ಸೋಮವಾರ, ಮೇ 23, 2022
20 °C

ನಾಯಕನೂರು: ದಲಿತರಿಗೆ ಬಹಿಷ್ಕಾರ ಮುಂದುವರಿಕೆ

ಗಣೇಶ ಅಮೀನಗಡ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಯಕನೂರು: ದಲಿತರಿಗೆ ಬಹಿಷ್ಕಾರ ಮುಂದುವರಿಕೆ

ಹುಬ್ಬಳ್ಳಿ: ಕ್ಷುಲ್ಲಕ್ಕ ಕಾರಣಕ್ಕಾಗಿ ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ನಾಯಕನೂರು ಗ್ರಾಮದ ದಲಿತರಿಗೆ ಆಗಸ್ಟ್ ತಿಂಗಳಲ್ಲಿ ಹಾಕಲಾಗಿದ್ದ ಬಹಿಷ್ಕಾರಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಬಹಿಷ್ಕಾರ ಪ್ರಕರಣ ಸುಖಾಂತ್ಯವಾಗಿದೆ ಎಂಬ ವರದಿಗಳು ಸಾಮಾಜಿಕವಾಗಿ ಬಹಿರಂಗಗೊಂಡಿದ್ದರೂ ಊರೊಳಗಿನ ಸ್ಥಿತಿಯೇ ಬೇರೆ. ಅಲ್ಲಿನ ದಲಿತರಿಗೆ ಹಾಕಲಾಗಿರುವ ಬಹಿಷ್ಕಾರ ಇನ್ನೂ ಹಾಗೇ ಇದೆ; ಸರ್ಕಾರದ ಮಧ್ಯಸ್ಥಿಕೆ ಫಲ ನೀಡಿಲ್ಲ ಎಂಬುದು ಭಾನುವಾರ ಗ್ರಾಮಕ್ಕೆ ಭೇಟಿ ನೀಡಿದ `ಪ್ರಜಾವಾಣಿ~ಗೆ ಕಂಡು ಬಂತು.



ಘಟನೆ ನಡೆದು (ಆಗಸ್ಟ್ 14) ಎರಡು ತಿಂಗಳಾಗಿವೆ. ಇದರ ಪರಿಣಾಮ ದಲಿತರನ್ನು ಸವರ್ಣೀಯರು ಸಗಣಿ ತೆಗೆಯಲು ಆಹ್ವಾನಿಸಿಲ್ಲ. ಹೊಲದ ಕೂಲಿಗೂ ಕರೆಯುತ್ತಿಲ್ಲ. ದಲಿತರು ಕೂಡಾ ಯಾರ ಮನೆಯ ಬಳಿ ಹೋಗಿ ಸಗಣಿ ಬಳಿಯುತ್ತೇವೆ ಎಂದು ಕೇಳಿಲ್ಲ ಜೊತೆಗೆ ಕೂಲಿಯನ್ನೂ ಕೇಳಿಲ್ಲ. ಆದರೆ ಉದ್ಯೋಗ ಖಾತ್ರಿ ಯೋಜನೆಯಡಿ ದಲಿತ ವರ್ಗಕ್ಕೆ ಸೇರಿದ ಕೆಲ ಪುರುಷರಿಗೆ ಉದ್ಯೋಗ ಸಿಕ್ಕಿದೆ. ಮಹಿಳೆಯರು ಮಾತ್ರ ಅಕ್ಷರಶಃ ನಿರುದ್ಯೋಗಿಯಾಗಿಯೇ ಆಗಿದ್ದಾರೆ.



ನಾಯಕನೂರಿನಲ್ಲಿರುವ 37 ದಲಿತ ಕುಟುಂಬಗಳು ರೈತರ ಮನೆಯ ದನಗಳ ಕೊಟ್ಟಿಗೆಯ ಸಗಣಿ ಬಳಿಯುವುದರ ಜೊತೆಗೆ ಹೊಲಗಳಲ್ಲಿ ಕೂಲಿ ಮಾಡಿ ತಲೆತಲಾಂತರದಿಂದ ಬದುಕು ಸಾಗಿಸುತ್ತಿದ್ದರು. ಸಗಣಿ ಬಳಿಯುವುದರಿಂದ ವರ್ಷಕ್ಕೆ 100 ಕಿಲೋ ಜೋಳ ಹಾಗೂ ಗೋಧಿಯನ್ನು ಅವರು ಪಡೆಯುತ್ತಿದ್ದರು. ಹೊಲದಲ್ಲಿ ಕೂಲಿ ಮಾಡಿದರೆ ದಿನವೊಂದಕ್ಕೆ 50 ರೂಪಾಯಿ ಮಾತ್ರ ಕೂಲಿ ಸಿಗುತ್ತಿತ್ತು. ಇದು ಕಡಿಮೆ.

ಹೊಟ್ಟೆ ತುಂಬುವುದಿಲ್ಲವೆಂದು ಸಗಣಿ ಬಳಿಯುವುದನ್ನು ನಿರಾಕರಿಸಿದ್ದಕ್ಕೆ ಬಹಿಷ್ಕಾರಕ್ಕೆ ಒಳಗಾದರು. ಈ ಸಂಬಂಧ ಶಿವಪ್ಪ ಮಾದರ ಎಂಬವರ ಮೇಲೆ ಹಲ್ಲೆ ಕೂಡಾ ನಡೆದಿತ್ತು. ಘಟನೆಯ ನಂತರ ಎಲ್ಲ 37 ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ರೂ. 10 ಸಾವಿರ ಧನಸಹಾಯ ಸಿಕ್ಕಿತು.

 

ಜೊತೆಗೆ ಗದುಗಿನ ತೋಂಟದಾರ್ಯ ಶ್ರೀಗಳಿಂದ ಹಿಡಿದು ಸಂಘ-ಸಂಸ್ಥೆಗಳಿಂದ ಅಕ್ಕಿಯ ನೆರವು ಸಿಕ್ಕಿತು. ಅವರ ಬಳಿಯಿದ್ದ ರೂ. 10 ಸಾವಿರ ಸಾಲ ತೀರಿಸಲು ಖರ್ಚಾಗಿದೆ. ಇದ್ದ ಅಕ್ಕಿಯೂ ಖಾಲಿಯಾಗಿದೆ. `ಹೊಲಕ್ಕೆ ಯಾರೂ ಕೂಲಿಗೆ ಕರೆಯುತ್ತಿಲ್ಲ. 150-160 ಮಹಿಳೆಯರು ಖಾಲಿ ಕುಂತೀವ್ರಿ. ಏನೂ ಆಸ್ತಿಯಿಲ್ರಿ. ದುಡಿದೇ ತಿನ್ನಬೇಕ್ರಿ~ ಎಂದು ಅಸಹಾಯಕತೆ ವ್ಯಕ್ತಪಡಿಸಿದರು ಮಲ್ಲವ್ವ ದೊಡಮನಿ.



`ಘಟನೆ ಆದ ಮ್ಯಾಲೆ ಊರಾಗ ಹೋಗಿಲ್ರಿ. ಕಿರಾಣಿ ಅಂಗಡಿಗೆ ಹೋಗಿದ್ದು ಬಿಟ್ರ ಬ್ಯಾರೆ ಕಡೆ ಹೋಗಿಲ್ರಿ. ಉದ್ಯೋಗ ಖಾತ್ರಿಯಲ್ಲಿ ಕೂಲಿ ಕೇಳಾಕ ಹೋದಾಗ ತೆಗ್ಗು ತಗೀರಿ ಅಂದ್ರು. ಗುದ್ದಲಿಯಿಂದ ತೆಗ್ಗು ತೆಗೆಯೋದು ನಮ್ಮಿಂದ ಅಸಾಧ್ಯ. ನಮಗ ನೀಗೂವಂಥ ಕೂಲಿ ಬೇಕ್ರಿ~ ಎನ್ನುವ ಬೇಡಿಕೆ ರುಕ್ಷ್ಮವ್ವ ಮಾದರ ಅವರದು. `ಪೊಲೀಸ್ ವ್ಯಾನ್ ಹಗಲು-ರಾತ್ರಿ ಕಾಯುತ್ತಿದೆ. ಆದ್ರ ನಮಗೆ ರಕ್ಷಣೆಗಿಂತ ಕೂಲಿ ಬೇಕ್ರಿ~ ಎನ್ನುವ ಆಗ್ರಹ ಕೆಂಚವ್ವ ಮಾದರ ಅವರದು.



ಕೇರಿ ಸ್ಥಳಾಂತರಕ್ಕೆ ಆಗ್ರಹ: ಬಹಿಷ್ಕಾರ ಘಟನೆ ನಡೆದ ನಂತರ ನಾಯಕನೂರಿಗೆ ಆಗಸ್ಟ್ 21ರಂದು ಭೇಟಿ ನೀಡಿದ ರಾಜ್ಯ ಸಮಾಜ ಕಲ್ಯಾಣ ಖಾತೆ ಸಚಿವ ಎ. ನಾರಾಯಣಸ್ವಾಮಿ, ನಾಯಕನೂರಿನ ದಲಿತರ ಕೇರಿ ಅಭಿವೃದ್ಧಿಗೆ 40 ಲಕ್ಷ ಮಂಜೂರು ಮಾಡಲಾಗಿದೆ ಎಂದು ಘೋಷಿಸಿದರು.

 

ಇದನ್ನು ಅಲ್ಲಿಯ ದಲಿತರು ಒಪ್ಪುತ್ತಿಲ್ಲ. ಮನೆಗಳ ಸ್ಥಿತಿ ಹಾಗೆಯೇ ಇರುತ್ತದೆ. ರಸ್ತೆ, ಚರಂಡಿ ಅಭಿವೃದ್ಧಿಯಾದರೆ ಪ್ರಯೋಜನವೇನು ಎನ್ನುವ ಪ್ರಶ್ನೆ ಅವರದು. ಇದಕ್ಕಾಗಿ ದಲಿತರ ಕೇರಿ ಸ್ಥಳಾಂತರ ಆಗಬೇಕು. ಸ್ಥಳಾಂತರಗೊಂಡ ನಂತರ ಸರ್ಕಾರ ಮನೆ ಕಟ್ಟಿಸಿಕೊಡುವುದರ ಜೊತೆಗೆ ರಸ್ತೆ, ಚರಂಡಿ ಅಭಿವೃದ್ಧಿಪಡಿಸಲಿ. ಈ ಗ್ರಾಮದ ಸಹವಾಸ ಸಾಕು ಎನ್ನುವವರೇ ಹೆಚ್ಚು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.