ಭಾನುವಾರ, ಜನವರಿ 19, 2020
24 °C

ನಾಟಕ ಕಂಪನಿ ಪರಿವರ್ತನೆಗೊಳ್ಳಲಿ: ಪ್ರಸನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: “ವೃತ್ತಿ ನಾಟಕ ಕಂಪನಿಗಳು ಹೊಸ ರೀತಿಯ ನಾಟಕ ಕಂಪೆನಿಗಳಾಗಿ ಪರಿವರ್ತನೆಗೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ” ಎಂದು ರಂಗ ನಿರ್ದೇಶಕ ಪ್ರಸನ್ನ ಹೇಳಿದರು.ಇಲ್ಲಿನ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ರಂಗಾಯಣ ಬಹರೂಪಿ ನಾಟಕ ಸಪ್ತಾಹದ ಅಂಗವಾಗಿ ಗುರುವಾರ ಆಯೋಜಿಸಿದ್ದ ವಿಚಾರಸಂಕಿರಣ ಹಾಗೂ ರಂಗ ಸಂವಾದದಲ್ಲಿ ಉಪನ್ಯಾಸ ನೀಡಿದ ಅವರು, ವೃತ್ತಿಪರ ತಂಡಗಳು ಕರ್ನಾಟಕದಲ್ಲಿ ನಿರಂತರವಾಗಿ ಕಾರ್ಯಚಟುವಟಿಕೆಗಳನ್ನು ಮಾಡುತ್ತ ಯುವ ಕಲಾವಿದರನ್ನು ಬೆಳಕಿಗೆ ತರುವಲ್ಲಿ ಮುಂದಾಗುತ್ತಿವೆ. ಮಧ್ಯವರ್ತಿಗಳ ಅಸಹಕಾರದಿಂದ ವೃತ್ತಿಪರ ತಂಡಗಳೂ ಕೂಡ ಸ್ಥಗಿತಗೊಂಡಿರುವುದು ವಿಪರ್ಯಾಸ ಎಂದರು.ವೃತ್ತಿ ನಾಟಕ ಕಂಪನಿಯ ಸೋಲಿಗೆ ದೂರದರ್ಶನ ಹಾಗೂ ಕಂಪೆನಿಯ ಆಂತರಿಕ ಕಲಹಗಳು, ಹಳೆಯ ಮಾದರಿಯ ಪುನರ್ ನಿರ್ಮಾಣಗಳು ಮತ್ತು ಮಾಲಿಕತ್ವದಲ್ಲಿ ಅಶಿಸ್ತು ಕಾರಣ ಎಂದು ವಿಶ್ಲೇಷಿಸಿದ ಅವರು, ಧಾರವಾಡ ರಂಗಾಯಣವು ಪ್ರಾದೇಶಿಕತೆಗೆ ಹಾಗೂ ನಾಗರಿಕರಿಗೆ ಹತ್ತಿರವಾಗುವ ನಾಟಕಗಳನ್ನು ಪ್ರದರ್ಶಿಸಬೇಕು. ರಂಗಾಯಣದ ಜನಪ್ರಿಯತೆ ಅನ್ನುವುದು ಕೇಂದ್ರದ ಮಾನದಂಡವಾಗಬೇಕು. ಸಾಮಾಜಿಕ ದೃಷ್ಟಿಯಿಂದ. ಭಾಷೆ ಮತ್ತು ಪ್ರಾದೇಶಿಕತೆಯಿಂದಲೂ ಕೂಡ ರಂಗಾಯಣ ಇಂಥ ಯೋಜನೆಗಳಿಗೆ ಕೈ ಹಾಕುವುದರೆಡೆಗೆ ಮುಂದಾಗಬೇಕು ಎಂದರು.ಇಲ್ಲಿನ ರಂಗಾಯಣ ನಿರ್ದಿಷ್ಟ ರೂಪುರೇಷೆಗಳನ್ನು ಹಾಕಿಕೊಳ್ಳುವುದರ ಜೊತೆಗೆ ಸಂಪನ್ಮೂಲಗಳು ಸಹ ಹೊಂದಬೇಕು. ರಂಗಾಯಣದ ನಿರ್ದೇಶಕರನ್ನೊಳಗೊಂಡು ಕಲಾವಿದರಿಗೆ, ಕೆಲಸಗಾರರಿಗೆ ಸಿಗುವ ಸಂಭಾವನೆಗಳು ಅವರವರ ಹುದ್ದೆಯ ಅನುಸಾರ ಸಿಗಬೇಕು ಎಂದು ಹೇಳಿದರು.

ಲವಕುಮಾರ, ರಜನಿ ಗರೂಡ ಉಪಸ್ಥಿತರಿದ್ದರು.ಇದಕ್ಕೂ ಮುನ್ನ ನಡೆದ ಮೊದಲನೇ ಗೋಷ್ಠಿಯಲ್ಲಿ ರಂಣಗ ನಿರ್ದೇಶಕ ಎಸ್.ರಘುನಂದನ ಅವರು ಸ್ವಾತಂತ್ರ್ಯ- ನಾಟಕ- ಸಂಗ್ರಾಮ ಮತ್ತು ಹೋರಾಟ- ಸಮರ ಕುರಿತು ಉಪನ್ಯಾಸ ನೀಡಿದರು.

ಈ ದೇಶ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕವಾಗಿ ಸಾಕಷ್ಟು ಪಲ್ಲಟ ಕಂಡಿದೆ. ಪ್ರಸ್ತುತ ಸಂದರ್ಭದಲ್ಲಿ ನಿಜವಾದ ಸ್ವಾತಂತ್ರ್ಯ ಅನ್ನುವುದು, ಸಂಕೀರ್ಣ ಅರ್ಥ ಪಡೆದುಕೊಂಡಿದೆ.ರಾಷ್ಟ್ರ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸಾಂಸ್ಕೃತಿಕ ಸ್ವಾತಂತ್ರ್ಯ ಜೊತೆಗೆ ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆದು ನವ ಆರೋಗ್ಯಕರ ಬದುಕು, ಸಮಾಜ ನಿರ್ಮಾಣ ಮಾಡಿಕೊಳ್ಳುವ ತುರ್ತು ನಮ್ಮೆಲ್ಲರಿಗಿದೆ ಎಂದರು.ಡಾ. ಶಿವಾನಂದ ಶೆಟ್ಟರ, ಮುಕುಮದ ಮೈಗೂರ, ಡಾ. ಪ್ರಕಾಶ ಗರೂಡ ಉಪಸ್ಥಿತರಿದ್ದರು. ರಂಗಾಯಣ ನಿರ್ದೇಶಕ ನಟರಾಜ ಏಣಗಿ ಸ್ವಾಗತಿಸಿದರು. ಕಾವ್ಯಾ ಕಡಮೆ ನಿರೂಪಿಸಿದರು.

 

ಪ್ರತಿಕ್ರಿಯಿಸಿ (+)