ಶನಿವಾರ, ಜೂನ್ 19, 2021
26 °C

ನಾಚಿಕೆಯ ನಂಟಿಲ್ಲದೆ ಅಂಟಿ ಕುಳಿತ ರತಿ– ಕಾಮಣ್ಣ

ಪ್ರಭು ಲಕ್ಷೆಟ್ಟಿ Updated:

ಅಕ್ಷರ ಗಾತ್ರ : | |

ಕೆರೂರ: ಪ್ರತಿ ವರ್ಷಕ್ಕಿಂತ ಈ ಬಾರಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ವೈಶಿಷ್ಟ್ಯದೊಂದಿಗೆ ಆಚರಣೆ ಕಂಡ ಹೋಳಿ ಹಬ್ಬ ಶತಮಾನಗಳ ತನ್ನ ಇತಿಹಾಸದಿಂದ ಗಮನ ಸೆಳೆಯುತ್ತದೆ.ಆದರೆ ಈ ಬಾರಿ ಕಾಕತಾಳೀಯ ಎಂಬಂತೆ ಇದೇ 18 ರಂದು ಹೋಳಿ ಬಣ್ಣದಾಟ ಇದ್ದು ಪ್ರತಿ ಮಂಗಳವಾರ ಪಟ್ಟಣದಲ್ಲಿ ನಡೆವ ಪ್ರಸಿದ್ಧ ಕುರಿ, ಜಾನುವಾರು ಸಂತೆ ಬಹುತೇಕ ರದ್ದುಗೊಳ್ಳುವ ಸಂಭ ವ ಅಧಿಕವಾಗಿವೆ ವಿವಿಧ ಇಲಾಖೆ ಮೂಲಗಳು ತಿಳಿಸಿವೆ.

ಹೊಸಪೇಟೆ ಬಡಾವಣೆಯ ಶ್ರೀ ಬನಶಂಕರಿ ದೇಗುಲದಲ್ಲಿ ಪ್ರತಿಷ್ಠಾಪಿಸ­ಲಾಗುವ ರತಿ, ಮನ್ಮಥ ಮತ್ತು ಕಾಮಣ್ಣ ನ ಗಚ್ಚಿನ ವಿಗ್ರಹಗಳು ಸುಮಾರು ಒಂದು ಶತಮಾನಕ್ಕಿಂತ ಹಿಂದಿನವು. ಈ ವಿಗ್ರಹಗಳ ಠಿಕಾಣಿ ಹೊಸಪೇಟೆ ಯ ಗೌಡ್ರ ಮನೆತನದ ಶೇಷನಗೌಡ ಹಾಗು ವಿಠ್ಠಲ ಗೌಡ್ರ ಮನೆಯಲ್ಲಿ.ಹೋಳಿ ಹುಣ್ಣಿಮೆ ಮರು ದಿನವಾದ ಸೋಮವಾರ ರತಿ, ಮನ್ಮಥ ಹಾಗೂ ಕಾಮಣ್ಣರ ವಿಗ್ರಹಗಳನ್ನು ಗಲ್ಲಿಯ ಯುವಕರು ಹೆಗಲ ಮೇಲೆ ಹೊತ್ತು, ಪ್ರಮುಖ ಬೀದಿ, ಮನೆ ಮನೆ ಮನೆಗಳಿಗೆ ತೆರಳುತ್ತಾರೆ. ಭಕ್ತರು ಮನೆಗೆ ಬರುವ ಕಾಮಣ್ಣನಿಗೆ ನೈವೇದ್ಯದೊಂದಿಗೆ ಆತನ ದಹನಕ್ಕೆ ಕಟ್ಟಿಗೆ, ಕುಳ್ಳುಗಳನ್ನು ಕೊಡುವುದು ರೂಢಿ. ಕೆಲವೆಡೆ ಗಲ್ಲಿಯ ಯುವ ಪಡೆ ರಾತ್ರಿ ಕಟ್ಟಿಗೆ ಕಳುವು ಮಾಡುವುದೂ ಇದೆ.ನಂತರ ಮಧ್ಯಾಹ್ನದ ಹೊತ್ತಿಗೆ ಬನಶಂಕರಿ ದೇಗುಲ ಆವರಣಕ್ಕೆ ಬರುವ ವಿಗ್ರಹಗಳು ದೇವಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಸುತ್ತಮುತ್ತಲಿಂದ ಹಲಗೆ ಮೇಳಗಳು ತಮ್ಮ ತಾಳಕ್ಕೆ ತಕ್ಕ ಲಯದಿಂದ ನೆರೆದವರ ಗಮನ ಸೆಳೆಯುತ್ತವೆ. ಇದರಲ್ಲಿ ಹಲಗೆ ಬಡಿಯಲು ಯುವಕರಲ್ಲಿ ಪೈಪೋಟಿ ಸಹ ನಡೆ ಯುತ್ತದೆ.ಕುಳ್ಳು, ಕಟ್ಟಿಗೆಗಳ ರಾಶಿಗೆ ಸುತ್ತು ಹಾಕುವ ಮೂರು ವಿಗ್ರಹಗಳಲ್ಲಿ ಮುಖ್ಯವಾಗಿ ಕಾಮನಿಗೆ ಭಕ್ತರು ಬೇವಿನ ಎಲೆಗಳಿಂದ ಹೊಡೆದು ಸಿಟ್ಟು ತೀರಿಸಿಕೊಳ್ಳುವುದು ವಾಡಿಕೆಯಲ್ಲಿದೆ.ಆ ಬಳಿಕ ಪೇಟೆ ಗೌಡರು ಕಾಮಣ್ಣನ ದಹಿಸಲು ಹಾಕಲಾದ ಕಟ್ಟಿಗೆ ರಾಶಿಗೆ ವಿಧಿ ವಿಧಾನಗಳಂತೆ ಪೂಜೆ ಸಲ್ಲಿಸಿ, ಅಗ್ನಿ ಸ್ಪರ್ಶ ಮಾಡುವರು.

ದಹಿಸುವ ಬೆಂಕಿಯೊಳಗೆ ಹಾಕಿದ ತೆಂಗಿನಕಾಯಿ ಪಡೆಯಲು ಯುವಕರ ಗುಂಪು ಬಿಸಿಲು, ಬೆಂಕಿಯ ಝಳದಲ್ಲಿ ಪೈಪೋಟಿಗೆ ಇಳಿಯುತ್ತಾರೆ.ಇದೇ ಕಾಮನ ಬೆಂಕಿ ಮನೆಗೊಯ್ದು ಕಡಲೆ ಬೀಜ ಹುರಿದು ತಿನ್ನುವ ಪದ್ಧತಿ ಬಹು ಹಿಂದಿನಿಂದಲೂ ನಡೆದು ಬಂದಿದೆ. ಆ ಹುರಿದ ಕಡಲೆ ತಿಂದರೆ ಹಲ್ಲು ಗಟ್ಟಿಗೊಳ್ಳುತ್ತವೆ ಎಂಬ ಅಚಲ ನಂಬಿಕೆ ಭಕ್ತರಲ್ಲಿದೆ.ಸರ್ಕಾರಿ ಕಾಮನ ಮೆರವಣಿಗೆ : ಇದಕ್ಕೂ ಮುನ್ನ ಕಿಲ್ಲಾಪೇಟೆಯ ಸರ್ಕಾರಿ ಕಾಮನ ಅದ್ದೂರಿ ಮೆರವಣಿಗೆ, ಕಮತರ ಪರಿವಾರದ ನೈವೇದ್ಯ ಸಮರ್ಪಣೆ ಬಳಿಕ ಇದೇ 17 ರಂದು ಮಧ್ಯಾಹ್ನ 12 ಕ್ಕೆ ಪ್ರಮುಖ ಬೀದಿಯಲ್ಲಿ ಹೊರಟು ಕೆರೆಯ ಹತ್ತಿರದ ಮೈದಾನದಲ್ಲಿ ಅಗ್ನಿಗೆ ಅರ್ಪಿಸುವ ಆಚರಣೆ ನಡೆಯುತ್ತದೆ. ಮಹಿಳೆ, ಮಕ್ಕಳು ವೃದ್ಧರಾದಿಯಾಗಿ ಈ ಸಂದರ್ಭದಲ್ಲಿ ಪಾಲ್ಗೊಳ್ಳುತ್ತಾರೆ. ನೆಹರುನಗರ, ಹಳಪೇಟೆ, ಬಸರಿಗಿಡ ಪೇಟೆ ಇತರ ವಿವಿಧ ಬಡಾವಣೆಗಳಲ್ಲಿ ಕಾಮದಹನ ಹಲಗೆ ಮೇಳ, ಕಾಮದಹನದ ಸ್ಥಳದಲ್ಲಿ ಕಡಲೆಯ ಗಡಿಗೆ ಹುಗಿದು ನಿಗಿ ನಿಗಿ ಬೆಂಕಿ, ನೆತ್ತಿ ಸುಡುವ ಬಿಸಿಲಲ್ಲಿ ಗಡಿಗೆ ಹೆಕ್ಕಿ ತೆಗೆಯುವ ಚಾಣಾಕ್ಷತೆ ಯನ್ನು ಯುವ ಜನತೆ ಪ್ರದರ್ಶಿಸುತ್ತಾರೆ. ಯುವ ಪಡೆ ಲಬೋ ಲಬೋ ಎನ್ನುತ್ತಾ ಕಾಮನದಹನದ ವೇಳೆ ಸಂಕಟದಲ್ಲಿ ಸಾಮೂಹಿಕ ವಾಗಿ ಹೊಯ್ಕೊಳ್ಳು­ವುದನ್ನು ಕಂಡಾಗ ನಗು ಉಕ್ಕಿ ಬರುತ್ತದೆ.ರಂಗಿನಾಟ:  ಹೋಳಿ ರಂಗಿನಾಟದ ಪಟ್ಟಣದಾದ್ಯಂತ ಸಂಭ್ರಮ ಜರುಗ­ಲಿದ್ದು, ಇದರಲ್ಲಿ ಹೆಣ್ಣು ಸೋಗು, ಜೀವಂತ ಶವದ ಸೋಗು ಮತ್ತು ಬಡಾವಣೆಗಳಲ್ಲಿ ನಡೆವ ಬಣ್ಣದ ಬಂಡಿಗಳ ಪ್ರದರ್ಶನ ಎಲ್ಲರ ಹೋಳಿ ಹಬ್ಬಕ್ಕೆ ರಂಗು ತರುತ್ತವೆ. ಇವೆಲ್ಲದರ ನಡುವೆ ಯುವ ಪಡೆಯು ಹೋಳಿ ಯ ಗುಂಗು, ನಶೆಯ ಮತ್ತಿನಲ್ಲಿ ಕಾನೂನು, ಸುವ್ಯವಸ್ಥೆ ಸುಸ್ಥಿತಿಯಲ್ಲಿಡಲು ನೂರಾರು ಪೊಲೀಸರ ಪಹರೆ ಎಲ್ಲೆಡೆ ಚುರುಕಾಗಿರುತ್ತದೆ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.