ಶುಕ್ರವಾರ, ಜೂನ್ 25, 2021
21 °C
ಮೈಸೂರು: ಎರಡನೇ ಲೋಕಸಭಾ ಚುನಾವಣೆ-1957

ನವ ಮೈಸೂರಿನ ಹೊಸ ಸಂಸದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಹರಿದು ಹಂಚಿ ಹೋಗಿದ್ದ ಕನ್ನಡ ಭಾಷಾ ಪ್ರದೇಶಗಳನ್ನು ಒಂದೇ ರಾಜ್ಯದ ನೆರಳಿನಲ್ಲಿ ತಂದ ವರ್ಷ 1956. ಮೈಸೂರು, ಮದ್ರಾಸ್, ಮುಂಬೈ, ಹೈದರಾಬಾದ್ ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವನ್ನಾಗಿ ಮಾಡಲಾಯಿತು.ಕರ್ನಾಟಕ ಏಕೀಕರಣಕ್ಕಾಗಿ ಹಲವು ದಿಗ್ಗಜರು ಮಾಡಿದ ಹೋರಾಟ ಸಾರ್ಥಕವಾಗಿತ್ತು. 1956ರ ನವೆಂಬರ್ 1ರಂದು ಹೊಸ ರಾಜ್ಯೋದಯವಾಯಿತು. ಏಕೀಕೃತ ಮೈಸೂರು ರಾಜ್ಯದ ರಾಜ್ಯಪಾಲರಾಗಿ ಮೈಸೂರು ಸಂಸ್ಥಾನದ ಕೊನೆಯ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರನ್ನು ನೇಮಿಸಲಾಯಿತು. ಹೊಸ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಕನಸು ಗರಿಗೆದರಿತ್ತು. 1957ರ ಮಾರ್ಚ್‌– ಏಪ್ರಿಲ್‌  ತಿಂಗಳಿನಲ್ಲಿ 2ನೇ ಲೋಕಸಭೆ ಚುನಾವಣೆ ಬಂದಿತ್ತು.ಭಾಷಾವಾರು ಪ್ರಾಂತ್ಯ ರಚನೆಯಲ್ಲಿ ಬಹುದೊಡ್ಡ ಪಾತ್ರ ವಹಿಸಿದ್ದ ಸರದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಆಪ್ತರಾಗಿದ್ದ ಮೈಸೂರಿನ ದೇವರಾಜ ಮಾರುಕಟ್ಟೆಯ ವರ್ತಕ ಎಂ. ಶಂಕರಯ್ಯ ಮತ್ತು ಪ್ರಗತಿಪರರಾಗಿದ್ದ ಎಸ್.ಎಂ. ಸಿದ್ದಯ್ಯ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಭ್ಯರ್ಥಿಗಳಾಗಿ ಕಣಕ್ಕಿಳಿದರು.ಮೊದಲ ಚುನಾವಣೆಯಲ್ಲಿ (1952) ಎಚ್.ಸಿ. ದಾಸಪ್ಪ ಅವರನ್ನು ಸೋಲಿಸಿದ್ದ ಯುವ ಮುಖಂಡ ಎಂ.ಎಸ್. ಗುರುಪಾದಸ್ವಾಮಿ ಮತ್ತೊಮ್ಮೆ ಕಣಕ್ಕಿಳಿದರು. 1952ರಲ್ಲಿ ಕಿಸಾನ್ ಮಜ್ದೂರ್ ಪ್ರಜಾಪಕ್ಷದಿಂದ (ಕೆಎಂಪಿಪಿ) ಅವರು ಸ್ಪರ್ಧಿಸಿ ಗೆದ್ದಿದ್ದರು. ಆದರೆ, ಸೋಷಲಿಸ್ಟ್ ಪಾರ್ಟಿಯ ಜೊತೆಗೆ ಅವರ ಪಕ್ಷವು ವಿಲೀನಗೊಂಡಿತ್ತು. ಇದರಿಂದಾಗಿ ಸಂಸದೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅವರು ಕಾರ್ಯನಿರ್ವಹಿಸಿದ್ದರು. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ, ಪತ್ರಿಕೋದ್ಯಮದ ಅನುಭವ ಮತ್ತು ವರ್ಚಸ್ಸಿನಿಂದ ಮೊದಲ ಚುನಾವಣೆಯಲ್ಲಿ ದಾಸಪ್ಪ ಅವರಿಗೆ ಆಘಾತ ನೀಡಿದ್ದರು. ಅದೇ ಚುನಾವಣೆಯಲ್ಲಿ ಕೆಎಂಪಿಪಿಯಿಂದ ಸ್ಪರ್ಧಿಸಿದ್ದ ಎಸ್.ಎಂ. ಸಿದ್ದಯ್ಯ ಅವರು ಈ ಬಾರಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು. ಅಂಬೇಡ್ಕರ್‌ ವಾದದಲ್ಲಿ ನಂಬಿಕೆಯಿಟ್ಟದ್ದ ಅವರನ್ನು ಮೈಸೂರು ಕ್ಷೇತ್ರದ ಮತದಾರರು ಕೈಬಿಡಲಿಲ್ಲ.ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ, ಆಗಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಜನಪ್ರಿಯತೆಯಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಜಯಭೇರಿ ಬಾರಿಸಿತು. ಮೈಸೂರಿನ ಕ್ಷೇತ್ರದಲ್ಲಿ ಎಂ. ಶಂಕರಯ್ಯ ಮತ್ತು ಎಸ್.ಎಂ. ಸಿದ್ದಯ್ಯ ಜಯಶಾಲಿಯಾದರು. ಗುರುಪಾದಸ್ವಾಮಿ ಮತ್ತು ಬಿಳಿಗಿರಿ ರಂಗಯ್ಯ ಪರಾಭವಗೊಂಡರು.‘ಎಂ. ಶಂಕರಯ್ಯ ಅವರು ದೇವಾಂಗ ಸಮಾಜಕ್ಕೆ ಸೇರಿದವರು. ದೇವರಾಜ ಮಾರುಕಟ್ಟೆ ವರ್ತಕರಾಗಿದ್ದ ಅವರು ಸಂಭಾವಿತ ರಾಜಕಾರಣಿಯೆಂದೇ ಚಿರಪರಿಚಿತರು. ಅವರು ಸರದಾರ್ ವಲ್ಲಭಭಾಯಿ ಪಟೇಲ್ ಅವರ ನಿಕಟವರ್ತಿಯಾಗಿದ್ದರು.

ಸಂಸದರಾದ ನಂತರ ಒಂದು ಬಾರಿ ಪಟೇಲರು ದೆಹಲಿಯಲ್ಲಿ ಆಯೋಜಿಸಿದ್ದ ವಿಶೇಷ ಔತಣ ಕೂಟಕ್ಕೆ ಆಹ್ವಾನಿತರಾಗಿದ್ದರು. ಸಿದ್ದಯ್ಯ ಅವರು ದಲಿತ ಮುಖಂಡರಾಗಿದ್ದವರು. ಗಾಂಧೀವಾದಿ ಗಳಾಗಿದ್ದ ಅವರು, ಅಂಬೇಡ್ಕರ್ ಅವರ ಅನುಯಾಯಿ ಯೂ ಆಗಿದ್ದವರು. ಒಳ್ಳೆಯ ನಾಯಕರು ಮತ್ತು ತಳಸಮುದಾಯದ ಚಿಂತಕರೂ ಆಗಿದ್ದವರು’.ಒಟ್ಟಾರೆ ಪ್ರಜಾಪ್ರಭುತ್ವ ಮಾದರಿಯನ್ನು ಒಪ್ಪಿಕೊಂಡ ನಂತರ ಎರಡನೇ ಲೋಕಸಭಾ ಚುನಾವನೆಯನ್ನು ಎದುರಿಸಿದ್ದ ಮೈಸೂರಿನ ಮತದಾರರು ಮತ್ತೊಮ್ಮೆ ಹೊಸ ಮುಖಗಳಿಗೆ ದೆಹಲಿ ದಾರಿ ತೋರಿಸಿದ್ದರು. ಒಟ್ಟು 371 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದ ಕಾಂಗ್ರೆಸ್ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.