ಬುಧವಾರ, ಮೇ 25, 2022
22 °C

ನಿತ್ಯ 2 ಲಕ್ಷ ಲೀ. ಹಾಲು ಸಂಗ್ರಹ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಧಾರವಾಡ ಹಾಲು ಒಕ್ಕೂಟ 2012ರ ಒಳಗಾಗಿ 1200 ಹಾಲು ಉತ್ಪಾದಕ ಸಂಘಗಳ ಹೆಚ್ಚಳ ಮಾಡಿ ಪ್ರತಿನಿತ್ಯ 2 ಲಕ್ಷ ಲೀಟರ್ ಹಾಲು ಸಂಗ್ರಹದ ಗುರಿ ಹೊಂದಿದೆ  ಎಂದು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಹೇಳಿದರು. ಅವರು ನಗರದ ಟಿ.ಎಸ್.ಎಸ್. ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಒಕ್ಕೂಟದ ಪ್ರಾದೇಶಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

 

ಪ್ರತಿದಿನ ಒಂದರಿಂದ 50 ಲೀಟರ್‌ವರೆಗೆ ಆಕಳ ಹಾಲು ಪೂರೈಸುವ ರೈತರಿಗೆ ಪ್ರತಿ ಲೀಟರ್‌ಗೆ 50 ಪೈಸೆ ಪ್ರೋತ್ಸಾಹಧನ ಎಮ್ಮೆ ಹಾಲಿಗೆ ಒಂದು ರೂಪಾಯಿ, 50 ಲೀಟರ್ ಮೇಲ್ಪಟ್ಟು ಆಕಳ ಹಾಲಿಗೆ 75 ಪೈಸೆ ಹಾಗೂ ಎಮ್ಮೆ ಹಾಲಿಗೆ ರೂ. 150 ಪ್ರೋತ್ಸಾಹಧನ ನೀಡಲಾಗುತ್ತದೆ. ಒಕ್ಕೂಟ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಿಂದ ಪ್ರತಿನಿತ್ಯ 99 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ರಾಸುಗಳಿಗೆ ನಿಯಮಿತ ಆಹಾರ ಪೂರೈಸುವ ಮೂಲಕ ಪ್ರತಿ ಹೈನುಗಾರ ಅರ್ಧ ಲೀಟರ್‌ನಿಂದ ಒಂದು ಲೀಟರ್‌ವರೆಗೆ ಹೆಚ್ಚುವರಿ ಹಾಲು ಉತ್ಪಾದನೆಗೆ ಪ್ರಯತ್ನಿಸಬೇಕು. ಬೇಸಿಗೆಯಲ್ಲಿ ಹಾಲಿನ ಪ್ರಮಾಣ ಕಡಿಮೆಯಾಗದಂತೆ ಕಾಳಜಿ ವಹಿಸಬೇಕು ಎಂದು ಅವರು ಹೇಳಿದರು.ವೈಜ್ಞಾನಿಕ ಸಮೀಕ್ಷೆ ಪ್ರಕಾರ 2015-16ರ ವೇಳೆಗೆ ರಾಜ್ಯದಲ್ಲಿ 100 ಲಕ್ಷ ಲೀಟರ್ ಹಾಲಿನ ಬೇಡಿಕೆ ಬರಬಹುದಾಗಿದ್ದು, ಪ್ರಸ್ತುತ ಉತ್ಪಾದನೆ ಕೇವಲ 40ಲಕ್ಷ ಲೀಟರ್ ಇದೆ.ರೈತರು ಹೈನುಗಾರಿಕೆಗೆ ವಿಶೇಷ ಆಸಕ್ತಿವಹಿಸಿ ಹಾಲು ಉತ್ಪಾದನೆ ಹೆಚ್ಚಳ ಮಾಡದಿದ್ದಲ್ಲಿ ಹೊರ ರಾಜ್ಯಗಳಿಂದ ಹಾಲು ಆಮದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.ಹೈನುಗಾರಿಕೆ ಪ್ರೋತ್ಸಾಹಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೂವಾರಿ ವಿರೇಂದ್ರ ಹೆಗ್ಗಡೆ ಅವರು ಜಿಲ್ಲೆಯ 100 ಹಾಲು ಉತ್ಪಾದಕ ಸಂಘಗಳ ಮೂಲ ಸೌಕರ್ಯ ಹೆಚ್ಚಳಕ್ಕೆ ರೂ. 25 ಲಕ್ಷ ಮತ್ತು ಹಾಲು ಪರೀಕ್ಷಾ ಯಂತ್ರ ಖರೀದಿಗೆ ರೂ. 10 ಲಕ್ಷ ನೀಡುವದಾಗಿ ಭರವಸೆ ನೀಡಿದ್ದಾರೆ ಎಂದು ಅರಬಗೊಂಡ ಹೇಳಿದರು.ಬೆಳ್ಳಿಹಬ್ಬ: ಒಕ್ಕೂಟ ಸಾಲ ಮುಕ್ತಗೊಂಡಿದ್ದು, 25 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ 2010-11ನೇ ಸಾಲಿನಲ್ಲಿ ಸದಸ್ಯರ ಶೇರು ಹಣಕ್ಕೆ ಬೋನಸ್ ಮತ್ತು ಲಾಭಾಂಶ ವಿತರಣೆ ಮಾಡಲಾಗಿದೆ. ಬೆಳ್ಳಿಹಬ್ಬವನ್ನು ಏಪ್ರಿಲ್-ಮೇ ತಿಂಗಳಿನಲ್ಲಿ ಭರ್ಜರಿಯಾಗಿ ನಡೆಸಲು ಯೋಜಿಸಲಾಗಿದೆ. ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ ಹಾಲು ಉತ್ಪಾದನೆ ಶೇಕಡಾ 50ರಷ್ಟು ಹೆಚ್ಚಳ ಕಂಡಿದೆ ಎಂದು ಅವರು ಹೇಳಿದರು.ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ ಕೆ.ರಾಮಚಂದ್ರ ಭಟ್ಟ, ರಾಸುಗಳಿಗೆ ನಿರಂತರ ನೀರು ಪೂರೈಕೆ, ಸಮತೋಲನ ಪಶು ಆಹಾರ, ಲವಣ ಮಿಶ್ರಣ ನೀಡುವ ಮೂಲಕ ಬೇಸಿಗೆಯಲ್ಲಿ ಹಾಲು ಉತ್ಪಾದನೆ ಹೆಚ್ಚಿಸಬೇಕು ಎಂದರು. ನಿರ್ದೇಶಕರಾದ ಸತೀಶ ಭಟ್ಟ, ಮಧುಕೇಶ್ವರ ಭಟ್ಟ, ಮಾರುಕಟ್ಟೆ ವ್ಯವಸ್ಥಾಪಕ ಅಜೀಜ್, ವ್ಯವಸ್ಥಾಪಕ ಶಿವಶಂಕರ ಉಪಸ್ಥಿತರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.