ಬುಧವಾರ, ಏಪ್ರಿಲ್ 14, 2021
31 °C

ನಾಡಿನ ಏಕತೆಗೆ ಭಂಗ ತರುವವರಿಗೆ ಪಾಠ ಕಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಡಿನ ಏಕತೆಗೆ ಭಂಗ ತರುವವರಿಗೆ ಪಾಠ ಕಲಿಸಿ

ಶ್ರೀರಂಗಪಟ್ಟಣ: ಕರ್ನಾಟಕವನ್ನು ವಿಭಜಿಸಬೇಕು ಎಂದು ಹೇಳುವ, ಏಕತೆಗೆ ಭಂಗ ತರುವ ಜನರಿಗೆ ತಕ್ಕ ಪಾಠ ಕಲಿಸಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.ಪಟ್ಟಣದ ಶ್ರೀರಂಗನಾಥ ಕಲ್ಯಾಣ ಮಂಟಪದಲ್ಲಿ ಗುರುವಾರ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿರಿಯರ ಸತತ ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣವಾಗಿದೆ. ಕನ್ನಡ ಭಾಷಿಕರು ಹೆಚ್ಚಾಗಿರುವ ಕೆಲವು ಊರುಗಳು ಕನ್ನಡ ನಾಡಿನಿಂದ ಹೊರಗುಳಿದಿವೆ. ಈ ನಡುವೆ ರಾಜಕಾರಣಿಯೊಬ್ಬರು ಕರ್ನಾಟಕವನ್ನು ವಿಭಜಿಸಬೇಕು ಎಂದು ಹೇಳಿಕೆ ನೀಡಿದ್ದಾರೆ. ನಾಡಿನ ಸಮಗ್ರತೆಗೆ ವಿರುದ್ಧವಾದ ಅಂತಹ ಹೇಳಿಕೆಯನ್ನು ಸಮಸ್ತ ಕನ್ನಡಿಗರು ಒಕ್ಕೊರಲಿನಿಂದ ಖಂಡಿಸಬೇಕು ಎಂದು ಕೃಷಿ ಸಚಿವ ಉಮೇಶ್ ಕತ್ತಿ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.ಮೈಸೂರು ಮಹಾರಾಜ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಗುಬ್ಬಿಗೂಡು ರಮೇಶ್ ಮಾತನಾಡಿದರು. ತಹಶೀಲ್ದಾರ್ ಅರುಳ್‌ಕುಮಾರ್ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಪುರಸಭೆ ಅಧ್ಯಕ್ಷೆ ಭಾಗ್ಯ ಕೃಷ್ಣಪ್ಪ, ಮುಖ್ಯಾಧಿಕಾರಿ ಎಂ.ರಾಜಣ್ಣ, ಸದಸ್ಯ ಎಸ್.ಪ್ರಕಾಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ಅಮರನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಗದೀಶ್, ಎಪಿಎಂಸಿ ಅಧ್ಯಕ್ಷ ಬಿ.ಎಂ.ಸ್ವಾಮಿಗೌಡ, ದೈಹಿಕ ಶಿಕ್ಷಣ ಪರಿವೀಕ್ಷಕ ವೀರೇಶ್ ಲಿಂಬಿಕಾಯಿ ಇದ್ದರು. ವಿವಿಧ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.`ಕನ್ನಡ ಭಾಷೆಯ ನಿರ್ಲಕ್ಷ್ಯ ಸಲ್ಲ~

ಮದ್ದೂರು: ಕನ್ನಡ ರಾಜ್ಯೋತ್ಸವ ಕನ್ನಡಿಗರ ನಾಡಹಬ್ಬವಾಗಿದ್ದು, ಕನ್ನಡಿಗರು ಕನ್ನಡ ಭಾಷೆ ಸಂಸ್ಕೃತಿಯ ಬಗೆಗೆ ಕೇವಲ ನವೆಂಬರ್ ತಿಂಗಳಿನಲ್ಲಿ ಮಾತ್ರ ಪ್ರೀತಿ, ಅಭಿಮಾನ ಪ್ರದರ್ಶಿಸಿ ಇನ್ನುಳಿದ ಸಮಯದಲ್ಲಿ ನಿರ್ಲಕ್ಷ್ಯ ತೋರುವುದು ಸರಿಯಲ್ಲ ಎಂದು ಶಾಸಕಿ ಕಲ್ಪನಾ ಸಿದ್ದರಾಜು ಅಭಿಪ್ರಾಯಪಟ್ಟರು.ಪಟ್ಟಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಳೆಯ ಕಾರಣದಿಂದಾಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ತಾಲ್ಲೂಕು ಕಚೇರಿ ಆವರಣಕ್ಕೆ ಸ್ಥಳಾಂತರಿಸಲಾಯಿತು. ತಹಶೀಲ್ದಾರ್ ಎಂ.ಕೆ.ಸವಿತಾ ಧ್ವಜಾರೋಹಣ ನೆರವೇರಿಸಿದರು. ಶಾಲಾ ಮಕ್ಕಳ ಪ್ರಭಾತ ಫೇರಿಯನ್ನೂ ರದ್ದುಗೊಳಿಸಲಾಯಿತು. ನಂತರ ಗುರುಭವನದಲ್ಲಿ ಕಾರ್ಯಕ್ರಮ ನಡೆಸಲಾಯಿತು.ಇದೇ ಸಂದರ್ಭದಲ್ಲಿ ಸಾಹಿತಿ ಪ್ರೊ.ಜಿ.ಟಿ.ವೀರಪ್ಪ, ಕೃಷಿಕ ಅರುಣ್‌ಕುಮಾರ್, ಪತ್ರಕರ್ತ ಎಚ್.ಬಿ.ಕಾಂತರಾಜು, ಕಲಾವಿದ ಮರುಗಯ್ಯ, ಮುಖ್ಯಶಿಕ್ಷಕಿ ಎಚ್.ಸಾಕಮ್ಮ ಅವರನ್ನು ಸನ್ಮಾನಿಸಲಾಯಿತು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನೀಲಮ್ಮ, ಉಪಾಧ್ಯಕ್ಷೆ ಇಂದ್ರಾಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್, ಪುರಸಭಾ ಅಧ್ಯಕ್ಷ ಅಂಕಪ್ಪ ಎ.ಚಂದು, ಉಪಾಧ್ಯಕ್ಷೆ ಲಲಿತಮ್ಮ ಮೊದಲಾದವರು ಪಾಲ್ಗೊಂಡಿದ್ದರು. ಪಟ್ಟಣದ ವಿವಿಧ ಶಾಲಾಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.`ಕನ್ನಡದಲ್ಲೇ ಮಾತನಾಡಿ, ವ್ಯವಹರಿಸಿ~

ಪಾಂಡವಪುರ: ಪ್ರತಿಯೊಬ್ಬರು ನಿತ್ಯ ಮಾತನಾಡುವಾಗ, ವ್ಯವಹರಿಸುವಾಗ ಕನ್ನಡ ಭಾಷೆಯನ್ನೇ ಬಳಕೆ ಮಾಡಿದಲ್ಲಿ ಕನ್ನಡದ ಬೆಳವಣಿಗೆ ಸಾಧ್ಯ ಎಂದು ಉಪ ವಿಭಾಗಾಧಿಕಾರಿ ಆರ್.ಲತಾ ಹೇಳಿದರು.ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ಗುರುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿದರು. ಇದೇ ಸಂದರ್ಭದಲ್ಲಿ ವೈದ್ಯರಾದ ಡಾ.ಎಂ.ಮಾಯಿಗೌಡ, ರಂಗಭೂಮಿ ಕಲಾವಿದ ಎಚ್.ಕೆ.ಕುಳ್ಳೇಗೌಡ, ಲೇಖಕ ಹರವು ದೇವೇಗೌಡ, ನಿವೃತ್ತ ಶಿಕ್ಷಕ ಚಂದ್ರಶೇಖರಯ್ಯ, ಶಿಕ್ಷಕ ಎಂ.ರಮೇಶ್ ಅವರನ್ನು ಸನ್ಮಾನಿಸಲಾಯಿತು. ತಹಶೀಲ್ದಾರ್ ಬಿ.ಸಿ.ಶಿವಾನಂದಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ವಿ.ವಸಂತಪ್ರಕಾಶ್, ಎ.ಎಲ್.ಕೆಂಪೂಗೌಡ, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಎಚ್.ಎಂ.ರಾಮಕೃಷ್ಣ, ಉಪಾಧ್ಯಕ್ಷೆ ಗಾಯಿತ್ರಿ ಇದ್ದರು.`ನಿರಭಿಮಾನ ಕನ್ನಡಕ್ಕೆ ಕಂಟಕ~

ಕಿಕ್ಕೇರಿ: ಕನ್ನಡದ ಕಂಪು ಮಾಸಲು ನಿರಾಭಿಮಾನವೇ ಕಾರಣ ಎಂದು ಪ್ರಾಚಾರ್ಯ ಬಿ.ಮಂಚೇಗೌಡ ತಿಳಿಸಿದರು.

ಇಲ್ಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾಸ್ಕರ್ ಸ್ವಾಗತಿಸಿ, ವಿಶ್ವನಾಥ್ ವಂದಿಸಿದರು. ಶಿಕ್ಷಕ ವೃಂದದವರು ಇದ್ದರು.`ಭಾಷೆ ನಶಿಸಿದರೆ ಸಂಸ್ಕೃತಿ ನಾಶ~

ನಾಗಮಂಗಲ: ಕನ್ನಡ ಕೇವಲ ಭಾಷೆಯಲ್ಲ, ಅದೊಂದು ಸಂಸ್ಕೃತಿ. ಭಾಷೆ ನಾಶವಾದರೆ ಜನರ ಬದುಕು, ಧರ್ಮ, ಜನಾಂಗ ನಾಶವಾಗುತ್ತದೆ ಎಂದು ಸಾಹಿತಿ ಹಾಲ್ತಿ ಸೋಮಶೇಖರ್ ಅಭಿಪ್ರಾಯಪಟ್ಟರು.ಅವರು ಗುರುವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.ಕನ್ನಡದ ಐಕ್ಯತೆಗೆ ಧಕ್ಕೆಯಾಗುತ್ತಿದೆ. ಎಫ್.ಎಂ ಗಳಲ್ಲಿ ಕನ್ನಡ ಭಾಷೆ ಅಪಭ್ರಂಶವಾಗುತ್ತಿದೆ. ಕನ್ನಡ ತಾಯಿ ಇಂದಿಗೂ ತಬ್ಬಲಿಯಾಗಿದ್ದಾಳೆ ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಸುರೇಶ್‌ಗೌಡ ಮಾತನಾಡಿದರು. ತಾಲ್ಲೂಕಿನ ಕಂಚನಹಳ್ಳಿಯ ಜಾನಪದ ಕಲಾವಿದೆ ಪಾಳ್ಯದ ಗಿರಿಯಮ್ಮ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. ರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ತಹಶೀಲ್ದಾರ್ ಎಸ್.ಎಂ.ಶಿವಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಂ.ಸತ್ಯನಾರಾಯಣ, ಅಧ್ಯಕ್ಷ ಬಸವಯ್ಯ, ಆರಕ್ಷಕ ವೃತ್ತ ನಿರೀಕ್ಷಕ ಬಿ.ರಾಜು, ಪಟ್ಟಣ ಠಾಣೆಯ ಪಿಎಸ್‌ಐ ವೆಂಕಟೇಗೌಡ ಇದ್ದರು.

 

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಮಂಡ್ಯ: ರಾಜ್ಯದ ಕೆಲವು ಭಾಗಗಳಲ್ಲಿ ರಾಜ್ಯವನ್ನು ಪ್ರತ್ಯೇಕಿಸುವ ಮಾತುಗಳು ಕೇಳಿ ಬರುತ್ತಿವೆ. ಆದ್ದರಿಂದ, ಎಲ್ಲರೂ ರಾಜ್ಯದ ಒಗ್ಗಟ್ಟಿಗಾಗಿ ಮತ್ತೊಮ್ಮೆ ಹೋರಾಡಲು ಸಜ್ಜಾಗಬೇಕಿದೆ ಎಂದು ಶಾಸಕ ಎಂ.ಶ್ರೀನಿವಾಸ್ ಸಲಹೆ ನೀಡಿದರು.ಜಿಲ್ಲಾ ಆಡಳಿತ ವತಿಯಿಂದ ಗುರುವಾರ ನಗರದ ಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬೆಳಗಾವಿಯಲ್ಲಿ ಸಚಿವ ಉಮೇಶ್‌ಕತ್ತಿ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಿದ್ದರೆ. ಗುಲ್ಬರ್ಗ ಜಿಲ್ಲಾ ಪಂಚಾಯಿತಿಯಲ್ಲಿ ಪ್ರತ್ಯೇಕ ರಾಜ್ಯ ರಚಿಸ ಬೇಕೇಂಬ ನಿರ್ಣಯ ಕೈಗೊಳ್ಳಲಾಗಿದೆ. ಇಂತಹ ಘಟನೆಗಳು ಐಕ್ಯತೆಗೆ ಧಕ್ಕೆ ತರುತ್ತವೆ ಎಂದರು.ರಾಜ್ಯದಲ್ಲಿ ಇರಬೇಕಾಗಿದ್ದ ಹಲವಾರು ಕನ್ನಡ ಪ್ರದೇಶಗಳು ಪಕ್ಕದ ವಿವಿಧ ರಾಜ್ಯಗಳಲ್ಲಿವೆ. ಅವುಗಳ ಮಧ್ಯೆಯೂ ರಾಜ್ಯೋತ್ಸವವನ್ನು ಮಾಡಿಕೊಂಡು ಬರಲಾಗುತ್ತಿದೆ. ಈಗ, ರಾಜ್ಯದಲ್ಲಿಯೇ ಪ್ರತ್ಯೇಕತೆಯ ಕೂಗು ಕೇಳಿ ಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.ಪ್ರಶಸ್ತಿ ಸ್ವೀಕರಿಸಿದ ಡಾ. ರಾಮಲಿಂಗಯ್ಯ ಮಾತನಾಡಿ, ಕನ್ನಡದಲ್ಲಿ ಪ್ರಭುತ್ವ ಸಾಧಿಸುವುದರ ಜೊತೆಗೆ ಇತರ ಭಾಷೆಗಳನ್ನು ಕಲಿಯಿರಿ. ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಿ ಎಂದರು.ಕೆಲವು ದೃಶ್ಯ ಮಾಧ್ಯಮಗಳು ಜನರನ್ನು ದಾರಿ ತಪ್ಪಿಸುತ್ತಿವೆ. ಜನರನ್ನು ಮೂಢ ನಂಬಿಕೆಯತ್ತ ತಳ್ಳುತ್ತಿವೆ. ಪ್ರಳಯವಾಗುತ್ತದೆ ಎನ್ನುವುದು ಸುಳ್ಳು. ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಬೇಕು ಎಂದರು.ಪ್ರಶಸ್ತಿ ಸ್ವೀಕರಿಸಿದ ತೈಲೂರು ವೆಂಕಟಕೃಷ್ಣ ಮಾತನಾಡಿ, ಪ್ರಶಸ್ತಿಯು ನಮ್ಮೆಲ್ಲರ ಜವಾಬ್ದಾರಿ ಹೆಚ್ಚಿಸಿದೆ ಎಂದರು.

ರಾಜ್ಯೋತ್ಸವ ಸಂಭ್ರಮಕ್ಕೆ ಅಡ್ಡಿಯಾದ ಮಳೆ

ಕೃಷ್ಣರಾಜಪೇಟೆ: ಪಟ್ಟಣದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದ ಅದ್ದೂರಿ ಆಚರಣೆಗೆ ಮಳೆರಾಯ ತಣ್ಣೀರೆರಚಿದ. ಕಳೆದ ರಾತ್ರಿಯಿಂದ ಸತತವಾಗಿ ಸುರಿದ ಮಳೆಯಿಂದಾಗಿ ಆಚರಣೆಯ ಸಿದ್ಧತೆ ತೋಯ್ದು ಹೋಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲು ಸಿದ್ಧವಾಗಿದ್ದ ಶಾಲಾ ಮಕ್ಕಳು ನಿರಾಸೆ ಅನುಭವಿಸುವಂತಾಯಿತು.ತಹಶೀಲ್ದಾರ್ ಡಾ.ಎಚ್.ಎಲ್.ನಾಗರಾಜು ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು. ಕನ್ನಡ ಧ್ವಜವನ್ನು ಶಾಸಕ ಕೆ.ಬಿ.ಚಂದ್ರಶೇಖರ್ ಆರೋಹಣ ಮಾಡಿದರು. ವಿಧಾನಸಭೆ ಮಾಜಿ ಅಧ್ಯಕ್ಷ ಕೃಷ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಉಪಾಧ್ಯಕ್ಷೆ ಭುವನೇಶ್ವರಿ ಮೋಹನ್‌ಮೊದಲಾದವರು ಇದ್ದರು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.