ಶುಕ್ರವಾರ, ಜೂನ್ 25, 2021
30 °C

ನಾಗರಿಕ ಸೇವೆಗಳ ಖಾತರಿ ಅಧಿನಿಯಮ ಅನುಷ್ಠಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ತಾಲ್ಲೂಕಿನಲ್ಲಿ ನಾಗರಿಕ ಸೇವಾಖಾತರಿ ಅಧಿನಿಯಮವನ್ನು ಮಾರ್ಚ್ 1ರಿಂದ ಅನುಷ್ಠಾನಗೊಳಿಸಿದ್ದು, ಮಾರ್ಚ್ 1ರಿಂದ 19ರವರೆಗೆ ಈ ಅಧಿನಿಯಮದ ಅಡಿ ಒಟ್ಟು 4,138 ಅರ್ಜಿಗಳು ಬಂದಿವೆ. ಆ ಪೈಕಿ 3,083 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರು ಸರ್ಕಾರಕ್ಕೆ ಮಾಹಿತಿ ನೀಡಿದರು.ಅಧಿನಿಯಮದ ಅನುಷ್ಠಾನದ ಸಂದರ್ಭದಲ್ಲಿ ಉಂಟಾಗಿರುವ ಸಾಧಕ-ಬಾಧಕಗಳ ಕುರಿತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಆಡಳಿತ ಸುಧಾರಣೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಮಟ್ಟದ ಇಲಾಖಾ ಕಾರ್ಯದರ್ಶಿಗಳ ಜತೆ ಮಂಗಳವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಿದ ಚರ್ಚೆಯಲ್ಲಿ ಭಾಗವಹಿಸಿ ಈ ಮಾಹಿತಿ ನೀಡಿದರು.ನಾಗರಿಕ ಸೇವಾ ಖಾತರಿ ಅಧಿನಿಯಮದಡಿ ವಿವಿಧ ಇಲಾಖೆಗಳ ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸ್ವೀಕೃತವಾಗಿರುವ ಅರ್ಜಿಗಳ ಸೇವೆಯನ್ನು ನಿಗದಿತ ಅವಧಿಯೊಳಗೆ ತ್ವರಿತಗತಿಯಲ್ಲಿ ನೀಡಲಾಗುತ್ತಿದೆ. ಕೆಲವು ಸೇವಾ ವಿಷಯಕ್ಕೆ ಸಂಬಂಧಿಸಿದಂತೆ ಅನುಷ್ಠಾನದ ಸಂದರ್ಭದಲ್ಲಿ ಉಂಟಾದ ಸಾಧಕ- ಬಾಧಕಗಳ ಬಗ್ಗೆ ಮಾಹಿತಿ ನೀಡಿದರು. ಸೇವಾಖಾತರಿ ಅಧಿನಿಯಮದ ಅನುಷ್ಠಾನವು ಜಿಲ್ಲೆಯಲ್ಲಿ ಉತ್ತಮವಾಗಿ ನಡೆಯುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದರು.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್. ಜಯರಾಂ ಮಾತನಾಡಿ, ಈ ಅಧಿನಿಯಮ ನಾಗರಿಕರಿಗೆ ಕಾಲಮಿತಿ ಒಳಗೆ ಸೇವೆ ಒದಗಿಸುವಲ್ಲಿ ಪೂರಕವಾಗಿದೆ. ಸಾರ್ವಜನಿಕರು ತಮ್ಮ ವಿವಿಧ ಕೆಲಸಗಳಿಗಾಗಿ ಮೇಲಿಂದ ಮೇಲೆ ಕಚೇರಿಗಳಿಗೆ ಅಲೆಯುವುದು ತಪ್ಪಿದೆ.

 

ಜಿಲ್ಲೆಯಲ್ಲಿ ಈ ಅಧಿನಿಯಮ ಉತ್ತಮವಾಗಿ ಅನುಷ್ಠಾನಗೊಳ್ಳುತ್ತಿದೆ ಎಂದು ಪ್ರಧಾನ ಕಾರ್ಯದರ್ಶಿಗೆ ಮಾಹಿತಿ ನೀಡಿದರು.ಚಿತ್ರದುರ್ಗ ತಾಲ್ಲೂಕಿನಲ್ಲಿ ಇದುವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳು ಹಾಗೂ ವಿಲೇವಾರಿ ಮಾಡಿರುವ ಇಲಾಖಾವಾರು ವಿವರ ಇಂತಿದೆ.ಸಾರಿಗೆ ಇಲಾಖೆಗೆ 1,958 ಅರ್ಜಿಗಳು ಬಂದಿದ್ದು, ಆ ಪೈಕಿ 1,505 ವಿಲೇವಾರಿಯಾಗಿವೆ. ಕಂದಾಯ ಇಲಾಖೆಗೆ 1,190ರ ಪೈಕಿ 695 ಅರ್ಜಿ ವಿಲೇವಾರಿಯಾಗಿವೆ. ನಗರಸಭೆಗೆ 459 ಅರ್ಜಿಗಳ ಪೈಕಿ 384 ವಿಲೇವಾರಿಯಾಗಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 172 ಸಂಪೂರ್ಣ ವಿಲೇವಾರಿಯಾಗಿವೆ.

 

ವಾಣಿಜ್ಯ ತೆರಿಗೆ ಇಲಾಖೆಗೆ 142 ರ ಪೈಕಿ 127 ಅರ್ಜಿ ವಿಲೇವಾರಿಯಾಗಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ 76 ಅರ್ಜಿಗಳ ಪೈಕಿ 65 ವಿಲೇವಾರಿಯಾಗಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 116 ಅರ್ಜಿಗಳು ಬಂದಿದ್ದು 116 ಅರ್ಜಿಗಳು ವಿಲೇವಾರಿಯಾಗಿವೆ ಎಂದು ಸರ್ಕಾರಕ್ಕೆ ವರದಿ ಮಾಡಲಾಯಿತು. ಕಾರ್ಮಿಕ ಇಲಾಖೆಗೆ 16 ಅರ್ಜಿಗಳು ಬಂದಿದ್ದು, 16 ಅರ್ಜಿಗಳು ವಿಲೇವಾರಿ ಮಾಡಲಾಗಿದೆ.

 

ಔಷಧ ನಿಯಂತ್ರಣಾಧಿಕಾರಿ ಇಲಾಖೆಯ 7 ಅರ್ಜಿಗಳ ಪೈಕಿ 2 ವಿಲೇವಾರಿ ಮಾಡಲಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ 2 ಅರ್ಜಿಗಳು ಸ್ವೀಕೃತವಾಗಿದ್ದು, 1 ಅರ್ಜಿ ವಿಲೇವಾರಿಯಾಗಿದೆ.ನಿರ್ದಿಷ್ಟ ಅವಧಿ ಒಳಗೆ ಸೇವೆಯನ್ನು ಒದಗಿಸುವಲ್ಲಿ ಹಾಗೂ ಸರ್ಕಾರಿ ಸೇವೆಯನ್ನು ಮತ್ತಷ್ಟು ಚುರುಕುಗೊಳಿಸಲು, ಅನುಷ್ಠಾನ ಅಧಿಕಾರಿಗೆ ಮತ್ತು ಸಿಬ್ಬಂದಿಗೆ ಇನ್ನೂ ಹೆಚ್ಚಿನ ತರಬೇತಿ ನೀಡಬೇಕಾದ ಅಗತ್ಯವಿದೆ ಎನ್ನುವ ಅಭಿಪ್ರಾಯವನ್ನು ಜಿಲ್ಲಾಧಿಕಾರಿ ಮತ್ತು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವ್ಯಕ್ತಪಡಿಸಿದರು.ಕಾಲಮಿತಿ ಮತ್ತು ತ್ವರಿತಗತಿಯಲ್ಲಿ ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಮಹತ್ವಾಕಾಂಕ್ಷೆ ಉದ್ದೇಶ ಹೊಂದಿರುವ ಈ ಅಧಿನಿಯಮ ಕಾಯ್ದೆಯನ್ನು ಪರಿಣಾಮಕಾರಿಯಾಗಿ ನಡೆಯುತ್ತಿದ್ದು, ಏಪ್ರಿಲ್ 1ರಿಂದ  ಇಡೀ ರಾಜ್ಯದಲ್ಲಿ ಜಾರಿಗೊಳಿಸಲಾಗುವುದು ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ  ಕೆ. ಜೈರಾಜ್ ಅವರು ತಿಳಿಸಿದರು.ಅಧಿನಿಯಮ ಅನುಷ್ಠಾನ ಕುರಿತಂತೆ ಈಗಾಗಲೇ ಅನುಷ್ಠಾನಾಧಿಕಾರಿಗಳಿಗೆ ಹಾಗೂ ಇಲಾಖೆ ಅಧಿಕಾರಿಗಳಿಗೆ ತರಬೇತಿ, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಹಾಗೂ ಅಧಿನಿಯಮದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕರಪತ್ರ, ಹಾಗೂ ಪ್ರಚಾರ ಮಾಧ್ಯಮಗಳ ಮೂಲಕ ಪ್ರಚಾರ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಆಡಳಿತ ಸುಧಾರಣೆ ಮತ್ತು ಸಿಬ್ಬಂದಿ ಇಲಾಖೆ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ತಿಳಿಸಿದರು.ವಾರ್ತಾ ಇಲಾಖೆ ಜಂಟಿ ನಿರ್ದೇಶಕಿ ಬಿ.ಆರ್. ಮಮತಾ ಅವರು ಅಧಿನಿಯಮದ ವ್ಯಾಪಕ ಪ್ರಚಾರ ಕಾರ್ಯದ ಬಗ್ಗೆ ಇಲಾಖೆ ಸಾಕಷ್ಟು ರೂಪುರೇಷೆಗಳನ್ನು ಹಮ್ಮಿಕೊಂಡಿದೆ ಎಂದು ಸಭೆಗೆ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ವಿಡಿಯೊ ಕಾನ್ಫರೆನ್ಸ್ ಹಾಲ್‌ನಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎ.ಎಸ್. ನಿರ್ವಾಣಪ್ಪ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.