ಶುಕ್ರವಾರ, ಏಪ್ರಿಲ್ 16, 2021
31 °C

ನಾಮ ನಿರ್ದೇಶನ ಸದಸ್ಯರ ಪ್ರಮಾಣವಚನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಗೆ ರಾಜ್ಯ ಸರ್ಕಾರ ನಾಮ ನಿರ್ದೇಶನ ಮಾಡಿರುವ 16 ಸದಸ್ಯರು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.ಬೆಂಬಲಿಗರು, ಕುಟುಂಬ ಸದಸ್ಯರು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಪಾಲಿಕೆ ಕೇಂದ್ರ ಕಚೇರಿಯ ಹೊರಾಂಗಣ ಹಾಗೂ ಸಭಾಂಗಣದ ಪ್ರೇಕ್ಷಕರ ಗ್ಯಾಲರಿ ಜನರಿಂದ ತುಂಬಿ ತುಳುಕುತ್ತಿತ್ತು.ಕೆಲ ಸದಸ್ಯರು ಪ್ರಮಾಣ ವಚನ ಸ್ವೀಕರಿಸುವ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಬೆಂಬಲಿಗರು ಶಿಳ್ಳೆ, ಚಪ್ಪಾಳೆ ಹೊಡೆದರು. ಈ ಹಂತದಲ್ಲಿ ಯಾರೂ ಶಿಳ್ಳೆ ಹೊಡೆಯದಂತೆ ಮೇಯರ್ ಮನವಿ ಮಾಡಿಕೊಂಡರು.ಈ ನಡುವೆ, ಸದಸ್ಯರು ಪ್ರಮಾಣ ವಚನ ಸ್ವೀಕರಿಸುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಜೆಡಿ(ಎಸ್)ನ ಹಿರಿಯ ಸದಸ್ಯ ಪದ್ಮನಾಭರೆಡ್ಡಿ ಕ್ರಿಯಾಲೋಪವೆತ್ತಿದರು.`ಸಂವಿಧಾನದ 74ನೇ ಕಲಂನ ತಿದ್ದುಪಡಿ ಪ್ರಕಾರ, ಪೌರಾಡಳಿತ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅನುಭವ ಹೊಂದಿರುವ ನಿಪುಣರನ್ನು ಸರ್ಕಾರ ಪಾಲಿಕೆಗೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಬೇಕು. ಕೆಎಂಸಿ ಕಾಯ್ದೆ 7 (ಬಿ) ಪ್ರಕಾರ 16 ಸದಸ್ಯರ ನಾಮಕರಣವಾಗಿದೆಯೇ? ಎಂಬುದನ್ನು ಸಭೆಗೆ ತಿಳಿಸಬೇಕು~ ಎಂದು ಮೇಯರ್ ಅವರನ್ನು ಒತ್ತಾಯಿಸಿದರು.`ಕೆಎಂಸಿ ಕಾಯ್ದೆ ಸೆಕ್ಷನ್ 5ರ ಪ್ರಕಾರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರನ್ನೂ ನಾಮನಿರ್ದೇಶಿತ ಸದಸ್ಯರನ್ನಾಗಿ ಸರ್ಕಾರ ನಾಮಕರಣ ಮಾಡಬೇಕು. ಆದರೆ, ಮಹಿಳೆಯರು ಎಲ್ಲಿದ್ದಾರೆ?~ ಎಂದು ರೆಡ್ಡಿ ಪ್ರಶ್ನಿಸಿದರು.ಆಗ ಮಧ್ಯಪ್ರವೇಶಿಸಿದ ಮೇಯರ್ ಡಿ. ವೆಂಕಟೇಶಮೂರ್ತಿ, `ನಿಮ್ಮ ಅಹವಾಲು ಏನಿದ್ದರೂ ಕಳಿಸಿಕೊಡಿ. ಅದನ್ನು ಸರ್ಕಾರದ ಬಳಿ ಚರ್ಚಿಸುತ್ತೇವೆ~ ಎಂದರು.ಮೇಯರ್ ಮಾತಿನಿಂದ ಸಿಟ್ಟಿಗೆದ್ದ ಪದ್ಮನಾಭರೆಡ್ಡಿ, `ಬಿಬಿಎಂಪಿ ರಾಜಕೀಯ ನಿರಾಶ್ರಿತರ ತಾಣವಲ್ಲ. ಬಿಜೆಪಿ ಕಾರ್ಯಕರ್ತರನ್ನೆಲ್ಲಾ ನಾಮನಿರ್ದೇಶಿತ ಸದಸ್ಯರನ್ನಾಗಿ ನಾಮಕರಣ ಮಾಡಲಾಗಿದೆ~ ಎಂದು ಕಿಡಿ ಕಾರಿದರು.ಅಷ್ಟಕ್ಕೂ ಸುಮ್ಮನಾಗದ ರೆಡ್ಡಿ, `ನಾಮನಿರ್ದೇಶಿತ ಸದಸ್ಯರು ಕಟ್ಟಡ ಕಾಮಗಾರಿ ಸ್ಥಳಗಳಿಗೆ ತೆರಳಿ ನಾಗರಿಕರಿಗೆ ತೊಂದರೆ ಕೊಡುವುದು, ಪಾಲಿಕೆ ಸದಸ್ಯರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು~ ಎಂದು ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.