ಶುಕ್ರವಾರ, ಮೇ 27, 2022
28 °C
ಕುಡಿದು ವಾಹನ ಚಾಲನೆ ತಡೆಗಟ್ಟಲು ಕ್ರಮ- ಔರಾದಕರ್

ನಸುಕಿನ 4ರವರೆಗೆ ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಅಪಘಾತ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಾನಮತ್ತ ವಾಹನ ಚಾಲನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಅವಧಿಯನ್ನು ಬೆಳಗಿನ ಜಾವ 4ರವರೆಗೆ ವಿಸ್ತರಿಸಲಾಗುವುದು' ಎಂದು ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್ ತಿಳಿಸಿದರು.ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ನಗರದಲ್ಲಿ ಪಾನಮತ್ತ ವಾಹನ ಚಾಲನೆಯಿಂದ ಸಂಭವಿಸುತ್ತಿರುವ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.ಪಾನಮತ್ತ ಚಾಲಕರು ಅಡ್ಡಾದಿಡ್ಡಿಯಾಗಿ ವಾಹನ ಓಡಿಸಿ ಅಮಾಯಕರ ಜೀವಕ್ಕೆ ಹಾನಿಯುಂಟು ಮಾಡುತ್ತಿದ್ದಾರೆ. ಇದರಿಂದಾಗಿ ಪಾಮನತ್ತ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಅವಧಿಯನ್ನು ಬೆಳಿಗ್ಗೆ 4 ಗಂಟೆವರೆಗೆ ವಿಸ್ತರಿಸಲಾಗುವುದು. ಈ ಮೊದಲು ರಾತ್ರಿ 1 ಗಂಟೆವರೆಗೆ ಮಾತ್ರ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿತ್ತು' ಎಂದು ಹೇಳಿದರು.ನಗರದಲ್ಲಿ ಅಪರಾಧಗಳು ಹೆಚ್ಚುತ್ತಿವೆ ಎಂದು ನಾಗರಿಕರೊಬ್ಬರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, `ಬೆಂಗಳೂರು ನಗರ ವಿಸ್ತಾರವಾಗಿ ಬೆಳೆದಿದ್ದು, ಜನಸಂಖ್ಯೆಯ ಜತೆ ಜತೆಗೆ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಆದರೆ, ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗ ಪ್ರಕಟಿಸಿರುವ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು ನಗರದಲ್ಲಿ ಅಪರಾಧ ಚಟುವಟಿಕೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಹೇಳುವುದು ಸರಿಯಲ್ಲ. ಕೊರತೆಗಳ ನಡುವೆ ಇಲಾಖೆ ಗುಣಮಟ್ಟದ ಸೇವೆ ಒದಗಿಸುತ್ತಿದೆ' ಎಂದು ತಿಳಿಸಿದರು.`ನಗರದಲ್ಲಿ ಪೊಲೀಸರ ಸಂಖ್ಯೆ ಕಡಿಮೆ ಇದೆ. ಇರುವ ಸಿಬ್ಬಂದಿಯೇ ನಿತ್ಯ 16 ರಿಂದ 17 ಗಂಟೆಗಳ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಗೃಹರಕ್ಷಕ ದಳ, ಸ್ವಯಂ ಸೇವಾ ಸಂಸ್ಥೆಗಳು, ಸೆಕ್ಯುರಿಟಿ ಏಜೆನ್ಸಿಗಳು, ಟ್ರಾಫಿಕ್ ವಾರ್ಡನ್‌ಗಳು ಪೊಲೀಸರಿಗೆ ನೆರವಾಗಿ ಒತ್ತಡವನ್ನು ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದರು.ಕ್ಲಬ್‌ಗಳ ಜತೆ ಸಂಪರ್ಕ: ಸ್ಥಳೀಯ ಮಟ್ಟದ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ಉದ್ದೇಶದಿಂದ `ಸಮುದಾಯ ಪೊಲೀಸ್', `ಜನಸ್ನೇಹಿ' ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅದೇ ರೀತಿ ನಗರ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯ ಕ್ಲಬ್‌ಗಳ ಮಾಲೀಕರ ಜತೆ ಸಂಪರ್ಕ ಹೊಂದಿದ್ದರೆ, ಅಲ್ಲಿ ನಡೆಯುವ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು. ಅಲ್ಲದೇ, ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸ್ಥಳೀಯರ ಬಗ್ಗೆಯೂ ಕ್ಲಬ್ ಮಾಲೀಕರು ಹೆಚ್ಚು ಮಾಹಿತಿ ಹೊಂದಿರುವುದರಿಂದ ಈ ತಂತ್ರ ಫಲಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.ದೂರುದಾರರ ಸಮಸ್ಯೆಗಳಿಗೆ ಸಿಬ್ಬಂದಿ ಸರಿಯಾಗಿ ಸ್ಪಂದಿಸುವುದಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಹಿರಿಯ ಅಧಿಕಾರಿಗಳು ಠಾಣೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಸ್.ರವಿ ಅವರು ಹತ್ತು ದಿನಗಳಲ್ಲಿ 24 ಠಾಣೆಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಇಂತಹ ಕಾರ್ಯಾಚರಣೆಗಳು ಮುಂದಿನ ದಿನಗಳಲ್ಲೂ ನಡೆಯಲಿವೆ ಎಂದರು.ನಗರದ ಹಲವು ಜಂಕ್ಷನ್‌ಗಳಲ್ಲಿ ಪ್ರತಿ ಮಾರ್ಗದ ಸಂಚಾರಕ್ಕೆ 180 ಸೆಕೆಂಡ್‌ಗಳ ಕಾಲ ಕಾಯಬೇಕಿದೆ. ಈ ವೇಳೆಗಾಗಲೇ ಹೆಚ್ಚು ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಹೀಗಾಗಿ, ಸಿಗ್ನಲ್‌ನ ಸಮಯವನ್ನು ಕಡಿಮೆಗೊಳಿಸಿದರೆ ಅನುಕೂಲವಾಗುತ್ತದೆ ಎಂದು ಸಾರ್ವಜನಿಕರು ಸಲಹೆ ನೀಡಿದರು. ಈ ಬಗ್ಗೆ ಮಾತನಾಡಿದ ಔರಾದಕರ್, `ಸಿಗ್ನಲ್ ಸಮಯದ ಮಿತಿ ಬಗ್ಗೆ ಪರಿಶೀಲನೆ ನಡೆಸುವಂತೆ ಈಗಾಗಲೇ ಸಂಚಾರ ತಜ್ಞರಿಗೆ ಸೂಚನೆ ನೀಡಲಾಗಿದೆ' ಎಂದರು.ಸಂಚಾರ ದಟ್ಟಣೆಗೆ ಕ್ರಮ: `ನಗರದ ಒಟ್ಟು 142 ಬಸ್ ನಿಲ್ದಾಣಗಳ ಬಳಿ ಸಂಚಾರ ಸಮಸ್ಯೆ ಉಂಟಾಗುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ದಯಾನಂದ ತಿಳಿಸಿದರು.ಯಶವಂತಪುರ, ಬಸವನಗುಡಿ, ಕೆ.ಜಿ.ರಸ್ತೆ ಸೇರಿದಂತೆ ನಗರದ ವಿವಿಧ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿರುವ ಬಗ್ಗೆ ಸಾರ್ವಜನಿಕರ ದೂರುಗಳಿಗೆ ಪ್ರತಿಕ್ರಿಯಿಸಿದ ಅವರು, `ಪೊಲೀಸ್ ಇಲಾಖೆ ಒಂದರಿಂದಲೇ ಸಂಚಾರ ದಟ್ಟಣೆಯನ್ನು ಸಂಪೂರ್ಣವಾಗಿ ನಿವಾರಿಸುವುದು ಕಷ್ಟ ಸಾಧ್ಯ. ನಗರದ 142 ಬಸ್ ನಿಲ್ದಾಣಗಳ ಬಳಿ ಸಂಚಾರ ಸಮಸ್ಯೆ ಇದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು' ಎಂದರು.ಎಫ್‌ಕೆಸಿಸಿಐ ಅಧ್ಯಕ್ಷ ಆರ್ ಶಿವಕುಮಾರ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಕಮಲ್‌ಪಂತ್, ಜಂಟಿ ಪೊಲೀಸ್ ಕಮಿಷನರ್‌ಗಳಾದ ಬಿ.ಕೆ.ಸಿಂಗ್ ಹಾಗೂ ಎಸ್.ರವಿ ಸಂವಾದದಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.