ಬುಧವಾರ, ಏಪ್ರಿಲ್ 21, 2021
31 °C

ನಾಲ್ಕು ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಣ:  ದಶಕಗಳಿಂದ ಕುಡಿಯುವ ನೀರಿಗೆ ಪರದಾಡುತ್ತಿದ್ದ ಗ್ರಾಮಗಳ ಜನರಿಗೆ ನಿಜಕ್ಕೂ ಸಂತಸದ ಸುದ್ದಿ.  ಹನಿ ನೀರಿಗೂ ಕಿಲೋಮಿಟರ್ ದೂರ ಅಲೆಯುತ್ತಿದ್ದ ತಾಲ್ಲೂಕಿನ ಕೊನೆಯ ಗ್ರಾಮಗಳಾದ ಯಾವಗಲ್, ಯಾ.ಸ. ಹಡಗಲಿ, ಬೆಳವಣಕಿ, ಕೌಜಗೇರಿ ನಿವಾಸಿಗಳು ಇನ್ನು ಮುಂದೆ ಕುಡಿಯುವ ನೀರಿಗಾಗಿ ಚಿಂತಿಸುವ ಅಗತ್ಯವಿಲ್ಲ. ಇನ್ನು ಕುಡಿಯುವ ನೀರು  ಸುಲಭವಾಗಿ ದೊರೆಯಲಿದೆ.ನಾಲ್ಕು ಗ್ರಾಮಗಳ ಜನರಿಗೆ ಶಾಶ್ವತವಾಗಿ ಶುದ್ಧ ಕುಡಿಯುವ ನೀರು ಪೂರೈಸುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಈಗ ಪೂರ್ಣಗೊಂಡಿದೆ. ಯಾವಗಲ್ ಗ್ರಾಮದ ಬಳಿ ಸುಮಾರು 25ಎಕರೆ ಪ್ರದೇಶದ ಕೆರೆಯ ನೀರನ್ನು ಕುಡಿಯುವುದಕ್ಕಾಗಿ ಬಳಸಿಕೊಳ್ಳಲಾಗಿದೆ ರಾಜೀವ್ ಗಾಂಧಿ   ರಾಷ್ಟ್ರೀಯ ಕುಡಿಯುವ ನೀರು ಯೋಜನೆ ಇದೀಗ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧಗೊಂಡಿದೆ.  ರೂ. 3.64 ಕೋಟಿ ವೆಚ್ಚದಲ್ಲಿ ಆರಂಭಿಸಲಾದ ಕಾಮಗಾರಿಯ ವೆಚ್ಚ ಈಗ  ರೂ. 4.3 ಕೋಟಿಗೆ ತಲುಪಿದೆ. ಈ ನಾಲ್ಕು ಗ್ರಾಮಗಳು ರೋಣ ತಾಲ್ಲೂಕಿಗೆ ಸೇರಿದ್ದರೂ ಪಕ್ಕದ ನರಗುಂದ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ. ಹೊಸ ಯೋಜನೆಯಿಂದ ಗ್ರಾಮಸ್ಥರು ನೆಮ್ಮದಿಯ ಉಸಿರುಬಿಡುವಂತಾಗಿದೆ.ಕೇವಲ ಚುನಾವಣೆ ಸಂದರ್ಭದಲ್ಲಿ ಮನೆಬಾಗಿಲಿಗೆ ಬರುತ್ತಿದ್ದ ಪಂಚಾಯತ್ ಸಂಸ್ಥೆಗಳ ಜನಪ್ರತಿನಿಧಿಗಳು ಭರವಸೆಗಳ ಮಹಾಪೂರವನ್ನೇ ಹರಿಸುತ್ತಿದ್ದರು. ಚುನಾಯಿತರಾದ ಮೇಲೆ ಗ್ರಾಮಗಳಿಗೆ ಭೇಟಿ ನೀಡುವುದಿರಲಿ, ಕನಿಷ್ಠಪಕ್ಷ ಗ್ರಾಮಸ್ಥರ ಸಮಸ್ಯೆಗಳನ್ನೂ ಆಲಿಸುತ್ತಿರಲಿಲ್ಲ.  ಅಧಿಕಾರಿಗಳು ಜಾಣಕುರುಡತನ ಪ್ರದರ್ಶಿಸುತ್ತಿದ್ದರು. ಹೀಗಾಗಿ ಗ್ರಾಮಸ್ಥರ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತಿತ್ತು.ಮಳೆಗಾಲದಲ್ಲಿ ಹಳ್ಳ-ಕೊಳ್ಳಗಳಲ್ಲಿ ಸಂಗ್ರಹವಾದ ನೀರು, ಕೆರೆ ಹಾಗೂ ಕಾಲುವೆಯ ನೀರು ಬಳಸುತ್ತಿದ್ದರು. ಬೇಸಿಗೆಯಲ್ಲಿ ಕೆರೆಗಳತ್ತ  ಮಾಡುತ್ತಿದ್ದರು. ಜಾನುವಾರುಗಳಿಗೂ ಕುಡಿಯುವ ನೀರು ಒದಗಿಸುವುದು ಕಷ್ಟವಾಗಿತ್ತು. ಸಮಸ್ಯೆಯ ತೀವ್ರತೆ ಅರಿತು ಗ್ರಾಮಸ್ಥರ ಸಮಸ್ಯೆಗೆ ಮನಸ್ಸು ಮಾಡಿದ್ದು ನರಗುಂದ ಶಾಸಕ ಸಿ.ಸಿ. ಪಾಟೀಲರು. ಅವರು ತಮ್ಮ ಕ್ಷೇತ್ರದ ಜನರಿಗೆ ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆ ಕೈಗೆತ್ತಿಕೊಳ್ಳಲು ಪಣ ತೊಟ್ಟರು.ಸದ್ಯ ಮಲಪ್ರಭಾ ಕಾಲುವೆ 49 “ಸಿ” ಯಿಂದ  ಕೆರೆಗೆ ನೀರು ತುಂಬಿಸಲಾಗುತ್ತದೆ.  ಕೆರೆಯಲ್ಲಿಯ ನೀರನ್ನು ಜಾಕ್‌ವೆಲ್ ಮುಖಾಂತರ ಎತ್ತಿ ಶುದ್ಧೀಕರಿಸಲಾಗುತ್ತದೆ. ನಂತರ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ.  ನಿರಂತರ ವಿದ್ಯುತ್: ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆ ಎಡಬಿಡದೆ ಕಾಡುತ್ತಿದೆ. ಹೀಗಾಗಿ ನೀರು ಸಂಗ್ರಹವಿದ್ದರೂ ಅದನ್ನು ಗ್ರಾಮಗಳಿಗೆ ನಿರಂತರ ಸರಬರಾಜು ಮಾಡಲು ಹರಸಾಹಸ ಮಾಡಬೇಕಾಗಿದೆ. ನಿರಂತರ ವಿದ್ಯುತ್ ಸರಬರಾಜು ಯೋಜನೆ ರೂಪಿಸಲಾಗಿದೆ. ರೋಣ ಪಟ್ಟಣದ 110 ಕೆ.ವಿ. ಗ್ರಿಡ್‌ನಿಂದ ನೇರವಾಗಿ ಫೀಡರ್ ಲೈನ್ ನಿರ್ಮಿಸಲು 54.45 ಲಕ್ಷ ರೂ.ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಈ ಕೆರೆಯ ನೀರು 4 ಗ್ರಾಮಗಳಿಗೆ ಸಾಕಾಗಬಹುದೇ  ಎಂಬುದು ಯಕ್ಷ ಪ್ರಶ್ನೆಯಾಗಿದೆ. ಬೇಸಿಗೆಯಲ್ಲಿ ಏಕಕಾಲದಲ್ಲಿ ನಾಲ್ಕು ಗ್ರಾಮಗಳಿಗೆ ನೀರು ಪೂರೈಕೆ ಅಸಾಧ್ಯ ಎನ್ನುವುದ ಸ್ಥಳೀಯರ ಅನಿಸಿಕೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಮರ್ಥನೆಯೇ ಬೇರೆ. ಕೆರೆಯಲ್ಲಿ ಸಂಗ್ರಹವಾಗುವ ನೀರು ಅಂದಾಜು 8 ತಿಂಗಳ ಕಾಲ ಸಾಕಾಗುತ್ತದೆ ಉಳಿದ 4ತಿಂಗಳಿಗೆ ಕಾಲುವೆಯಲ್ಲಿ ನೀರು ಇರುತ್ತದೆ ಕೆರೆಗೆ ಖಾಲಿಯಾದಷ್ಟು ನೀರನ್ನು ಮತ್ತೆ ಸಂಗ್ರಹಿಸಬಹುದು ಹಾಗಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗದು ಎನ್ನುತ್ತಾರೆ. ಒಟ್ಟಾರೆ ನಾಲ್ಕು ಗ್ರಾಮಗಳ ಜನರಿಗೆ ನೀರಿನ ಬವಣೆ ನೀಗಿದರೆ ಸಾಕು ಈ ಮಹತ್ವಾಕಾಂಕ್ಷೆಯ ಯೋಜನೆಯ ಉದ್ದೇಶ ಈಡೇರಿದಂತಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.