ~ ಆರಾಧನೆ ಎಂದು ಪಂಡಿತರು ವಿಶ್ಲೇಷಿಸುತ್ತಾರೆ.ನವ ಆರಾಧನೆ

ದುರ್ಗಾದೇವಿಯ ಪ್ರಥಮ ಸ್ವರೂಪವನ್ನು `ಶೈಲಪುತ್ರಿ~ ಎಂದು ನವರಾತ್ರಿಯ ಮೊದಲನೇ ದಿನ ಆರಾಧಿಸುತ್ತಾರೆ. ಪರ್ವತ ರಾಜ ಹಿಮವಂತನ ಪುತ್ರಿಯಾಗಿ ಅವತರಿಸಿದ ಕಾರಣ ಈಕೆ ಶೈಲಪುತ್ರಿ~.ವೃಷಭವಾಹನೆ, ಬಲ ಹಸ್ತದಲ್ಲಿ ತ್ರಿಶೂಲ, ಎಡಹಸ್ತದಲ್ಲಿ ಕಮಲ ಪುಷ್ಪದಿಂದ ಸುಶೋಭಿತಳಾಗಿರುವ ಶೈಲಪುತ್ರಿ ದುರ್ಗೆಯನ್ನು ಮೂಲಾಧಾರ ಚಕ್ರದಲ್ಲಿ ಆರಾಧಕರು ನೆಲೆಗೊಳಿಸುತ್ತಾರೆ. ಇಲ್ಲಿಂದಲೇ ಯೋಗಸಾಧನೆಯ ಪ್ರಾರಂಭ.ನವರಾತ್ರಿಯ ದ್ವಿತೀಯ ದಿನವನ್ನು ನವಶಕ್ತಿಯರಲ್ಲಿ ಎರಡನೇ ಸ್ವರೂಪವಾದ `ಬ್ರಹ್ಮಚಾರಿಣಿ~ ದುರ್ಗಾ ಮಾತೆಯ ಆರಾಧನೆಯೊಂದಿಗೆ ನೆರವೇರಿಸಲಾಗುವುದು. ಇವಳ ಉಪಾಸನೆಯಿಂದ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ವೃದ್ಧಿಯಾಗುತ್ತದೆ.ಈಕೆಯ ಸ್ವರೂಪ ಜ್ಯೋತಿರ್ಮಯ ಮತ್ತು ಅತ್ಯಂತ ಭವ್ಯವಾಗಿದ್ದು ಬಲ ಹಸ್ತದಲ್ಲಿ ಜಪಮಾಲೆ ಹಾಗೂ ಎಡಹಸ್ತದಲ್ಲಿ ಕಮಂಡಲ ಇರುತ್ತದೆ.

ಮೂರನೇ ದಿನ `ಚಂದ್ರಘಂಟಾ~ ದೇವಿಯ ಆರಾಧನೆ. ಇವಳ ಸ್ವರೂಪ ಪರಮ ಶಾಂತಿದಾಯಕ ಹಾಗೂ ಶ್ರೇಯಸ್ಕರ. ದಶಹಸ್ತಗಳುಳ್ಳ ದೇವಿಯು ಶಸ್ತ್ರ ಸಜ್ಜಿತಳಾಗಿ, ಯುದ್ಧ ಸನ್ನದ್ಧಳಾಗಿರುವಂತೆ ಕಾಣುತ್ತಾಳೆ.ದೇವಿಯ ಮಸ್ತಕದಲ್ಲಿ ಗಂಟೆಯ ಆಕಾರದ ಚಂದ್ರನಿದ್ದಾನೆ. ಆದ್ದರಿಂದಲೇ ಈಕೆ `ಚಂದ್ರಘಂಟಾ~.ದುರ್ಗಾ ಮಾತೆಯ ನಾಲ್ಕನೇ ಸ್ವರೂಪವೇ `ಕೂಷ್ಮಾಂಡಾ~. ಅಷ್ಟ ಭುಜಗಳುಳ್ಳವಳಾದ್ದರಿಂದ ಅಷ್ಟಭುಜಾದೇವಿ ಎಂದೂ ಆರಾಧಿಸುತ್ತಾರೆ.ಕಮಂಡಲು, ಧನುಷ, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆಯನ್ನು ತನ್ನ ಎಂಟು ಹಸ್ತಗಳಲ್ಲಿ ಧರಿಸಿದ್ದಾಳೆ. ಕೂಷ್ಮಾಂಡಾದೇವಿಗೆ ಬೂದುಕುಂಬಳಕಾಯಿ ಬಲಿಯೇ ಅತ್ಯಂತ ಪ್ರಿಯ. ಕುಂಬಳಕಾಯಿಯನ್ನು ಸಂಸ್ಕೃತದಲ್ಲಿ ಕೂಷ್ಮಾಂಡ ಎಂದು ಕರೆಯುತ್ತಾರೆ.ಐದನೇ ದಿನ ನವದುರ್ಗೆಯರ ಆರಾಧನೆಯನ್ನು `ಸ್ಕಂದ ಮಾತಾ~ ಸ್ವರೂಪದಲ್ಲಿ ಮಾಡಲಾಗುತ್ತದೆ. ಷಣ್ಮುಖ ಸ್ಕಂದನ ಮಾತೆಯಾದ್ದರಿಂದ ಸ್ಕಂದಮಾತಾ ಹೆಸರು ಬಂದಿದೆ. ನಾಲ್ಕು ಭುಜ-ನಾಲ್ಕು ಹಸ್ತಯುಕ್ತ ಮಾತೆಯು ಸಿಂಹವಾಹನೆ .ಸ್ಕಂದಮಾತೆಯ ಉಪಾಸನೆಯಿಂದ ಬಾಲರೂಪೀ ಸುಬ್ರಹ್ಮಣ್ಯ ಸ್ವಾಮಿಯ ಉಪಾಸನೆ ಕೂಡ ತಾನಾಗಿಯೇ ಆಗುತ್ತದೆ.ದುರ್ಗಾಮಾತೆಯ ಆರನೇ ಸ್ವರೂಪದ ಹೆಸರೇ ಕಾತ್ಯಾಯಿನಿ. ನಾಲ್ಕು ಭುಜಗಳುಳ್ಳ ಸಿಂಹವಾಹನೆಯು ಬಂಗಾರದ ವರ್ಣದಿಂದ ಹೊಳೆಯುತ್ತಿರುತ್ತಾಳೆ.ಏಳನೇ ದಿನ ಆರಾಧಿಸುವ ದುರ್ಗೆಯ ಏಳನೇ ಶಕ್ತಿಯೇ `ಕಾಲರಾತ್ರಿ~.  ಅತ್ಯಂತ ಭಯಂಕರವಾದ ಸ್ವರೂಪವುಳ್ಳವಳಾಗಿದ್ದರೂ ಯಾವಾಗಲೂ ಉಪಾಸಕನಿಗೆ ಶುಭ ಫಲವನ್ನೇ ಕರುಣಿಸುತ್ತಾಳೆ. ಆದ್ದರಿಂದಲೇ ಇವಳನ್ನು ಶುಭಂಕರೀ ಎಂದು ಪೂಜಿಸುತ್ತಾರೆ.ದಟ್ಟವಾದ ಅಂಧಕಾರದಂತೆ ಇವಳ ಶರೀರದ ವರ್ಣವು ಕಪ್ಪು. ತಲೆಗೂದಲು ಬಿಚ್ಚಿ ಹರಡಿಕೊಂಡಿದೆ. ಕತ್ತಿನಲ್ಲಿ ಮಿಂಚಿನಂತೆ ಹೊಳೆಯುತ್ತಿರುವ ಮಾಲೆಯನ್ನು ಧರಿಸಿದ್ದಾಳೆ.ಮೂರು ಕಣ್ಣುಗಳು ಬ್ರಹ್ಮಾಂಡದಂತೆ ಗೋಲವಾಗಿದ್ದು, ವಿದ್ಯುತ್ತಿನಂತೆ ಕಿರಣಗಳನ್ನು ಹೊಮ್ಮಿಸುತ್ತಿವೆ. ಕಾಲರಾತ್ರೀ ಮಾತೆಯ ವಾಹನ ಕತ್ತೆ.ಜಗದಂಬೆಯ ಎಂಟನೆ ಶಕ್ತಿಯೇ `ಮಹಾಗೌರಿ~. ವಷಭ ವಾಹನೆ, ಚತುರ್ಭುಜೆ, ಶ್ವೇತವರ್ಣೆ. ಮೇಲಿನ ಬಲಗೈಯಲ್ಲಿ ಅಭಯ ಮುದ್ರೆ, ಕೆಳಗಿನ ಬಲಗೈಯಲ್ಲಿ ತ್ರಿಶೂಲ ಮತ್ತು ಮೇಲಿನ ಎಡಗೈಯಲ್ಲಿ ಡಮರು ಹಾಗೂ ಕೆಳಗಿನ ಎಡಗೈಯಲ್ಲಿ ವರದಮುದ್ರೆ ಇದೆ.ನವರಾತ್ರಿಯ ಎಂಟನೇ ದಿನ (ದುರ್ಗಾಷ್ಟಮೀ) ಮಹಾಗೌರಿಯನ್ನು ಉಪಾಸನೆ ಮಾಡುವ ಪರಂಪರೆಯಿದೆ. ಇವಳ ಆರಾಧನೆ-ಕಪೆಯಿಂದ ಅಲೌಕಿಕ ಸಿದ್ಧಿಗಳು ಪ್ರಾಪ್ತವಾಗುತ್ತವೆ ಎಂಬ ನಂಬಿಕೆಯಿದೆ.9ನೇ ದಿನವೇ ಮಹಾನವಮಿ. ಅಂದು ದುರ್ಗೆಯನ್ನು `ಸಿದ್ಧಿದಾತ್ರಿ~ ರೂಪದಲ್ಲಿ ಪೂಜಿಸಲಾಗುತ್ತದೆ. ಸಾಧಕರಿಗೆ ಎಲ್ಲ ರೀತಿಯ ಸಿದ್ಧಿಗಳನ್ನೂ ಕರುಣಿಸುವವಳಾದ್ದರಿಂದ ಆಕೆ `ಸಿದ್ಧಿದಾತ್ರಿ~. ಮಾರ್ಕಂಡೇಯ ಪುರಾಣದಲ್ಲಿ ಉಲ್ಲೆೀಖಿತವಾಗಿರುವ ಅಷ್ಟ ಸಿದ್ಧಿಗಳಾದ `ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯೋ, ಈಶಿತ್ವ ಹಾಗೂ ವಶಿತ್ವ~ ಮುಂತಾದ ಎಲ್ಲ ಸಿದ್ಧಿಗಳನ್ನೂ ದಯಪಾಲಿಸುವ ಮಹಾಮಹಿಮೆಯಾಗಿದ್ದಾಳೆ.ಸಿದ್ಧಿದಾತ್ರಿಗೆ ಚತುರ್ಭುಜಗಳಿವೆ. ಕಮಲ ಪುಷ್ಪದ ಮೇಲೆ ವಿರಾಜಮಾನಳಾಗಿದ್ದಾಳೆ. ಚಕ್ರ, ಶಂಖ, ಗದೆ ಹಾಗೂ ಕಮಲ ಪುಷ್ಪವನ್ನು ಕೈಗಳಲ್ಲಿ ಧರಿಸಿದ್ದಾಳೆ.

ಹೀಗೆ, ನವರಾತ್ರಿಗೆ ನವದುರ್ಗೆಯರ ಆರಾಧನೆಯನ್ನು ಪರಂಪರಾನುಗತವಾಗಿ ಮಾಡಿಕೊಂಡು ಬರಲಾಗುತ್ತಿದೆ.

 

ನವದುರ್ಗೆಯರ ಏಕೀಕೃತ ಮೂರ್ತಿ ಅಷ್ಟಾದಶಭುಜ ಅಂದರೆ, ಹದಿನೆಂಟು ಭುಜ-ಹಸ್ತಗಳನ್ನುಳ್ಳ ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿ ಸ್ವರೂಪಿಣಿಯೇ ಮಹಾತ್ರಿಪುರ ಸುಂದರಿ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.