ಸೋಮವಾರ, ಮಾರ್ಚ್ 8, 2021
26 °C

ನಿರ್ಮಾಪಕ ದೇವೋಭವ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿರ್ಮಾಪಕ ದೇವೋಭವ!

ಗಾಂಧಿನಗರದಲ್ಲಿ ನಿರ್ಮಾಪಕರು- ನಟರ ಬಾಂಧವ್ಯದ ಕುರಿತೇ ಮಾತು. ಜನ್ಮ ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಕೂಡ ಇದೇ ನಡೆಯಿತು.ಅಲ್ಲಿಗೆ ಆಗಮಿಸಿದ್ದು ವಿವಾದದ ಕೇಂದ್ರ ಬಿಂದು ನಿರ್ಮಾಪಕ ಮುನಿರತ್ನ. ನಟ ಯೋಗೀಶ್ ಹಾಗೂ ಅವರ ನಡುವೆ ಇತ್ತೀಚೆಗೆ ನಡೆದಿದ್ದ ವಾಗ್ವಾದದ ಸುತ್ತ ಮಾತು ಹೆಣೆದುಕೊಂಡಿತ್ತು. ವಿವಾದವನ್ನು ತಿಳಿಗೊಳಿಸುವ ಮೂಡ್‌ನಲ್ಲಿದ್ದರು ಮುನಿರತ್ನ.ನಿರ್ಮಾಪಕನಾಗಿ 23 ವರ್ಷಗಳಿಂದ ತೊಡಗಿಕೊಂಡಿರುವ ಅವರನ್ನು ಚಿತ್ರರಂಗದ ಕೆಲವರ ಮಾತುಗಳು ಕಠಿಣ ಧೋರಣೆ ತಳೆಯುವಂತೆ ಮಾಡಿದವಂತೆ. `ವೈಯಕ್ತಿಕವಾಗಿ ನಿಂದಿಸುವ ಉದ್ದೇಶ ನನ್ನದಲ್ಲ. ನಿರ್ಮಾಪಕರಿಗೆ ಹಾಕಿದ ಬಂಡವಾಳ ವಾಪಸು ಬರುತ್ತದೆ ಎಂಬ ಖಾತ್ರಿ ಇರುವುದಿಲ್ಲ. ಎಷ್ಟೋ ನಿರ್ಮಾಪಕರ ಕಷ್ಟಗಳನ್ನು ಕೇಳಿದಾಗ ಮರುಕ ಹುಟ್ಟಿತು.ಪ್ರತಿಯೊಬ್ಬರೂ ಮನೆಯ ಸದಸ್ಯರಂತೆ ನಡೆದುಕೊಳ್ಳಬೇಕು. ಆಗ ಚಿತ್ರರಂಗ ಉಳಿದೀತು~ ಎಂಬುದು ಅವರ ಮಾತಿನ ಒಕ್ಕಣೆ. ರೈತ ದೇಶದ ಬೆನ್ನೆಲುಬು. ಹಾಗೆಯೇ ನಿರ್ಮಾಪಕ ಚಿತ್ರರಂಗದ ದೇವೋಭವ ಎಂಬ ಕಿವಿಮಾತನ್ನು ಹೇಳಲು ಅವರು ಮರೆಯಲಿಲ್ಲ.

ಪಕ್ಕದಲ್ಲೇ ಕುಳಿತಿದ್ದ ಸಾ.ರಾ.ಗೋವಿಂದು ಕೂಡ ಇದಕ್ಕೆ ದನಿಗೂಡಿಸಿದರು.ನಿರ್ಮಾಪಕರನ್ನು ಗಮನದಲ್ಲಿಟ್ಟುಕೊಂಡು ಚಿತ್ರ ತಯಾರಾಗಬೇಕು. ನಿರ್ಮಾಪಕ ಉಳಿಯಬೇಕು ಎಂಬ ಧಾಟಿಯಲ್ಲಿ ಅವರು ಮಾತನಾಡಿದರು. ಜತೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ವಿಷ್ಣು ಭಾವಚಿತ್ರ ಹರಿದುಹಾಕಿದ ಕಿಡಿಗೇಡಿಗಳನ್ನು ಶಪಿಸಿದರು.`ನನ್ನ ಹೆಸರಿಗೆ ಮಸಿ ಬಳಿಯಲು ಇಂಥ ಕೆಲಸ ನಡೆದಿದೆ. ರಾಜ್‌ಕುಮಾರ್ ಅವರ ಆದರ್ಶಗಳಲ್ಲಿ ನಡೆಯುತ್ತಿದ್ದೇನೆ. ದೊಡ್ಡವರನ್ನು ವೈಯಕ್ತಿಕವಾಗಿ ನಿಂದಿಸುವ ಯಾವ ಉದ್ದೇಶವೂ ತಮಗಿಲ್ಲ~ ಎಂದರು.ಐದು ವರ್ಷಗಳಿಂದ ಜನ್ಮ ಚಿತ್ರ ನಿರ್ದೇಶನ ಮಾಡುತ್ತಿರುವ ಚಕ್ರವರ್ತಿ (ಚಂದ್ರಚೂಡ್) ಕೂಡ ನಿರ್ಮಾಪಕರ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು. ನಿರ್ಮಾಪಕ ಹೃದಯದ ಮೇಲಿನ ಜೇಬಿದ್ದಂತೆ ನಿರ್ದೇಶಕ ಹೃದಯವಿದ್ದಂತೆ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

ಇತ್ತ `ಕೃಷ್ಣ ಸನ್ ಆಫ್ ಸಿ.ಎಂ~ ಚಿತ್ರದ ಪತ್ರಿಕಾಗೋಷ್ಠಿಯಲ್ಲಿಯೂ ಇಂಥದೇ ಮಾತುಗಳು ಹರಿದವು.ಆದರೆ ಅದಕ್ಕೆ ತಿಳಿಹಾಸ್ಯದ ಲೇಪವಿತ್ತು ಅಷ್ಟೇ. ನಿರ್ಮಾಪಕ ಯೋಗೀಶ್ ಹುಣಸೂರು, `ಚಿತ್ರರಂಗದಲ್ಲಿ ಈಗ ನಿರ್ಮಾಪಕರು ನಟರ ಬಗ್ಗೆ ಅವರು ಇರಬೇಕಾದ ರೀತಿನೀತಿಗಳ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ನನ್ನ ಚಿತ್ರದಲ್ಲಿ ದೂರು ಕೇಳಿ ಬರಲಿಲ್ಲ~ ಎಂದರು. ವಿವಾದವಿಲ್ಲದೆ, ಮನಸ್ತಾಪಗಳಿಲ್ಲದೆ ಚಿತ್ರ ನಿರ್ಮಿಸಿದ ತೃಪ್ತಿ ಅವರದು.

 

ಅದಕ್ಕೆ ಒತ್ತಾಸೆಯಾಗಿ ನಿಂತವರು ನಟ ಅಜಯ್ ರಾವ್. `ಕಡಿಮೆ ಅವಧಿಯಲ್ಲಿ ಸಂಪೂರ್ಣ ಹಣವನ್ನು ನಿರ್ಮಾಪಕರು ನೀಡಿದ್ದಾರೆ~ ಎಂಬ ತೃಪ್ತಿಯ ನಗೆಯಾಡಿದರು ಅವರು.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.