ಗುರುವಾರ , ಏಪ್ರಿಲ್ 22, 2021
28 °C

ನಾಗಸಂದ್ರ, ಶಂಭುಕನಗರಕ್ಕೆ ಸೌಕರ್ಯ ಪೂರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌರಿಬಿದನೂರು: `ತಾಲ್ಲೂಕಿನ ಎಚ್.ನಾಗಸಂದ್ರ ಮತ್ತು ಶಂಭುಕನಗರದಲ್ಲಿ ನೀರಿನ ಸಮಸ್ಯೆ ತೀವ್ರ ಸ್ವರೂಪದಲ್ಲಿದ್ದು, ಎರಡೂ ಗ್ರಾಮಗಳಲ್ಲೂ 120 ಕೊಳವೆಬಾವಿಗಳನ್ನು ಕೊರೆಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಗ್ರಾಮಸ್ಥರಿಗೆ ಅಗತ್ಯ ಮೂಲಸೌಕರ್ಯ ಪೂರೈಸಲು ಕ್ರಮ ಕೈಗೊಳ್ಳಲಾಗುವುದು~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.ಎಚ್.ನಾಗಸಂದ್ರ ಮತ್ತು ಶಂಭುಕನಗರದ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು. `ಗ್ರಾಮಗಳಲ್ಲಿ ಸಿಮೆಂಟ್ ರಸ್ತೆ, ನೀರು ಮತ್ತು ಮೂಲಸೌಕರ್ಯಗಳ ಕೊರತೆಯಿದ್ದು, ಅವುಗಳನ್ನು ಒಂದು ತಿಂಗಳೊಳಗೆ ಪೂರೈಸಲಾಗುವುದು. ಹೈದರಾಬಾದ-ಕರ್ನಾಟಕದ ಅಭಿವೃದ್ಧಿಗೆ ಮೀಸಲಿಡಲಾಗಿರುವ 30 ಕೋಟಿ ರೂಪಾಯಿ ಹಣವನ್ನು ಗ್ರಾಮಗಳ ಅಭಿವೃದ್ಧಿಗೆ ಸದ್ಬಳಕೆ ಮಾಡಲಾಗುವುದು~ ಎಂದು ಅವರು ತಿಳಿಸಿದರು.`ಗ್ರಾಮಗಳಲ್ಲಿ ಶೌಚಾಲಯಗಳು ಇಲ್ಲದೇ ಗ್ರಾಮಸ್ಥರು ಸಂಕಷ್ಟಪಡುತ್ತಿದ್ದಾರೆ. ಶೌಚಾಲಯ ನಿರ್ಮಾಣಕ್ಕಾಗಿ ಸರ್ಕಾರ ನೀಡುವ 3 ಸಾವಿರ ರೂಪಾಯಿ ಸಾಕಾಗುವುದಿಲ್ಲ ಎಂಬ ಅರಿವಿಗೆ ಬಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ 9 ಸಾವಿರ ರೂಪಾಯಿ ಪ್ರೋತ್ಸಾಹ ಧನವನ್ನು ಒದಗಿಸಿ, ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು~ ಎಂದು ಅವರು ತಿಳಿಸಿದರು.ಇದಕ್ಕೂ ಮುನ್ನ ಎರಡೂ ಗ್ರಾಮಗಳ ದಲಿತ ಕಾಲೋನಿಗಳಿಗೆ ಭೇಟಿ ನೀಡಿದ ಗ್ರಾಮಸ್ಥರ ಗುಡಿಸಲುಗಳನ್ನು ಪರಿಶೀಲಿಸಿದರು.ಅವರ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು. ಗುಡಿಸಲುಗಳನ್ನು ತೆರವುಗೊಳಿಸಿ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಅವರು ಭರವಸೆ ನೀಡಿದರು.ಗುಡಿಸಲುಗಳಲ್ಲಿ ವಾಸಿಸುವವರೆಗೆ ಹಕ್ಕುಪತ್ರಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.

`ಸುಮಾರು 35 ವರ್ಷಗಳ ಹಿಂದೆ ನಜೀರ್‌ಸಾಬ್ ಸಚಿವರಾಗಿದ್ದಾಗ 600 ಎಕರೆ ಸರ್ಕಾರಿ ಜಮೀನಿನಲ್ಲಿ ಶಂಭುಕನಗರದ ನಿವಾಸಿಗಳಿಗೆ ಮತ್ತು ನಾಗಸಂದ್ರ ಗ್ರಾಮದ ಜೀತದಾಳುಗಳಿಗೆ ನಿವೇಶನ ಒದಗಿಸಲಾಗಿತ್ತು. ಕೆಲ ಕುಟುಂಬಗಳಿಗೆ 27 ಕೊಳವೆಬಾವಿಗಳನ್ನು ಕೊರೆಸಲಾಗಿತ್ತು. ಆದರೆ ಅವುಗಳಲ್ಲಿ ಕೆಲವಾರು ಬತ್ತಿಹೋಗಿವೆ. ಒಂದು ಸಾವಿರ ಅಡಿ ಕೊರೆದರೂ ನೀರು ಲಭ್ಯವಾಗುತ್ತಿಲ್ಲ.ನಮ್ಮ ಸಮಸ್ಯೆಗಳನ್ನು ಸರ್ಕಾರ ಪರಿಹರಿಸಬೇಕು. ನೆಮ್ಮದಿಯಿಂದ ಜೀವನ ಮಾಡಲು ಅವಕಾಶ ಮಾಡಿಕೊಡಬೇಕು~ ಎಂದು ಗ್ರಾಮಸ್ಥರು ಕೋರಿದರು.ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಶೇಖರಪ್ಪ, ಸದಸ್ಯ ನರಸಿಂಹಮೂರ್ತಿ, ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಂ.ರವಿನಾರಾಯಣರೆಡ್ಡಿ, ತಹಶೀಲ್ದಾರ್ ಆರ್.ನಾಗರಾಜಶೆಟ್ಟಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ರೆಡ್ಡಪ್ಪ ಉಪಸ್ಥಿತರಿದ್ದರು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.