ಶುಕ್ರವಾರ, ಮಾರ್ಚ್ 5, 2021
28 °C
ಕರಾವಳಿಯಾದ್ಯಂತ ನಾಗಬನಗಳಲ್ಲಿ ವಿಶೇಷ ಪೂಜೆ, ವಿವಿಧ ಅಭಿಷೇಕ

ನಾಗರ ಪಂಚಮಿ ಹಬ್ಬದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗರ ಪಂಚಮಿ ಹಬ್ಬದ ಸಂಭ್ರಮ

ಉಡುಪಿ: ಜಿಲ್ಲೆಯಾದ್ಯಂತ ಭಾನುವಾರ ಪಂಚಮಿ ಹಬ್ಬವನ್ನು ಭಕ್ತಿ– ಭಾವದಿಂದ ಆಚರಿಸಲಾಯಿತು. ಬೆಳಿಗ್ಗೆಯೇ ನಾಗಬನಗಳಿಗೆ ತೆರಳಿದ ಜನರು ಪೂಜೆ ಸಲ್ಲಿಸಿದ ದೃಶ್ಯ ಎಲ್ಲೆಡೆ ಕಂಡುಬಂತು.ನಾಗರ ಪಂಚಮಿಯ ಅಂಗವಾಗಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಹಾಗೂ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಅವರು ಪೂಜೆ ಸಲ್ಲಿಸಿದರು. ನೂರಾರು ಜನರು ದೇವಸ್ಥಾನಕ್ಕೆ ಬಂದು ದರ್ಶನ ಪಡೆದರು.ಕಡೆಕಾಡಿನ ಶ್ರೀ ಲಕ್ಷ್ಮೀನಾರಾಯಣ ಮಠದ ಶ್ರೀ ನಾಗ ದೇವರ ಗುಡಿಯಲ್ಲಿ ಶ್ರೀಶ ಭಟ್ ಅವರ ನೇತೃತ್ವದಲ್ಲಿ ಪೂಜೆ ನಡೆಯಿತು. ಆ ಭಾಗದ ಜನರು ಗುಡಿಗೆ ಬಂದು ಪೂಜೆ ಮಾಡಿದರು.ಉಡುಪಿಯ ಹೊರ ವಲಯದ ದೊಡ್ಡಣಗುಡ್ಡೆಯ ಸಗ್ರಿಯ ನೈಸರ್ಗಿಕ ನಾಗಬನದಲ್ಲಿಯೂ ವಿಶೇಷ ಪೂಜೆ ಮಾಡಲಾಯಿತು. ನಾಗನಿಗೆ ಹಾಲಿನ ಅಭಿಷೇಕ, ಸಿಯಾಳ ಅಭಿಷೇಕ ಮಾಡಿ ತಂಬಿಕ ಅರ್ಪಿಸಲಾಯಿತು. ಉಡುಪಿ ನಗರದ ಕಿದಿಯೂರು ಹೋಟೆಲ್‌ ಮುಂಭಾಗ ಇರುವ ನಾಗಬನದಲ್ಲಿಯೂ ಅಭಿಷೇಕ ನಡೆಯಿತು. 108 ಲೀಟರ್ ಹಾಲಿನಿಂದ ಅಭಿಷೇಕ ಮಾಡಿ ನಂತರ ಪೂಜಿಸಲಾಯಿತು. ಮಣಿಪಾಲದ ಸಮೀಪದ ಮಂಚಿಕರೆಯ ನಾಗಬನದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡಿದ್ದರು. ಕುಂದಾಪುರ ಹಾಗೂ ಕಾರ್ಕಳ ತಾಲ್ಲೂಕಿನ ವಿವಿಧ ಭಾಗಗಳಲ್ಲಿರುವ ನಾಗಬನ ಹಾಗೂ ದೇವಸ್ಥಾನಗಳಲ್ಲಿ ಯೂ ನಾಗರ ಪಂಚಮಿ ಸಂಭ್ರಮದಿಂದ ಆಚರಿಸಲಾಯಿತು.ನಾಗರ ಪಂಚಮಿ

ಕಾರ್ಕಳ:
ತಾಲ್ಲೂಕಿನ ಪ್ರಸಿದ್ಧ ನಾಗನ ಆರಾಧನಾ ಕೇಂದ್ರಗಳಲ್ಲಿ ಬುಧವಾರ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ತಾಲ್ಲೂಕಿನ ಸೂಡಾದ ಸುಬ್ರಹ್ಮಣ್ಯ ದೇವಸ್ಥಾನ, ಪಳ್ಳಿ ಗ್ರಾಮದ ನಿಂಜೂರು ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನ, ಪುತಿರುಪತಿ ಖ್ಯಾತಿಯ ವೆಂಕಟರಮಣ ದೇವಸ್ಥಾನದ ನಾಗರಕಟ್ಟೆ, ನಗರದ ಅನಂತಶಯನದ ನಾಗನಕಟ್ಟೆಯ ಹಾಗೂ ನಾಗರಬಾವಿಯ ನಾಗನಕಟ್ಟೆ, ಕಾಬೆಟ್ಟು ನಾಗನ ಬನ, ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನದ ನಾಗ ಬನಗಳಲ್ಲಿ ಬೆಳಿಗ್ಗೆಯಿಂದಲೇ ಭಕ್ತರು ಪೂಜಾದಿಗಳಲ್ಲಿ ತೊಡಗಿಕೊಂಡರು.ನಾಗನಿಗೆ ಸೀಯಾಳ ಸಹಿತ ಪಂಚಾಮೃತ ಅಭಿಷೇಕ, ಅರಸಿನ ಸಹಿತ ಸಿಂಗಾರ ಹೂವಿನ ಅಲಂಕಾರ, ತನು, ತಂಬಿಲ, ಹಣ್ಣು ಕಾಯಿ ಸಲ್ಲಿಕೆಗಳು ನಡೆದವು. ಪಳ್ಳಿ ಗ್ರಾಮದ ನಿಂಜೂರು ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಧರ್ಮದರ್ಶಿ ಅಶೋಕ ಸಾಮಗ ಅವರ ನೇತೃತ್ವದಲ್ಲಿ ಪವಮಾನ ಅಭಿಷೇಕ ಸಹಿತ ನಡೆದ ಕಲ್ಪೋಕ್ತ ಪೂಜೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.