ಶುಕ್ರವಾರ, ಮೇ 20, 2022
27 °C

ನಾಕ್‌ಔಟ್‌ಗೆ ಇನ್ನೊಂದು ಹೆಜ್ಜೆ

ಮಹಮ್ಮದ್ ನೂಮಾನ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮಹೇಂದ್ರ ಸಿಂಗ್ ದೋನಿ ಬಳಗ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಲೀಗ್ ಹಂತದಲ್ಲಿ ಅರ್ಧ ಹಾದಿಯನ್ನು ಸವೆಸಿದೆ. ಮೂರು ಪಂದ್ಯಗಳು ಈಗಾಗಲೇ ಕೊನೆಗೊಂಡರೆ, ಇನ್ನು ಅಷ್ಟೇ ಪಂದ್ಯಗಳು ಬಾಕಿಯುಳಿದಿವೆ. ಕಪ್ ಗೆಲ್ಲುವ ಫೇವರಿಟ್ ಎಂಬ ಹಣೆಪಟ್ಟಿ ಹೊತ್ತುಕೊಂಡಿರುವ ತಂಡ ಇದುವರೆಗೆ ನಡೆದ ಪಂದ್ಯಗಳಲ್ಲಿ ತೋರಿದ ಪ್ರದರ್ಶನ ಅಷ್ಟೊಂದು ತೃಪ್ತಿಕರವಲ್ಲ. ದುರ್ಬಲ ತಂಡಗಳ ವಿರುದ್ಧ ಭರ್ಜರಿ ಗೆಲುವು ಪಡೆಯಬೇಕಾಗಿದ್ದ ಭಾರತ ಅದರಲ್ಲಿ ವಿಫಲವಾಗಿದೆ.‘ಟೀಮ್ ಇಂಡಿಯಾ’ 10ನೇ ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯವನ್ನು ಫೆಬ್ರುವರಿ 19 ರಂದು ಆಡಿತ್ತು. ಆ ಬಳಿಕ ಫೆ. 27 ರಂದು ಇಂಗ್ಲೆಂಡ್ ವಿರುದ್ಧ ಎರಡನೇ ಪಂದ್ಯ ಆಡಿದ್ದರೆ, ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐರ್ಲೆಂಡ್ ತಂಡದ ಸವಾಲನ್ನು ಎದುರಿಸಿತ್ತು. ಅಂದರೆ 16 ದಿನಗಳ ಅಂತರದಲ್ಲಿ ಆಡಿದ್ದು ಮೂರು ಪಂದ್ಯಗಳನ್ನು ಮಾತ್ರ.ಇದೀಗ ಹೆಚ್ಚಿನ ಬಿಡುವು ಇಲ್ಲದೆ ಎರಡು ಪಂದ್ಯಗಳನ್ನು ಆಡಬೇಕಾಗಿದೆ. ಐರ್ಲೆಂಡ್ ವಿರುದ್ಧದ ಹೋರಾಟದ ಎರಡು ದಿನಗಳ ವಿಶ್ರಾಂತಿಯ ಬಳಿಕ ಹಾಲೆಂಡ್ ತಂಡದ ಜೊತೆ ಪೈಪೋಟಿ ನಡೆಸಲಿದೆ. ಇಲ್ಲಿನ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆಯುವ ಪಂದ್ಯದಲ್ಲಿ ಭಾರತ ‘ಆರೆಂಜ್ ಪಡೆ’ಯ ಸವಾಲನ್ನು ಎದುರಿಸಲಿದೆ. ಅದಾದ ಎರಡು ದಿನಗಳ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಮಹತ್ವದ ಪಂದ್ಯ ಇದೆ. ಈ ಪಂದ್ಯ ಮಾರ್ಚ್ 12 ರಂದು ನಾಗಪುರದಲ್ಲಿ ನಡೆಯಲಿದೆ. ಆದರೆ ಲೀಗ್‌ನ ಕೊನೆಯ ಪಂದ್ಯಕ್ಕೆ ಮುನ್ನ ದೋನಿ ಪಡೆಗೆ ಹೆಚ್ಚಿನ ವಿಶ್ರಾಂತಿ ಲಭಿಸಲಿದೆ. ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯ ಚೆನ್ನೈನಲ್ಲಿ ಮಾ. 20 ರಂದು ನಡೆಯಲಿದೆ.ಬೆಂಗಳೂರಿನಲ್ಲಿ ಭಾನುವಾರ ಐರ್ಲೆಂಡ್ ವಿರುದ್ಧ ಪಡೆದ ಐದು ವಿಕೆಟ್‌ಗಳ ಗೆಲುವಿನಿಂದ ಭಾರತ ಇದೀಗ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ‘ಬಿ’ ಗುಂಪಿನಲ್ಲಿ ಇಂಗ್ಲೆಂಡ್ ಹಾಗೂ ಭಾರತ ಐದು ಪಾಯಿಂಟ್ ಹೊಂದಿವೆ. ಆದರೆ ‘ಮಹಿ’ ಬಳಗ ಇಂಗ್ಲೆಂಡ್‌ಗಿಂತ ಒಂದು ಪಂದ್ಯ ಕಡಿಮೆ ಆಡಿದೆ. ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಮೂರು ಪಂದ್ಯಗಳನ್ನು ಆಡಿದ್ದು, ತಲಾ ನಾಲ್ಕು ಪಾಯಿಂಟ್ ಹೊಂದಿವೆ.ಭಾರತ ಈ ಟೂರ್ನಿಯ ಕ್ವಾರ್ಟರ್‌ಫೈನಲ್ ಪ್ರವೇಶಿಸುವುದು ಖಚಿತ. ಆದರೆ ಆತ್ಮವಿಶ್ವಾಸವನ್ನು ಹೊತ್ತುಕೊಂಡು ನಾಕೌಟ್ ಹಂತಕ್ಕೆ ಪ್ರವೇಶಿಸಬೇಕಾದರೆ ಇನ್ನುಳಿದ ಮೂರೂ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವುದು ಅಗತ್ಯ. ‘ಬೌಲಿಂಗ್‌ನಲ್ಲಿ ಸುಧಾರಣೆ ಕಂಡುಬರುತ್ತಿದೆ. ಆದರೆ ಫೀಲ್ಡಿಂಗ್ ಇನ್ನೂ ಸುಧಾರಿಸಿಕೊಳ್ಳಬೇಕಿದೆ’ ಎಂದು ಐರ್ಲೆಂಡ್ ವಿರುದ್ಧದ ಪಂದ್ಯದ ಬಳಿಕ ಮಹಿ ಹೇಳಿದ್ದರು. ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಮಹಾಸಮರಕ್ಕೆ ಮುನ್ನ ಭಾರತ ಈ ವಿಭಾಗದಲ್ಲಿ ಚೇತರಿಕೆ ಕಾಣಬೇಕು. ವಿವಿಧ ವಿಭಾಗಗಳಲ್ಲಿ ಸುಧಾರಣೆ ತಂದುಕೊಳ್ಳಲು ಹಾಲೆಂಡ್ ವಿರುದ್ಧದ ಪಂದ್ಯ ಉತ್ತಮ ಅವಕಾಶ ಮಾಡಿಕೊಟ್ಟಿದೆ.ಬಾಂಗ್ಲಾ ಮತ್ತು ಐರ್ಲೆಂಡ್ ವಿರುದ್ಧ ಲಭಿಸಿದ ಗೆಲುವು ನಿರೀಕ್ಷಿತ. ಆದರೆ ಅದು ಅಷ್ಟು ಸುಲಭದಲ್ಲಿ ಲಭಿಸಿಲ್ಲ ಎಂಬುದು ನಿಜ. ಇಂಗ್ಲೆಂಡ್ ವಿರುದ್ಧ 338 ರನ್ ಪೇರಿಸಿಯೂ ತಂಡಕ್ಕೆ ಗೆಲುವು ಪಡೆಯಲು ಆಗಲಿಲ್ಲ. ‘ಟೈ’ಗೆ ತೃಪ್ತಿಪಟ್ಟುಕೊಂಡಿತ್ತು. ಯುವರಾಜ್ ಆಲ್‌ರೌಂಡ್ ಪ್ರದರ್ಶನ ನೀಡಿದ್ದರಿಂದ ಐರ್ಲೆಂಡ್ ವಿರುದ್ಧ ಜಯ ದೊರೆತಿದೆ. ಆದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐರ್ಲೆಂಡ್ ಹೊಂದಿರುವ ಅನುಭವವನ್ನು ನೋಡಿದಾಗ ಭಾರತದ ಗೆಲುವಿನ ಅಂತರ ತೀರಾ ಸಪ್ಪೆ ಎನಿಸುತ್ತದೆ.ವಿಶ್ವಕಪ್‌ನಂತಹ ಟೂರ್ನಿಯಲ್ಲಿ ತಂಡವೊಂದು ಪಂದ್ಯದಿಂದ ಪಂದ್ಯಕ್ಕೆ ತನ್ನ ಪ್ರದರ್ಶನವನ್ನು ಉತ್ತಮಪಡಿಸುತ್ತಾ ಸಾಗಬೇಕು. ಆದರೆ ದೋನಿ ಬಳಗ ಅದರಲ್ಲಿ ವಿಫಲವಾಗಿದೆ ಎಂಬುದು ಇದುವರೆಗಿನ ಪಂದ್ಯಗಳನ್ನು ನೋಡಿದರೆ ಸ್ಪಷ್ಟವಾುತ್ತದೆ. ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳಿಗೆ ಮುನ್ನ ಎಲ್ಲ ವಿಭಾಗಗಲ್ಲೂ ‘ಪರ್ಫೆಕ್ಟ್’ ಎನಿಸಿಕೊಳ್ಳುವ ಸವಾಲು ಭಾರತದ ಮುಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.