ನಿಧಾನವಾಗಿ ಸುಧಾರಣೆ ಕಾಣುತ್ತಿದೆ
ನವದೆಹಲಿ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡದ ಇದುವರೆಗಿನ ಪಯಣ ಸರಿಯಾದ ದಿಕ್ಕಿನಲ್ಲೇ ನಡೆದಿದೆ. ಗಮನಾರ್ಹ ಪ್ರದರ್ಶನ ನೀಡದಿದ್ದರೂ, ಮೂರು ಪಂದ್ಯಗಳಿಂದ ಐದು ಪಾಯಿಂಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿರುವುದು ಸಮಾಧಾನದ ವಿಷಯ. ನಾಯಕ ಮಹೇಂದ್ರ ಸಿಂಗ್ ದೋನಿ ಕೂಡಾ ನಿರಾಳವಾಗಿದ್ದಾರೆ.
ಹಾಲೆಂಡ್ ವಿರುದ್ಧದ ಪಂದ್ಯಕ್ಕೆ ಮುನ್ನಾದಿನವಾದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ‘ಮಹಿ’ ಎದುರಾಳಿ ತಂಡವನ್ನು ಹಗುರವಾಗಿ ಪರಿಗಣಿಸುವುದಿಲ್ಲ ಎಂದರು.ಜೊತೆಗೆ ಗೆಲುವಿನ ಓಟ ಮುಂದುವರಿಸುವುದು ತಂಡದ ಗುರಿ ಎಂಬುದನ್ನೂ ಸ್ಪಷ್ಟಪಡಿಸಿದರು. ದೋನಿ ಮಾತಿನ ಸಾರಾಂಶ ಇಲ್ಲಿದೆ:
* ಇದುವರೆಗಿನ ಒಟ್ಟಾರೆ ಪ್ರದರ್ಶನ?
ಉತ್ತಮ ಆರಂಭ ಲಭಿಸಿದೆ. ಕಠಿಣ ಹಾಗೂ ಸವಾಲಿನ ಪಂದ್ಯಗಳಲ್ಲಿ ಆಡಿದ್ದೇವೆ. ಇದುವರೆಗೆ ತಂಡ ನೀಡಿದ ಒಟ್ಟಾರೆ ಪ್ರದರ್ಶನದಲ್ಲಿ ಸಂತಸವಿದೆ. ಪಂದ್ಯದಿಂದ ಪಂದ್ಯಕ್ಕೆ ಎಲ್ಲ ವಿಭಾಗಗಳಲ್ಲಿ ಸಣ್ಣ ಪ್ರಮಾಣದ ಸುಧಾರಣೆ ಕಾಣುತ್ತಿದೆ. ಇದು ಖುಷಿಯ ವಿಚಾರ.
* ಬೌಲಿಂಗ್ ಆತಂಕ ತಂದಿದೆಯೇ?
ಈ ವಿಭಾಗದಲ್ಲಿ ಹೆಚ್ಚಿನ ಸುಧಾರಣೆ ಅನಿವಾರ್ಯ. ಬೌಲಿಂಗ್ ವಿಭಾಗ ಪೂರ್ಣ ಲಯ ಕಂಡುಕೊಂಡಿಲ್ಲ. ಎದುರಾಳಿ ತಂಡದ ನಿರ್ದಿಷ್ಟ ಬ್ಯಾಟ್ಸ್ಮನ್ನ್ನು ಗುರಿಯಾಗಿಸಿ ಯೋಜನೆ ರೂಪಿಸಬೇಕು. ಅದು ನಡೆಯುತ್ತಿಲ್ಲ. ಬ್ಯಾಟ್ಸ್ಮನ್ಗಳ ದೌರ್ಬಲ್ಯ ಅರಿತು ಬೌಲಿಂಗ್ ಮಾಡುವುದು ಅಗತ್ಯ.
* ಆಟಗಾರರ ಫಿಟ್ನೆಸ್...
ತಂಡದ ಎಲ್ಲರೂ ದೈಹಿಕ ಸಾಮರ್ಥ್ಯ ಹೊಂದಿದ್ದಾರೆ. ಯಾರೂ ಗಾಯದಿಂದ ಬಳಲುತ್ತಿಲ್ಲ. 15 ಆಟಗಾರರೂ ಬುಧವಾರದ ಪಂದ್ಯಕ್ಕೆ ಆಯ್ಕೆಗೆ ಲಭ್ಯರಿದ್ದಾರೆ.
* ಪ್ರಯೋಗಕ್ಕೆ ಮುಂದಾಗುವಿರಾ?
ತಂಡದ ಹೆಚ್ಚಿನ ಬ್ಯಾಟ್ಸ್ಮನ್ಗಳಿಗೆ ಅವಕಾಶ ಲಭಿಸಿದೆ, ಮಾತ್ರವಲ್ಲ ಈಗಾಗಲೇ ತಮ್ಮ ಸಾಮರ್ಥ್ಯ ತೋರಿದ್ದಾರೆ. ಅದರೆ ಬೌಲರ್ಗಳ ವಿಚಾರಕ್ಕೆ ಬಂದರೆ, ಎಲ್ಲರಿಗೂ ಅವಕಾಶ ದೊರೆತಿಲ್ಲ. ಲೀಗ್ ಹಂತ ಕೊನೆಗೊಳ್ಳುವ ಮುನ್ನ ಎಲ್ಲ ಬೌಲರ್ಗಳಿಗೆ ಸಾಮರ್ಥ್ಯ ತೋರಿಸಲು ಅವಕಾಶ ಕಲ್ಪಿಸಲಾಗುವುದು.
* ರೈನಾಗೆ ಸ್ಥಾನ ಲಭಿಸುವುದೇ?
ಮುಂದಿನ ಪಂದ್ಯದಲ್ಲಿ ಸುರೇಶ್ ರೈನಾಗೆ ಅವಕಾಶ ನೀಡುವುದು ಕಷ್ಟ. ಯೂಸುಫ್ ಪಠಾಣ್ ಅಥವಾ ವಿರಾಟ್ ಕೊಹ್ಲಿ ಅವರನ್ನು ಕೈಬಿಟ್ಟು ರೈನಾಗೆ ಅಂತಿಮ ಇಲೆವೆನ್ನಲ್ಲಿ ಸ್ಥಾನ ನೀಡುವುದು ಸುಲಭವಲ್ಲ. ಪಠಾಣ್ಗೆ ಹೆಚ್ಚಿನ ಓವರ್ ಆಡುವ ಅವಕಾಶ ಲಭಿಸಬೇಕು. ಕೊಹ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ.
* ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ನಿರೀಕ್ಷಿಸಬಹುದೇ?
ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಯೂಸುಫ್ ಪಠಾಣ್ ಹಾಗೂ ನಾನು ಮಧ್ಯಮ ಕ್ರಮಾಂಕದಲ್ಲಿ ತಂಡದ ಇನಿಂಗ್ಸ್ಗೆ ಬಲ ನೀಡುವೆವು. ಪರಿಸ್ಥಿತಿಗೆ ತಕ್ಕಂತೆ ನಮ್ಮಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಉಂಟಾಗಬಹುದು. ಆದರೆ ವಿರಾಟ್ ಮೇಲಿನ ಕ್ರಮಾಂಕದಲ್ಲಿ ಆಡುವುದೇ ಸೂಕ್ತ.
* ಹರಭಜನ್ಗೆ ವಿಕೆಟ್ ಲಭಿಸುತ್ತಿಲ್ಲ...
ತಂಡ ಗೆಲುವಿನ ಹಾದಿಯಲ್ಲಿದ್ದರೆ, ಯಾರು ಎಷ್ಟು ವಿಕೆಟ್ ಪಡೆಯುವರು, ಎಷ್ಟು ರನ್ ಗಳಿಸುವರು ಎಂಬುದು ಮುಖ್ಯವಾಗುವುದಿಲ್ಲ. ಸಂಘಟಿತ ಪ್ರಯತ್ನ ನೀಡಿ ಜಯದ ಹಾದಿಯಲ್ಲಿ ಮುನ್ನಡೆಯುವುದು ನಮ್ಮ ಗುರಿ. ‘ಎಲ್ಲ ಪಂದ್ಯಕ್ಕೂ ಒಂದು ನಿರ್ದಿಷ್ಟ ಯೋಜನೆಯೊಂದಿಗೆ ಕಣಕ್ಕಿಳಿಯಬೇಕು. ಆದರೆ ಪರಿಸ್ಥಿತಿಗೆ ತಕ್ಕಂತೆ ಆ ಯೋಜನೆಯಲ್ಲಿ ಬದಲಾವಣೆ ತರುವುದು ಅಗತ್ಯ’ ಎಂದು ‘ಮಹಿ’ ಇದೇ ವೇಳೆ ತಿಳಿಸಿದರು.
ಬೆಂಗಳೂರು ಮತ್ತು ನಾಗ್ಪುರದಲ್ಲಿ ಟಿಕೆಟ್ ಪಡೆಯುವ ಪ್ರಯತ್ನ ನಡೆಸಿದ ಅಭಿಮಾನಿಗಳು ಪೊಲೀಸರ ಲಾಠಿ ಏಟಿಗೆ ಒಳಗಾದದ್ದರ ಬಗ್ಗೆ ಕೇಳಿದಾಗ ದೋನಿ, ‘ಪರಿಸ್ಥಿತಿ ಕೈಮೀರಿದಾಗ ಪೊಲೀಸರು ಕ್ರಮ ಕೈಗೊಳ್ಳುವರು. ಅವರಿಗೆ ಅನ್ಯ ಮಾರ್ಗವಿರುವುದಿಲ್ಲ. ಅದೇ ರೀತಿ ಎಲ್ಲರಿಗೂ ಟಿಕೆಟ್ ಲಭಿಸುವುದು ಅಸಾಧ್ಯ’ ಎಂದರು. ‘ಬುಧವಾರದ ಪಂದ್ಯದ ಐದು ಟಿಕೆಟ್ಗಳು ನನ್ನಲ್ಲಿವೆ. ಬೇಕಾದವರಿಗೆ ಹಣಕೊಟ್ಟು ಕೊಳ್ಳಬಹುದು’ ಎಂದು ತಮಾಷೆಯಾಗಿ ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.