ಶುಕ್ರವಾರ, ಜನವರಿ 24, 2020
20 °C
ನೆಲಮಂಗಲದ ವಾದಕುಂಟೆ ಗ್ರಾಮದಲ್ಲಿ ಘಟನೆ

ನಿಧಿ ಆಸೆಗೆ ದೇಗುಲ ಧ್ವಂಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: ತಾಲ್ಲೂಕಿನ ತ್ಯಾಮ­ಗೊಂಡ್ಲು ಹೋಬಳಿ ವಾದಕುಂಟೆ ಗ್ರಾಮದ ಹೊರವಲಯದಲ್ಲಿ ದುಷ್ಕರ್ಮಿ­­ಗಳು ನಿಧಿ ಶೋಧನೆಗಾಗಿ ದೇಗುಲವೊಂದನ್ನು ಧ್ವಂಸಗೊಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಗ್ರಾಮದ ರಂಗಮ್ಮ ಎನ್ನುವವರಿಗೆ ಸೇರಿದ ರಾಗಿಹೊಲದಲ್ಲಿದ್ದ ಪುರಾತನ ವೀರಪ್ಪ ದೇವಾಲಯದ ವಿಗ್ರಹವನ್ನು ಕಿತ್ತೆಸೆದು, ದೇವಾಲಯದ ಒಳಗೆ ಎಲ್ಲೆಂದ­ರಲ್ಲಿ ಅಗೆದು ದೇವಾಲಯ­ದವನ್ನು ಧ್ವಂಸ ಮಾಡಿದ್ದಾರೆ. ಆದರೆ ದುಷ್ಕರ್ಮಿಗಳಿಗೆ ನಿಧಿ ಸಿಕ್ಕಿರುವ ಬಗ್ಗೆ ತಿಳಿದುಬಂದಿಲ್ಲ.ಪುರಾತನ ದೇಗುಲದ ಸುತ್ತಲು ರಾಗಿ ಬೆಳೆ ಹುಲುಸಾಗಿ ಬೆಳೆದಿದ್ದರಿಂದ ನಿಧಿ ಶೋಧದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ರಾಗಿ ಕಟಾವು ಮಾಡುವ ವೇಳೆ ವಿಗ್ರಹ ದೇಗುಲದ ಹೊರಗೆ ಬಿದ್ದಿದ್ದನ್ನು ಕಂಡ ರಂಗಮ್ಮ ಗ್ರಾಮಸ್ಥರಿಗೆ ವಿಚಾರ ತಿಳಿಸಿದ್ದಾರೆ. ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿ­ದ್ದಾರೆ.ಗ್ರಾಮದಲ್ಲಿ ಮೂರು ವರ್ಷಗಳಿ­ಗೊಮ್ಮೆ ಕರಗದ ಲಕ್ಷ್ಮೀದೇವಿಯ ಜಾತ್ರೆ ನಡೆಯುತ್ತಿದ್ದು, ಇತ್ತೀಚೆಗಷ್ಟೆ ಜಾತ್ರೆ ನಡೆದಿತ್ತು. ಹಬ್ಬದ ದಿನಗಳಲ್ಲಿ ಮಾತ್ರ ಅರ್ಚಕರು ದೇಗುಲ­ದಲ್ಲಿ ಪೂಜೆ ಸಲ್ಲಿಸು­ತ್ತಿದ್ದರು, ಉಳಿದ ದಿನಗಳಲ್ಲಿ ದೇಗುಲ ಮುಚ್ಚಿರುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಕಳೆದ ಒಂದುವರೆ ವರ್ಷದ ಹಿಂದಷ್ಟೆ ತಾಲ್ಲೂಕಿನ ಟಿ.ಬೇಗೂರು ಸಮೀಪದ ಅರಳೆದಿಬ್ಬದಲ್ಲಿ ನಿಧಿ ಶೋಧಕ್ಕಾಗಿ ನರಬಲಿ ಮಾಡಿ ಆರೋಪಿಗಳು ಕೆಲವೇ ದಿನಗಳಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಈ ಘಟನೆ ಮಾಸುವಷ್ಟರಲ್ಲೆ ಇನ್ನೊಂದು ನಿಧಿ ಶೋಧದ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.ತಾಲ್ಲೂಕಿನ ಇತಿಹಾಸ ಪ್ರಸಿದ್ದ ಮಣ್ಣೆ, ಹಳೆ ನಿಜಗಲ್‌, ಶಿವಗಂಗೆ, ಬಿಲ್ಲಿನಕೋಟೆ ಸೇರಿದಂತೆ ವಿವಿಧೆಡೆ ಗಂಗರು, ಚೋಳರು, ಹೊಯ್ಸಳರು ಆಡಳಿತ ನಡೆಸಿದ ಕುರುಹುಗಳಿದ್ದು ಅವರ ಕಾಲದಲ್ಲಿ ಬೆಳೆಬಾಳುವ ವಸ್ತುಗಳನ್ನು ಮತ್ತು ಅಪಾರ ಸಂಪತ್ತನ್ನು ವಿವಿಧೆಡೆ ಹೂತಿಟ್ಟಿದ್ದಾರೆ ಎಂದು ತಿಳಿದು ಗ್ರಾಮ­ಸ್ಥರ ಕಣ್ತಪ್ಪಿಸಿ ದುಷ್ಕರ್ಮಿಗಳು ಆಗಾಗ ನಿಧಿ ಶೋಧಕ್ಕಿಳಿಯುತ್ತಿದ್ದಾರೆ. ಸಂಬಂಧ­ಪಟ್ಟ ಪುರಾತತ್ವ ಇಲಾಖೆ ಸಮೀಕ್ಷೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥ ರಾಮಾಂಜಿನಪ್ಪ ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)